ಶುಕ್ರವಾರ, ಜೂನ್ 30, 2023

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ಜು.02 ರಂದು ವಿದ್ಯುತ್ ವ್ಯತ್ಯಯ* ಬಳ್ಳಾರಿ,ಜೂ.30(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಈ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 11ಕೆ.ವಿ ಮಾರ್ಗಗಳಲ್ಲಿ ಜುಲೈ 02 ರಂದು ಬೆಳಗ್ಗೆ 08 ರಿಂದ ಸಂಜೆ 06 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು:* ಎಫ್-1 ಫೀಡರ್‍ನ ಯಶಸ್ವಿನಿ ಸ್ಪಾಂಜ್ ಕೈಗಾರಿಕೆ ಪ್ರದೇಶ ಮಾರ್ಗದ ಹುಲುಂದಿ ಗ್ರಾಮ, ಮುಂಡರಿಗಿ ಕೈಗಾರಿಕಾ ಪ್ರದೇಶ. ಎಫ್-2 ಫೀಡರ್‍ನ ಮಿಂಚೇರಿ ಐ.ಪಿ ಮಾರ್ಗದ ಮುಂಡರಗಿ, ಹಲಕುಂದಿ, ಮಿಂಚೇರಿ ಎಸ್.ಜೆ. ಕೋಟೆ ಐ.ಪಿಗಳು. ಎಫ್-4 ಫೀಡರ್‍ನ ಸುಧಾಕರ ಪೈಪ್, ಎಫ್-5 ಫೀಡರ್‍ನ ಅಪೇರಲ್ ಪಾರ್ಕ್, ಎಫ್-6 ಫೀಡರ್‍ನ ಗುರುನಾಥ ರೈಸ್ ಮಿಲ್ ಮಾರ್ಗದ ಮುಂಡರಿಗಿ ಕೈಗಾರಿಕೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ. ---------
ಬಳ್ಳಾರಿ: ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ* ಬಳ್ಳಾರಿ,ಜೂ.30(ಕರ್ನಾಟಕ ವಾರ್ತೆ): ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ)ದಿಂದ 2023-24ನೇ ಸಾಲಿಗೆ ವಿದೇಶಿ ವ್ಯಾಸಂಗಕ್ಕಾಗಿ (OVERSEAS) ವಿದೇಶಿ ಸಾಲ ಯೋಜನೆಯಡಿ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಜನಾಂಗದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮಾನ್ಯತೆ ಪಡೆದಿರುವ ಯಾವುದೇ ವಿದೇಶಿ ವಿಶ್ವವಿದ್ಯಾಲಯದಿಂದ, ಭಾರತ ದೇಶದ ಪ್ರತಿಷ್ಟಿತ ಐ.ಐ.ಟಿ.ಎಸ್ (IIT’S), ಐ.ಐ.ಎಂ.ಎಸ್ (IIM’S), ಐ.ಎಸ್.ಸಿ (ISC) ಸಂಸ್ಥೆಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾಭ್ಯಾಸ (OVERSEAS EDUCATION) ಸಾಲ ಯೋಜನೆಯಡಿ ಸಾಲ ಪಡೆಯಲು http://kmdconline.karnataka.gov.in/ ವೆಬ್‍ಸೈಟ್ ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‍ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿಯನ್ನು ಪ್ರಿಂಟ್ ಔಟ್ ಪಡೆದು ಕ್ಯೂಆರ್ ಕೋಡ್ ಹೊಂದಿರುವ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಿ.ಯು.ಸಿ ಅಂಕಪಟ್ಟಿ, ಆಧಾರ್‍ಕಾರ್ಡ್, ಫೆÇೀಟೋ, ಎಸ್.ಎಸ್.ಎಲ್.ಸಿ ವರ್ಗಾವಣಾ ಪತ್ರ, ಪ್ರಸ್ತುತ ಅಧ್ಯಯನದ ಪ್ರಮಾಣ ಪತ್ರ, ಕಾಲೇಜು ಶುಲ್ಕ ರಚನೆ, ಪಾಸ್ ಪೆÇೀರ್ಟ್ ನಕಲು, ವೀಸಾ ನಕಲು, ಫಲಾನುಭವಿಯ ಪ್ರಮಾಣ ಪತ್ರ, ಫಲಾನುಭವಿ & ಜಾಮೀನುದಾರರ ಜಂಟಿ ಪ್ರಮಾಣ ಪತ್ರ, ಪ್ರಾಮೀಸರಿ ನೋಟ್ ಜೋತೆಗೆ ಡಿ.ಪಿ. ನೋಟ್ ಡಿಲಿವರಿ ಲೇಟರ್, ಮಾರಾಟ ಪತ್ರಗಳು ಮತ್ತು ತಾಯಿಯ ಪತ್ರ, ಖಾತಾಸಾರ ಮತ್ತು ಖಾತಾ ಪ್ರಮಾಣಪತ್ರ ಅಥವಾ ರೂಪಾಂತರ, ನಮೂನೆ ನಂ.15ರಲ್ಲಿ ನಿಲ್ ಎನ್ಕಂಬರೆನ್ಸ್ ಪ್ರಮಾಣಪತ್ರ, ನವೀಕೃತ ತೆರೆಗೆ ಪಾವತಿಸಿದ ರಶೀದಿ, ಸೂಕ್ತ ಪ್ರಾಧಿಕಾರದಿಂದ ಮಾರ್ಗದರ್ಶನ ದರ, ಜಿಲ್ಲಾ ವ್ಯವಸ್ಥಾಪಕರಿಂದ ಆಸ್ತಿಯ ಸ್ಥಳ ಪರಿಶೀಲನೆ ವರದಿ ಹಾಗೂ ನೋಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ವರದಿ, ಈ ಎಲ್ಲಾ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಮ.ನಂ.47/25, ನಳಂದ ಕಾಲೇಜ್ ಪಕ್ಕದಲ್ಲಿ, ಹಳೇ ಮಾರುಕಟ್ಟೆ ರಸ್ತೆ, ವಿಜಯನಗರ ಕಾಲೋನಿ, ಕಂಟೋನ್‍ಮೆಂಟ್, ಬಳ್ಳಾರಿ-583104 ಇಲ್ಲಿಗೆ ಸಲ್ಲಿಸಬಹುದಾಗಿದೆ. ಹೆÉಚ್ಚಿನ ಮಾಹಿತಿಗಾಗಿ ದೂ.08392-294370 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------
ಗ್ರಾಹಕರ ಸಂರಕ್ಷಣಾ ಕಾಯ್ದೆ: ಸಂವಾದಿತ ಕಾರ್ಯಕ್ರಮ ಪ್ರಸಾರ ಜು.02 ರಂದು* ಬಳ್ಳಾರಿ,ಜೂ.30(ಕರ್ನಾಟಕ ವಾರ್ತೆ): ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು “ಗ್ರಾಹಕ ಸಂರಕ್ಷಣಾ ಕಾಯ್ದೆ 2019”ರ ಪರಿಧಿಗೆ ಒಳಪಡುವ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ರಿಜಿಸ್ಟ್ರಾರ್ ಹಾಗೂ ಆಡಳಿತಾಧಿಕಾರಿ ವಿಜಯಕುಮಾರ್ ಅವರು ಸಂವಾದ ನಡೆಸಿರುವ ಬಗ್ಗೆ ದೂರದರ್ಶನ ಚಂದನವಾಹಿನಿಯಲ್ಲಿ ಜುಲೈ 02 ರಂದು ಸಂಜೆ 6 ರಿಂದ 6.30 ವರೆಗೆ ಪ್ರಸಾರ ಮಾಡಲಾಗುತ್ತಿದ್ದು, ಪಕ್ಷಕಾರರು, ವಕೀಲರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. -----
ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಜು.03 ರಂದು* ಬಳ್ಳಾರಿ,ಜೂ.30(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಕಾರ್ಯಕ್ರಮವು ಜುಲೈ 03 ರಂದು ಬೆಳಗ್ಗೆ 11 ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ನಡೆಯಲಿದೆ. ಅದೇ ದಿನದಂದು ಬೆಳಗ್ಗೆ 09 ಕ್ಕೆ ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಮೆರವಣಿಗೆಗೆ ಚಾಲನೆ ನೀಡುವರು. ನಂತರ ಬೆಳಗ್ಗೆ 11 ಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಬಿ.ಎಂ.ನಾಗರಾಜ, ಜೆ.ಎನ್.ಗಣೇಶ್, ಎಂಎಲ್‍ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್.ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ಜಯಂತ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್, ಅಪರ ಜಿಲ್ಲಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಉಪಸ್ಥಿತರಿರಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‍ಬಾಬು ಅವರು ತಿಳಿಸಿದ್ದಾರೆ. ಮೆರವಣಿಗೆ ಮಾರ್ಗ: ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಆರಂಭವಾಗಿ ರೈಲ್ವೇ ನಿಲ್ದಾಣ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಬಿಡಿಎಎ ಫುಟ್‍ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ಮುಕ್ತಾಯವಾಗಲಿದೆ. --------
ಜು.02 ರಂದು ಡಾ.ಫ.ಗು.ಹಳಕಟ್ಟಿ ಜಯಂತಿ* ಬಳ್ಳಾರಿ,ಜೂ.30(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಜುಲೈ 02 ರಂದು ಬೆಳಗ್ಗೆ 10 ಕ್ಕೆ ವಚನ ಸಾಹಿತ್ಯದ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮವು ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ನಡೆಯಲಿದೆ. ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಬಿ.ಎಂ.ನಾಗರಾಜ, ಜೆ.ಎನ್.ಗಣೇಶ್, ಎಂಎಲ್‍ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್.ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ನಿಷ್ಠಿ ರುದ್ರಪ್ಪ ಅವರು ಜಯಂತಿಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್, ಅಪರ ಜಿಲ್ಲಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಉಪಸ್ಥಿತರಿರಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‍ಬಾಬು ಅವರು ತಿಳಿಸಿದ್ದಾರೆ. --------

ಬುಧವಾರ, ಜೂನ್ 28, 2023

ತಾಯಿ, ಮಗಳು ಕಾಣೆ ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ): ಕಂಪ್ಲಿ ಪಟ್ಟಣದ ನಿವಾಸಿಯಾದ ದೀಪಾ ಎನ್ನುವ 28 ವರ್ಷದ ತಾಯಿ ಹಾಗೂ ಗೌತಮಿ ಎನ್ನುವ 05 ವರ್ಷದ ಮಗಳು ಕಾಣೆಯಾಗಿರುವ ಕುರಿತು ಕಂಪ್ಲಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಯಿ ದೀಪಾ ಚಹರೆ ಗುರುತು: ಎತ್ತರ 4.9 ಅಡಿ, ದುಂಡು ಮುಖ, ಎಣ್ಣೆಗೆಂಪು ಹೊಂದಿರುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಬಣ್ಣದ ಚೂಡಿದಾರ್, ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ವೇಲು ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಮಗಳು ಗೌತಮಿ ಚಹರೆ ಗುರುತು: ಎತ್ತರ 3 ಅಡಿ, ದುಂಡು ಮುಖ, ಎಣ್ಣೆಗೆಂಪು ಹಾಗೂ ಹಣೆಯ ಮೇಲೆ ಹುಟ್ಟು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಪಿಂಕ್ ಬಣ್ಣದ ಟಾಪ್, ಜೀನ್ಸ್ ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾಗಿರುವ ತಾಯಿ ಮತ್ತು ಮಗಳ ಇಬ್ಬರ ಬಗ್ಗೆ ಮಾಹಿತಿ ದೊರೆತಲ್ಲಿ ಕಂಪ್ಲಿ ಪೆÇಲೀಸ್ ಠಾಣೆಯ ಪಿ.ಐ ಮೊ.8277977722, 9480803038, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಬಹುದು. -------
ಜೂ.30 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಬಳ್ಳಾರಿ.ಜೂ. 28(ಕರ್ನಾಟಕ ವಾರ್ತೆ) : ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುರಿಂದÀ ಜೂ.30 ರಂದು ಬೆಳಗ್ಗೆ 09 ರಿಂದ ಸಂಜೆ 05 ರವರೆಗೆ ಎಫ್-73 ಯ 11 ಕೆ.ವಿ ಫೀಡರ್‍ನ ವ್ಯಾಪ್ತಿಯ ನಗರದ ಬಸವನಕುಂಟೆ, ಕೋಟೆ ಪ್ರದೇಶ, 1 ನೇ ಗೇಟ್, 2 ನೇ ಗೇಟ್, ಸಿದ್ದಾರ್ಥ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಅಶೋಕ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------
ಪರಿಶಿಷ್ಟ ವರ್ಗಗಳ ಕಾನೂನು ಪದವೀಧರರಿಗೆ 2 ವರ್ಷದ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಆಹ್ವಾನ ಬಳ್ಳಾರಿ.ಜೂ.28(ಕರ್ನಾಟಕ ವಾರ್ತೆ) : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿಗೆ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಎರಡು ವರ್ಷದ ಕಾನೂನು ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 24 ಆಗಿರುತ್ತದೆ. ಸಲ್ಲಿಸಿದ ಅರ್ಜಿಯ ಜೊತೆಗೆ ಇತರೆ ದಾಖಲೆಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಥವಾ ಸಂಬಂಧಪಟ್ಟ ಆಯಾ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಕೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------
ಜು.07 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇವರ ಪತ್ರದನ್ವಯದಂತೆ ಜುಲೈ 07 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ನಡೆಯಲಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದಾಲತ್‍ನಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಉಭಯ ಪಕ್ಷಗಾರರು ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಂತೆ ಅಧ್ಯಕ್ಷರಾದ ತಿಪ್ಪೇಸ್ವಾಮಿ.ಎನ್ ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ------
ಬಳ್ಳಾರಿ ನಗರದಲ್ಲಿ ವಿವಿಧಡೆ ದಾಳಿ: 08 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ರಕ್ಷಣೆ ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಜಿಲ್ಲಾ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಬಚಪನ್ ಬಚಾವೋ ಆಂದೋಲನ, ಪೆÇೀಲಿಸ್ ಇಲಾಖೆ,ˌ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಬುಧವಾರದಂದು ಕಾರ್ಮಿಕ ನಿರೀಕ್ಷಕರಾದ ಎಂ.ಅಶೋಕ, ಬಚಪನ್ ಬಚಾವೋ ಆದೋಲನ ರಾಜ್ಶ ಸಮನ್ವಯಾಧಿಕಾರಿ ಬೀನು ವರ್ಗೀಸ, ಕ್ಷೇತ್ರಾಧಿಕಾರಿ ಪಿ.ಎಂ ಈಶ್ವರಯ್ಯ ಮತ್ತು ಇತರ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ 08 ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ. ನಗರದ ಗಾಂಧಿನಗರ, ಅನಂತರಪುರ ರಸ್ತೆ, ತಾರಾನಾಥ ಆಸ್ಪತ್ರೆ ಹತ್ತಿರ, ಎಂಜಿ ಆಟೋ ಮೋಬೈಲ್ಸ್ ಹತ್ತಿರದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) 1986 ಕಾಯ್ದೆ ಉಲ್ಲಂಘನೆ ಮಾಡಿದ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ನಡೆಸಿ 08 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವಂತೆ ಮನವೊಲಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ ಅವರು ತಿಳಿಸಿದ್ದಾರೆ. ------
ಬಿಡಾಡಿ ದನಗಳನ್ನು ಮನೆಯಲ್ಲಿಯೇ ಕಟ್ಟಿಹಾಕಿ; ಇಲ್ಲದಿದ್ದರೆ ಕ್ರಮ ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಕುರುಗೋಡು ಪಟ್ಟಣದ ಜಾನುವಾರುಗಳ ಮಾಲೀಕರು ತಮ್ಮ ದನಗಳನ್ನು ತಮ್ಮ ಸ್ವಂತ ಜಾಗದಲ್ಲಿ ಕಟ್ಟಿ ಹಾಕಿಕೊಳ್ಳಬೇಕು. ಇಲ್ಲದಿದ್ದಲ್ಲಿ ಗೋಶಾಲೆಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುರುಗೋಡು ಪುರಸಭೆಯ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರು ತಿಳಿಸಿದ್ದಾರೆ. ಪಟ್ಟಣದಲ್ಲಿ ಬಿಡಾಡಿಯಾಗಿ ಅಲೆಯುತ್ತಿರುವ ಜಾನುವಾರುಗಳೊಂದಿಗೆ ತಮ್ಮ ಸ್ವಂತ ದನಗಳನ್ನು ರಸ್ತೆಗೆ ಬಿಟ್ಟಿದ್ದರಿಂದ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು, ಮುಖ್ಯ ರಸ್ತೆಗಳಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುತ್ತಿವೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದು, ಮುಂದಿನ 05 ದಿನಗಳೊಳಗಾಗಿ ತಮ್ಮ ಜಾಗದಲ್ಲಿ ಜಾನುವಾರುಗಳನ್ನು ಕಟ್ಟಿಹಾಕಿಕೊಳ್ಳಬೇಕು. ಇಲ್ಲದಿದ್ದಲ್ಲಿ ಜಾನುವಾರುಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಲಾಗುವುದು. ಈ ಕುರಿತು ಯಾರಾದರೂ ತಂಟೆ-ತಕರಾರು ಮಾಡಿದಲ್ಲಿ ಅದಕ್ಕೆ ಪುರಸಭೆಯು ಯಾವುದೇ ರೀತಿಯಿಂದ ಹೊಣೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ------
ಬಕ್ರೀದ್ ಹಬ್ಬ ಹಿನ್ನಲೆ: ಜಿಲ್ಲೆಯಾದ್ಯಂತ ಅನಧೀಕೃತ ಗೋವು, ಒಂಟೆÀ ಸಾಗಾಣಿಕೆ ಮತ್ತು ವಧೆ ನಿಷೇಧ ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಬಕ್ರೀದ್ ಹಬ್ಬದ ನಿಮಿತ್ತ ಜಿಲ್ಲೆಯಲ್ಲಿ ಅನಧೀಕೃತ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಎಸ್.ಎನ್.ರುದ್ರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ದೇಶದಲ್ಲೆಡೆ ಅನಧಿಕೃತ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆಯನ್ನು ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಕ್ರಿದ್ ಹಬ್ಬದ ಅಚರಣೆ ಪ್ರಯುಕ್ತ ಅಕ್ರಮ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲೆಯಾದ್ಯಂತ ಇರುವ ಚೆಕ್‍ಪೋಸ್ಟ್‍ಗಳಲ್ಲಿ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಪೆÇೀಲಿಸ್ ಇಲಾಖೆ ಮತ್ತು ಆರ್.ಟಿ.ಓ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಿದ್ದಾರೆ. ಆದ್ದರಿಂದ ಅಕ್ರಮ ಗೋವು, ಒಂಟೆಗಳ ಸಾಗಾಣಿಕೆ ಮತ್ತು ವಧೆ ಕಂಡುಬಂದಲ್ಲಿ ಸಾರ್ವಜನಿಕರು ಪಶುಸಂಗೋಪನಾ ಇಲಾಖೆ ಅಥವಾ ಪೆÇೀಲೀಸ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಅವರು ತಿಳಿಸಿದ್ದಾರೆ. ------
ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಜಾಗೃತಿ ಜಾಥಾ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಯುವ ಸಮುದಾಯವು ಎಚ್ಚರ ವಹಿಸಬೇಕು: ಡಾ.ವೀರೇಂದ್ರ ಕುಮಾರ್ ಬಳ್ಳಾರಿ,ಜೂ.28(ಕರ್ನಾಟಕ ವಾರ್ತೆ): ಯುವ ಸಮುದಾಯವು ಮಾದಕ ವಸ್ತುಗಳ ಬಗ್ಗೆ ಅರಿವು ಹೊಂದಬೇಕು ಹಾಗೂ ಅವುಗಳಿಂದ ದೂರವಿರಬೇಕು. ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ‘ಜನತೆ ಕಳಂಕ ಮತ್ತು ತಾರತಮ್ಯ ಮೊದಲು ನಿಲ್ಲಿಸಿ ತಡೆಗಟ್ಟುವಿಕೆಯನ್ನು ಬಲಪಡಿಸಿ’ ಎಂಬ ಘೋಷವಾಕ್ಯದೊಂದಿಗೆ ನಗರದ ಕೌಲ್‍ಬಜಾರ್‍ನ ಜವಾಹರ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ವ್ಯಸನವು ಅತೀ ಹೆಚ್ಚಾಗುತ್ತಿದ್ದು, ಅದರಲ್ಲಿ ಯುವ ಜನತೆ ಇದಕ್ಕೆ ದಾಸರಾಗುತ್ತಿರುವುದು ಅತೀ ದುಃಖದ ವಿಷಯವಾಗಿದೆ. ಹಾಗಾಗಿ ಯುವಕರು ಜಾಗೃತರಾಗಿ ಕುಟುಂಬ ಸದಸ್ಯರ ನೆರವಿನಿಂದ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು ಅಥವಾ ವಾಸಿಯಾಗಬಹುದು ಎಂದು ತಿಳಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞೆ ಡಾ.ಭುವನೇಶ್ವರಿ ದೇವಿ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡಿದರೆ ವ್ಯಕ್ತಿಯಲ್ಲಿ ವರ್ತನೆಯಲ್ಲಿ ಬದಲಾವಣೆಗಳಾಗುವುದಲ್ಲದೇ ಮಾನಸಿಕ ಖಿನ್ನತೆಗೆ ಒಳಗಾಗುವ ಸಾದ್ಯತೆ ಇದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿರುತ್ತದೆ ಎಂದು ತಿಳಿಸಿದರು. ಮಾತ್ರೆ ಮತ್ತು ಚುಚ್ಚು ಮದ್ದು ರೂಪದಲ್ಲಿ ಔಷಧಿ ಲಭ್ಯವಿದ್ದು, ಚಟಕ್ಕೆ ದಾಸರಾದ ವ್ಯಕ್ತಿಗಳು ಔಷದೋಪಚಾರ ಪ್ರಾರಂಭಿಸಿದರೆ ವ್ಯಸನವು ಬೇಗ ಹತೋಟಿಗೆ ಬರುತ್ತದೆ ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ಮಂಗಳವಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣೆ ಏರ್ಪಡಿಸಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಂಡು ವ್ಯಸನದಿಂದ ಮುಕ್ತಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಜವಾಹರ್ ಆಂಗ್ಲ ಮಾಧ್ಯಮ ಫ್ರೌಡಶಾಲೆಯ ಮುಖ್ಯ ಗುರುಗಳಾದ ಇಬ್ರಾಹಿಮ್ ಖಲೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ.ಎಸ್ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿಯಾಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಬ್ರೂಸ್‍ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸುರೇಖಾ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪವಿತ್ರ ಆಲೂರು, ಪೊಲೀಸ್ ಇನ್ಸ್‍ಪೆಕ್ಟರ್ ನಾಗಭೂಷಣ್, ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ ಸುರೇಶ್.ಡಬ್ಲೂ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ್ ದಾಸಪ್ಪನವರ್, ಮೈತ್ರಿ ವ್ಯಸನ ಮುಕ್ತಿ ಕೇಂದ್ರದ ಕುಮಾರ್ ಸ್ವಾಮಿ ಡಾ.ಪ್ರಕಾಶ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ಶಾಂತಕುಮಾರ್.ಹೆಚ್, ರಂಜಿತ.ಜಿ, ಕಾವ್ಯ, ನಿರಂಜನ, ರಮೇಶ್ ಬಾಬು, ಬ್ರೂಸ್‍ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ಹಾಗೂ ಆಶಾ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು. ನಂತರದಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಹಾಗೂ ಚಿಗುರು ಕಲಾ ತಂಡದಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯಾಸ್ವಿನ್ ಸಾಬ್ ಕಾಲೋನಿಯಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. -----

ಮಂಗಳವಾರ, ಜೂನ್ 27, 2023

ತೋಟಗಾರಿಕೆಯ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿ ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿಗೆ ತೋಟಗಾರಿಕೆಯ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಿ ಎಂದು ತೋಟಗಾರಿಕೆ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘÀಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ (ಹಳ್ಳಿ, ಗ್ರಾಮ ಪಂಚಾಯಿತಿ, ಹೋಬಳಿ)ವಾರು ನಿರ್ಧರಿಸಿ ಬೆಳೆ ನಷ್ಟದ ಪರಿಹಾರವನ್ನು ನೀಡುವುದರ ಮೂಲಕ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯು ನೆರವಾಗಲಿದೆ. *ವಿಮಾ ಯೋಜನೆಯಡಿ ಒಳಪಡುವ ಬೆಳೆಗಳು:* ಕೆಂಪು ಮೆಣಸಿನಕಾಯಿ(ನೀರಾವರಿ): ಬೆಳೆಯು ವಿಮಾ ಪ್ರದೇಶದಲ್ಲಿ ಒಳಪಡುವ ಹೋಬಳಿಗಳು ಕಂಪ್ಲಿ, ಕುರುಗೋಡು, ಕೋಳೂರು, ಬಳ್ಳಾರಿ, ಮೋಕಾ, ರೂಪನಗುಡಿ, ಕರೂರು, ತೆಕ್ಕಲಕೋಟೆ, ಸಿರುಗುಪ್ಪ, ಹಚ್ಚಳ್ಳಿ, ತೋರಣಗಲ್ಲು. ಈರುಳ್ಳಿ(ನೀರಾವರಿ): ಈರುಳ್ಳಿ(ನೀರಾವರಿ) ಬೆಳೆಯು ಒಳಪಡುವ ಹೋಬಳಿಗಳು ಸಂಡೂರು, ಚೋರನೂರು, ತೋರಣಗಲ್ಲು ಪ್ರದೇಶಗಳು ಒಳಪಡಲಿವೆ. *ವಿಮಾ ಕಂತು ಮತ್ತು ನೋಂದಣಿ ಅವಧಿ:* ಕೆಂಪು ಮೆಣಸಿನಕಾಯಿ (ನೀ): ವಿಮಾ ಮೊತ್ತ ಪ್ರತಿ ಹೆಕ್ಟೇರ್‍ಗೆ ರೂ.1,07,500 ಹಾಗೂ ಪ್ರತಿ ಹೆಕ್ಟೇರ್‍ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 5,375 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31. ಈರುಳ್ಳಿ (ನೀ): ವಿಮಾ ಮೊತ್ತ ಪ್ರತಿ ಹೆಕ್ಟೇರ್‍ಗೆ ರೂ.80,500 ಹಾಗೂ ಪ್ರತಿ ಹೆಕ್ಟೇರ್‍ಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ 4,025 ರೂ. ಆಗಿರುತ್ತದೆ. ವಿಮಾ ಮೊತ್ತ ಪಾವತಿಸಲು ಕೊನೆಯ ದಿನ ಜುಲೈ 31. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ ಅಥವಾ ಬಳ್ಳಾರಿ ಮತ್ತು ಕುರುಗೊಡು ತಾಲೂಕು ದೂ.08392-278177, ಮೊ.9480257282 ಹಾಗೂ ಸಂಡೂರು ದೂ.08395-260389, ಮೊ.9740934208 ಮತ್ತು ಸಿರುಗುಪ್ಪ ಮತ್ತು ಕಂಪ್ಲಿ ದೂ.08396-222066, ಮೊ.9448910277 ಗೆ ಸಂಪರ್ಕಿಸಿಬಹುದು. ------
ನಗರ ಕೇಂದ್ರ ಗ್ರಂಥಾಲಯದಲ್ಲಿ ಓದುವ ದಿನ, ತಿಂಗಳು ಕಾರ್ಯಕ್ರಮ ಓದುವುದರಿಂದ ಜ್ಞಾನ ವೃದ್ಧಿ: ನರಸಣ್ಣ ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಓದುವುದರಿಂದ ಜ್ಞಾನವು ಹೆಚ್ಚುತ್ತದೆ, ಜೊತೆಗೆ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಎಲ್ಲವನ್ನು ಸಾಧಿಸಬಹುದು ಎಂದು ನಗರದ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಅವರು ಹೇಳಿದರು. ಭಾರತ ಸರ್ಕಾರದ ಸಾಂಸ್ಕøತಿಕ ಮಂತ್ರಾಲಯ ಆಶಯದಂತೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇವರ ನಿರ್ದೇಶನದಂತೆ, ಕೇರಳದ ಗ್ರಂಥಾಲಯ ಮತ್ತು ಸಾಕ್ಷರತಾ ಆಂದೋಲನದ ಪಿತಾಮಹರಾದ ಪಿ.ಎನ್. ಫಣಿಕ್ಕರ್‍ರವರ ಪುಣ್ಯ ಸ್ಮರಣೆ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ ಓದುವ ದಿನ/ಓದುವ ತಿಂಗಳು ಕಾರ್ಯಕ್ರಮ ನಿಮಿತ್ತ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಜೂನ್ 19 ರಿಂದ ಜುಲೈ 18 ರವರೆಗೆ ದೇಶಾದ್ಯಾಂತ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ಪುಸ್ತಕ ಪ್ರದರ್ಶನ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕಥೆ ಹೇಳುವುದು, ಚರ್ಚಾ ಸ್ಪರ್ಧೆ ಹೀಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಲ್ಲಾ ಓದುಗರು ಗ್ರಂಥಾಲಯದ ಪುಸ್ತಕಗಳನ್ನು ಓದಬೇಕು ಮತ್ತು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಸ್ನೇಹಿತರಿಗೆ, ಸಂಬಂಧಿಕರಿಗೆ, ಮಕ್ಕಳಿಗೆ ಹಾಗೂ ಇತರರಿಗೆ ಪುಸ್ತಕಗಳನ್ನು ನೀಡಿ ಅವರಲ್ಲೂ ಓದುವ ಆಸಕ್ತಿ ಮೂಡಿಸಿ ಓದುವುದನ್ನು ಪ್ರೇರೇಪಿಸಬೇಕು. ಎಲ್ಲ್ಲರಿಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಕೇವಲ 03 ವರ್ಷಗಳ ಅವಧಿಯಲ್ಲಿ 3.50 ಕೋಟಿ ಸದಸ್ಯರನ್ನು ನೋಂದಾಯಿಸುವ ಮೂಲಕ ಇಡೀ ವಿಶ್ವದಲ್ಲಿ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿಯಲ್ಲಿ ಮುಂಚೂಣಿಯಲ್ಲಿದೆ ಎಂದರು. ಬಳ್ಳಾರಿ ನಗರದಲ್ಲಿ 1.21 ಲಕ್ಷ ಸದಸ್ಯರನ್ನು ನೋಂದಾಯಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಓದುಗರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ------
ಕಂಪ್ಲಿ ಪಟ್ಟಣದಲ್ಲಿ ವಿವಿಧಡೆ ದಾಳಿ: ನಾಲ್ಕು ಕಿಶೋರ ಕಾರ್ಮಿಕರ ರಕ್ಷಣೆ ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಕಂಪ್ಲಿ ಪಟ್ಟಣದಲ್ಲಿ ಜಿಲ್ಲಾ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಬಚಪನ್ ಬಚಾವೋ ಆಂದೋಲನ, ಪೆÇೀಲಿಸ್ ಇಲಾಖೆ,ˌ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮಂಗಳವಾರದಂದು ಕಾರ್ಮಿಕ ನಿರೀಕ್ಷಕರಾದ ಎಂ.ಅಶೋಕ, ಬಚಪನ್ ಬಚಾವೋ ಆದೋಲನ ರಾಜ್ಶ ಸಮನ್ವಯಾಧಿಕಾರಿ ಬೀನು ವರ್ಗೀಸ, ಕ್ಷೇತ್ರಾಧಿಕಾರಿ ಪಿ.ಎಂ ಈಶ್ವರಯ್ಯ ಮತ್ತು ಇತರ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ 04 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ. ಪಟ್ಟಣದ ವಿವಿಧೆಡೆ ಗ್ಯಾರೇಜ್, ಬೇಕರಿ, ಶಾಮಿಯಾನ ಸಪ್ಲೆಯರ್ಸ್, ಮೆಕ್ಯಾನಿಕ್ ಶಾಪ್ ಇತ್ಯಾದಿ ಅಂಗಡಿ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) 1986 ಕಾಯ್ದೆ ಉಲ್ಲಂಘನೆ ಮಾಡಿದ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ನಡೆಸಿ 04 ಕಿಶೋರ ಕಾರ್ಮಿಕನ್ನು ಕೆಲಸದಿಂದ ಬಿಡುಗಡೆಗೊಳಿಸಿ 03 ಮಕ್ಕಳ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ವಿದ್ಯಾಭ್ಯಾಸವನ್ನು ಮುಂದುವರೆಸುವಂತೆ ಮನವೊಲಿಸಿ ಪೋಷಕರಿಗೆ ಒಪ್ಪಿಸಲಾಯಿತು. ಮಾಲೀಕರ ವಿರುದ್ದ ಕಂಪ್ಲಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಕಾಯ್ದೆಯ ಕರಪತ್ರ ಮತ್ತು ಸ್ಟೀಕರ್ಸ್ ಹಂಚುವುದರ ಮೂಲಕ ಕಾನೂನು ಅರಿವು ಮೂಡಿಸಲಾಯಿತು ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------
ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಎಂಎಸ್‍ಎಂಇ ದಿನಾಚರಣೆ ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ ಬಳ್ಳಾರಿ ಶಾಖೆ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಹಯೋಗದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎಎ ಪುಟ್ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‍ಎಂಇ) ಅಂತಾರಾಷ್ಟ್ರೀಯ ದಿನಾಚರಣೆಯ ಕಾರ್ಯಕ್ರಮವನ್ನು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಣಿಜ್ಯ ಮತ್ತು ವಹಿವಾಟು ಕ್ಷೇತ್ರದಲ್ಲಿ ದೇಶದ ಅಭಿವೃದ್ಧಿಗೆ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ತನ್ನದೇ ಆದ ವಿಶಿಷ್ಟ ಪಾತ್ರ ಹೊಂದಿದೆ. ಕೃಷಿ ಕ್ಷೇತ್ರ ಮತ್ತು ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ಭಾಗಿತ್ವ ಹೊಂದಿದರೆ ರೈತರ ಆದಾಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ಈ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಮರ್ಪಕ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಸಲಹೆ ನೀಡಿದರು. ಬಳ್ಳಾರಿ ಜಿಲ್ಲಾ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಘದ ಸದಸ್ಯರು ಈ ದಿಶೆಯಲ್ಲಿ ಸಹಕಾರ ನೀಡಬೇಕು. ರಾಜ್ಯದ ಹಾಗೂ ದೇಶದ ಬೊಕ್ಕಸಕ್ಕೆ ತೆರಿಗೆ ಸಂಗ್ರಹಿಸುವಲ್ಲಿ ಚಾರ್ಟರ್ಡ್ ಅಕೌಂಟೆಂಟ್ಗಳ ಪಾತ್ರ ಬಹಳ ಮಹತ್ತರವಾದದ್ದು ಮತ್ತು ಅವರು ದೇಶದ ಅಭಿವೃದ್ಧಿಯ ಪಾಲುದಾರರು ಎಂದು ಶ್ಲಾಘಿಸಿದರು. ಸರಕಾರ ಹೊಸ ಯೋಜನೆ ಜಾರಿಗೆ ತಂದಂತಹ ಸಂದರ್ಭದಲ್ಲಿ ಕೆಲವೊಂದು ನ್ಯೂನತೆಗಳು ಮತ್ತು ಅಡಚಣೆಗಳನ್ನು ಇರುತ್ತವೆ. ಅದನ್ನು ಸರಿಪಡಿಸುವುದಕ್ಕೆ ಕಾಲಾವಕಾಶ ನೀಡಬೇಕೆಂದರು. ಅಂತರಾಷ್ಟ್ರೀಯ ಎಂಎಸ್‍ಎಮ್‍ಇ ದಿನಾಚರಣೆಯ ಬಗ್ಗೆ ಹೆಚ್ಚು ಜನರಿಗೆ ತಿಳಿದೇ ಇರಲಿಲ್ಲ ಈ ಕಾರ್ಯಕ್ರಮದ ಮೂಲಕ ಕೈಗಾರಿಕೋದ್ಯಮಿಗಳು ಹಾಗೂ ಕೃಷಿಕರಿಗೆ ಕೈಗಾರಿಕೋದ್ಯಮಗಳಿಂದ ಆಗುವ ಅನುಕೂಲತೆಗಳ ಬಗ್ಗೆ ತಿಳಿಸಿಕೊಡುವ ಮಹತ್ತರವಾದ ಕೆಲಸವನ್ನು ಮಾಡುತ್ತಿರುವುದಕ್ಕೆ ಧನ್ಯವಾದ ಹೇಳಿದರು. ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ಕೃಷಿಕರಿಗೆ ನೀಡುವ ಅನೇಕ ಸೌಲಭ್ಯಗಳ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಆರ್.ಪಾಲಾಕ್ಷಗೌಡ ವಿವರಿಸಿದರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗ್ಗೆ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಆಡಿ ಶಿಲ್ಪ.ಹೆಚ್ ಅವರು ವಿವರವಾಗಿ ವಿವರಿಸಿದರು. ಕಲ್ಯಾಣ ಕರ್ನಾಟಕದ ಕೃಷಿಕರಿಗೆ ವಿಶೇಷವಾಗಿ ಬಳ್ಳಾರಿ ಜಿಲ್ಲೆಯ ರೈತರಿಗೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಬಿಡಿಸಿಸಿ ಅಧ್ಯಕ್ಷ ಸಿ.ಶ್ರೀನಿವಾಸ್ ರಾವ್, ಬಿಡಿಸಿಸಿ ಕಾರ್ಯದರ್ಶಿ ಯಶವಂತ್ ರಾಜ್ ನಾಗಿರೆಡ್ಡಿ, ಪ್ರಾಂತೀಯ ಪರಿಷತ್ತಿನ ಅಧ್ಯಕ್ಷ ನಾಗನಗೌಡ, ಕಾರ್ಯದರ್ಶಿ ಪುರುಷೋತ್ತಮ ರೆಡ್ಡಿ ಸೇರಿದಂತೆ ವರ್ತಕರು ವಿದ್ಯಾರ್ಥಿಗಳು, ರೈತರು ಹಾಗೂ ಇತರರು ಉಪಸ್ಥಿತರಿದ್ದರು. ------
ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಣೆ ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯ ಹೊಂಗಿರಣದ ಸಾಂಸ್ಕøತಿಕ ಸಮುಚ್ಛಯ ಆವರಣದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿಯ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಡಿ.ತ್ರಿವೇಣಿ, ಉಪಮೇಯರ್ ಜಾನಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಬಾಬು ಸೇರಿದಂತೆ ಸಮಾಜದ ಮುಖಂಡರು ಹಾಗೂ ಇತರರು ಇದ್ದರು. -------
ಬಳ್ಳಾರಿ ಜಿಪಂ ತ್ರೈಮಾಸಿಕ ಕೆಡಿಪಿ ಸಭೆ ಸರ್ಕಾರದ ಯೋಜನೆಗಳು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ನಾಗೇಂದ್ರ ತಾಕೀತು ಬಳ್ಳಾರಿ,ಜೂ.27(ಕರ್ನಾಟಕ ವಾರ್ತೆ): ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು, ವಿನಾಕಾರಣ ಅಧಿಕಾರಿಗಳು ವಿಳಂಬ ಮಾಡುವಂತಿಲ್ಲ; ಬಾಕಿಯಿರುವ ನಿಗದಿತ ಗುರಿಯನ್ನು ಕಾಲ ಮಿತಿಯೊಳಗೆ ಸಾಧಿಸಲು ಒತ್ತು ನೀಡಬೇಕು ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ನ ನಜೀರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ಕಾರ್ಯಗತಗೊಳಿಸಲು, ಯೋಜನೆಗಳ ಮಾಹಿತಿಯ ಬಗ್ಗೆ ಜನಸಾಮಾನ್ಯರಿಗೂ ತಿಳಿಸಲು ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಕ್ರಮ ವಹಿಸಬೇಕು ಎಂದು ತಿಳಿಸಿದರು. ಮುಂಗಾರು ಹಂಗಾಮು ಸಂದರ್ಭದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇನ್ನೀತರ ಕೃಷಿ ಸಂಬಂಧಿತ ಸಮಸ್ಯೆಗಳು ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಿಸುವಂತೆ ಪ್ರೇರೆಪಿಸಬೇಕು. ಪ್ರಕೃತಿ ವಿಕೋಪದಿಂದ ಅನಿರೀಕ್ಷಿತ ಹಾನಿಗಳಾದಾಗ ರೈತರನ್ನು ಬೆಳೆ ವಿಮೆ ಕಾಪಾಡಲು ಸಾಧ್ಯವಾಗುತ್ತದೆ ಎಂದರು. ಗ್ರಾಮೀಣ ಭಾಗದಲ್ಲಿ ರೈತರ ಬಣವೆಗಳು ಅನಿರೀಕ್ಷಿತವಾಗಿ ಬೆಂಕಿಗೆ ಆಹುತಿಯಾದಾಗ ಸರಕಾರವು ನೀಡುವ ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಒಮ್ಮೆ ಬೆಂಕಿಗೆ ಆಹುತಿಯಾದ ಮೇವು ದನ ಕರುಗಳು ತಿನ್ನುವುದಿಲ್ಲ;ಎಷ್ಟು ಬೆಂಕಿಗೆ ಆಹುತಿಯಾಗಿರುತ್ತೋ ಅಷ್ಟೇ ಪ್ರಮಾಣದ ಮೇವಿಗೆ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಗ್ರಾಮಗಳಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿನ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು. ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಕೊಳವೆ ಬಾವಿ ಕೊರೆಸುವಿಕೆಗೆ ಸಂಬಂಧಿಸಿದಂತೆ ಬಾಕಿಯಿದ್ದ ಗುರಿಗಳನ್ನು ತ್ವರತಗತಿಯಲ್ಲಿ ಪೂರ್ಣಗೊಳಿಸಬೇಕು; ಗುಣಮಟ್ಟದ ಮೋಟಾರ್ ಪಂಪ್ ಅಳವಡಿಸಬೇಕು. ಎಲ್ಲ ರೈತರ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವುದು ಗುರಿಯಾಗಿದ್ದು, ಆ ನಿಟ್ಟಿನಲ್ಲಿ ವಿದ್ಯುತ್ ಪೂರೈಕೆಗೆ ಜೆಸ್ಕಾಂ ಅಧಿಕಾರಿಗಳು ಕ್ರಮವಹಿಸಿ ಎಂದು ಸಚಿವರು ಸೂಚಿಸಿದರು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಸೂಪರ್ ಬಜಾರ್ ಮಳಿಗೆಗಳನ್ನು ಸ್ಥಾಪಿಸಲು ಬೇಡಿಕೆಯಿದ್ದು, ಜಿಲ್ಲಾ ಖನಿಜ ನಿಧಿಯಿಂದ 30 ರಿಂದ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಕ್ರಮ ವಹಿಸಲಾಗುವುದು. ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳನ್ನು ಮುಖ್ಯ ವಾಹಿನಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಹೊಂದುವಂತೆ ಸಚಿವರು ತಿಳಿಸಿದರು. ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಮೋಕಾ ಕೆರೆಯು ಶಿಥಿಲಗೊಳ್ಳುತ್ತಿದ್ದು, ಸುತ್ತಲಿನ ಕೃಷಿ ಭೂಮಿಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ, ನೀರನ್ನು ತಡೆಹಿಡಿದು ಬೇರೆಡೆಗೆ ಹರಿಸುವ ಮಾರ್ಗ ಹೊಂದಬೇಕು ಎಂದು ಸೂಚಿಸಿದರು. ಸಭೆಯಲ್ಲಿ ನೀರಾವರಿ, ಕೈಗಾರಿಕೆ, ಮೀನುಗಾರಿಕೆ, ನೀರು ಸರಬರಾಜು, ಆರೋಗ್ಯ ಇಲಾಖೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಸಚಿವರು ಸುದೀರ್ಘವಾಗಿ ಚರ್ಚಿಸಿದರು ಮತ್ತು ಅಧಿಕಾರಿಗಳಿಗೆ ಅಗತ್ಯ-ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಬಿ.ಎಂ.ನಾಗರಾಜ್, ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ತ್ರಿಲೋಕ ಚಂದ್ರ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಎಸ್ಪಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. -------

ಸೋಮವಾರ, ಜೂನ್ 26, 2023

ಮೌಲಾನಾ ಆಜಾದ ಮಾದರಿ ಶಾಲೆಗೆ 6 ರಿಂದ 9ನೇ ತರಗತಿ ಖಾಲಿ ಉಳಿದ ಸೀಟಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಗರದ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24 ನೇ ಸಾಲಿಗೆ 6 ರಿಂದ 9ನೇ ತರಗತಿವರೆಗೆ ಖಾಲಿ ಉಳಿದರುವ ಸೀಟುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹಾಗೂ ಪಾಲಕರು ಅರ್ಜಿಗಳನ್ನು ಹತ್ತಿರದ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರಗಳಾದ ಬಳ್ಳಾರಿ ಮೊ.8310321101, ಸಂಡೂರು ಮೊ.9036925966,8660575061, ಸಿರುಗುಪ್ಪ ಮೊ.9148889975 ಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಬೆಳಗಲ್ಲು ರಸ್ತೆಯ 'ಜಿ' ಸ್ಕ್ವಾಯರ್ ಸಿಟಿ ಹಿಂದುಗಡೆಯ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ದೂ.08392-200125/224, ಮೊ.8861623814 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಎಸ್.ಅಂಜಿನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಕೃಷಿ ಇಲಾಖೆಯಿಂದ 2023-24 ನೇ ಸಾಲಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೂ.10,000 ಗಳನ್ನು ಪಡೆಯುತ್ತಿರುವ ರೈತ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇ-ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ ಮುಂದಿನ ಕಂತು ತಮ್ಮ ಖಾತೆಗೆ ಜಮ ಅಗುವುದಿಲ್ಲ ಹಾಗೂ ಮುಂದಿನ ಯೋಜನೆಯ ಆರ್ಥಿಕ ಸೌಲಭ್ಯದಿಂದ ವಂಚಿತರಾಗಬಹುದು. ಆದ್ದರಿಂದ ಇಲ್ಲಿಯವರೆಗೂ ಇ-ಕೆವೈಸಿ ಮಾಡಿಸದ ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಹಾಗೂ ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಇ-ಕೆವೈಸಿ ಮಾಡಿಸಿಕೊಳ್ಳಲು ತಮ್ಮ ಹತ್ತಿರದ ಗ್ರಾಹಕರ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರ, ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಓಟಿಪಿ ಅಥವಾ ಬಯೋ-ಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ರೈತರು ತಾವೇ ಸ್ವತಃ ಖುದ್ದಾಗಿ Pಒ-ಞisಚಿಟಿ ತಿebsiಣe (ತಂತ್ರಾಂಶ)ದಲ್ಲಿ ಲಿಂಕನ್ನು ಬಳಸಿ ಓಟಿಪಿ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು ಅಥವಾ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಪೆÇೀಸ್ಟಲ್ ಅಕೌಂಟ್ (PಔSಖಿಂಐ ಂಅಅಔUಓಖಿ) ತೆರೆಯುವ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಅಥವಾ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಮುಖ ತೋರಿಸುವ (ಈಚಿಛಿe ಖeಛಿogಟಿisಚಿಣioಟಿ) ಂಠಿಠಿ ಮೂಲಕ ಡೌನ್‍ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ನೊಂದಾಯಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶ: ಅರ್ಜಿ ಆಹ್ವಾನ ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): 2023-24 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್‍ಲೈನ್ (ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್.ಅಂಜಿನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿನಿಲಯಗಳಿಗೆ ಪಿ.ಯು.ಸಿ ಮತ್ತು ಪಿ.ಯು.ಸಿ ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳು ಮಾತ್ರ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶದ ವಿಳಾಸ hಣಣಠಿs://shಠಿ.ಞಚಿಡಿಟಿಚಿಣಚಿಞಚಿ.gov.iಟಿ/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 15 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ hಣಣಠಿs://ಜom.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ ದೂ.08392-200125/225, ಮೊ.8746818180 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------
ರೈತರು ನಿಗದಿಪಡಿಸಿದ ಅವಧಿಯೊಳಗೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಿ ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಯೋಜನೆಯಡಿ ತಿಳಿಸಿರುವ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಹೋಬಳಿ ಮಟ್ಟದಲ್ಲಿ ತಿಳಿಸಿರುವ ಬೆಳೆಗಳಾದ ಜೋಳ (ನೀರಾವರಿ/ಮಳೆಯಾಶ್ರಿತ), ರಾಗಿ (ಮಳೆಯಾಶ್ರಿತ), ಸಜ್ಜೆ (ನೀರಾವರಿ/ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ), ತೊಗರಿ (ನೀರಾವರಿ/ಮಳೆಯಾಶ್ರಿತ), ಉರುಳಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ/ಮಳೆಯಾಶ್ರಿತ), ಎಳ್ಳು (ಮಳೆಯಾಶ್ರಿತ), ಹತ್ತಿ (ನೀರಾವರಿ/ಮಳೆಯಾಶ್ರಿತ), ನೆಲಗಡಲೆ (ನೀರಾವರಿ/ಮಳೆಯಾಶ್ರಿತ), ಈರುಳ್ಳಿ (ನೀರಾವರಿ), ಕೆಂಪು ಮೆಣಸಿನಕಾಯಿ (ನೀರಾವರಿ) ಬಳ್ಳಾರಿ ಜಿಲ್ಲೆಯ ಬೆಳೆಗಳಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು. *ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕಗಳು ಇಂತಿವೆ:* ಭತ್ತಕ್ಕೆ (ನೀರಾವರಿ) ಆ.16, ಮುಸುಕಿನ ಜೋಳಕ್ಕೆ (ನೀರಾವರಿ/ಮಳೆಯಾಶ್ರಿತ) ಜು.31, ಜೋಳಕ್ಕೆ (ನೀರಾವರಿ/ಮಳೆಯಾಶ್ರಿತ) ಜು.31, ಸೂರ್ಯಕಾಂತಿಗೆ (ನೀರಾವರಿ/ಮಳೆಯಾಶ್ರಿತ) ಜು.31, ತೊಗರಿಗೆ (ನೀರಾವರಿ) ಜು.31, ತೊಗರಿಗೆ (ಮಳೆಯಾಶ್ರಿತ) ಆ.16, ಹತ್ತಿ ಬೆಳೆಗೆ (ನೀರಾವರಿ/ಮಳೆಯಾಶ್ರಿತ) ಜು.31, ಕೆಂಪು ಮೆಣಸಿನಕಾಯಿ ಬೆಳೆಗೆ (ನೀರಾವರಿ/ಮಳೆಯಾಶ್ರಿತ) ಜು.31, ಈರುಳ್ಳಿ (ನೀರಾವರಿ) ಜು.31, ರಾಗಿ (ಮಳೆಯಾಶ್ರಿತ) ಆ.16, ನವಣೆ (ಮಳೆಯಾಶ್ರಿತ) ಆ.16, ಹುರುಳಿ (ಮಳೆಯಾಶ್ರಿತ) ಆ.16, ನೆಲಗಡಲೆ (ನೀರಾವರಿ/ಮಳೆಯಾಶ್ರಿತ) ಆ.16, ಸಜ್ಜೆ ಬೆಳೆಗೆ (ನೀರಾವರಿ/ಮಳೆಯಾಶ್ರಿತ) ಆ.16 ಆಗಿರುತ್ತದೆ. ಈ ಮೇಲ್ಕಂಡ ನಿಗದಿಪಡಿಸಿದ ಅವಧಿಯೊಳಗೆ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ತಿಳಿಸಿದ್ದು, ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು (ಅommoಟಿ Seಡಿviಛಿe ಅeಟಿಣeಡಿs) ಸಂಪರ್ಕಿಸಬಹುದು. ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಛಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮತ್ತು ದೂ.08392-276224 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ----------
ನಾಡಪ್ರಭು ಕೆಂಪೇಗೌಡ ಜಯಂತಿ ಜೂ. 27ರಂದು ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಜೂ.27 ರಂದು ಬೆಳಗ್ಗೆ 10 ಕ್ಕೆ ನಗರದ ಡಾ.ರಾಜ್ ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯ ಹೊಂಗಿರಣದ ಸಾಂಸ್ಕøತಿಕ ಸಮುಚ್ಛಯ ಆವರಣದಲ್ಲಿ ನಡೆಯಲಿದೆ. ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಡಿ.ತ್ರಿವೇಣಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಓ ರಾಹುಲ್ ಶರಣಪ್ಪ ಸಂಕನೂರು, ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಬಾಬು ಅವರು ತಿಳಿಸಿದ್ದಾರೆ. -------
ಕುಡುತಿನಿ ಬಳಿಯಿರುವ ಬಿಟಿಪಿಎಸ್‍ಗೆ ಇಂಧನ ಸಚಿವ ಭೇಟಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು: ಕೆ.ಜೆ.ಜಾರ್ಜ್ ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದರು. ಜಿಲ್ಲೆಯ ಕುಡತಿನಿ ಬಳಿಯಿರುವ "ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ"ಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಂಗಾರು ವಿಳಂಬದಿಂದಾಗಿ ವಿದ್ಯುತ್ ಉತ್ಪಾದನೆಗೆ ಸಮಸ್ಯೆಯಾಗಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇದೆ ಎಂದರು. ರಾಜ್ಯದಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚಾರ್ಜಿಂಗ್ ಸ್ಟೇಷನ್‍ಗಳನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಇನ್ನು ಇರುವ ಶಾಖೋತ್ಪನ್ನಗಳನ್ನು ಬಲಪಡಿಸಲಾಗುವುದು. ಯಾವುದೇ ರೀತಿ ಶಾಖೋತ್ಪನ್ನ ಕೇಂದ್ರಗಳನ್ನು ಹೆಚ್ಚಿಸುವುದಿಲ್ಲ. ಸೌರ ವಿದ್ಯುತ್‍ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಲ್ಲಿದ್ದಲಿನ ಕೊರತೆ ಇಲ್ಲ. ಕಲ್ಲಿದ್ದಲಿನ ಗುಣಮಟ್ಟ ಕಾಯ್ದುಕೊಳ್ಳಲು ತಿಳಿಸಲಾಗಿದೆ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಸ್ಕೀಂ ಬಗ್ಗೆ ಮಾತನಾಡಿದ ಅವರು, ಗೃಹ ಜ್ಯೋತಿ ಯೋಜನೆಯನ್ನು ಜುಲೈಯಿಂದಲೇ ಅನುಷ್ಠಾನಗೊಳಿಸಲಾಗುವುದು. 200 ಯೂನಿಟ್‍ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಆಗಸ್ಟ್ ತಿಂಗಳಿಂದ ಜನರಿಗೆ ‘ಶೂನ್ಯ' ಬಿಲ್ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಯೂನಿಟ್ ಬಳಸಿದಲ್ಲಿ ಬಳಕೆ ಮಾಡಿದ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ 2.16 ಕೋಟಿ ಜನರು ಗೃಹಜ್ಯೋತಿ ಫಲಾನುಭವಿಗಳಿದ್ದು, ಅದರಲ್ಲಿ 2.14 ಕೋಟಿ ಜನರು ಅರ್ಹರಿದ್ದಾರೆ. ನಾವು ನೀಡಿದ ಆಶ್ವಾಸನೆಯಂತೆ ಜನರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದರು. ಇನ್ನು ವಿದ್ಯುತ್ ದರ ಏರಿಕೆ ವಿಚಾರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸೆಪ್ಟೆಂಬರ್‍ನಲ್ಲೇ ವಿದ್ಯುತ್ ದರ ಏರಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಮೇ 12 ರಿಂದ ವಿದ್ಯುತ್ ದರ ಹೆಚ್ಚಿಸಲಾಗಿದೆ. ಆದ್ದರಿಂದ ವಿದ್ಯುತ್ ದರ ಹೆಚ್ಚಳಕ್ಕೂ ಗೃಹಜ್ಯೋತಿ ಯೋಜನೆಗೂ ಸಂಬಂಧ ಇಲ್ಲ ಎಂದು ಸ್ವಷ್ಟಪಡಿಸಿದರು. ಈ ಸಂದರ್ಭದಲ್ಲಿ ಬಿಟಿಪಿಎಸ್ ಅಧಿಕಾರಿಗಳು ಹಾಗೂ ಇತರರು ಇದ್ದರು. ------

ಶುಕ್ರವಾರ, ಜೂನ್ 23, 2023

ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನೆ ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನ ಸಕಾಲದಲ್ಲಿ ವಿನಿಯೋಗವಾಗಲಿ: ಎಡಿಸಿ ಮೊಹಮ್ಮದ್ ಝುಬೇರಾ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ ಪ್ರಕಾರ ವಿವಿಧ ಇಲಾಖೆಗಳಡಿಯಲ್ಲಿನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳೊಂದಿಗೆ, 2023-24ನೇ ಸಾಲಿನ ಮಾರ್ಚ್-2023 ಅಂತ್ಯದವರೆಗಿನ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅನುದಾನ ಬಿಡುಗಡೆ ಮತ್ತು ಬಳಕೆಯಾದ ಬಗ್ಗೆ ಇಲಾಖಾವಾರು ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಹ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಭೌತಿಕ ಮತ್ತು ಆರ್ಥಿಕ ಗುರಿ ಸಾಧನೆಗೆ ಹೆಚ್ಚಿನ ಒತ್ತು ಕೊಡಬೇಕು. ಕ್ರಿಯಾಯೋಜನೆಗೆ ಅನುಮೋದನೆ ದೊರೆತ ಕೂಡಲೇ ಮತ್ತು ಆಯಾ ಇಲಾಖಾ ಯೋಜನೆಗಳಿಗೆ ಅನುದಾನ ಬಿಡುಗಡೆ ತಕ್ಷಣ ವಿಳಂಬ ಮಾಡದೇ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯೋಜನಾ ವರದಿಯನ್ನು ರೂಪಿಸಿಕೊಂಡು ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅನುದಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ವಿನಿಯೋಗವಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಕಾಲ ಅರ್ಜಿಗಳ ಬಗ್ಗೆ ಪರಿಶೀಲಿಸಿದರು. ಸಕಾಲ ಸೇವೆಗಳ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ನಾಗರಿಕರಿಗೆ ನಿಗದಿತ ಕಾಲಾವಧಿಯೊಳಗೆ ಖಾತರಿ ಸೇವೆ ನೀಡುವ ನಿಟ್ಟಿನಲ್ಲಿ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಹ ಅಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಕಾಲ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅನಗತ್ಯ ವಿಳಂಬ ಮಾಡುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. 2023-24ನೇ ಸಾಲಿನಲ್ಲಿ ಇದುವರೆಗೆ ಆರ್ಥಿಕ ಮತ್ತು ಭೌತಿಕ ಗುರಿ ನಿಗದಿಯಾಗಿರುವುದಿಲ್ಲ. ಕೇಂದ್ರ ಕಚೇರಿಗಳಿಂದ ಕ್ರಿಯಾಯೋಜನೆಗೆ ಅನುಮೋದನೆ ಆಗುವ ಪ್ರಕ್ರಿಯೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರು ಸೇರಿದಂತೆ ನಗರಸಭೆ, ಪುರಸಭೆಯ ಅಧಿಕಾರಿಗಳು, ವಿವಿಧ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ------
ಜಿಲ್ಲಾ ಮಟ್ಟದ ಮಟ್ಟದ ಜಾಗೃತಿ ಸಮಿತಿ ಸಭೆ ಜಿಲ್ಲೆಯ ಎಲ್ಲಾ ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ ನಡೆಸಿ: ಎಡಿಸಿ ಮೊಹಮ್ಮದ್ ಝುಬೇರಾ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿನ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೊಡಗಿಸಿಕೊಂಡಿರುವ ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮ್ಯಾನುವಲ್ ಸ್ಕ್ಯಾವೆಂಜರ್ಸ್‍ಗಳ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ 2013 ರನ್ವಯ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ಸಫಾಯಿ ಕರ್ಮಚಾರಿಗಳ ವಸತಿ ಸೌಲಭ್ಯ ಇರುವ ಕುರಿತು ಸರ್ವೆ ಮಾಡಿ, ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಹಾಗೂ ಈ ಹಿಂದೆ ನಿವೇಶನ ಪಡೆದುಕೊಂಡು ಕಾಮಗಾರಿ ಪ್ರಗತಿಯಲ್ಲಿರುವ ಬಾಕಿ ಕಂತಿನ ಹಣ ಬಿಡುಗಡೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಸುತ್ತಿರುವ ಪೌರಕಾರ್ಮಿಕರಿಗೆ ಕನಿಷ್ಟ ವೇತನ ಮತ್ತು ಇ.ಎಸ್.ಐ, ಪಿ.ಎಫ್ ಪಾವತಿಯಾಗುತ್ತಿರುವ ಕುರಿತು ಪರಿಶೀಲಿಸಿದರು. ಸಕಾಲದಲ್ಲಿ ಅವರ ಇ.ಎಸ್.ಐ, ಪಿ.ಎಫ್ ಪಾವತಿಯಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ತೋರುವಂತಿಲ್ಲ ಎಂದರು. ಜಿಲ್ಲೆಯಲ್ಲಿ ಮಂಜೂರಾದ ಸಮುದಾಯ ಸ್ಯಾನಿಟರಿ ಶೌಚಾಲಯಗಳ ಕಾಮಗಾರಿಗಳು ಪ್ರಾರಂಭಿಸಬೇಕು. ಹಾಗೂ ಈ ಹಿಂದೆ ಅಪೂರ್ಣಗೊಂಡ ಕಾಮಗಾರಿಗಳನ್ನೂ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂ ವ್ಯಾಪ್ತಿಯ ಎಲ್ಲಾ ಪೌರಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣಾ ಶಿಬಿರ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಆರೋಗ್ಯ ಕಾರ್ಡ್ ಮಾಡಿಸಿಕೊಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರು ಸೇರಿದಂತೆ ನಗರಸಭೆ, ಪುರಸಭೆಯ ಅಧಿಕಾರಿಗಳು, ವಿವಿಧ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು. -------
ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಿ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಪಿ.ಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ರೈತರು ಧನ ಸಹಾಯ ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನಲ್ಲಿ 9751 ರೈತರು, ಕಂಪ್ಲಿ ತಾಲ್ಲೂಕಿನ 127 ರೈತರು, ಕುರುಗೋಡು ತಾಲ್ಲೂಕಿನ 519 ರೈತರು, ಸಂಡೂರು ತಾಲ್ಲೂಕಿನ 3883 ರೈತರು, ಸಿರುಗುಪ್ಪ ತಾಲ್ಲೂಕಿನ 9308 ರೈತರು ಜಿಲ್ಲೆಯಲ್ಲಿ ಒಟ್ಟು 23588 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಇದ್ದು, ರೈತರು ಇ-ಕೆವೈಸಿ ಮಾಡಿಸದಿದ್ದಲ್ಲಿ ಪಿ.ಎಂ.ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ರೈತರಿಗೆ ನೀಡಲಾಗುವ 14ನೇ ಕಂತಿನ ಆರ್ಥಿಕ ಧನ ಸಹಾಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇ-ಕೆವೈಸಿ ಮಾಡಿಸಿದ ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ https://pmkisan.gov.in ಗೆ ಭೇಟಿ ನೀಡಿ ಇ-ಕೆವೈಸಿ ಆಯ್ಕೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ನಮೂದಿಸಿ, ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಪ್ರಕ್ರಿಯೆ ಇ-ಕೆವೈಸಿ ಪೂರ್ಣಗೊಳಿಸಬಹುದು. ಆಧಾರ್‍ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಒಟಿಪಿ ಸೃಜನೆಯಾಗದ ರೈತರು ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಒನ್ ಸೇವಾ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಹಾಗೂ ಮೊಬೈಲ್‍ನಲ್ಲಿರುವ ಪ್ಲೇಸ್ಟೋರ್‍ನಲ್ಲಿ Facial Authentication mobile app ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ದೂ.08392-276224 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. --------
ಸಿರುಗುಪ್ಪ : ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ನೀಡಲು ಮಾಲೀಕರು ಸಂಪರ್ಕಿಸಿ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಸಿರುಗುಪ್ಪ ವ್ಯಾಪ್ತಿಯಡಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯ ನಡೆಸಲು ಸಂಖ್ಯಾಬಲಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳುಳ್ಳ ಸುಸಜ್ಜಿತ ಬಾಡಿಗೆ ಕಟ್ಟಡ ಅವಶ್ಯಕತೆ ಇದ್ದು, ಬಾಡಿಗೆ ನೀಡಲು ಆಸಕ್ತಿಯುಳ್ಳ ಕಟ್ಟಡದ ಮಾಲೀಕರು ಸಂಪರ್ಕಿಸಬಹುದು ಎಂದು ಸಿರುಗುಪ್ಪ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ (BCWD1691) ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 125 ಹಾಗೂ ಮೆಟ್ರಿಕ್ ನಂತರದ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪುರುಷ ವಿದ್ಯಾರ್ಥಿ ನಿಲಯ (BCWD1688) ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 150 ಸಂಖ್ಯಾಬಲಕ್ಕೆ ಸುಸಜ್ಜಿತ ಕಟ್ಟಡ ಬೇಕಾಗಿದೆ. ಹೆಚ್ಚಿನ ಮಾಹಿತಗಾಗಿ ಸಿರುಗುಪ್ಪದ ಸಾಮಥ್ರ್ಯ ಸೌಧ ತಾಲ್ಲೂಕು ಕಚೇರಿ ಆವರಣದ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಅಥವಾ ದೂ.08396-220414 ಗೆ ಸಂಪರ್ಕಿಬಹುದು. ------
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಾಗೃತಿ ಜಾಥಾ ಜೂ.28 ರಂದು ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜೂ.28 ರಂದು ಬೆಳಗ್ಗೆ 09 ಕ್ಕೆ ನಗರದ ಕೌಲ್‍ಬಜಾರ್‍ನಲ್ಲಿ “ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ” ಅಂಗವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ನಗರದ ಬ್ರೂಸ್‍ಪೇಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೆಂದ್ರ ಕುಮಾರ್ ಅವರು ತಿಳಿಸಿದ್ದಾರೆ. ------
ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2022-23 ನೇ ಸಾಲಿನ ಪ್ರತಿಭಾವಂತ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಹ ಕ್ರೀಡಾಪಟುಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಅಂಜಿನಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೊತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢಶಾಲಾ (6 ನೇ ರಿಂದ 10 ನೇ ತರಗತಿ) ಕ್ರೀಡಾಪಟುಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವೆಬ್‍ಸೈಟ್ http://sevasindhuservices.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31 ಆಗಿರುತ್ತದೆ. *ನಿಬಂಧನೆಗಳು:* ಅರ್ಜಿದಾರರು 2022-23ನೇ ಸಾಲಿನ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢಶಾಲಾ (6ನೇ ರಿಂದ 10 ನೇ ತರಗತಿಯಲ್ಲಿ) ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು 01.04.2022 ರಿಂದ 31.03.2023 ರವರೆಗೆ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು. ಭಾರತ ಸರ್ಕಾರ ದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿರಬೇಕು. 01.04.2022 ರಿಂದ 31.03.2023 ಅವಧಿಯಲ್ಲಿ ನಡೆದ ಕ್ರೀಡಾ ಕೂಟಗಳನ್ನು ಮಾತ್ರ ಸಾಧನೆಗಳನ್ನು ಎಂದು ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ಶಾಲಾ ಕ್ರೀಡಾ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದೇ ವಿದ್ಯಾರ್ಥಿ ವೇತನವನ್ನು ಮೊತ್ತಕ್ಕೆ ಮಾತ್ರ ಅರ್ಹರಿರುತ್ತಾರೆ. ವಿದ್ಯಾರ್ಥಿ ವೇತನ ಮೊತ್ತವನ್ನು ವಾರ್ಷಿಕ ರೂ.10,000 ಗಳನ್ನು ಮಾತ್ರ ಮಂಜೂರು ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿದ್ದಾರೆ. ------
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಹಾಗೂ ರಕ್ತದಾನಿಗಳ ಸನ್ಮಾನ ಕಾರ್ಯಕ್ರಮ 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವಯಸ್ಕರು ರಕ್ತದಾನ ಮಾಡಿ: ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): 18 ವರ್ಷ ಮೇಲ್ಪಟ್ಟ ಎಲ್ಲಾ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ಅವರು ಹೇಳಿದರು. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಬೆಂಗಳೂರು ಕರ್ನಾಟಕ ರಾಜ್ಯ ಚಾಲನಾ ಪರಿಷತ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ (ರಕ್ತ ಸುರಕ್ಷತೆ), ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥಮ ದರ್ಜೆ ಕಾಲೇಜು ಹಾಗೂ ವಿಮುಕ್ತಿ, ಸೌಖ್ಯ ಬೆಳಕು, ನಿತ್ಯಜೀವನ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆಸ್ಪತ್ರೆಯ ಆವರಣದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮುಂಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾ ಗೆ ಜಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆ, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ, ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಹಾಗೂ ವಿಭಿನ್ನ ರಕ್ತದ ಖಾಯಿಲೆಯಿಂದ ಬಳಲುವವರಿಗೆ ರಕ್ತದ ಅವಶ್ಯಕತೆ ಇದ್ದಾಗ ರಕ್ತದಾನ ಮಾಡಲು ಸಾರ್ವಜನಿಕರು ಸ್ವಯಂ ಪೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಬಹುದು ಎಂದರು. ಕಳೆದ 2022-23 ನೇ ಸಾಲಿನಲ್ಲಿ 305 ರಕ್ತದಾನ ದಾನ ಶಿಬಿರಗಳನ್ನು ಏರ್ಪಡಿಸಿ 13555 ರಕ್ತ ಚೀಲಗಳನ್ನು ಸಂಗ್ರಹಿಸಿದ್ದು, ಇದು ಇತ್ತೀಚಿನ ದಿನಗಳಲ್ಲಿ ದಾಖಲೆಯಾಗಿದೆ ಎಂದು ಹೇಳಿದ ಅವರು, ಗ್ರಾಮೀಣ ಭಾಗದಲ್ಲಿ ರಕ್ತದಾನಕ್ಕೆ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ಮನುಷ್ಯ ಜೀವಂತ ಇರುವಾಗ ನಿರಂತರವಾಗಿ ದಾನ ಮಾಡಬಹುದಾದ ವಸ್ತು ಅದು ರಕ್ತವಾಗಿದ್ದು, ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ರೂಪಗೊಳ್ಳಲು ಪ್ರತಿಯೊಬ್ಬರು ಕೈಜೋಡಿಸಿ ಎಂದು ಡ್ಯಾಪ್‍ಕು ಅಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂನಾಧಿಕಾರಿ ಡಾ.ಇಂದ್ರಾಣಿ ಅವರು ಹೇಳಿದರು. ಜಾಗೃತಿ ಮೂಡಿಸುವ ಜಾಥಾವು ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ವಿವಿಧ ಘೋಷಣೆಗಳೊಂದಿಗೆ ರಕ್ತದಾನದ ಕುರಿತು ಜಾಗೃತಿ ನೀಡಲಾಯಿತು. ನಂತರದ ಕಾರ್ಯಕ್ರಮದಲ್ಲಿ 25 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಷಣ್ಮುಖ, ಪಂಡಿತ್ ಕಲ್ಮಟ್, ಕೆ.ಆನಂದ, ಶಂಬುಲಿಂಗ, ಮಹಾವೀರ್, ಸಂತೋಷ, ರಾಘವೇಂದ್ರ, ರುದ್ರೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ್ ಬಿ.ಚವ್ಹಾಣ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನಿಲ್‍ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿಮೂರ್ಲನಾಧಿಕಾರಿ ಡಾ.ವೀರೇಂದ್ರ ಕುಮಾರ, ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ ಹಾಗೂ ಎನ್.ಎಸ್.ಎಸ್ ಅಧಿಕಾರಿ ಲಕ್ಕಣ್ಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಜಿಲ್ಲಾ ಮೇಲ್ವಿಚಾರಕ ಬಿ.ಗಿರೀಶ್, ಆಡಳಿತ ಸಹಾಯಕ ಎಂ.ಮಂಜುನಾಥ, ಲೇಖಸಹಾಯಕ ಎನ್.ಹೊನ್ನರಪ್ಪ ಅವರು ಸೇರಿದಂತೆ ಸರಳಾದೇವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು -------