ಸೋಮವಾರ, ಜೂನ್ 19, 2023

ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣದಲ್ಲಿಯೂ ಆಸಕ್ತಿ ಹೊಂದಿ: ನ್ಯಾ.ಪುಷ್ಪಾಂಜಲಿ ದೇವಿ ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ): ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲೂ ಸಾಧನೆ ಮಾಡುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆಯಲು ಹೆಣ್ಣುಮಕ್ಕಳು ಸಹ ಉತ್ಸಾಹ ತೋರುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಹೆಚ್.ಪುಷ್ಪಾಂಜಲಿ ಅವರು ಹೇಳಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ನಗರದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪಡೆದುಕೊಂಡು ಹೆತ್ತವರಿಗೆ, ಕಲಿಸಿದ ಗುರುಗಳಿಗೆ, ಕಲಿತ ಶಾಲೆಗಳಿಗೆ ಹೆಸರು ತಂದುಕೊಡಬೇಕು. ತಾವು ಉನ್ನತಮಟ್ಟಕ್ಕೆ ಬೆಳೆಯಲು ವಿದ್ಯೆಕೊಟ್ಟು ಕಲಿಸಿದ ಗುರುಗಳೇ ಕಾರಣ ಎಂಬುದನ್ನು ಮಕ್ಕಳು ಅರಿಯಬೇಕು ಎಂದು ಅವರು ತಿಳಿಸಿದರು. ಶಾಲೆಯ ವಾತಾವರಣ ಕಂಡು ಸ್ವಚ್ಛತೆಯಿಂದ ಕೂಡಿದೆ ಎಂದು ಜಿಲ್ಲಾ ನ್ಯಾಯಾಧೀಶರು ಪ್ರಶಂಸೆ ವ್ಯಕ್ತ ಪಟ್ಟರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಮಾತನಾಡಿ, ಮಕ್ಕಳ ಜನನ ಮರಣ ನೊಂದಣಿಯನ್ನು ಶೀಘ್ರವಾಗಿ ನೊಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯ ಮತ್ತು ನೋಟು ಪುಸ್ತಕಗಳನ್ನು ವಿತರಿಸಲಾಯಿತು. ರುದ್ರ ಟ್ರಸ್ಟ್‍ನ ಪೂಜ್ಯ ರವಿಶಂಕರ್ ಬಿ.ಎಂ. ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಬಾಗಲಕೋಟೆ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲರಾದ ನಾಗಗೊಂಡ ಮಾಣಿಕ್, ಬಳ್ಳಾರಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಂಶುಪಾಲರಾದ ಕೆ.ಬಿ. ನಾಗರಾಜು ಸೇರಿದಂತೆ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ