ಶುಕ್ರವಾರ, ಜೂನ್ 23, 2023

ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಪ್ರಗತಿ ಪರಿಶೀಲನೆ ಎಸ್‍ಸಿಎಸ್‍ಪಿ, ಟಿಎಸ್‍ಪಿ ಅನುದಾನ ಸಕಾಲದಲ್ಲಿ ವಿನಿಯೋಗವಾಗಲಿ: ಎಡಿಸಿ ಮೊಹಮ್ಮದ್ ಝುಬೇರಾ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಧಿನಿಯಮ ಪ್ರಕಾರ ವಿವಿಧ ಇಲಾಖೆಗಳಡಿಯಲ್ಲಿನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳೊಂದಿಗೆ, 2023-24ನೇ ಸಾಲಿನ ಮಾರ್ಚ್-2023 ಅಂತ್ಯದವರೆಗಿನ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅನುದಾನ ಬಿಡುಗಡೆ ಮತ್ತು ಬಳಕೆಯಾದ ಬಗ್ಗೆ ಇಲಾಖಾವಾರು ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಹ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಭೌತಿಕ ಮತ್ತು ಆರ್ಥಿಕ ಗುರಿ ಸಾಧನೆಗೆ ಹೆಚ್ಚಿನ ಒತ್ತು ಕೊಡಬೇಕು. ಕ್ರಿಯಾಯೋಜನೆಗೆ ಅನುಮೋದನೆ ದೊರೆತ ಕೂಡಲೇ ಮತ್ತು ಆಯಾ ಇಲಾಖಾ ಯೋಜನೆಗಳಿಗೆ ಅನುದಾನ ಬಿಡುಗಡೆ ತಕ್ಷಣ ವಿಳಂಬ ಮಾಡದೇ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯೋಜನಾ ವರದಿಯನ್ನು ರೂಪಿಸಿಕೊಂಡು ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಅನುದಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ವಿನಿಯೋಗವಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಕಾಲ ಅರ್ಜಿಗಳ ಬಗ್ಗೆ ಪರಿಶೀಲಿಸಿದರು. ಸಕಾಲ ಸೇವೆಗಳ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ನಾಗರಿಕರಿಗೆ ನಿಗದಿತ ಕಾಲಾವಧಿಯೊಳಗೆ ಖಾತರಿ ಸೇವೆ ನೀಡುವ ನಿಟ್ಟಿನಲ್ಲಿ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಹ ಅಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಕಾಲ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅನಗತ್ಯ ವಿಳಂಬ ಮಾಡುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. 2023-24ನೇ ಸಾಲಿನಲ್ಲಿ ಇದುವರೆಗೆ ಆರ್ಥಿಕ ಮತ್ತು ಭೌತಿಕ ಗುರಿ ನಿಗದಿಯಾಗಿರುವುದಿಲ್ಲ. ಕೇಂದ್ರ ಕಚೇರಿಗಳಿಂದ ಕ್ರಿಯಾಯೋಜನೆಗೆ ಅನುಮೋದನೆ ಆಗುವ ಪ್ರಕ್ರಿಯೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಕೀನಾ ಅವರು ಸೇರಿದಂತೆ ನಗರಸಭೆ, ಪುರಸಭೆಯ ಅಧಿಕಾರಿಗಳು, ವಿವಿಧ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ