ಬುಧವಾರ, ಜೂನ್ 19, 2024

ಸಮರ್ಪಕ ಸ್ಕ್ಯಾನಿಂಗ್ ವರದಿ ನೀಡದೆ ಸೇವಾ ನ್ಯೂನತೆ; ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ

ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ): ಗರ್ಭಿಣಿ ಮಹಿಳೆ ಸುಮಂಗಳ ಅವರಿಗೆ ಸರಿಯಾಗಿ ಸ್ಕ್ಯಾನಿಂಗ್ ಮಾಡದೇ ತಪ್ಪಾದ ವರದಿ ನೀಡಿದ್ದರಿಂದ ನಗರದ ಪ್ರಸೂತಿ ತಜ್ಞರಾದ ಡಾ.ಪರಿಮಳ ದೇಸಾಯಿ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ರೂ.2,50,000 ಮತ್ತು ಬಡ್ಡಿಯನ್ನು ಸೇರಿಸಿ ಫಿರ್ಯಾದುದಾರರಿಗೆ ನೀಡುವಂತೆ ಆದೇಶಿಸಿದೆ. ಬಳ್ಳಾರಿ ತಾಲೂಕಿನ ಬ್ಯಾಲಚಿಂತೆ ಗ್ರಾಮದ ಸುಮಂಗಳ ಗರ್ಭಿಣಿಯಾಗಿದ್ದಾಗ ನಗರದ ಸಂಗನಕಲ್ಲು ರಸ್ತೆಯ ಕೆ.ಬಿ.ವೃತ್ತದಲ್ಲಿ ಇರುವ ಪ್ರಸೂತಿ ತಜ್ಞೆ ಡಾ.ಪರಿಮಳ ದೇಸಾಯಿ ಇವರ ಬಳಿ 2022 ರ ಡಿ.10 ರಂದು ಸ್ಕ್ಯಾನಿಂಗ್ ಮಾಡಿಸಲು ಬಂದಾಗ ನಾರ್ಮಲ್ ಇದೆ ಎಂದು ಹೇಳಿದ್ದರು. ಸುಮಂಗಳ ಅವರು, 2023 ರ ಫೆ.30 ರಂದು ಮೋಕಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಮಗುವಿನ ಬೆನ್ನಿನ ಕೆಳ ಭಾಗದಲ್ಲಿ Myelomeningocele ಬೆಳೆದಿರುವುದು ಕಂಡುಬಂದಿತ್ತು. ವೈದ್ಯರು 22 ಮತ್ತು 32 ನೇ ವಾರದಲ್ಲಿ ಸರಿಯಾಗಿ ಸ್ಕ್ಯಾನಿಂಗ್ ಮಾಡಿ Myelomeningocele ಬೆಳೆದಿರುವುದನ್ನು ಸ್ಕ್ಯಾನಿಂಗ್‍ನಲ್ಲಿ ಗುರುತಿಸಿ ಪತ್ತೆ ಹಚ್ಚಿದ್ದರೆ, ಮಗುವಿಗೆ ಗರ್ಭದಲ್ಲಿದ್ದಾಗಲೇ ಚಿಕಿತ್ಸೆ ಕೊಡಿಸುವ ಅವಕಾಶವಿತ್ತು, ಜನಿಸಿದ ಮಗುವಿಗೆ ಬೆನ್ನಿನ ಕೆಳ ಭಾಗದಲ್ಲಿ Myelomeningocele ಬೆಳೆಯುತ್ತಿರಲಿಲ್ಲ ಎಂದು ತಿಳಿಸಿದ್ದರು. ಹೆಣ್ಣು ಮಗು ಜನಿಸಿದ ನಂತರ ಒಂದು ಕಾಲು ದೊಡ್ಡದು ಮತ್ತೊಂದು ಸಣ್ಣದು ಇರುವುದರಿಂದ ನಿಂತು ಕೊಳ್ಳಲು, ಕುಳಿತು ಕೊಳ್ಳಲು ಹಾಗೂ ನಡೆದಾಡಲು ಆಗುವುದಿಲ್ಲ. ಹೆಣ್ಣು ಮಗುವಿಗೆ ಜೀವಿತಾವಧಿಯವರೆಗೆ ವೈದ್ಯೋಪಚಾರ ಚಿಕಿತ್ಸೆ ಪಡೆಯುವಂತೆ ಮಾಡಿ ವೈದ್ಯಕೀಯ ನಿರ್ಲಕ್ಷತೆ ಎಸಗಿರುವುದರಿಂದ ರೂ.5,00,000 ಪರಿಹಾರ ಕೊಡಿಸುವಂತೆ ಸುಮಂಗಳ ಅವರು ಜಿಲ್ಲಾ ಆಯೋಗದಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೆಸ್ವಾಮಿ ಮತ್ತು ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಅವರು ಉಭಯ ಪಕ್ಷಗಾರರಿಂದ ವಾದ ಕೇಳಿದ ನಂತರ ಎದುರುದಾರರಾದ ಡಾ.ಪರಿಮಳ ದೇಸಾಯಿ ಅವರು ಗರ್ಭಿಣಿ ಮಹಿಳೆಗೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಸ್ಕ್ಯಾನಿಂಗ್ ಮಾಡದೇ ಮತ್ತು ಸೂಕ್ತ ಅವಧಿಯ ದಿನಗಳಲ್ಲಿ ನುರಿತ ರೇಡಿಯೋಲಾಜಿಸ್ಟ್‍ರಿಂದ ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆ ನೀಡುವಲ್ಲಿ ಕರ್ತವ್ಯ ನಿರ್ಲಕ್ಷತೆ ಎಸಗಿರುವುದು ಸಾಬಿತಾಗಿರುವುದರಿಂದ ಸುಮಂಗಲಾರವರಿಗೆ ಒಟ್ಟು ರೂ.2,50,000 ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ