ಮಂಗಳವಾರ, ನವೆಂಬರ್ 19, 2024
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಣೆ | ದಾಸ ಸಾಹಿತ್ಯ ಇಂದಿಗೂ ಪ್ರಸ್ತುತ: ಡಾ.ಗೋಪಾಲ್
ಬಳ್ಳಾರಿ,ನ.19(ಕರ್ನಾಟಕ ವಾರ್ತೆ):
ಕನಕದಾಸರು ರಚಿಸಿದ ನಳಚರಿತ್ರೆ, ಮೋಹನ ತರಂಗಿಣಿ, ರಾಮಧಾನ್ಯ ಚರಿತ ಮತ್ತು ಹರಿಭಕ್ತಿಸಾರ ಕೃತಿಗಳು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾಗಿವೆ. ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದು ಡಾ.ಗೋಪಾಲ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ 515ನೇ ಜಯಂತಿಯ ಮುಖ್ಯ ಅತಿಥಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಂದಿನ ಸಮಾಜ ಜಾತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದರಿಂದ ಅವರನ್ನು ಉಡುಪಿಯ ಶ್ರೀಕೃಷ್ಣನ ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಕನಕದಾಸರು ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನು ತಿರುಗಿ ಗೋಡೆಯ ಒಂದು ಕಿಂಡಿಯ ಮೂಲಕ ತನ್ನ ದರ್ಶನವನ್ನು ಕರುಣಿಸಿದನು. ಇದನ್ನೇ ಕನಕನ ಕಿಂಡಿ ಎಂದು ನಾವು ಇಂದಿಗೂ ಕಾಣಬಹುದು ಎಂದರು.
ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ್.ಎಸ್.ಎನ್ ಅವರು ಮಾತನಾಡಿ, ಕನಕದಾಸರು ಸಮಾಜ ಸುಧಾರಣೆ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅವರ ತತ್ವ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದರು.
ಪವಿತ್ರ ಗ್ರಂಥಗಳ ಶುಷ್ಕ ಪಾಂಡಿತ್ಯವನ್ನು ಮುರಿದು ಸ್ಥಳೀಯ ಭಾಷೆಯಲ್ಲಿ ಹಾಡುವ ದಾಸರ ಗುಂಪು ದಾಸಕೂಟದ ಸದಸ್ಯರಾಗಿದ್ದ ಕನಕರು, ಜನಸಾಮಾನ್ಯರ ಭಾಷೆಯಲ್ಲಿ ದಾಸಸಾಹಿತ್ಯ ಪ್ರಚುರಪಡಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಓಬಿಸಿ ಘಟಕದ ಸಂಯೋಜಕರಾದ ಡಾ.ಕೆ.ಸಿ.ಪ್ರಶಾಂತ್ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಶಶಿಧರ್ ಕೆಲ್ಲೂರ್ ನಿರೂಪಿಸಿ ವಂದಿಸಿದರು.
ಈ ವೇಳೆ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ