ಗುರುವಾರ, ಜುಲೈ 4, 2024

ಪ್ರತಿ ಶುಕ್ರವಾರ ಈಡಿಸ್ ಇಜಿಪ್ಟೈ ಸೊಳ್ಳೆ ನಿರ್ಮೂಲನಾ ದಿನ

ಬಳ್ಳಾರಿ,ಜು.04(ಕರ್ನಾಟಕ ವಾರ್ತೆ): ಡೆಂಗ್ಯು ಜ್ವರ ನಿಯಂತ್ರಣಕ್ಕಾಗಿ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಾಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ತಂಡವು ಮನೆಗಳಿಗೆ ಆಗಮಿಸಿ ಡೆಂಗ್ಯು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ ತಿಳಿಸುತ್ತಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ತಿಳಿಸಿದ್ದಾರೆ. ಬಳಕೆಗಾಗಿ ನೀರು ತುಂಬುವ ಮುಚ್ಚಳ ಮುಚ್ಚದಿರುವ ಸಿಮೆಂಟ್ ತೊಟ್ಟಿ, ಕಲ್ಲನ ಡೋಣಿ, ಪ್ಲಾಸ್ಟಿಕ್ ಡ್ರಮ್, ಬ್ಯಾರಲ್‍ಗಳಲ್ಲಿ ಹಾಗೂ ಫ್ರಿಜ್ ಹಿಂಭಾಗದಲ್ಲಿ, ಹೂವಿನ ಕುಂಡಲ, ಬಿಸಾಡಿದ ಟೈರ್, ತಗಡಿನ ಟಿನ್, ಪ್ಲಾಸ್ಟಿಕ್ ಕಪ್ ಮುಂತಾದವುಗಳಲ್ಲಿ ನೀರು ನಿಂತು ಡೆಂಗ್ಯು ರೋಗ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಯು ಮೊಟ್ಟೆಗಳನ್ನು ಇಟ್ಟು ಸಂತಾನವೃದ್ದಿ ಮಾಡುತ್ತವೆ. ಮೊಟ್ಟೆಗಳು ಒಡೆದು ಲಾರ್ವಾ, ಪುಪಾ (ಸೊಳ್ಳೆಯ ಮರಿಗಳು ) ಹಂತದಿಂದ ಸೊಳ್ಳೆಗಳಾಗಿ ಹೊರಬಂದು ಪುನಃ ನಮ್ಮನ್ನು ಕಚ್ಚುತ್ತವೆ. ಹಾಗಾಗಿ ನೀರು ಸಂಗ್ರಹಕಗಳನ್ನು ಚೆನ್ನಾಗಿ ತಿಕ್ಕಿ ತೊಳೆದು ಒಣಗಿಸಿ ನೀರು ತುಂಬಬೇಕು. ಅಲ್ಲದೆ ಸೊಳ್ಳೆ ನುಸುಳದಂತೆ ಬಟ್ಟೆ ಕಟ್ಟಬೇಕು. ಮುಚ್ಚಳ ಮುಚ್ಚಬೇಕು. ಫ್ರಿಜ್ ಹಿಂಭಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಅನಗತ್ಯವಾದ ವಸ್ತುಗಳನ್ನು ತ್ಯಾಜ್ಯ ವಿಲೇವಾರಿ ವಾಹನದಲ್ಲಿ ವಿಲೇವಾರಿ ಮಾಡಬೇಕು. ಡೆಂಗ್ಯು ರೋಗ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಮಕ್ಕಳು, ವಯೋವೃದ್ದರು ಗರ್ಭಿಣಿ, ಬಾಣಂತಿಯರು ವಿಶ್ರಾಂತಿ ಪಡೆಯುತ್ತಿದ್ದರೆ ಸೊಳ್ಳೆ ಪರದೆ ಬಳಸಬೇಕು. ಕಿಟಕಿಗಳಿಗೆ ಜಾಲರಿ ಅಳವಡಿಸಬೇಕು. ಸೊಳ್ಳೆ ನಿವಾರಕಗಳನ್ನು ಬಳಸುವಾಗ 10-15 ನಿಮಿಷ ಕಿಡಿಕಿ ಬಾಗಿಲು ಹಾಕಿ ನಂತರ ತೆರೆಯಬೇಕು. ಈ ವೇಳೆ ಕುಟುಂಬದ ಸದಸ್ಯರೆಲ್ಲೂ ಮನೆಯ ಹೊರಗೆ ಇರಲು ಆದ್ಯತೆ ನೀಡಬೇಕು. ಮನೆಯ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ. ಜಿಲ್ಲೆಯಾದ್ಯಾಂತ ಅಭಿಯಾನದ ರೂಪದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿಗಳ ನೇತೃತ್ವದಲ್ಲಿ ಮನೆ ಮನೆಗೆ ವೈದ್ಯಕೀಯ ತಂಡ ಪ್ರತಿ ಶುಕ್ರವಾರ ಆಗಮಿಸಿದಾಗ ಈಡಿಸ್ ಇಜಿಪ್ಟೈ ಸೊಳ್ಳೆಯನ್ನು ನಿರ್ಮೂಲನೆ ಕೈಗೊಳ್ಳಲು ಸಹಕರಿಸುವಂತೆ ಮತ್ತು ಯಾವುದೇ ಜ್ವರ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಡಿಹೆಚ್‍ಓ ಡಾ.ವೈ.ರಮೇಶ್‍ಬಾಬು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ