ಗುರುವಾರ, ನವೆಂಬರ್ 28, 2024
ಪದವಿ ವಿದ್ಯಾರ್ಥಿಗಳಿಗೆ ನೆರವಾದ ನರೇಗಾ ಯೋಜನೆ
ಬಳ್ಳಾರಿ,ನ.28(ಕರ್ನಾಟಕ ವಾರ್ತೆ):
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲು ಪರಿತಪಿಸುತ್ತಿದ್ದ ಬಡಕುಟುಂಬದ ವಿದ್ಯಾರ್ಥಿಗಳಿಗೆ ನರೇಗಾ ಕೈಹಿಡಿದಿದೆ. ಶುಲ್ಕ ಕಟ್ಟಲು ಉದ್ಯೋಗಖಾತ್ರಿ ಯೋಜನೆ ನೆರವಾಗಿದ್ದು, ಶಿಕ್ಷಣ ಮುಂದುವರಿಸಲು ಭರವಸೆ ಮೂಡಿಸಿದೆ.
ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದ ವಿದ್ಯಾರ್ಥಿ ಹುಸೇನಪ್ಪ ತನ್ನ ಪದವಿ ಶಿಕ್ಷಣಕ್ಕಾಗಿ ನೀಡಬೇಕಾದ ಶುಲ್ಕದ ಕುರಿತು ಮನೆಯವರಿಗೆ ತಿಳಿಸದೇ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ತನ್ನ ರಜಾದಿನಗಳಲ್ಲಿ ಕೆಲಸ ಮಾಡುತ್ತಿದ್ದು, ಪಾಲಕರ ಸಹಾಯ ಪಡೆಯದೇ ತಾನೇ ದುಡಿದು ತನ್ನ ದಾಖಲಾತಿ, ಪುಸ್ತಕ ಖರೀದಿ, ಬಸ್‌ಪಾಸ್ ವ್ಯವಸ್ಥೆಗೆ ನರೇಗಾ ಕೂಲಿ ಹಣವನ್ನು ಬಳಸಿಕೊಂಡಿದ್ದಾರೆ.
ಬಿಎ ತೃತೀಯ ವರ್ಷದಲ್ಲಿ ಓದುತ್ತಿರುವ ಹುಸೇನಪ್ಪ ಕೆಲಸಕ್ಕೂ ಸೈ, ಓದಿನಲ್ಲೂ ಸೈ ಎನಿಸಿಕೊಂಡಿದ್ದು, ಕೂಲಿಕಾರರ ಜೊತೆಗೂಡಿ ನರೇಗಾದಡಿ ಕೈಗೊಂಡ ನಾಲಾ ಸುಧಾರಣೆ ಕಾಮಗಾರಿ ಕೆಲಸಕ್ಕೆ ಹೋಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಹುಸೇನಪ್ಪನ ಮನೆಯವರು ಮೂಲ ಕೃಷಿ ಕುಟುಂಬವಾಗಿದ್ದು, ಜಮೀನಲ್ಲಿ ಬೆಳೆದ ದವಸ ಧಾನ್ಯದಿಂದ ಜೀವನ ನಡೆಸುತ್ತಿದ್ದಾರೆ. ಮನೆಯಲ್ಲಿ ತಂದೆ, ತಾಯಿ, ತಮ್ಮ ಅಜ್ಜಿ ವಾಸಿಸುತ್ತಿದ್ದಾರೆ. ಸಹೋದರ ಪಿಯುಸಿ ಓದುತ್ತಿದ್ದು, ಆತನ ಶಿಕ್ಷಣಕ್ಕೂ ನರೇಗಾ ಕೂಲಿ ಹಣ ಉಪಯೋಗಿಸಲಾಗುತ್ತಿದೆ. ಇವರ ಮನೆಯಲ್ಲಿ ಮೂವರು ಕೆಲಸಕ್ಕೆ ಹೋಗುತ್ತಿದ್ದು, ಕುಟುಂಬ ನಿರ್ವಹಣೆಗೆ ಉದ್ಯೋಗ ಖಾತ್ರಿ ನೆರವಾಗಿದೆ.
ಉಪ್ಪಾರ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾದಡಿ ಸುಮಾರು 50 ಕ್ಕೂ ಹೆಚ್ಚು ಪದವೀಧರ, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ರಜಾ ದಿನಗಳಲ್ಲಿ ಯೋಜನೆಯಡಿ ಕೆಲಸ ಮಾಡಿ ತಂದೆ ತಾಯಿಗೆ ಹೊರೆಯಾಗದೇ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ತಾವೇ ಸಂಪಾದಿಸುತ್ತಾರೆ.
*ಕೋಟ್:1*
ಕಳೆದ ವರ್ಷವಷ್ಟೇ ನನ್ನ ಪದವಿ ವಿದ್ಯಾಭ್ಯಾಸ ಮುಗಿಯಿತು. ರಜೆ ಸಮಯದಲ್ಲಿ ನರೇಗಾ ಕೆಲಸಕ್ಕೆ ಹೋಗುತ್ತಿದ್ದೆ. ಬಂದ ಹಣದಿಂದ ನನ್ನ ಪದವಿ ವಿದ್ಯಾಭ್ಯಾಸದ ವೇಳೆ ಕಾಲೇಜು ಫೀಸ್, ಪುಸ್ತಕ ಮತ್ತು ಬಸ್‌ಪಾಸ್‌ಗಾಗಿ ವ್ಯಯಿಸಿದ್ದೆ. ಮನೆಯಲ್ಲಿ ಹಣ ಕೇಳುತ್ತಿರಲಿಲ್ಲ.
- ಹುಸೇನಪ್ಪ, ಉಪ್ಪಾರ-ಹೊಸಳ್ಳಿ ಗ್ರಾಮ ನಿವಾಸಿ.
*ಕೋಟ್:2*
ಗ್ರಾಮ ಪಂಚಾಯತ್‌ಗಳು ಜನಸ್ನೇಹಿಯಾಗಿದ್ದು, ನರೇಗಾ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಗೆ ವರದಾನವಾಗಿದೆ. ಸರ್ಕಾರದ ನಿರ್ದೇಶನದಂತೆ ಗ್ರಾಪಂನಿAದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಕಾಲಕಾಲಕ್ಕೆ ವಾರ್ಡ್ಸಭೆ, ಗ್ರಾಮಸಭೆಗಳ ಮೂಲಕ ಜನರಿಗೆ ಮಾಹಿತಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ.
- ನಾಗಮಣಿ ಅತ್ತಳ್ಳಿ, ಗ್ರಾಪಂ ಪಿಡಿಒ, ಉಪ್ಪಾರ-ಹೊಸಳ್ಳಿ ಗ್ರಾಪಂ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ