ಮಂಗಳವಾರ, ಅಕ್ಟೋಬರ್ 22, 2024

ಬಳ್ಳಾರಿ ನಗರದಲ್ಲಿ ಅಧಿಕೃತ ವೈದ್ಯಕೀಯ ಪದವಿ ಇಲ್ಲದ ನಕಲಿ ವೈದ್ಯರ ಕ್ಲಿನಿಕ್ ಸೀಜ್; ಎಫ್‌ಐಆರ್‌ಗೆ ದಾಖಲಿಸಲು ಕ್ರಮ ಮಕ್ಕಳಾಗಿಲ್ಲವೆಂದು ನಕಲಿ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿ ಮೋಸ ಹೋಗಬೇಡಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್‌ಬಾಬು

ಬಳ್ಳಾರಿ,ಅ.22(ಕರ್ನಾಟಕ ವಾರ್ತೆ): ಮದುವೆ ನಂತರ ಮಕ್ಕಳಾಗಿಲ್ಲದ ಕಾರಣ ತಜ್ಞವೈದ್ಯರಿಂದ ತಿಳಿದುಕೊಳ್ಳದೇ ಅಥವಾ ಚಿಕಿತ್ಸೆ ಪಡೆಯದೆ ಗಾಳಿವದಂತಿಗಳಿಗೆ ಮಾರುಹೋಗಿ ದಂಪತಿಗಳು ನಕಲಿ ವೈದ್ಯರ ಬಳಿ ಅನಗತ್ಯವಾಗಿ ಹಣ ಖರ್ಚು ಮಾಡಿ ಗೊತ್ತಿಲ್ಲದ ಚಿಕಿತ್ಸೆಯನ್ನು ಪಡೆಯಬೇಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ನಗರದಲ್ಲಿ ಅನಧೀಕೃತವಾಗಿ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸೂಚನೆಯಂತೆ ಡಾ.ಅಬ್ದುಲ್ಲಾ.ಆರ್ ತಾಲೂಕಾ ಆರೋಗ್ಯ ಅಧಿಕಾರಿಗಳ, ತಂಡದ ಸದಸ್ಯರಾದ ಡಾ.ಸುರೇಶಕುಮಾರ, ಅರುಣ್‌ಕುಮಾರ್ ಒಳಗೊಂಡ ತಂಡ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ. ಬಳ್ಳಾರಿ ನಗರದ ಜನನಿಬಿಡ ಗ್ರಹಾಮ್ ರೋಡ್ ಹತ್ತಿರದ ಪಿಂಜಾರ್ ಓಣಿಯಲ್ಲಿ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಮತ್ತು ಅಧಿಕೃತ ವಿದ್ಯಾಭ್ಯಾಸ ಮಾಡದೇ ಮಕ್ಕಳಾಗದ ದಂಪತಿಗಳಿಗೆ ತಮ್ಮಲ್ಲಿ ಚಿಕಿತ್ಸೆ ಪಡೆದರೆ ಮಕ್ಕಳಾಗುವುದು ಎಂದು ಸುಳ್ಳು ಭರವಸೆ ಮೂಲಕ ಚಿಕಿತ್ಸೆ ನೀಡುತ್ತಿದ್ದ ಶ್ರೀಧರ್.ಸಿ (ಶ್ರೀಧರ್ ಹಾಲಹರವಿ) ಅವರ ಕ್ಲಿನಿಕ್‌ನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ (ಕೆ.ಪಿ.ಎಂ.ಇ) -2007 ಹಾಗೂ 2009 ಮತ್ತು ಕಾಲ ಕಾಲಕ್ಕೆ ಆದ ತಿದ್ದುಪಡಿ ಅಡಿ ಸೀಜ್ ಮಾಡಲಾಗಿದ್ದು, ಎಫ್.ಐ.ಆರ್‌ಗೆ ಕ್ರಮವಹಿಸಲಾಗುತ್ತಿದೆ ಎಂದು ಡಿಹೆಚ್‌ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀಧರ್ ಅವರು ಬೋರ್ಡ್ ಇಲ್ಲದ ಒಂದು ಮನೆಯಲ್ಲಿ ಕ್ಲಿನಿಕ್ ತೆರೆದು 20-30 ಮಹಿಳೆಯರನ್ನು ಏಕಕಾಲಕ್ಕೆ ಕ್ರೋಢಿಸಿ ಯಾವುದೇ ರಸೀದಿಯಿಲ್ಲದೆ ಹಣ ಪಡೆಯುವ ಮೂಲಕ ಆಲೋಪಥಿಕ್ ಔಷಧಿಗಳು, ಹಾರ್ಮೋನ್ ಇಂಜಕ್ಷನ್‌ಗಳನ್ನು ಚಿಕಿತ್ಸೆ ರೂಪದಲ್ಲಿ ನೀಡುತ್ತಿರುವುದು ಕಂಡು ಬಂದಿರುತ್ತದೆ. ವೈದ್ಯರು ಹಾಗೂ ತಜ್ಞವೈದ್ಯರು ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಿದ್ದು, ಅಡ್ಡ ಪರಿಣಾಮ ಸಹ ಬೀರಬಹುದಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಇಂತಹ ನಕಲಿ ವೈದ್ಯರ ಬಳಿ ಚಿಕಿತ್ಸೆಗಾಗಿ ತೆರಳದೇ ಹತ್ತಿರದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಪ್ರಸೂತಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯಬೇಕು ಹಾಗೂ ನಕಲಿ ವೈದ್ಯರು ಕಂಡು ಬಂದಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಹೆಚ್‌ಓ ಡಾ.ಯಲ್ಲಾ ರಮೇಶ್‌ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ