ಶುಕ್ರವಾರ, ಜೂನ್ 23, 2023

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಹಾಗೂ ರಕ್ತದಾನಿಗಳ ಸನ್ಮಾನ ಕಾರ್ಯಕ್ರಮ 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವಯಸ್ಕರು ರಕ್ತದಾನ ಮಾಡಿ: ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): 18 ವರ್ಷ ಮೇಲ್ಪಟ್ಟ ಎಲ್ಲಾ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್ ಜನಾರ್ಧನ ಅವರು ಹೇಳಿದರು. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಬೆಂಗಳೂರು ಕರ್ನಾಟಕ ರಾಜ್ಯ ಚಾಲನಾ ಪರಿಷತ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ (ರಕ್ತ ಸುರಕ್ಷತೆ), ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಪ್ರಥಮ ದರ್ಜೆ ಕಾಲೇಜು ಹಾಗೂ ವಿಮುಕ್ತಿ, ಸೌಖ್ಯ ಬೆಳಕು, ನಿತ್ಯಜೀವನ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆಸ್ಪತ್ರೆಯ ಆವರಣದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮುಂಭಾಗದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾ ಗೆ ಜಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆ, ಹೆರಿಗೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ, ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಹಾಗೂ ವಿಭಿನ್ನ ರಕ್ತದ ಖಾಯಿಲೆಯಿಂದ ಬಳಲುವವರಿಗೆ ರಕ್ತದ ಅವಶ್ಯಕತೆ ಇದ್ದಾಗ ರಕ್ತದಾನ ಮಾಡಲು ಸಾರ್ವಜನಿಕರು ಸ್ವಯಂ ಪೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಬಹುದು ಎಂದರು. ಕಳೆದ 2022-23 ನೇ ಸಾಲಿನಲ್ಲಿ 305 ರಕ್ತದಾನ ದಾನ ಶಿಬಿರಗಳನ್ನು ಏರ್ಪಡಿಸಿ 13555 ರಕ್ತ ಚೀಲಗಳನ್ನು ಸಂಗ್ರಹಿಸಿದ್ದು, ಇದು ಇತ್ತೀಚಿನ ದಿನಗಳಲ್ಲಿ ದಾಖಲೆಯಾಗಿದೆ ಎಂದು ಹೇಳಿದ ಅವರು, ಗ್ರಾಮೀಣ ಭಾಗದಲ್ಲಿ ರಕ್ತದಾನಕ್ಕೆ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. ಮನುಷ್ಯ ಜೀವಂತ ಇರುವಾಗ ನಿರಂತರವಾಗಿ ದಾನ ಮಾಡಬಹುದಾದ ವಸ್ತು ಅದು ರಕ್ತವಾಗಿದ್ದು, ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯಾಗಿ ರೂಪಗೊಳ್ಳಲು ಪ್ರತಿಯೊಬ್ಬರು ಕೈಜೋಡಿಸಿ ಎಂದು ಡ್ಯಾಪ್‍ಕು ಅಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂನಾಧಿಕಾರಿ ಡಾ.ಇಂದ್ರಾಣಿ ಅವರು ಹೇಳಿದರು. ಜಾಗೃತಿ ಮೂಡಿಸುವ ಜಾಥಾವು ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ವಿವಿಧ ಘೋಷಣೆಗಳೊಂದಿಗೆ ರಕ್ತದಾನದ ಕುರಿತು ಜಾಗೃತಿ ನೀಡಲಾಯಿತು. ನಂತರದ ಕಾರ್ಯಕ್ರಮದಲ್ಲಿ 25 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಷಣ್ಮುಖ, ಪಂಡಿತ್ ಕಲ್ಮಟ್, ಕೆ.ಆನಂದ, ಶಂಬುಲಿಂಗ, ಮಹಾವೀರ್, ಸಂತೋಷ, ರಾಘವೇಂದ್ರ, ರುದ್ರೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ್ ಬಿ.ಚವ್ಹಾಣ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನಿಲ್‍ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಕುಷ್ಟರೋಗ ನಿಮೂರ್ಲನಾಧಿಕಾರಿ ಡಾ.ವೀರೇಂದ್ರ ಕುಮಾರ, ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ ಹಾಗೂ ಎನ್.ಎಸ್.ಎಸ್ ಅಧಿಕಾರಿ ಲಕ್ಕಣ್ಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಜಿಲ್ಲಾ ಮೇಲ್ವಿಚಾರಕ ಬಿ.ಗಿರೀಶ್, ಆಡಳಿತ ಸಹಾಯಕ ಎಂ.ಮಂಜುನಾಥ, ಲೇಖಸಹಾಯಕ ಎನ್.ಹೊನ್ನರಪ್ಪ ಅವರು ಸೇರಿದಂತೆ ಸರಳಾದೇವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ