ಶುಕ್ರವಾರ, ಜೂನ್ 14, 2024
ಬಳ್ಳಾರಿಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ | ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ: ಡಿಹೆಚ್‍ಒ ಡಾ.ರಮೇಶ್ ಬಾಬು ಕರೆ
ಬಳ್ಳಾರಿ,ಜೂ.14(ಕರ್ನಾಟಕ ವಾತೆ):
ರಕ್ತವು ಅಮೂಲ್ಯವಾದದ್ದು, ಪ್ರತಿಯೊಬ್ಬ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಕರೆ ನೀಡಿದರು.
ರಾಜ್ಯ ಏಡ್ಸ್ ಪ್ರಿವೆನ್‍ಷನ್, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಕ್ತ ಸುರಕ್ಷತ ಸಮಿತಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಹಣ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ನಗರದ ಶ್ರೀಮತಿ ಸರಳದೇವಿ ಸತೀಶ್‍ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಏರ್ಪಡಿಸಿದ್ದ ಜಾಥಾಗೆ ಚಾಲನೆ ನೀಡಿ ಅವರು ಅವರು ಮಾತನಾಡಿದರು.
ಯಾವುದೇ ಸಮಯದಲ್ಲಿ ಇನ್ನೊಬ್ಬರ ಜೀವವನ್ನು ಉಳಿಸಲು 18 ವರ್ಷದ ಮೇಲ್ಪಟ್ಟ ಎಲ್ಲಾ ಆರೋಗ್ಯವಂತರು ತಪ್ಪದೇ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಬಳಿಕ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಹೆಚ್‍ಐವಿ ನಿಯಂತ್ರಣಾಧಿಕಾರಿಯಾದ ಡಾ.ಇಂದ್ರಾಣಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮನನುಷ್ಯ ಆರೋಗ್ಯವಂತನಾಗಿರಲು ಶುದ್ಧ ರಕ್ತದ ಪರಿಚಲನೆ ಮುಖ್ಯವಾಗಿದೆ. ರಕ್ತದಾನ ಮಾಡುವುದರಿಂದ ಶುದ್ಧವಾದ ರಕ್ತ ಉತ್ಪತ್ತಿಯಾಗುತ್ತದೆ. ಹಾಗಾಗಿ ಅರ್ಹರು ತಪ್ಪದೇ ರಕ್ತದಾನ ಮಾಡಿ, ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಗರ್ಭೀಣಿಯರಿಗೆ, ಅಪಘಾತಕ್ಕೆ ಒಳಗಾದವರಗೆ, ರಕ್ತ ಕ್ಯಾನ್ಸರ್‍ನಿಂದ ಬಳಲುತ್ತಿದ್ದವರಿಗೆ ಮತ್ತು ರೋಗಿಗಳಿಗೆ ರಕ್ತವು ಅತ್ಯವಶ್ಯವಾಗಿದ್ದು, ತಮ್ಮ ಅಮೂಲ್ಯವಾದ ರಕ್ತವನ್ನು ನೀಡುವುದರಿಂದ ಇತರರ ಜೀವ ಉಳಿಸಬಹುದು. ರಕ್ತದಾನ ಮಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ರಕ್ತದಾನ ಮಾಡುವುದರಿಂದ ರಕ್ತ ಮರು ಉತ್ಪತ್ತಿಯಾಗಿ, ಆರೋಗ್ಯ ಸುಧಾರಿಸಿಕೊಳ್ಳುತ್ತದೆ ಎಂದು ವಿವರಿಸಿದರು.
ಶ್ರೀಮತಿ ಸರಳಾದೇವಿ ಸತೀಶ್‍ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನವು ಶ್ರೇಷ್ಠದಾನವಾಗಿದ್ದು, ಆರೋಗ್ಯವಂತರಾದ ಪ್ರತಿಯೊಬ್ಬರು ರಕ್ತದಾನ ಮಾಡಬೇಕು ಹಾಗೂ ರಕ್ತದಾನ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು. ಅದರಲ್ಲಿ ಸುಭಾಷ್ ಸಿಂಗ್ (90 ಬಾರಿ), ರಾಜೇಂದ್ರ ರೆಡ್ಡಿ (60 ಬಾರಿ), ಹೊನ್ನೂರ್ ಸಾಬ್ (58 ಬಾರಿ), ದಾದಾಪೀರ (52 ಬಾರಿ), ಸಂಪತ್ ಕುಮಾರ್ (50 ಬಾರಿ), ರಾಘವೇಂದ್ರ (42 ಬಾರಿ), ಗೋಪಣ್ಣ (38 ಬಾರಿ) ಮತ್ತು ರಾಮು (35 ಬಾರಿ) ಸೇರಿದಂತೆ ಮತ್ತಿತರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಜಾಥಾ:
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವು ಫಲಕ ಮತ್ತು ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಸಂಯೋಜಕರಾದ ಡಾ.ಪಲ್ಲವಿ, ಜಿಲ್ಲಾ ಆಶ್ರಿತ ರೋಗವಾಹಕಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್.ಹೆಚ್ ದಾಸಪ್ಪನವರ, ಗಿರೀಶ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಿಬ್ಬಂದಿಯವರು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ ಮಾಡಿದರೆ ಮತ್ತೊಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ. ಎಲ್ಲರೂ ಭಯಭೀತರಾಗದೇ ರಕ್ತದಾನ ಮಾಡಬೇಕು.
- ಬಿ.ದೇವಣ್ಣ, 103 ಬಾರಿ ರಕ್ತದಾನ ಮಾಡಿದ ಎಸ್‍ಬಿಐ ಬ್ಯಾಂಕ್‍ನ ನಿವೃತ್ತ ಉದ್ಯೋಗಿ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ