ಶುಕ್ರವಾರ, ಜೂನ್ 21, 2024

ಉತ್ತಮ ಆರೋಗ್ಯಕ್ಕಾಗಿ ಯೋಗ: ಡಾ.ಚೈತ್ರ

ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ): ಯೋಗವು ಮಾನವನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ ಎಂದು ಉಡುಪಿಯ ರಾಷ್ಟ್ರ ಮಟ್ಟದ ಯೋಗ ಪಟು, ಯೋಗ ತರಬೇತುದಾರರು ಮತ್ತು ನಿಸರ್ಗ ಚಿಕಿತ್ಸಾ ವೈದ್ಯರಾದ ಡಾ.ಚೈತ್ರಾ ಅವರು ಹೇಳಿದರು. 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ವಿವಿ ಬಯಲು ರಂಗಮಂದಿರದಲ್ಲಿ ‘ತನಗಾಗಿ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಯೋಗ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗ ಕೇವಲ ವ್ಯಾಯಾಮವಲ್ಲ, ಮನಸ್ಸು, ದೇಹ ಮತ್ತು ಆತ್ಮವನ್ನು ಸಂಯೋಜಿಸುತ್ತದೆ. ದೇಹದ ಸಾಮರಸ್ಯ, ಆಲೋಚನೆ, ದೇಹದಲ್ಲಿ ನಡೆಯುವ ಕ್ರಿಯೆಗಳ ನಡುವಿನ ಸಮತೋಲನ, ಸಂಯಮ ಹಾಗೂ ಏಕಾಗ್ರತೆಯನ್ನು ಪ್ರೇರಿಪಿಸುತ್ತದೆ. ಯೋಗದಿಂದಾಗಿ ಒತ್ತಡದ ಜೀವನವನ್ನು ನಿರ್ವಹಿಸಲು ಹಾಗೂ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಯೋಗವು ಭಾರತೀಯ ಸಂಸ್ಕøತಿಯ ಪ್ರತೀಕವಾಗಿದೆ. ಯೋಗ ದಿನಾಚಾರಣೆಯು ವೈಯಕ್ತಿಕ ಆರೋಗ್ಯಕ್ಕಾಗಿ ಮಾತ್ರ ಸಿಮಿತವಾಗಿರದೆ, ಸಮಾಜಕ್ಕೂ ಮಹತ್ವ ನೀಡಲಾಗಿದೆ. ಯೋಗವನ್ನು ನಮ್ಮಲ್ಲಿ ಅಳವಡಿಸಿಕೊಳ್ಳವುದರಿಂದ ಗುರಿ ಸಾಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಒತ್ತಡ ನಿರ್ವಹಣೆಗಾಗಿ ಜನರು ಇಂದು ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ನಡೆಸಲಾಗುತ್ತದೆ. ಯೋಗಾಭ್ಯಾಸದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ತಿಪ್ಪೇರುದ್ರಪ್ಪ ಜೆ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗವು ದಿನಾಚರಣೆಗೆ ಮಾತ್ರ ಸೀಮಿತವಾಗಬಾರುದು. ಯೋಗನಾಡಿನಲ್ಲಿ ಜನಿಸಿದ ನಾವೆಲ್ಲ ಅದೃಷ್ಟವಂತರು. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ವಿವಿಯಲ್ಲಿ ಯೋಗ ಡಿಪ್ಲೋಮಾ ಆರಂಭಿಸಲಾಗಿದೆ. ಕಲಿಕೆಯ ಜೊತೆಗೆ ಯೋಗವನ್ನು ಅಧ್ಯಯನ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ವಿವಿಯ ಯೋಗ ಅಧ್ಯಯನ ಉಪನ್ಯಾಸಕರಾದ ಮಹೇಶ ಬಾಬು, ವಿದ್ಯಾರ್ಥಿಗಳಿಂದ ಸಾಮಾನ್ಯ ಯೋಗ ಶಿಷ್ಟಾಚಾರ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಚೈತ್ರಾ ಅವರು ತಮ್ಮ ಯೋಗವನ್ನು ಪ್ರದರ್ಶಿಸಿದರು. ಯೋಗ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಯ ಸಿಂಡಿಕೇಟ್ ಸದಸ್ಯರಾದ ರಮೇಶ್ ಸವದಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಡಾ.ಶಶಿಧರ ಕೆಲ್ಲೂರ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ