ಶನಿವಾರ, ಜೂನ್ 29, 2024

ಜುಲೈನಿಂದ ಗ್ರಾಮ ಪಂಚಾಯಿತಿಯಲ್ಲಿಯೇ ಜನನ, ಮರಣ ನೋಂದಣಿ

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ): ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿಯೇ ಜುಲೈ ಮಾಹೆಯಿಂದ ಜನನ ಮತ್ತು ಮರಣ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಅವರು ನೋಂದಣಿ ಮಾಡುತ್ತಾರೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿರುವುದರ ಬದಲಾಗಿ “ಗ್ರಾಮ ಪಂಚಾಯತಿ ಕಾರ್ಯದರ್ಶಿ (ಉಡಿಚಿmಚಿ Pಚಿಟಿಛಿhಥಿಚಿಣh Seಛಿಡಿeಣಚಿಡಿಥಿ) ಇವರನ್ನು ಉಪನೋಂದಣಾಧಿಕಾರಿಯನ್ನಾಗಿ ನೇಮಿಸಿ ತಿದ್ದುಪಡಿಗೊಳಿಸಿಲಾಗಿದೆ. ಜನನ, ಮರಣ ಘಟನೆಗಳು ಘಟಿಸಿದ 30 ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧ ಪಟ್ಟ ಗ್ರಾಮ ಪಂಚಾಯತಿ ಕಾರ್ಯದರ್ಶಿ (ಉಡಿಚಿmಚಿ Pಚಿಟಿಛಿhಥಿಚಿಣh Seಛಿಡಿeಣಚಿಡಿಥಿ) ಇವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ವಿವಿಧ ಇಲಾಖೆಗಳಡಿಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ || ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನ ಸಮಪರ್ಕವಾಗಿ ಬಳಸಿಕೊಳ್ಳಲು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ಇಲಾಖೆಗಳಡಿಯ ಕಾರ್ಯಕ್ರಮಗಳಿಗೆ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅನುದಾನವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿಗೆ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಅನುಸೂಚಿತ ಬುಡಕಟ್ಟು ಉಪಯೋಜನೆಯ ವಿವಿಧ ಇಲಾಖೆಗಳಡಿಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅನುದಾನವನ್ನು ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಉಪಯೋಗಿಸುತ್ತಿದ್ದು, ಪ್ರಗತಿಯಲ್ಲಿ ಹಿನ್ನಡೆಯಾಗಬಾರದು ಮತ್ತು ಉದ್ದೇಶಿತ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಜಿಲ್ಲೆಯ ಒಟ್ಟು ಎಸ್‍ಸಿಎಸ್‍ಪಿ ಅನುದಾನ ರೂ.3977.90 ಲಕ್ಷ ಅನುದಾನ ಬಿಡುಗಡೆಯಾಗಿದೆ. ಟಿಎಸ್‍ಪಿ ರೂ.5609.28 ಲಕ್ಷ ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಡಬೇಕು. ಯಾವುದೇ ರೀತಿಯಲ್ಲಿ ಹಣ ಪೋಲಾಗುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳಡಿಯ ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಸಾಮಾಜಿಕ ಪರಿಶೋಧನೆ ಮತ್ತು ಮೌಲ್ಯಮಾಪನವನ್ನು ಸಹ ಮಾಡಿಸಲಾಗುತ್ತದೆ ಎಂದು ಅವರು ತಿಳಿಸಿದರು. ಕೆಲ ಕಾಮಗಾರಿಗಳು ಹಾಗೂ ಪೂರ್ಣಗೊಳ್ಳದೇ ಇರುವ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ತಮಗೆ ನೀಡಿದ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಮತ್ತು ಆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ತಪ್ಪಿದಲ್ಲಿ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆಗಳ ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಅನುದಾನ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. --------

ಜು.02 ರಂದು ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ || ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಕಾರ್ಯಕ್ರಮವನ್ನು ಜುಲೈ 02 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಏರ್ಪಡಿಸಲಾಗಿದೆ. ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ ಅವರು ಉದ್ಘಾಟನೆ ಮಾಡುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ಶಾಸಕ ಜೆ.ಎನ್.ಗಣೇಶ್, ಸಂಸದರಾದ ಈ.ತುಕಾರಾಂ, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ಬಿ.ಎಂ.ನಾಗರಾಜ, ವಿಧಾನಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಜಿ.ಆರ್.ನಾಗರಾಜ ಅವರು ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಸಿರುಗುಪ್ಪ ತಾಲ್ಲೂಕಿನ ರಾರಾವಿಯ ಬಿ.ಚಿದಾನಂದ ಗವಾಯಿ ಅವರ ವಚನ ಸಂಗೀತ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ತಿಳಿಸಿದ್ದಾರೆ. ----------

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಸಭೆ ತಾಂತ್ರಿಕ ಲೋಪದೋಷ ಕಂಡುಬಂದಲ್ಲಿ ಕೂಡಲೇ ಸರಿಪಡಿಸಿ: ಎಡಿಸಿ ಮೊಹಮ್ಮದ್ ಎನ್.ಝುಬೇರ್

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾಗಿರುವ ಐದು ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಸರಿಪಡಿಸುವ ಕೆಲಸವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಎನ್.ಝುಬೇರ್ ಅವರು ಸೂಚಿಸಿದರು. ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿದ್ದು, ಲೋಪದೋಷ ಹಾಗೂ ವಿಳಂಬ ಕಂಡುಬಂದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರಬೇಕು ಎಂದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಸರ್ಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯ ಸಹಸ್ರಾರು ಕುಟುಂಬಗಳು ಏಳಿಗೆ ಕಾಣುತ್ತಿವೆ. ಅನುಷ್ಠಾನ ಸಮಿತಿಯ ಕಾರ್ಯಕರ್ತರು ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಯೋಜನೆ ತಲುಪಿದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ತಾಂತ್ರಿಕ ಸಮಸ್ಯೆಯಿಂದ ಯೋಜನೆಯ ಸದುಪಯೋಗ ಪಡೆಯದ ಜನರ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಯೋಜನೆ ಫಲಾನುಭವಿಗಳಿಗೆ ಮುಟ್ಟುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಅಹವಾಲು ಅಥವಾ ಮಾಹಿತಿ ಬೇಕಾದಲ್ಲಿ ಅಲೆದಾಡಿಸದೇ ಸೂಕ್ತ ಪರಿಹಾರವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಒದಗಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಅವರು, ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಒಟ್ಟು 3,11,180 ಪಡಿತರ ಚೀಟಿಗಳು ಇದ್ದು, ಅದರಲ್ಲಿ ಅಂತ್ಯೋದಯ, ಎಪಿಎಲ್, ಬಿಪಿಎಲ್ ಕಾರ್ಡ್ ಫಲಾನುಭವಿಗಳು ಸೇರಿ 2,81,987 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ಮಾಹೆ ಗೃಹಲಕ್ಷ್ಮೀ ಯೋಜನೆಗೆ ಒಟ್ಟು ರೂ.55 ಕೋಟಿ ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇಲ್ಲಿಯವರೆಗೂ ಗೃಹಲಕ್ಷ್ಮೀ ಹಣ ಜಮಾ ಆಗದೇ ಇದ್ದವರು ಎನ್‍ಪಿಸಿಐ ಸಕ್ರಿಯವಾಗಿದೆಯೇ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಿಕೊಳ್ಳಬೇಕು. ಒಮ್ಮೆ ಬ್ಯಾಂಕ್ ಮತ್ತು ಆಧಾರ್ ಜೋಡಣೆಗೆ ಇ-ಕೆವೈಸಿ ಮಾಡಿಸಿದಲ್ಲಿ ಪದೇ ಪದೇ ಮಾಡಿಸುವ ಅಗತ್ಯವಿರುವುದಿಲ್ಲ ಎಂದರು. ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಈಗಾಗಲೆ ಸರ್ಕಾರವು ಖಚಿತ ಪಡಿಸಿದೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಇನ್ನುಳಿದ ಗ್ಯಾಂರಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ವಿವರಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಗ್ಯಾರಂಟಿ ಯೋಜನೆ ಸಂಬಂಧಿಸಿದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ---------

ಗ್ರಂಥಾಲಯ ವಿಜ್ಞಾನ ತರಬೇತಿ: ಅರ್ಜಿ ಆಹ್ವಾನ

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ): ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಡಿಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು ವಿಭಾಗದ ಮಂಗಳೂರು, ಬೆಳಗಾವಿ ವಿಭಾಗದ ಧಾರವಾಡ ಮತ್ತು ಕಲಬುರಗಿ ವಿಭಾಗಗಳಲ್ಲಿ ಆರು ತಿಂಗಳ ಅವಧಿಯ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಗಳನ್ನು ನಡೆಸಲಾಗುತ್ತಿದ್ದು, ತರಬೇತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.40 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶೇ.35ರಷ್ಟು ಅಂಕ ಪಡೆದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರಾಗಿರುತ್ತಾರೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆ “ಡಿ” ದರ್ಜೆಯ ಗ್ರಂಥಾಲಯ ಸಹವರ್ತಿಗಳು ಸಂಬಂಧಪಟ್ಟ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳ ಮುಖಾಂತರ, ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರು ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಹಾಗೂ ಇತರೆ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯ ಜೊತೆಗೆ ಪಿ.ಯು.ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಸೇವೆಗೆ ಸೇರಿದ ದಿನಾಂಕ, ವೇತನ ಪ್ರಮಾಣ ಪತ್ರ, ನಡವಳಿಕೆ ಪ್ರಮಾಣ ಪತ್ರಗಳು ನಕಲು ಪ್ರತಿಗಳನ್ನು ಲಗತ್ತಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ಪಿ.ಯು.ಸಿ ಅಂಕಪಟ್ಟಿ, ಜಾತಿ, ಕನ್ನಡ ಮಾಧ್ಯಮ, ಗ್ರಾಮೀಣ, ಮಹಿಳೆ, ಮಾಜಿ ಸೈನಿಕ, 371 ಜೆ ಪ್ರಮಾಣ ಪತ್ರಗಳ ದೃಢೀಕೃತ ನಕಲು ಪ್ರತಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಕಬ್ಬನ್ ಉದ್ಯಾನವನದ ರಾಜ್ಯ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿ, ಬೆಂಗಳೂರು-560001 ಅಥವಾ ದೂ.08022-212128, ಧಾರವಾಡ ಡಿಸಿ ಕಚೇರಿ ಆವರಣದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿ ಧಾರವಾಡ-580001 ಅಥವಾ ದೂ.0836-1442465, ಮಂಗಳೂರಿನ ಬಾವುಟಗಡ್ಡೆಯ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿ ಅಥವಾ ದೂ.0824-2425873, ಕಲಬುರಗಿಯ ಜಗತ್ ವೃತ್ತದ ಸೂಪರ್ ಮಾರ್ಕೆಟ್‍ನ ಎಂ.ವಿ.ಎಚ್.ಶಾಲೆ ಆವರಣದ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿ ಅಥವಾ ದೂ.08472-221543 ಗೆ ಸಂಪರ್ಕಿಸಬಹುದು. ಮೇಲ್ಕಂಡ ವಿಳಾಸಗಳಲ್ಲಿ ನಿಮಗೆ ಸಂಬಂಧಪಟ್ಟ ಆಯಾ ಕಂದಾಯ ವಿಭಾಗಗಳಿಂದ ಅರ್ಜಿ ಪಡೆದು ಸಲ್ಲಿಸಬಹುದು ಎಂದು ಬಳ್ಳಾರಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಮರು ವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ನೋಂದಣಿಗೆ ಆಹ್ವಾನ

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮು ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ(ಖWಃಅIS)ಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಜಿಪಂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ ಅವರು ತಿಳಿಸಿದ್ದಾರೆ. ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘÀಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ(ಗ್ರಾಮಪಂಚಾಯಿತಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ನೆರವಾಗುವುದು ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆವಿಮೆ ಯೋಜನೆ (ಖ-WಃಅIS) ಮುಖ್ಯ ಉದ್ದೇಶವಾಗಿದೆ. ವಿಮಾ ಯೋಜನೆಯಡಿ ಒಳಪಡುವ ಬೆಳೆಗಳು ಹಸಿ ಮೆಣಸಿನಕಾಯಿ ಮತ್ತು ದಾಳಿಂಬೆ ಬೆಳೆಗಳಾಗಿವೆ. *ಹಸಿ ಮೆಣಸಿನಕಾಯಿ:* ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ ರೂ.71 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.3550 ಆಗಿರುತ್ತದೆ. *ದಾಳಿಂಬೆ:* ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ 1 ಲಕ್ಷ 27 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.6350 ಆಗಿರುತ್ತದೆ. ರೈತರು ಅಗತ್ಯ ದಾಖಲೆಗಳೊಂದಿಗೆ ಎರಡು ಬೆಳೆಗಳ ವಿಮೆಗೆ ನೊಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಮತ್ತು ಕುರುಗೋಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ: 08392-278177 ಹಾಗೂ ಮೊ.9481305830, ಸಂಡೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ:08395-260389 ಹಾಗೂ ಮೊ.9740934208, ಕಂಪ್ಲಿ ಮತ್ತು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ದೂ:08396-222066 ಹಾಗೂ ಮೊ.9916794371 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ನಾಯಿ ಕಚ್ಚಿದ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ನಿರೋಧಕ ಲಸಿಕೆ ಪಡೆಯಿರಿ: ಡಿಹೆಚ್‍ಓ ಡಾ.ವೈ.ರಮೇಶ ಬಾಬು

ಬಳ್ಳಾರಿ,ಜೂ.29(ಕರ್ನಾಟಕ ವಾರ್ತೆ) : ಸಾಕು ನಾಯಿ ಅಥವಾ ಅಪರಿಚಿತ ಬೀದಿ ನಾಯಿ ಕಚ್ಚಿದ್ದಲ್ಲಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ರೇಬೀಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ರೇಬೀಸ್ ರೋಗಕ್ಕೆ ತುತ್ತಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಸಾಮಾನ್ಯವಾಗಿ ನಾಯಿ ಕಡಿತದ ಪ್ರಕರಣಗಳಲ್ಲಿ ಮುಖ್ಯವಾಗಿ ಸಾಕಿದ ನಾಯಿಗಳು ಕಚ್ಚಿದಾಗ ಅಥವಾ ಪರಿಚಿದಾಗ ನಿರ್ಲಕ್ಷ್ಯ ಮಾಡುವ ಹಾಗೂ ವೈದ್ಯಕೀಯ ಉಪಚಾರ ಪಡೆಯದೇ ಇರುವುದರಿಂದ ಸಾರ್ವಜನಿಕರು ರೇಬೀಸ್ ಖಾಯಿಲೆ ತುತ್ತಾಗುತ್ತಿದ್ದಾರೆ. ಸಾಕಿದ ಅಥವಾ ಬೀದಿ ನಾಯಿಗಳು ಕಡಿದ ಸಂದರ್ಭದಲ್ಲಿ ಸೋಪು ಮತ್ತು ನೀರಿನಿಂದ ಗಾಯವನ್ನು ಅಥವಾ ಪರಿಚಿದ ಸ್ಥಳವನ್ನು ತೊಳೆದು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೇಬೀಸ್ ಚುಚ್ಚುಮದ್ದು ಪಡೆಯುವ ಮೂಲಕ ಸಂಭಾವ್ಯ ರೇಬಿಸ್ ಖಾಯಿಲೆಯನ್ನು ತಡೆಯುವುದರ ಜೊತೆಗೆ ವ್ಯಕ್ತಿಯ ಜೀವವನ್ನು ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದ್ದಾರೆ. ನಾಯಿ, ಬೆಕ್ಕು, ಇತರೆ ಯಾವುದೇ ಪ್ರಾಣಿಗಳು ಕಚ್ಚಿದಾಗ ರೇಬೀಸ್ ಕಾಯಿಲೆ ಬರುವ ಸಾಧ್ಯತೆಯಿದ್ದು, ನಾಯಿಗಳ ಕಡಿತದಿಂದ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುವುದರಿಂದ ನಿರ್ಲಕ್ಷ್ಯ ಮಾಡದೇ ಚುಚ್ಚುಮದ್ದು ಪಡೆಯಬೇಕು ಎಂದು ವಿನಂತಿಸಿದ್ದಾರೆ. *ನಾಯಿ ಕಡಿದಾಗ ಅನುಸರಿಸಬೇಕಾದ ವಿಧಾನಗಳು*: ಮೊದಲನೆ ಹೆಜ್ಜೆ: ಗಾಯವನ್ನು ತಕ್ಷಣವೇ ನೀರು ಹಾಗೂ ಸಾಬೂನಿನಿಂದ ತೊಳೆಯಿರಿ, ಪಾವಿಡೋನ್ ಐಯೋಡಿನ್‍ನಂಥ ಆಂಟಿಸೇಪ್ಟಿಕ್‍ಗಳನ್ನು ಹಚ್ಚಿರಿ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಎರಡನೇ ಹೆಜ್ಜೆ: ವೈದ್ಯರ ನಿರ್ದೇಶನದ ಮೇರೆಗೆ ರೇಬೀಸ್ ಲಸಿಕೆಯ ಪೂರ್ಣ ಕ್ರಮವನ್ನು ತೆಗೆದುಕೊಳ್ಳಬೇಕು. ಮೂರನೇ ಹೆಜ್ಜೆ: ತೀವ್ರವಾದ ಕಡಿತದ ಸಂದರ್ಭಗಳಲ್ಲಿ ಗಾಯಕ್ಕೆ ರೇಬೀಸ್ ಉಮ್ಯೂನೋಗ್ಲೋಬುಲಿನ್ ಚುಚ್ಚುಮದ್ದು ಪಡೆಯಬೇಕು. ರೇಬಿಸ್ ಖಾಯಿಲೆಗೆ ಒಮ್ಮೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆ ಇರುವುದಿಲ್ಲವಾದರೂ ರೇಬಿಸ್ ಖಾಯಿಲೆಯು ಸೂಕ್ತ ಪೂರ್ವ ರೋಗ ನಿರೋಧಕ ಲಸಿಕೆ ಪಡೆಯುವುದರಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಸಾರ್ವಜನಿಕರು ಯಾವುದೇ ಪ್ರಾಣಿ ಕಡಿತ ಸಂದರ್ಭದಲ್ಲಿ ಗಾಬರಿ ಪಡದೇ ನಾಯಿ ಅಥವಾ ಪ್ರಾಣಿ ಕಡಿತದ 24 ಗಂಟೆಯೊಳಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. *ಡೋಸ್ ವಿವರ:* 1ನೇ ಡೋಸ್ ಮೊದಲ ದಿವಸ, 2ನೇ ಡೋಸ್ ಮೂರನೇ ದಿವಸ, 3ನೇ ಡೋಸ್ 7ನೇ ದಿವಸ, 4ನೇ ಡೋಸ್ 14ನೇ ದಿವಸ, 5ನೇ ಡೋಸ್ 28ನೇ ದಿವಸ. *ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿ ಆ್ಯಂಟಿ ರೇಬೀಸ್ ಕ್ಲಿನಿಕ್ ಸ್ಥಾಪನೆ:* ಪ್ರಸ್ತುತ ಜಿಲ್ಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ನೇತೃತ್ವದಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣವೇ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಟಿ ರೇಬಿಸ್ ಕ್ಲಿನಿಕ್‍ನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ನಾಯಿ ಕಡಿತ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸದೇ ತಕ್ಷಣವೇ ಚುಚ್ಚುಮದ್ದು ಪಡೆಯಬೇಕು ಎಂದು ವಿನಂತಿಸಿದ್ದಾರೆ. ನಾಯಿ ಕಡಿತದ ಸಂದರ್ಭದಲ್ಲಿ ಇತರೆ ಪ್ರಾಣಿಗಳ ಜೊತೆ ಒಡನಾಟವಿರುವ ನೌಕರರು (ಪೋಲಿಸ್ ಸಿಬ್ಬಂದಿ, ಪಶು ವೈದ್ಯಕೀಯ ಇಲಾಖಾ ಸಿಬ್ಬಂದಿ, ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿ ಸೇರಿದಂತೆ ಸಾಕು ಪ್ರಾಣಿಗಳ ಅಥವಾ ಕಾಡು ಪ್ರಾಣಿಗಳ ಒಡನಾಟದಲ್ಲಿ ಇರುವ ಅರಣ್ಯ ಇಲಾಖೆ ಸಿಬ್ಬಂದಿ) ಪೂರ್ವಭಾವಿ ರೋಗ ನಿರೋಧಕ ಲಸಿಕೆಯನ್ನು ಮುಂಜಾಗ್ರತೆಗಾಗಿ ತಪ್ಪದೇ ಪಡೆಯಬೇಕು. ಅದಲ್ಲದೇ ಪ್ರಾಣಿಗಳಿಗೂ ಲಸಿಕೆಯನ್ನು ಹಾಕಿಸುವುದರಿಂದ, ಜೊತೆಯಲ್ಲಿ ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಪರಿಣಾಮಕಾರಿಯಾದ ಮಾರ್ಗಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವುದರಿಂದ ರೇಬಿಸ್ ಖಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಪ್ರಾಣಿ, ನಾಯಿ ಕಡಿತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪರಿವೀಕ್ಷಣೆ ಮಾಡಲಾಗುತ್ತಿದೆ. ರೋಗ ನಿಯಂತ್ರಣ ಚಟುವಟಿಕೆಗಳನ್ನು ಬಲಪಡಿಸಲು ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಶುಕ್ರವಾರ, ಜೂನ್ 28, 2024

ವಿಎಸ್‍ಕೆವಿವಿ: ‘ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆ ಹಾಗೂ ಹೊಸ ನಿಯಮಗಳ ಕುರಿತು ಕಾರ್ಯಗಾರ’|| ಕ್ರೀಡೆಯಿಂದ ಆರೋಗ್ಯ ವೃದ್ಧಿ: ಡಾ.ಹೆಚ್.ಡಿ.ಕೃಷ್ಣಪ್ಪ

ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಕ್ರೀಡೆಯು ಸ್ಪರ್ಧಾತ್ಮಕವಾಗಿದೆ, ಕೇವಲ ಆಟವಾಡುವುದಷ್ಟೇ ಅಲ್ಲ, ಆರೋಗ್ಯಕರವಾಗಿರಲು ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ ಎಂದು ಭಾರತದ ವಾಲಿಬಾಲ್ ತಂಡದ ಮಾಜಿ ಮುಖ್ಯ ತರಬೇತುದಾರರು, ಭಾರತೀಯ ಕ್ರೀಡಾ ಪ್ರಾಧಿಕಾರ ನಿವೃತ್ತ ಮುಖ್ಯ ವಾಲಿಬಾಲ್ ತರಬೇತುದಾರರು ಹಾಗೂ ಪ್ಯಾರಿಸ್ ಓಲಂಪಿಕ್ಸ-2024 ನಾಮನಿರ್ದೇಶಿತರಾದ ಡಾ.ಹೆಚ್.ಡಿ.ಕೃಷ್ಣಪ್ಪ ಅವರು ಹೇಳಿದರು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗ, ಕರ್ನಾಟಕ ವಾಲಿಬಾಲ್ ಸಂಸ್ಥೆ ಬೆಂಗಳೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಸಹಯೋಗದೊಂದಿಗೆ ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆ ಹಾಗೂ ಹೊಸ ನಿಯಮಗಳ ಕುರಿತು ಕಾರ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಆಟಗಾರರನ್ನು ನಿರ್ಮಾಣ ಮಾಡುತ್ತವೆ. ಪರಿಶ್ರಮದ ಮೂಲಕ ತಂಡದ ಮೌಲ್ಯವನ್ನು ಹೆಚ್ಚಿಸುತ್ತವೆ. ಟೋಕಿಯೊನ ಒಲಂಪಿಕ್‍ನಿಂದ ಪ್ರಾರಂಭವಾದ ವಾಲಿಬಾಲ್ ಆಕರ್ಷಣೀಯ ಕ್ರೀಡೆಯಾಗಿದೆ. ಪ್ರಸ್ತುತವಾಗಿ ಬ್ರೆಜಿಲ್, ಕ್ಯೂಬಾ ಮತ್ತು ಚೀನಾ ವಾಲಿಬಾಲ್ ಕ್ರೀಡೆಯಲ್ಲಿ ಹೆಚ್ಚು ಬೆಳೆದಿವೆ ಎಂದು ಹೇಳಿದರು. ವೀರಶೈವ ಮಹಾವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಗೌಡ ಅವರು ಮಾತನಾಡಿ, ವಾಲಿಬಾಲ್ ಪ್ರದರ್ಶನ ಕ್ರೀಡೆಯಾಗಿ ಒಲಂಪಿಕ್ಸ್‍ನಲ್ಲಿ ಜನಪ್ರಿಯವಾಗಿದೆ. ವಾಲಿಬಾಲ್ ತನ್ನದೆ ಆದ ನಿಬಂಧನೆಯಲ್ಲಿದೆ. ಭಾರತ ವಾಲಿಬಾಲ್ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಏಷ್ಯಿಯನ್ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದು, ವಾಲಿಬಾಲ್ ಕ್ರೀಡೆಯಲ್ಲಿ ಹಲವಾರು ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಕ್ರೀಡಾ ವಿದ್ಯಾರ್ಥಿಗಳು ಅವುಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತಿಪ್ಪೇರುದ್ರಪ್ಪ ಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಪಟುಗಳು ಒಳ್ಳೆಯ ವರ್ತನೆಗಳನ್ನು ಅಳವಡಿಸಿಕೊಳ್ಳಬೇಕು. ಅವರ ವರ್ತನೆಗಳು ಕ್ರೀಡಾಪಟುಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರು, ಕರ್ನಾಟಕ ವಾಲಿಬಾಲ್ ಸಂಸ್ಥೆಯ ನಿರ್ಣಾಯಕ ಬೋರ್ಡ್‍ನ ಸಂಚಾಲಕರಾದ ವೆಂಕಟೇಶ್ ಹಾಗೂ ನಾರಾಯಣಸ್ವಾಮಿ, ಚೌಡಾಪುರ್, ಚಿಕ್ಕನಂಜಯ್ಯ, ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಡಾ.ಪ್ರವೀಣ ಸಿಂಗ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕರಾದ ಡಾ. ಶಶಿಧರ ಕೆಲ್ಲೂರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ದೈಹಿಕ ಶಿಕ್ಷಕರು, ವೃತ್ತಿಬಾಂಧವರು ಹಾಗೂ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. --------

ವಿವಿಧೆಡೆ ದಾಳಿ; ನಾಲ್ವರು ಬಾಲಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಪ್ಯಾನ್-ಇಂಡಿಯಾ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ಸಿರುಗುಪ್ಪ ಮತ್ತು ಸಂಡೂರು ಪಟ್ಟಣಗಳಲ್ಲಿ ದಾಳಿ ನಡೆಸಿ 04 ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಎ.ಮೌನೇಶ್ ಅವರು ತಿಳಿಸಿದ್ದಾರೆ. ಸಿರುಗುಪ್ಪ ಪಟ್ಟಣದ ದೇಶನೂರು ರಸ್ತೆ, ಆದೋನಿ ರಸ್ತೆ, ಬಳ್ಳಾರಿ ರಸ್ತೆ ಮತ್ತು ಸಂಡೂರು ಪಟ್ಟಣದ ಕೂಡ್ಲಿಗಿ ರಸ್ತೆ, ಹೊಸಪೇಟೆ ರಸ್ತೆ ಹಾಗೂ ಎ.ಪಿ.ಎಂ.ಸಿ ವೃತ್ತ ಮಂತಾದ ಸ್ಥಳಗಳಲ್ಲಿರುವ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ, ಗುಜರಿ ಶಾಪ್ ಇತ್ಯಾದಿ ಉದ್ದಿಮೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಚೈಲ್ಡ್ ಲೈಲ್ ಸಹಯೋಗದೊಂದಿಗೆ ನಗರದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ರಡಿಯಲ್ಲಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ನಡೆಸಿ, ಕಾರ್ಯಾಚರಣೆ ನಡೆಸಲಾಗಿದೆ. ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳನ್ನು ಮುಖ್ಯವಾಹಿನಿ ತರಲು ಶಾಲೆಗಳಿಗೆ ಮರು ದಾಖಲಿಸಲಾಗಿದೆ. ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಸಂಡೂರು ತಹಶೀಲ್ದಾರ ಅನೀಲ್ ಕುಮಾರ್, ಉಪತಹಶೀಲ್ದಾರ ಸಿದ್ದಾರ್ಥ, ಕಂದಾಯ ನಿರೀಕ್ಷಕ ಮಂಜುನಾಥ, ಆರೋಗ್ಯ ನಿರೀಕ್ಷಕ ರಂಗಸ್ವಾಮಿ, ಮುಖ್ಯ ಅಧಿಕಾರಿ ಜಯಣ್ಣ, ಕಾರ್ಮಿಕ ನಿರೀಕ್ಷಕ ಮಂಜುನಾಥ, ಚೈಲ್ಡ್ ಲೈನ್ ಸಿಬ್ಬಂದಿ ಚಂದ್ರಕಲಾ ಮತ್ತು ಮಕ್ಕಳ ರಕ್ಷಣ ಘಟಕ ಸಿಬ್ಬಂದಿ ಹೊನ್ನೂರಪ್ಪ ಸೇರಿದಂತೆ ಪೋಲಿಸ್ ಇಲಾಖೆ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. -----------

ಯುವಕ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ ಜೂ.28(ಕರ್ನಾಟಕ ವಾರ್ತೆ): ನಗರದ ಅಗ್ನಿ ಶಾಮಕ ದಳ ಠಾಣೆಯಲ್ಲಿ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಎನ್ನುವ 28 ವರ್ಷದ ಯುವಕ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಕೌಲ್‍ಬಜಾರ್ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಕಾಣೆಯಾದ ಯುವಕನ ಚಹರೆ: ಎತ್ತರ ಅಂದಾಜು 5.11 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಬರ್ಮೋಡ ಹಾಗೂ ಸಿಮೆಂಟ್ ಬಣ್ಣದ ಟೀ ಶರ್ಟ್ ಧರಿಸಿರುತ್ತಾನೆ. ಯುವಕನು ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಯುವಕನ ಬಗ್ಗೆ ಮಾಹಿತಿ ಸಿಕಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ:08392-240731, ಬಳ್ಳಾರಿ ಕಂಟ್ರೋಲ್ ರೂಂ ದೂ:08392-258100, ಕೌಲ್ ಬಜಾರ್ ಠಾಣೆಯ ಪಿಐ ಮೊ:9480803047, ಅಥವಾ ಪಿಎಸ್‍ಐ ಮೊ:9480203085 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಮನೆ-ಮನೆಗೆ ತೆರಳಿ ಸಾರ್ವಜನಿಕರಲ್ಲಿ ಡೆಂಗ್ಯೂ ಜಾಗೃತಿ ಮೂಡಿಸಿದ ಜಿಪಂ ಸಿಇಓ || ಸೊಳ್ಳೆ ಉತ್ಪತ್ತಿ ತಾಣಗಳನ್ನು ಮುಕ್ತಗೊಳಿಸಿ

ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಮನೆ ಸುತ್ತ-ಮುತ್ತಲಿನ ಪರಿಸರದಲ್ಲಿ ನಮ್ಮ ಸಣ್ಣ ನಿರ್ಲಕ್ಷ್ಯವೂ ಡೆಂಗಿ ಜ್ವರದಿಂದ ನರಳುವಂತೆ ಮಾಡಬಹುದು. ಹಾಗಾಗಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಮುಕ್ತಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು. ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಲಾರ್ವಾ ಸೊಳ್ಳೆಗಳನ್ನು ಪತ್ತೆ ಹಚ್ಚಿ ನಾಶಗೊಳಿಸಲು ರಾಜ್ಯ ಸರ್ಕಾರ ನಿರ್ದೇಶನದಂತೆ ಈಡಿಸ್ ಸೊಳ್ಳೆ ನಿರ್ಮೂಲನ ದಿನದ ಅಂಗವಾಗಿ ನಗರದ ಇಂದಿರಾನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಅರಿವು ಮೂಡಿಸಲು ಶುಕ್ರವಾರ ಏರ್ಪಡಿಸಿದ್ದ ಡೆಂಗ್ಯೂ ನಿಯಂತ್ರಣ ಜಾಥಾದಲ್ಲಿ ಅವರು ಮಾತನಾಡಿದರು. ಮಹಾಮಾರಿ ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಸಾರ್ವಜನಿಕರು ತಮ್ಮ ಮನೆಯ ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್‍ಬಾಬು ಅವರು ಮಾತನಾಡಿ, ಈಡೀಸ್ ಈಜಿಪ್ಟೈ ಸೊಳ್ಳೆ ಕಡಿತದಿಂದ ಡೆಂಗಿ ಜ್ವರ ಹರಡಲಿದ್ದು, ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಅವು ಕಚ್ಚುತ್ತವೆ. ಜನ ಸಾಮಾನ್ಯರು 5-6 ದಿನಗಳಿಗೊಮ್ಮೆ ಶೇಖರಣೆ ಮಾಡಿಕೊಂಡ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್ ಇತರೆ ನೀರಿನ ಸಂಗ್ರಹಾರಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣ ಕಡಿಮೆಯಿದ್ದು, ರೋಗ ಸಂಪೂರ್ಣ ನಿಯಂತ್ರಿಸಲು ಸಾರ್ವಜನಿಕರು ಇಲಾಖೆಯೊಡನೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ಪ್ರಸ್ತುತ ಮುಂಗಾರಿನಲ್ಲಿ ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡೀಸ್ ಸೊಳ್ಳೆÀ ಉತ್ಪತ್ತಿಯಾಗದಂತೆ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈಡೀಸ್ ಈಜಿಪ್ಟೈ ಸೊಳ್ಳೆ ಕಡಿತದಿಂದ ಹರಡುವ ಡೆಂಗೀ ಜ್ವರವು ವೈರಾಣುಗಳಿಂದ ಉಂಟಾಗುತ್ತದೆ. ಡೆಂಗ್ಯು ಜ್ವರದ ಲಕ್ಷಣಗಳಾದ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ, ರಕ್ತಸ್ರಾವ, ಒಸಡುಗಳಲ್ಲಿ ರಕ್ತಸ್ರಾವ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಬಳಿಕ ಇಂದಿರಾ ನಗರದಲ್ಲಿ ಮನೆ-ಮನೆಗಳಿಗೆ ತೆರಳಿ ಸಾರ್ವಜನಿಕರಲ್ಲಿ ಲಾರ್ವಾ, ಈಜೀಸ್ ಈಜಿಪ್ಟೈ ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ‘ಡೆಂಗಿ ನಿಲ್ಲಿಸಿ’ ಎನ್ನುವ ಜಾಗೃತಿ ಭಿತ್ತಿಚಿತ್ರ ಪ್ರದರ್ಶಿಸಿದರು. ಈ ವೇಳೆ ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಾ ಕಡಿ, ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್.ದಾಸಪ್ಪನವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಯವರು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ---------

ಗುರುವಾರ, ಜೂನ್ 27, 2024

ಬಳ್ಳಾರಿ: ಡಾ.ಜೋಳದರಾಶಿ ದೊಡ್ಡನಗೌಡ ಜಿಲ್ಲಾ ರಂಗಮಂದಿರ ಪುನಾರಂಭ ಪರಿಷ್ಕøತ ಬಾಡಿಗೆ ವಿವರ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ನಗರದ ಡಾ.ಜೋಳದರಾಶಿ ದೊಡ್ಡನಗೌಡ ಜಿಲ್ಲಾ ರಂಗಮಂದಿರವು ಪುನಃ ಪ್ರಾರಂಭವಾಗಲಿದ್ದು, ಪ್ರಸಕ್ತ ಸಾಲಿನ ಜುಲೈ ಮಾಹೆಯಿಂದ ಅನ್ವಯವಾಗುವಂತೆ ಪರಿಷ್ಕøತ ಬಾಡಿಗೆ ವಿವರ ಮಾಹಿತಿ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ. *ಕಾರ್ಯಕ್ರಮಗಳ ವಿವರ:* ಕಲೆ, ಸಾಹಿತ್ಯಿಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ (ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಹವ್ಯಾಸಿ ನಾಟಕ, ನಾಟಕ, ಬಯಲಾಟ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತÀ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ) ಅರ್ಧ ದಿನಕ್ಕೆ ಬಾಡಿಗೆ ದರ ರೂ.2 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.5 ಸಾವಿರ ಮತ್ತು ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.4 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.7 ಸಾವಿರ. ಕಲೆ, ಸಾಹಿತ್ಯಿಕ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ (ಟಿಕೆಟ್ ಸಹಿತ) (ವೃತ್ತಿ ನಾಟಕ, ಕಂಪನಿ, ಯಕ್ಷಗಾನ, ಸಾಮಾಜಿಕ ನಾಟಕ, ಪೌರಾಣಿಕ ನಾಟಕ, ಐತಿಹಾಸಿಕ ನಾಟಕ ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ) ಅರ್ಧ ದಿನಕ್ಕೆ ಬಾಡಿಗೆ ದರ ರೂ.3 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.6 ಸಾವಿರ ಮತ್ತು ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.6 ಸಾವಿರ, ಭದ್ರತಾ ಠೇವಣಿ ರೂ.3 ಸಾವಿರ ಸೇರಿ ಒಟ್ಟು ರೂ.9 ಸಾವಿರ. ಸಂಘ ಸಂಸ್ಥೆಗಳಿಗೆ ಅರ್ಧ ದಿನಕ್ಕೆ ಬಾಡಿಗೆ ದರ ರೂ.10 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.15 ಸಾವಿರ ಮತ್ತು ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.18 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.23 ಸಾವಿರ. ವಾಣಿಜ್ಯ ಕಾರ್ಯಕ್ರಮಗಳಿಗೆ ಪೂರ್ತಿ ದಿನಕ್ಕೆ ಬಾಡಿಗೆ ದರ ರೂ.35 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.40 ಸಾವಿರ. ಶಾಲಾ-ಕಾಲೇಜು ಕಾರ್ಯಕ್ರಮಗಳಿಗೆ ರೂ.35 ಸಾವಿರ, ಭದ್ರತಾ ಠೇವಣಿ ರೂ.5 ಸಾವಿರ ಸೇರಿ ಒಟ್ಟು ರೂ.40 ಸಾವಿರ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಬಾಡಿಗೆ ದರ ರೂ.8 ಸಾವಿರ, ಭದ್ರತಾ ಠೇವಣಿ ಇರುವುದಿಲ್ಲ, ಒಟ್ಟು ರೂ.8 ಸಾವಿರ. ನಿಗದಿಪಡಿಸಿರುವ ಅವಧಿಗಿಂತ 1 ಗಂಟೆ ಹೆಚ್ಚಾದರೆ ಬಾಡಿಗೆ ದರವು ರೂ.3 ಸಾವಿರ ಹೆಚ್ಚು ಆಗಲಿದೆ. *ಸೂಚನೆ:* ಅರ್ಧದಿನ: ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ, ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ. ಪೂರ್ತಿ ದಿನ: ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ. ಹೆಚ್ಚಿನ ಮಾಹಿತಿಗಾಗಿ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.08392-275182 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ---------

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ; ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಪ್ರಸ್ತಕ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಆನ್‍ಲೈನ್ (ರಾಜ್ಯ ವಿದ್ಯಾರ್ಥಿ ನಿಲಯಗಳ ತಂತ್ರಾಂಶದ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ಅವರು ತಿಳಿಸಿದ್ದಾರೆ. ವಿದ್ಯಾರ್ಥಿನಿಲಯಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ತಮ್ಮ ಸ್ಯಾಟ್ಸ್ ಐಡಿಯೊಂದಿಗೆ ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶದ ವಿಳಾಸ https://shp.karnataka.gov.in/ ಇಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ. ವಿದ್ಯಾರ್ಥಿನಿಲಯಕ್ಕೆ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರಗಳನ್ನು ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶದ ವೆಬ್‍ಸೈಟ್ https://shp.karnataka.gov.in/ ಅಲ್ಲಿ ನೋಡಬಹುದು. ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ ಬೇರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದರೆ ವಿದ್ಯಾರ್ಥಿಗಳ ಸ್ಯಾಟ್ಸ್ ಐಡಿಯನ್ನು ಪ್ರಸಕ್ತ ಶಾಲೆಯಲ್ಲಿ ಸಂಬಂಧಿಸಿದ ಮಾಹಿತಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಡಿ.ದೇವರಾಜ ಅರಸು ಭವನದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ 08392-275751 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರಸಕ್ತ ಸಾಲಿಗೆ ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 20ರ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ ತಿಳಿಸಿದ್ದಾರೆ. ಪಿಯುಸಿ ಮತ್ತು ಪಿಯುಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿಯು ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗಗಳಿಗೆ ಸೇರಿದವರ ಆದಾಯ ಮಿತಿಯು ರೂ.1 ಲಕ್ಷ ಇರಬೇಕು. ಆಸಕ್ತ ವಿದ್ಯಾರ್ಥಿಗಳು https://shp.karnataka.gov.in ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ https://bcwd.karnataka.gov.in ನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಡಿ.ದೇವರಾಜ ಅರಸು ಭವನದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಅಥವಾ ತಾಲ್ಲೂಕು ಅಧಿಕಾರಿಗಳ ಕಚೇರಿ ಮತ್ತು ಸಹಾಯವಾಣಿ ಸಂಖ್ಯೆ 8050770005 ಗೆ ಸಂಪರ್ಕಿಸಬಹುದು. --------

ವಾಂತಿ-ಭೇದಿ ಪ್ರಕರಣಗಳ ನಿಯಂತ್ರಣಕ್ಕೆ ಕುದಿಸಿ ಆರಿಸಿ ಸೋಸಿದ ನೀರು ಕುಡಿಯಿರಿ: ಡಿಹೆಚ್‍ಓ ಡಾ.ವೈ.ರಮೇಶ್‍ಬಾಬು ಸಲಹೆ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಕಲುಷಿತ ನೀರಿನಿಂದ ಮತ್ತು ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದರು. ಬಳ್ಳಾರಿ ತಾಲ್ಲೂಕಿನ ವೈ. ಕಗ್ಗಲ್ ಗ್ರಾಮದಲ್ಲಿ ಶಂಕಿತ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ನೀಡಿ ಅವರು ಮಾತನಾಡಿದರು. ಓಆರ್‍ಎಸ್ ಜೀವಜಲವನ್ನು ತಯಾರಿಸುವಾಗ 1 ಲೀಟರ್ ನೀರಿಗೆ ಇಲಾಖೆಯಿಂದ ನೀಡುವ ಓಆರ್‍ಎಸ್ ಪೊಟ್ಟಣದ ಪುಡಿಯವನ್ನು ಸಂಪೂರ್ಣವಾಗಿ ಹಾಕಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಭೇದಿ ಭಾದಿತರಿಗೆ ಕುಡಿಯಲು ಕೊಡಬೇಕು. 24 ಗಂಟೆಯೊಳಗಡೆ ಸಂಪೂರ್ಣವಾಗಿ ಬಳಸಬೇಕು ಮತ್ತು ವಾಂತಿ ಭೇದಿ ಪ್ರಕರಣ ನಿಯಂತ್ರಿಸಲು ಕೈ ಜೋಡಿಸಬೇಕು ಎಂದು ಅವರು ಹೇಳಿದರು. ಕಲುಷಿತ ನೀರಿನ ಸೇವನೆಯಿಂದ ಸಾಮಾನ್ಯವಾಗಿ ವಾಂತಿ-ಬೇದಿ, ಕಾಲರಾ, ಟೈಪಾಯಿಡ್, ಹೆಪಟೈಟಸ್-ಎ, ಗಿಯಾರ್ಡಿಯಾ, ಸಾಲ್ಮೋನೆಲ್ಲಾ ಶಿಗೆಲ್ಲೋಸಿಸ್, ಅಮೀಬಿಯಾಸಿಸ್, ಇ-ಕೋಲಿ (ಇವುಗಳಲ್ಲಿ ವಾಂತಿ-ಭೇದಿ, ಕಾಲರಾ, ಹೆಪಟೈಟಸ್-ಎ, ಕಲುಷಿತ ಆಹಾರ ಸೇವನೆ) ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಅರಿವು ಮೂಡಿಸಿದರು. ಪ್ರಸ್ತುತ ಗ್ರಾಮದಲ್ಲಿ ರೋಗ ಸಂಪೂರ್ಣ ನಿಯಂತ್ರಣದಲ್ಲಿದ್ದು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ದಿನದ 24 ಗಂಟೆ ವೈದ್ಯಕೀಯ ತಂಡ ಸ್ಥಳದಲ್ಲಿಯೇ ಇದ್ದು, ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದರು. ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಕ್ಷೇತ್ರ ಸಿಬ್ಬಂದಿಯವರ 9 ತಂಡಗಳನ್ನು ರಚಿಸಿ, ಮನೆ ಮನೆಗೆ ಭೇಟಿ ನೀಡಿ ಜಾಗೃತಿ ನೀಡಲಾಗುತ್ತಿದ್ದು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಮೈಕಿಂಗ್ ಹಾಗೂ ಸ್ವಚ್ಛತೆ ಕುರಿತು ಪ್ರಾತ್ಯಕ್ಷತೆಯನ್ನು ಮಾಡಿಸಲಾಗುತ್ತಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾಲಾರ ನಿಯಂತ್ರಣ ತಂಡವು ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಸಾರ್ವಜನಿಕರು ಶುದ್ದ ನೀರಿನ ಘಟಕದ ನೀರನ್ನು ಕುಡಿಯಬೇಕು ಎಂದು ವಿನಂತಿಸಿದರು. ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೇ ಬಳಸಬೇಕು. ತಂಗಳು ಆಹಾರ ಸೇವಿಸದೇ ಬೆಳಗಿನ ಆಹಾರ ಬೆಳಿಗ್ಗೆ ಹಾಗೂ ರಾತ್ರಿ ಆಹಾರ ರಾತ್ರಿ ಮಾತ್ರ ಬಳಸಬೇಕು. ತಯಾರಿಸಿದ ಅಹಾರದÀ ಮೇಲೆ ನೊಣಗಳು ಕೂಡದಂತೆ ಮುಚ್ಚಳ ಮುಚ್ಚಬೇಕು. ಕುಡಿಯುವ ನೀರು ತುಂಬಿದ ನಂತರ ಪಾತ್ರೆಗಳಿಗೆ ಮುಚ್ಚಳ ಮುಚ್ಚಿ. ಆದಷ್ಟು ನಳ ಇರುವ ಪಾತ್ರೆಗಳನ್ನು ಬಳಸಿ. ನೀರಿನಲ್ಲಿ ಕೈ ಅದ್ದದಂತೆ ಮುಂಜಾಗೃತೆ ವಹಿಸಿ ಎಂದರು. ವಾಂತಿ-ಭೇದಿ ಅಥವಾ ಕಾಲರಾ ಸೋಂಕಿತರಿಗೆ ಮನೆಯಲ್ಲಿಯೆ ತಯಾರಿಸಿದ ಗಂಜಿ, ಬೇಳೆ ತಿಳಿ, ನಿಂಬು ಪಾನಕ ಹಾಗೂ ಎಳೆನೀರು ಕೊಡುವುದನ್ನು ನಿಲ್ಲಿಸಬಾರದು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತಪ್ಪದೇ ತೊಳೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಕಾವ್ಯಶ್ರೀ, ಡಾ.ಪ್ರಹ್ಲಾದ್, ಡಾ.ಕಮ್ಮರ್ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಾ.ಸಾತ್ವಿಕ್, ಡಾ.ಪ್ರಸನ್ನ, ಸಿಹೆಚ್‍ಓ ಮೌನಿಕ, ಸಂತೋಷ್ ಕವಿತ, ಬಿಹೆಚ್‍ಇಓ ಶಾಂತಮ್ಮ ಉಪ್ಪಾರ, ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಕೆ.ಎಮ್.ಶಿವಕುಮಾರ, ತಿಪ್ಪೆಸ್ವಾಮಿ, ಕಾಸಿಂ ವಲಿ, ಉಮಾ ಮಹೇಶ್ವರಿ, ಎಲ್‍ಹೆಚ್‍ವಿ ವೈ.ಚಂದ್ರಕಲಾ, ಹೆಚ್‍ಐಓ ಹುಲಿಗೇಶ್, ಸಿದ್ದರಾಮಪ್ಪ, ಕುಮಾರ್, ಪಿಹೆಚ್‍ಸಿಓ ದುರುಗಮ್ಮ, ನಾಗಮ್ಮ, ಕವಿತ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಹಾಜರಿದ್ದರು. ---------

ಜು.29 ರಿಂದ ಆ.03 ರ ವರೆಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಶೇಷ ಲೋಕ್ ಅದಾಲತ್

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಸರ್ವೋಚ್ಚ ನ್ಯಾಯಾಲಯವು ವಿಶೇಷ ಲೋಕ್ ಅದಾಲತ್ ಅನ್ನು ಜುಲೈ 29 ರಿಂದ ಆಗಸ್ಟ್ 03 ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ಪಕ್ಷಕಾರರುಗಳಿಗೆ, ಎದುರುದಾರರ ಜೊತೆ ಪೂರ್ವಭಾವಿ ಲೋಕ್ ಅದಾಲತ್ ಅನ್ನು ನಡೆಸಲು ವಿಡಿಯೋ ಕಾನ್ಸರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಪಕ್ಷಕಾರರು ವಿಡಿಯೋ ಕಾನ್ಸರೆನ್ಸ್ ಮೂಲಕ ಸರ್ವೋಚ್ಚ ನ್ಯಾಯಾಲಯವು ನಡೆಸುವ ಪೂರ್ವಭಾವಿ ಲೋಕ್ ಅದಾಲತ್‍ನಲ್ಲಿ ಭಾಗವಹಿಸಲು ಅನುಕೂಲ ಮಾಡಲಾಗಿದೆ. ಈ ವಿಶೇಷ ಲೋಕ್ ಅದಾಲತ್‍ನಲ್ಲಿ ರಾಜೀ ಸಂಧಾನಕ್ಕೆ ಗುರುತಿಸಲಾದ ಪ್ರಕರಣಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ವರದಿಯಾಗಿರುತ್ತದೆ. ಇದರಿಂದ ಪ್ರಕರಣಗಳಲ್ಲಿನ ಎಲ್ಲಾ ಪಕ್ಷಕಾರರುಗಳು ತಮ್ಮ ವಾಸಸ್ಥಳಗಳ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಲ್ಲಿ ತೆರೆಯಲಾಗಿರುವ ವಿಡಿಯೋ ಕಾನ್ಫರೆನ್ಸ್ ಕೇಂದ್ರಗಳಿಗೆ ಭೇಟಿ ನೀಡಿ ಜು.29 ರಿಂದ ಆ.03 ರ ವರೆಗೆ ನಡೆಯುವ ವಿಶೇಷ ಲೋಕ್ ಅದಾಲತ್‍ನಲ್ಲಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.kslsa.kar.nic.in ವೆಬ್ಸ್‍ಸೈಟ್‍ಗೆ ಭೇಟಿ ನೀಡಬಹುಹು ಅಥವಾ ಆಯಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್ ಅವರು ತಿಳಿಸಿದ್ದಾರೆ. --------

ಬಳ್ಳಾರಿ ಮಹಾನಗರ ಪಾಲಿಕೆ; ಬೃಹತ್ ತ್ಯಾಜ್ಯೋತ್ಪಾದಕರಿಗೆ ಸೂಚನೆ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಪಾಲಿಕೆಯು ಸೂಚನೆ ನೀಡಿದ್ದು, ಬೃಹತ್ ಘನತ್ಯಾಜ್ಯೋತ್ಪಾದಕರು ದಿನವೊಂದಕ್ಕೆ 100 ಕೆಜಿ ಅಥವಾ ಅದಕ್ಕೂ ಹೆಚ್ಚಿನ ಘನತ್ಯಾಜ್ಯವನ್ನು ಉತ್ಪಾದಿಸುವಂತಹ ಉತ್ಪಾದಕರುಗಳು ಘನತ್ಯಾಜ್ಯ ನಿರ್ವಹಣಾ ಕರ್ತವ್ಯಗಳನ್ನು ತಾವೇ ನಿರ್ವಹಿಸಬೇಕು ಎಂದು ಪಾಲಿಕೆಯು ತಿಳಿಸಿದೆ. ಘನತ್ಯಾಜ್ಯವನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಕೊಳೆಯಬಹುದಾದ ಜೈವಿಕ ತ್ಯಾಜ್ಯ, ಕೊಳೆಯಲಾರದಂತಹ ಜೈವಿಕ ರಹಿತ ತ್ಯಾಜ್ಯ, ಗೃಹೋತ್ಪಾದಕ ಹಾನಿಕಾರಕ ತ್ಯಾಜ್ಯ ಮೂಲದಲ್ಲಿಯೇ ವಿಂಗಡಿಸುವುದು ಒಳಗೊಂಡಂತೆ ಮತ್ತು ಕೊಳೆಯಬಹುದಾದ ಜೈವಿಕ ತ್ಯಾಜ್ಯಗಳ ಸಂಸ್ಕರಣಾ ಮತ್ತು ಔಪಚಾರಿಕ ವ್ಯವಸ್ಠೆಯನ್ನು ಪ್ರಕಟಣೆಗೊಂಡ 30 ದಿನಗಳೊಳಗಾಗಿ ತಮ್ಮ ಸಂಕೀರ್ಣ, ಆವರಣಗಳಲ್ಲಿ ಅನುಷ್ಟಾನಗೊಳಿಸಬೇಕು ಎಂದು ಮಹಾನಗರ ಪಾಲಿಕೆ ನಿರ್ದೇಶಿಸಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯೋತ್ಪಾದಕರು ಪ್ರತಿ ದಿನವೊಂದಕ್ಕೆ ತಮ್ಮ ಆವರಣದಿಂದ 100 ಕೆಜಿಗಿಂತ ಕಡಿಮೆ ತ್ಯಾಜ್ಯವನ್ನು ಉತ್ಪಾದಿಸುತ್ತಿರುವರೆಂದು ಸ್ವಯಂ ಘೋಷಣೆ ಪತ್ರವನ್ನು ಜುಲೈ 25 ರೊಳಗಾಗಿ ಪಾಲಿಕೆಗೆ ಸಲ್ಲಿಸಬೇಕು. ನಂತರ ಸಲ್ಲಿಸಲಾಗುವ ಸ್ವಯಂ ಘೋóಷಣೆ ಪತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗುವುದು. ಸ್ವಯಂ ಘೋಷಣೆಯು ಪರಿಶೀಲನೆಗೆ ಒಳಪಡಿಸಲಾಗುತ್ತದೆ ಮತ್ತು ಅದೇ ರೀತಿಯಲ್ಲಿಯೇ ವರ್ಗೀಕರಿಸಲಾಗುವುದು. ಒಂದು ವೇಳೆ ಸುಳ್ಳು ಎಂದು ಕಂಡು ಬಂದರೆ ದಂಡ ವಿಧಿಸಲಾಗುವುದು. ಸಾರ್ವಜನಿಕರು ವಿವರವಾದ ಸೂಚನೆಗಳು ಹಾಗೂ ಮಾಹಿತಿಗಾಗಿ http://www.ballaricity.mrc.gov.in/ ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ನಾಡಪ್ರಭು ಕೆಂಪೇಗೌಡರು ಜನರ ಒಳಿತಿಗಾಗಿ ಶ್ರಮಿಸಿದವರು: ಮೇಯರ್ ಮುಲ್ಲಂಗಿ ನಂದೀಶ್

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ನವ ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಜನ ಸಾಮಾನ್ಯರ ಒಳಿತಿಗಾಗಿ ಶ್ರಮಿಸಿದವರು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾಡದೊರೆ ಕೆಂಪೇಗೌಡ ಅವರು 52 ವರ್ಷಗಳ ಕಾಲ ಸುಧೀರ್ಘ ಆಡಳಿತ ನಡೆಸಿ, ಜನತೆಯ ಮನೆಮನಗಳಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ ಎಂದರು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮೊದಲೇ ನಾಂದಿಯಾಡಿದವರು ಕೆಂಪೇಗೌಡರು, ಅವರ ದೂರದೃಷ್ಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು. ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಸಾವಿರಾರು ಕೆರೆಗಳ ನಿರ್ಮಾತೃ. ನವ ಬೆಂಗಳೂರಿನ ನಿರ್ಮಾಣದಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದರು. ವಿದ್ಯಾರ್ಥಿಗಳು ಪುಸ್ತಕದೊಡನೆ ಸ್ನೇಹ ಬೆಳಸಿಕೊಂಡು, ಮೊಬೈಲ್ ಗೀಳಿಗೆ ಒಳಗಾಗದೆ ಮಹಾನ್ ಸಾಧಕರ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬಳ್ಳಾರಿ ತಾಲ್ಲೂಕಿನ ಹೊಸ ಯರ್ರಗುಡಿಯ ಸಹ ಶಿಕ್ಷಕರಾದ ನಂದೀಶ್ ಪುಂಡಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ನಾಡದೊರೆ ಕೆಂಪೇಗೌಡರು ಆತ್ಮ ವಿಶ್ವಾಸದಿಂದ ನೂತನ ಬೆಂಗಳೂರು ಮಹಾನಗರವನ್ನು ಸೃಷ್ಟಿಮಾಡಿದವರು, ಅವರು ನಡೆದಂತ ದಾರಿ ಮತ್ತು ಅವರ ಆಡಳಿತ ಆಳ್ವಿಕೆಯನ್ನು ಈ ದಿನ ಸ್ಮರಿಸುವಂತದ್ದಾಗಿದೆ ಎಂದು ಹೇಳಿದರು. ನಾಡಪ್ರಭು ಕೆಂಪೇಗೌಡರು ಐದು ಅಂಶಗಳಾದ ಕೋಟೆ, ಪೇಟೆ, ಉದ್ಯಾನವನ, ಮಾರುಕಟ್ಟೆ ಹಾಗೂ ಕೆರೆಗಳಂತಹ ಯೋಜನೆಗಳ ಅಭಿವೃದ್ದಿ ಯೋಜನೆಗಳನ್ನು ಆಗಿನ ಕಾಲದಲ್ಲಿಯೇ ರೂಪಿಸಿದ್ದು, ಅವರ ಯೋಚನೆ ಮತ್ತು ಯೋಜನೆ ದೂರದೃಷ್ಟಿಗೆ ಸಾಕ್ಷ್ಯವಾಗಿದೆ ಎಂದು ತಿಳಿಸಿದರು. ಕೆಂಪೇಗೌಡರಿಗು ಮತ್ತು ವಿಜಯನಗರ ಸಾಮ್ರಾಜ್ಯಕ್ಕೂ ಅವಿನಾಭಾವ ಸಂಬಂಧವಿದ್ದು, ವಿಶ್ವ ವಿಖ್ಯಾತ ಹಂಪಿಯ ವಿಜಯನಗರ ಸಾಮ್ರಾಜ್ಯದ ಉಳಿವಿಗಾಗಿ ಹೋರಾಡಿದ ಮಹಾನ್ ವೀರಯೋಧ ಅವರಗಾಗಿದ್ದಾರೆ ಎಂದರು. ಇದಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಬಳ್ಳಾರಿಯ ಕವಿತಾ ಗುಂಗೂರು ಅವರಿಂದ ಸುಗಮ ಸಂಗೀತಕ್ಕೆ ನೆರದಿದ್ದವರು ಚಪ್ಪಾಳೆಗೈದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮೇಯರ್ ಡಿ.ಸುಖುಂ, ಪಾಲಿಕೆಯ ಅಧಿಕಾರಿ ಅಬ್ದುಲ್ ರೆಹಮಾನ್, ಬಳ್ಳಾರಿ ತಾಲ್ಲೂಕು ತಹಶೀಲ್ದಾರ ಗುರುರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಿಬ್ಬಂದಿಯವರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ---------

ಗಾಂಜಾ ಮಾರಾಟ; ಇಬ್ಬರು ಆರೋಪಿಗಳ ಬಂಧನ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯ ಒಂದು ಮನೆಯಲ್ಲಿ ಮಾದಕ ದ್ರವ್ಯ ಗಾಂಜಾವನ್ನು ಅಕ್ರಮವಾಗಿ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದರು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನಗರದ ರಾಣಿತೋಟದ ಬೀರಪ್ಪ ಗುಡಿ ಹತ್ತಿರದ ನಿವಾಸಿ ವಾಹೀದ್ ಮತ್ತು ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿ ಮಾರೆಮ್ಮ ಗುಡಿ ಎದುರುಗಡೆಯ ನಿವಾಸಿ ಚಾಂದ್‍ಭಾಷಾ ಬಂಧಿತ ಆರೋಪಿಗಳಾಗಿದ್ದು, ಇವರಿಂದ ರೂ.19,10,000 ಬೆಲೆ ಬಾಳುವ 19 ಕೆಜಿ 100 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಸೈಬರ್ ಪೊಲೀಸ್ ಠಾಣೆಯ ಡಿಎಸ್‍ಪಿ ಡಾ.ಸಂತೋಷ ಚೌವ್ಹಾಣ ಅವರ ಖಚಿತ ಮಾಹಿತಿಯೊಂದಿಗೆ ಪೊಲೀಸ್ ಇನ್ಸ್‍ಪೆಕ್ಟರ್ ರಮಾಕಾಂತ್ ವೈ.ಹೆಚ್, ಪಿಎಸ್‍ಐ ವಲಿಭಾಷ ಹಾಗೂ ಸಿಬ್ಬಂದಿ ತಂಡ ರಚಿಸಿ ಕಾರ್ಯಾಚರಣೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ ಗಾಂಜಾ ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, 13 ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಒಟ್ಟು 75 ಕೆಜಿ ಗಾಂಜಾ ವಶಪಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಗಾಂಜಾ ಮತ್ತು ಎನ್‍ಡಿಪಿಎಸ್ ಆಕ್ಟ್ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿವಿಧೆಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಗಾಂಜಾ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ರಂಜೀರ್ ಕುಮಾರ್ ಬಂಡಾರು ಅವರು ಶ್ಲಾಘಿಸಿದರು. ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಹಾಗೂ ಇತರರು ಹಾಜರಿದ್ದರು. ----------

ಜು.13 ರಂದು ರಾಷ್ಟ್ರೀಯ ಲೋಕ ಅದಾಲತ್

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಲೋಕ ಅದಾಲತ್‍ನ್ನು ಜುಲೈ 13 ರಂದು ನಗರದ ತಾಳೂರು ರಸ್ತೆಯ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ, ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಚೆಕ್ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ ಹಾಗೂ ಕೌಟುಂಬಿಕ ಪ್ರಕರಣಗಳು, ಸಿವಿಲ್ ಪ್ರಕರಣಗಳು ಹಾಗೂ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಮೆಗಾ-ಲೋಕ್ ಅದಾಲತ್ ಮೂಲಕ ಶೀಘ್ರವೇ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳು ಸುವರ್ಣ ಅವಕಾಶವಾಗಿದೆ. *ವಿಶೇಷ ಸೂಚನೆ:* ಪ್ರತಿದಿನ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ-ಲೋಕ್ ಅದಾಲತ್‍ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‍ಗಳು ನಡೆಯುತ್ತಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಅಥವಾ ದೂ.08392-278077 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಜೂ.28, 29 ರಂದು ವಿಎಸ್‍ಕೆ ವಿವಿಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆ ಹಾಗೂ ಕಾರ್ಯಾಗಾರ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗ, ಕರ್ನಾಟಕ ವಾಲಿಬಾಲ್ ಸಂಸ್ಥೆ ಬೆಂಗಳೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯಮಟ್ಟದ ವಾಲಿಬಾಲ್ ತೀರ್ಪುಗಾರರ ಪರೀಕ್ಷೆ ಹಾಗೂ ಹೊಸ ನಿಯಮಗಳ ಕುರಿತು ಕಾರ್ಯಗಾರವನ್ನು ಜೂ.28 ಮತ್ತು 29 ರಂದು ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಮತ್ತು ವೃತ್ತಿಪರರು ಭಾಗವಹಿಸಿ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಆಡಳಿತ ವರ್ಗದ ಕುಲಸಚಿವ ಎಸ್.ಎನ್.ರುದ್ರೇಶ ಅವರು ತಿಳಿಸಿದ್ದಾರೆ. ---------

ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಸ್ತಕ ಸಾಲಿಗೆ 3ನೇ ಸೆಮಿಸ್ಟರ್ 2 ನೇ ವರ್ಷ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಚಾರ್ಯರಾದ ಆನಂದ್ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯ ಮೇರೆಗೆ ಅವಧಿ ವಿಸ್ತರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಜುಲೈ 03 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಜುಲೈ 04 ರಂದು ಪ್ರಕಟಿಸಲಾಗುವುದು. ಜುಲೈ 05 ಮತ್ತು 06 ರಂದು ಸಂದರ್ಶನ ಮತ್ತು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಮೊದಲನೇ ಗೇಟ್ ಹತ್ತಿರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರ ಕಚೇರಿ ಅಥವಾ ದೂ.08392-242228 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಬುಧವಾರ, ಜೂನ್ 26, 2024

ಮಾದಕ ವಸ್ತು ಸೇವನೆಯಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ: ನ್ಯಾ.ರಾಜೇಶ್ ಹೊಸಮನೆ

ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತು ಸೇವನೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ದುಷ್ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೆÇೀಲಿಸ್ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ “ಸಾಕ್ಷಿಗಳು ಸ್ಪಷ್ಟವಾಗಿವೆ ತಡೆಗಟ್ಟುವ ಬಗ್ಗೆ ಗಮನವಹಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ನಗರದ ಬಳ್ಳಾರಿ ಇನ್ಸ್‍ಟ್ಯೂಟ್ ಆಪ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ವಿವಿಧ ರೂಪದಲ್ಲಿ ದೊರೆಯುತ್ತಿದ್ದು, ಹೊರ ದೇಶಗಳಿಂದಲು ಕಳ್ಳ ಸಾಗಣೆಯಾಗುತ್ತಿದೆ. ಇದರ ಸೇವನೆ ಹಾಗೂ ಕಳ್ಳ ಸಾಗಣೆ ಮಾಡುವುದು ಅಪರಾಧವಾಗಿದ್ದು, ಈ ಅಪರಾಧದಲ್ಲಿ ಪಾಲ್ಗೊಂಡರೆ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿರ್ ಕುಮಾರ್ ಬಂಡಾರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಕ್ರಮ ವಿದ್ಯಾಭ್ಯಾಸದ ಜೊತೆಗೆ ಮಾನಸಿಕ ಆರೋಗ್ಯವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತಿನ ಜೀವನ ಹಾಗೂ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಮಾದಕ ವಸ್ತುಗಳ ಬಗ್ಗೆ ಇರುವ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೊಪಿಕ್ ಸಬ್ಸ್ಟೆನ್ಸಸ್ ಆಕ್ಟ್ (ಎನ್‍ಡಿಪಿಎಸ್ ಆಕ್ಟ್ 1985) ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಿದರು. ಮಾದಕ ವಸ್ತುಗಳ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ನೀಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋರೋಗ ತಜ್ಞ ಡಾ.ರೋಹನ್ ವನಗುಂದಿ ಅವರು ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ ಬಾಬು, ಬಿಐಟಿಎಂ ಕಾಲೇಜಿನ ಪ್ರಾಂಶುಪಾಲರಾದ ಯಡವಳ್ಳಿ ಬಸವರಾಜ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವೀರೇಂದ್ರ ಕುಮಾರ್, ಉಪ ಪೋಲಿಸ್ ವರಿಷ್ಠಾಧಿಕಾರಿ ವೆಂಕಟೇಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಎಸ್ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿಯಾಂತ್ರಣಾಧಿಕಾರಿ ಡಾ.ಇಂದ್ರಾಣಿ ವಿ., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಈಶ್ವರ್ ದಾಸಪ್ಪನವರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಿಬ್ಬಂದಿಗಳಾದ ಶರ್ಮಸ್ ವಲಿ.ಪಿ., ಶಾಂತಕುಮಾರ್.ಹೆಚ್., ರಂಜಿತ.ಜಿ., ಸಾಹೇರ ಬಾನು, ನಿರಂಜನ, ರಮೇಶ್ ಬಾಬು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. --------

ಜೂ.27 ರಿಂದ ಬಳ್ಳಾರಿ-ಹುಬ್ಬಳ್ಳಿ ಮಾರ್ಗದಲ್ಲಿ ರಾಜಹಂಸ ಸಾರಿಗೆ ಪ್ರಾರಂಭ

ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಬಳ್ಳಾರಿಯಿಂದ ಹುಬ್ಬಳ್ಳಿಗೆ ಜೂ.27 ರಿಂದ 2 ರಾಜಹಂಸ ಸಾರಿಗೆ ಬಸ್ ಕಾರ್ಯಾಚರಣೆ ಪ್ರಾರಂಭಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ. ಬಳ್ಳಾರಿ-ಹುಬ್ಬಳ್ಳಿ ವಯಾ ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗದಲ್ಲಿ ಸೀಮಿತ ನಿಲುಗಡೆ ಕಲ್ಪಿಸಲಾಗಿದೆ. *ಬಸ್ ಸಂಚರಿಸುವ ವೇಳೆ*: ಬಳ್ಳಾರಿಯಿಂದ ಬೆಳಿಗ್ಗೆ 5.30 ಮತ್ತು 07 ಗಂಟೆಗೆ ಹೊರಟು, ಹುಬ್ಬಳ್ಳಿಗೆ ಬೆಳಿಗ್ಗೆ 10.30 ಮತ್ತು ಮಧ್ಯಾಹ್ನ 12 ಗಂಟೆಗೆ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಿಗ್ಗೆ 11 ಮತ್ತು 01 ಗಂಟೆಗೆ ಹೊರಟು, ಬಳ್ಳಾರಿಗೆ ಸಂಜೆ 04 ಮತ್ತು 06 ಗಂಟೆಗೆ ತಲುಪಲಿದೆ. ಟಿಕೆಟ್ ದರ ರೂ.430 ಇರಲಿದೆ. ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ಗೆ ಭೇಟಿ ನೀಡಬಹುದು. ರಾಜಹಂಸ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಬಳ್ಳಾರಿ: ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಂದ ಅಹವಾಲು ಸ್ವೀಕಾರ; ಸ್ಥಳದಲ್ಲಿಯೇ ಕೆಲ ಸಮಸ್ಯೆಗಳಿಗೆ ಪರಿಹಾರ

ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಅಲೆದಾಡಿ ಪರಿಹಾರ ಸಿಗದೇ, ತ್ವರಿತ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಅಹವಾಲುಗಳಿದ್ದಲ್ಲಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದಲ್ಲಿನ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಜನತಾ ದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ನಿರ್ದೇಶನದಂತೆ ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಮ್ಮಿಕೊಳ್ಳುತ್ತಿದ್ದು, ಸಮಸ್ಯೆಗಳನ್ನು ಆಲಿಸಿ, ಪರಿಶೀಲಿಸಿ ಪರಿಹಾರ ನೀಡಲಾಗುತ್ತಿದೆ. ಸಮಸ್ಯೆಗಳಿರುವ ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ, ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಅಹವಾಲುಗಳನ್ನು ಸ್ವೀಕರಿಸಿ, ಕೂಲಂಕುಶವಾಗಿ ಪರಿಶೀಲಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸಿ, ತ್ವರಿತವಾಗಿ ಪರಿಹಾರ ನೀಡಲಾಗುವುದು ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಉತ್ಸುಕರಾಗಿಯೇ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿದರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹಾರ ನೀಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. *ಒಟ್ಟು 27 ಅರ್ಜಿ ಸಲ್ಲಿಕೆ:* ನೂತನ ಜಿಲ್ಲಾಡಳಿತ ಭವನದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಒಟ್ಟು 27 ಅರ್ಜಿಗಳು ಸ್ವೀಕೃತಗೊಂಡವು. ಕಂದಾಯ ಇಲಾಖೆ 17, ಭೂ ಮಾಪನ ಇಲಾಖೆ 03, ಬಳ್ಳಾರಿ ಮಹಾನಗರ ಪಾಲಿಕೆ 02, ಜಿಲ್ಲಾ ಪಂಚಾಯತಿ 03, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಉಪವಿಭಾಗ 01, ತಾಲ್ಲೂಕು ಪಂಚಾಯಿತಿ 01 ಸೇರಿದಂತೆ ಒಟ್ಟು 27 ಅರ್ಜಿ ಸ್ವೀಕಾರಗೊಂಡವು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಉಪವಿಭಾಗಾಧಿಕಾರಿ ಹೇಮಂತ್, ಎಎಸ್‍ಪಿ ನವೀನ್ ಕುಮಾರ್, ತಹಶೀಲ್ದಾರ ಗುರುರಾಜ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ---------