ಸೋಮವಾರ, ಜುಲೈ 15, 2024
ಜಿಲ್ಲಾ ಆರೋಗ್ಯ ಸಂಘ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚನೆ || ಕಲುಷಿತ ನೀರು ಪೂರೈಕೆಯಾಗದಿರಲಿ
ಬಳ್ಳಾರಿ,ಜು.15(ಕರ್ನಾಟಕ ವಾರ್ತೆ):
ಮಳೆಗಾಲದ ಹಿನ್ನಲೆಯಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ಹಾಗೂ ನಿಯಮಿತವಾಗಿ ಎಲ್ಲ ನೀರಿನ ಮೂಲಗಳನ್ನು ಪರೀಕ್ಷೆಗೊಳಪಡಿಸಿದ ನಂತರವೇ ಕುಡಿಯಲು ಪೂರೈಕೆ ಮಾಡಬೇಕು. ಸಂಭಾವ್ಯ ವಾಂತಿಭೇದಿ ಪ್ರಕರಣಗಳು ಕಂಡು ಬರಬಹುದಾಗಿದ್ದು, ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.
ಇಂದು, ಜಿಲ್ಲಾ ಪಂಚಾಯತ್‍ನ ನಜೀರ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲ ಹಿನ್ನಲೆಯಲ್ಲಿ ನೀರು ಅಲ್ಲಲ್ಲಿ ನಿಲ್ಲುವ ಸಾಧ್ಯತೆಯಿದ್ದು, ಚರಂಡಿ ಹತ್ತಿರದ ಪೈಪ್‍ಲೈನ್‍ಗಳು ಸೋರಿಕೆ ಕಂಡು ಬಂದಲ್ಲಿ ತಕ್ಷಣ ಆಯಾ ಸ್ಥಳೀಯ-ಸಂಸ್ಥೆ, ಪಂಚಾಯತ್‍ಗಳಿಗೆ ತಿಳಿಸುವ ಕಾರ್ಯ ಮಾಡಬೇಕು. ನೀರಿನ ಮೂಲಗಳನ್ನು ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಿಯಮಾನುಸಾರ ಕ್ಲೋರಿನೇಷನ್ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.
ಮೊಹರಮ್ ಹಬ್ಬದ ಹಿನ್ನಲೆ ಗ್ರಾಮಗಳಲ್ಲಿ ಹೆಚ್ಚು ಜನಸೇರುವ ಸಾಧ್ಯತೆ ಇದ್ದು, ಶುದ್ದ ನೀರು ಸೇವನೆ ಕುರಿತು ಜಾಗೃತಿ ನೀಡಬೇಕು. ಯಾವುದೇ ವಾಂತಿಭೇದಿ ಪ್ರಕರಣ ವರದಿಯಾಗದಂತೆ ಕ್ರಮವಹಿಸಿ ಎಂದರಲ್ಲದೇ ನೀರಿನ ಮೂಲಗಳ ಸುತ್ತಲೂ ದನಕರುಗಳನ್ನು ತೊಳೆಯದಂತೆ, ಬಟ್ಟೆ ಒಗೆಯದಂತೆ, ನಳಗಳು ತೆಗ್ಗಿನಲ್ಲಿ ಇರದಂತೆ, ಇದಕ್ಕೆ ಗ್ರಾಮ ಪಂಚಾಯತ್ ಒಳಗೊಂಡಂತೆ ಎಲ್ಲ ಸ್ಥಳೀಯ ಸಂಸ್ಥೆಗಳು ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಜಾಗೃತಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪ್ರಮುಖ ಜಾತ್ರೆಗಳು, ಉತ್ಸವಗಳಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡವು ಸಕಾಲದಲ್ಲಿ ಉಪಸ್ಥಿತರಿದ್ದು, ನೀರಿನ ಮೂಲಗಳು, ಆಹಾರದ ತಯಾರಿಕೆಯ ಸ್ಥಳ, ಮುಂತಾದವುಗಳನ್ನು ಪರಿಶೀಲಿಸಿ ನಿಗಾ ವಹಿಸುವ ಮೂಲಕ ವಾಂತಿ-ಬೇಧಿ ಪ್ರಕರಣಗಳು ವರದಿಯಾಗದಂತೆ ಕ್ರಮವಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಸಂಡೂರು ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಪ್ರಕರಣಗಳು ನಿಯಂತ್ರಣದಲ್ಲಿವೆ. ವೈದ್ಯಕೀಯ ತಂಡಗಳನ್ನು ರಚಸಿ ಜಾಗೃತಿ ನೀಡಲಾಗುತ್ತಿದೆ. ಅಶುದ್ಧವೆಂದು ಕಂಡು ಬಂದ ನೀರಿನ ಮೂಲಗಳನ್ನು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಪರೀಕ್ಷೆಗೆ ಒಳಪಡಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಳೆಯ ಆರಂಭ ಹಾಗೂ ರಾಜ್ಯಾದ್ಯಂತ ಡೆಂಗ್ಯು ರೋಗದ ತೀವ್ರತೆ ಹೆಚ್ಚಿರುವುದರಿಂದ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳಿಗೆ ಮನೆಗಳಲ್ಲಿಯ ನೀರು ಸಂಗ್ರಹಕಗಳಲ್ಲಿ ಲಾರ್ವಾ( ಸೊಳ್ಳೆಮರಿ) ಕಂಡುಬಂದಲ್ಲಿ ಖಾಲಿ ಮಾಡಿಸುವಂತೆ ಮತ್ತು ಅಗತ್ಯವಿದ್ದಲ್ಲಿ ಇನ್ನೊಂದು ಸಂಗ್ರಹಕ್ಕೆ ಬಟ್ಟೆಯಿಂದ ನೀರನ್ನು ಸೊಸಿ ಹಾಕುವಂತೆ ಹಾಗೂ ಲಾರ್ವಾ ಗುರ್ತಿಸಿದ ಮಕ್ಕಳಿಗೆ ಪ್ರಾರ್ಥನೆ ವೇಳೆಯಲ್ಲಿ ಮೆಚ್ಚುಗೆ ನುಡಿಗಳನ್ನು ಶಿಕ್ಷಣ ಇಲಾಖೆ ಮೂಲಕ ಕೈಗೊಳ್ಳಲಾಗುತ್ತಿದೆ ಎಂದರು.
ನೀರಿನ ಸಂಗ್ರಹಾರಕಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಕುಡಿಯಲು ಬಳಸದೆ ಅಗತ್ಯವಿದ್ದಲ್ಲಿ ಕೇವಲ ಇತರೆ ಬಳಸಿಕೊಳ್ಳಬೇಕು. ನೀರು ತುಂಬುವ ಪರಿಕರಗಳಿಗೆ ಟೆಮೋಪಾಸ್ ರಾಸಾಯನಿಕ ಹಾಕಬಹುದಾಗಿದ್ದು, ಈ ಕುರಿತು ಕುಟುಂಬದ ಸದಸ್ಯರಿಗೆ ತಿಳಿಸಿಕೊಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ವಾಹನ ಮೂಲಕ ಮೈಕಿಂಗ್, ಡಂಗುರ ಹಾಕಿಸಲು ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
ಕ್ಷಯರೋಗ ನಿಯಂತ್ರಣ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿ ರೋಗಿಗಳನ್ನು ಗುರ್ತಿಸಲು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕೆಮ್ಮು ಹಾಗೂ ಕ್ಷಯರೋಗದ ಲಕ್ಷಣಗಳು ಇದ್ದಲ್ಲಿ ಅಂತವರನ್ನು ಅಸಾಂಕ್ರಾಮಿಕ ರೋಗ ಪರೀಕ್ಷೆ ವಿಭಾಗದಲ್ಲಿ ಅಗತ್ಯ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಖಚಿತ ಪಟ್ಟಲ್ಲಿ ತಕ್ಷಣ ಚಿಕಿತ್ಸೆ ನೀಡಿ, ಕ್ಷಯಮುಕ್ತ ಬಳ್ಳಾರಿ ಅಭಿಯಾನವನ್ನು ಯಶಸ್ವಿಗೊಳಿಸಲಾಗುತ್ತಿದೆ ಡಿಹೆಚ್‍ಓ ಸಭೆಗೆ ತಿಳಿಸಿದರು.
ಬಾಲ್ಯದಲ್ಲಿಯ ಮಾರಕ ರೋಗಗಳ ತಡೆಗೆ ಲಸಿಕೆಯನ್ನು ಮಕ್ಕಳಿಗೆ ಸಕಾಲದಲ್ಲಿ ಹಾಕಿಸಲು ಹಾಗೂ ಬಿಟ್ಟು ಹೋದ ಮಕ್ಕಳು ಲಸಿಕೆ ವಂಚಿತ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕಲು ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಅಧಿಕಾರಿಗಳು ಕ್ರಿಯಾ ಯೋಜನೆ ಹಮ್ಮಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಸಿಂಚನ: 07 ನೇ ತರಗತಿಯಿಂದ 10 ನೇ ತರಗತಿಯ ಮಕ್ಕಳಿಗೆ ಬಾಲ್ಯವಿವಾಹ, ಐಯೋಡಿನ್ ನ್ಯೂನ್ಯತೆಗಳು, ಡೆಂಗ್ಯು ಜ್ವರ, ವಾಂತಿ-ಬೇಧಿ ನಿಯಂತ್ರಣ ಕುರಿತು ಏಕಕಾಲಕ್ಕೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಪಂ ಸಿಇಒ ಅವರು ಸೂಚಿಸಿದರು.
ಸಭೆಯಲ್ಲಿ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಹಾಗೂ ನವಜಾತ ಶಿಶುಗಳ ಆರೈಕೆ ಕಾರ್ಯಕ್ರಮ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ವ್ಯಾಪಕವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಅನುμÁ್ಠನಾಧಿಕಾರಿಗಳಾದ ಡಾ.ಆರ್.ಅಬ್ದುಲ್ಲಾ, ಡಾ.ಮರಿಯಂಬಿ ವಿ.ಕೆ., ಡಾ.ಇಂದ್ರಾಣಿ.ವಿ., ಡಾ.ಹನುಮಂತಪ್ಪ, ಡಾ.ವಿರೇಂದ್ರಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಡಾ.ಫಾರೂಖ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ಡಿಎನ್‍ಓ ಗಿರೀಶ್, ವೆಂಕೋಬ್ ನಾಯ್ಕ್, ಮನೋಹರ, ರಾಘವೇಂದ್ರ ಬಸವರಾಜ, ಅರ್ಚನಾ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ