ಶುಕ್ರವಾರ, ನವೆಂಬರ್ 29, 2024

ಬಿ.ಡಿ.ಹಳ್ಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಸಂತೋಷ ಹೆಗ್ಡೆ | ಶೈಕ್ಷಣಿಕ ಪ್ರಗತಿಗೆ ಪೂರಕವಾದ ಅನ್ವೇಷಣೆ ಹೆಚ್ಚಾಗಲಿ

ಬಳ್ಳಾರಿ,ನ.29(ಕರ್ನಾಟಕ ವಾರ್ತೆ): ಶೈಕ್ಷಣಿಕ ಪ್ರಗತಿಗೆ ಪೂರಕವಾದ ಹೊಸ ಅನ್ವೇಷಣೆಗಳು ಹೆಚ್ಚಾಗಬೇಕು ಎಂದು ಕರ್ನಾಟಕ ನಿವೃತ್ತ ಲೋಕಾಯುಕ್ತರು ಹಾಗೂ ಸುಪ್ರೀಂ ಕೋರ್ಟ್ನ ವಿಶ್ರಾಂತ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರು ಹೇಳಿದರು. ಬಳ್ಳಾರಿ ತಾಲ್ಲೂಕಿನ ಮೋಕಾದ ಭೈರದೇವನಹಳ್ಳಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿದ ಅವರು, ಶಾಲೆಯಲ್ಲಿ ಚಿಕ್ಕಮಗಳೂರಿನ ಯುವಸ್ಪೂರ್ತಿ ಅಕಾಡೆಮಿ ಮತ್ತು ಬಿ.ಡಿ.ಹಳ್ಳಿ ಮೊರಾರ್ಜಿ ಮಾದರಿ ವಸತಿ ಶಾಲೆ ಇವರ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ. ಶಾಲೆಯಲ್ಲಿ ಉತ್ತಮ ವಿಜ್ಞಾನ ಪ್ರಯೋಗಾಯಲವಿದ್ದು, ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿಜ್ಞಾನದ ಪ್ರಯೋಗಗಳನ್ನು ಮಂಡಿಸಿ ಚರ್ಚಿಸಿದರು. ಶಾಲೆಯ ವಾತಾವರಣ ಕಂಡು ಹರ್ಷ ವ್ಯಕ್ತಪಡಿಸಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕಲ್ಪನಾ ಅವರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗಳಿಗೆ ಏಕೆ ಬೇಗ ಶಿಕ್ಷೆಯಾಗುತ್ತಿಲ್ಲ ಮತ್ತು ತಂತ್ರಜ್ಞಾನ ಮುಂದುವರೆದರೂ ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಸರಿಯಾಗಿ ಸಮಯಕ್ಕೆ ಏಕೆ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ನಿವೃತ್ತ ನ್ಯಾಯಾಧೀಶರನ್ನು ಪ್ರಶ್ನಿಸಿದರು. ಇನ್ನೋರ್ವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ವಿದ್ಯಾಶ್ರೀ ಅವರು, ಮೀಸಲಾತಿಯನ್ನು ಸಂವಿಧಾನದಲ್ಲಿ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಸೀಮಿತವಾಗಿದೆಯೇ? ಎಂದು ಪ್ರಶ್ನಿಸಿದರು. ಹೀಗೆ ಹಲವಾರು ವಿದ್ಯಾರ್ಥಿಗಳು ಸುಮಾರು ಪ್ರಶ್ನೆಗಳನ್ನು ಕೇಳಿದರು. ಬಳಿಕ ನಿವೃತ್ತ ನ್ಯಾಯಾಧೀಶರಾದ ಸಂತೋಷ ಹೆಗ್ಡೆ ಅವರು ಮಕ್ಕಳ ಪ್ರಶ್ನೆಗಳನ್ನು ಆಲಿಸುತ್ತಾ ಪ್ರಸ್ತುತ ದಿನಮಾನಗಳಲ್ಲಿರುವ ಪರಿಸ್ಥಿತಿಗಳ ಆಧಾರವಾಗಿಟ್ಟುಕೊಂಡು ಸವಿವರವಾಗಿ ಉತ್ತರಿಸಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಾದ ತರುಣ್ ಕುಮಾರ್.ಎಸ್.ಕೆ ಮತ್ತು ಸವಿತಾ.ಕೆ.ಎಂ ಅವರನ್ನು ಗಣ್ಯರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಬಿಡಿ ಹಳ್ಳಿ ಗ್ರಾಪಂ ಸದಸ್ಯ ಹೊನ್ನಾರೆಡ್ಡಿ, ಯುವಸ್ಪೂರ್ತಿ ಅಕಾಡೆಮಿಯ ಅಧ್ಯಕ್ಷ ಸುಂದರೇಶ್, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯ ಅಧಿಕಾರಿ, ಬಸವರಾಜ ಬನ್ನಿಹಟ್ಟಿ, ಬಿಡಿ ಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವೀರಾರೆಡ್ಡಿ, ಬಿಡಿ ಹಳ್ಳಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ಅನುಸೂಯ.ಕೆ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು, ಮತ್ತೀತರರು ಉಪಸ್ಥಿತರಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ