ಶುಕ್ರವಾರ, ಜೂನ್ 14, 2024

ಮಲೇರಿಯಾ ವಿರೋಧಿ ಮಾಸಾಚರಣೆ; ವೈದ್ಯಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸೂಕ್ತ ಕಾರ್ಯಯೋಜನೆ ರೂಪಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ,ಜೂ.14(ಕರ್ನಾಟಕ ವಾರ್ತೆ): ಜೂನ್ ಮಾಹೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಗುತ್ತಿದ್ದು, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಮುದಾಯ ಮತ್ತು ಇತರ ಇಲಾಖೆಗಳ ಸಮನ್ವಯದೊಂದಿಗೆ ಸೂಕ್ತ, ನಿರ್ದಿಷ್ಟ ನಿಯಂತ್ರಣಾ ಕ್ರಮ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೂನ್ ಮಾಹೆಯಲ್ಲಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ನಿಂತ ನೀರಿನ ತಾಣಗಳು ಹೆಚ್ಚಾಗಿ ಸೊಳ್ಳೆ ಸಾಂದ್ರತೆ ಹೆಚ್ಚಾಗುವುದರೊಂದಿಗೆ ಸಾಂಕ್ರಾಮಿಕ ರೋಗಗಳು (ಸೊಳ್ಳೆಯಿಂದ ಹರಡುವ) ಮಲೇರಿಯಾ, ಡೆಂಗೀ, ಚಿಕುನ್‍ಗುನ್ಯ ಹಾಗೂ ಇತರೆ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇವುಗಳ ಜಾಗ್ರತೆ ಕುರಿತು ಅರಿವು ಮೂಡಿಸಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ ಸಮುದಾಯಕ್ಕೆ ಜಾಗೃತಿ ಮೂಡಿಸಲು ಆರೋಗ್ಯ ಕೇಂದ್ರದ ಎಲ್ಲಾ ಹಂತಗಳಲ್ಲಿ ಐಇಸಿ, ಬಿಸಿಸಿ ಗುಂಪುಸಭೆ, ಅಡ್ವಕೆಸಿ ಕಾರ್ಯಾಗಾರ, ಮಾಧ್ಯಮಗಳ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ. ಜ್ವರ ಪ್ರಕರಣಗಳ ಶೀಘ್ರ ಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆಯನ್ನು ನೀಡುವಲ್ಲಿ ಕಾರ್ಯೋನ್ಮುಖರಾಗುವಂತೆ ಕ್ರಮವಹಿಸಲು ತಿಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, 2025 ರ ವೇಳೆಗೆ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಮಲೇರಿಯಾ ರೋಗದ ನಿವಾರಣಾ ಗುರಿಯನ್ನು ಸಾಧಿಸುವ ಉದ್ದೇಶದಿಂದ ಎಲ್ಲಾ ಹಂತಗಳಲ್ಲಿಯೂ ಚಟುವಟಿಕೆಗಳ ಪರಿಣಾಮವಾಗಿ ಅನುಷ್ಠಾನಗೊಳಿಸಿದ್ದು, ಪ್ರಸ್ತುತ ಜಿಲ್ಲೆಯು ವರ್ಗ-0 (Catagory-0 –prevension of re-establishment Phase) ಮಲೇರಿಯಾ ನಿವಾರಣಾ ಹಂತವನ್ನು ತಲುಪಿದೆ ಎಂದು ತಿಳಿಸಿದರು. 2025 ರ ವೇಳೆಗೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಿ ಕ್ಯಾಟ್-0 ಗುರಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಲೇರಿಯಾ ನಿಯಂತ್ರಣಾ ಕಾರ್ಯಕ್ರಮದಡಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯ ಮಹತ್ವದ ಬಗ್ಗೆ ಸಮುದಾಯಕ್ಕೆ ಜಾಗೃತಿ ಮೂಡಿಸಲಾಗುವುದು ಎಂದರು. ಗ್ರಾಮ, ಪಟ್ಟಣ, ನಗರ ಪ್ರದೇಶಗಳಿಗೆ ವಲಸೆ ಬರುವವರು ಹಾಗೂ ವಲಸೆಯಿಂದ ಹಿಂದುರಿಗಿ ಬರುವವರನ್ನು ಮಲೇರಿಯಾ ತಪಾಸಣೆಗೆ ಒಳಪಡಿಸಲಾಗುವುದು, ಮಲೇರಿಯಾ ದೃಢಪಟ್ಟವರಿಗೆ ಸಂಪೂರ್ಣ ತೀವ್ರ ಚಿಕಿತ್ಸೆ ನೀಡುವುದು, ಸ್ವಯಂ ರಕ್ಷಣಾ ವಿಧಾನಗಳನ್ನು ಸೇರಿದಂತೆ ಇತರೆ ನಿಯಂತ್ರಣಾ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಮರಿಯಂಬಿ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ವೀರೇಂದ್ರ, ಡಾ.ಹನುಮಂತಪ್ಪ, ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ವ್ಶೆದ್ಯಾಧಿಕಾರಿಗಳು, ಜಿಲ್ಲಾ ವಿಬಿಡಿಸಿ ಸಮಾಲೋಚಕ ಪ್ರತಾಪ್.ಹೆಚ್., ಜಿಲ್ಲಾ ಆರೋಗ್ಯ ಶಿಕ್ಷ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿಗಳು ಹಾಜರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ