ಬುಧವಾರ, ಜೂನ್ 21, 2023
*ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 09 ನೇ ಅಂತರಾಷ್ಟ್ರೀಯ ದಿನಾಚರಣೆ*
*ಯೋಗ ಎಲ್ಲರ ಬದುಕಿನ ಭಾಗವಾಗಲಿ: ಹರಿಶಂಕರ ಅಗರ್‍ವಾಲ್*
ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ):
ಯೋಗ ಕೇವಲ ಆಸನಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದರಲ್ಲಿ ಹಲವಾರು ಆಯಾಮಗಳಿವೆ. ಇಂದಿನ ದಿನಮಾನದಲ್ಲಿ ಒತ್ತಡದ ಬದುಕಿನಲ್ಲಿಯೂ ಯೋಗಭ್ಯಾಸ ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ ಎಂದು ಕರ್ನಾಟಕ ಯೋಗ ಮತ್ತು ಕ್ರೀಡಾ ಸಂಸ್ಥೆಯ ಸಂಯೋಜಕ ಹರಿಶಂಕರ್ ಆಗರ್‍ವಾಲ್ ಅವರು ತಿಳಿಸಿದರು.
ನಗರದ ಹೊರವಲಯದಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
‘ವಸುದೈವ ಕುಟುಂಬಕಂ’ ಎನ್ನುವ ತತ್ವದ ಅಡಿ ನಾವೆಲ್ಲ ಒಂದೇ ಕುಟುಂಬದವರಂತೆ ಬಾಳಿ ಬದುಕಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಇಂದಿನ ದಿನವನ್ನು ಯೋಗ ದಿನವನ್ನಾಗಿ ಘೋಷಿಸಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಸಿ. ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗವು ಭಾರತೀಯರು ಜಗತ್ತಿಗೆ ನೀಡಿರುವಂಥಹ ಹಲವಾರು ಕೊಡುಗೆಗಳಲ್ಲಿ ಅತ್ಯಂತ ಪ್ರಮುಖವಾದುದಾಗಿದೆ ಎಂದರು.
ನಡಿಗೆ, ವ್ಯಾಯಾಮ, ದೈಹಿಕ ಕಸರತ್ತುಗಳು ಮನುಷ್ಯನನ್ನು ಗಟ್ಟಿಮುಟ್ಟಾಗಿಸಿದರೆ, ಯೋಗವು ಮಾನಸಿಕ ನೆಮ್ಮದಿ ಮತ್ತು ಆರೋಗ್ಯವಂತರನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲರೂ ಪ್ರತಿನಿತ್ಯ ಯೋಗಾಸನದಲ್ಲಿ ಭಾಗವಹಿಸುವುದು ಒಳಿತು ಎಂದರು.
ವಿದ್ಯಾರ್ಥಿ ಜೀವನದಲ್ಲಿ ತಮ್ಮ ಮನಸ್ಸನ್ನು ನಿಯಂತ್ರಿಸಲು ಯೋಗವು ಇಂದು ಶಕ್ತಿಯಾಗಿದೆ. ವಿವಿಧ ವಿಭಾಗಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಯೋಗ ಡಿಪೆÇ್ಲೀಮಾ ಕೋರ್ಸ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಯೋಗ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ಮಹೇಶಬಾಬು ಅವರು,
ಪ್ರಾಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಬೋಧಕೇತರ ಸಿಬ್ಬಂದಿಯವರಿಗೆ ಯೋಗಾಸನಗಳ ಮಹತ್ವ ತಿಳಿಸುತ್ತಾ ಯೋಗಾಭ್ಯಾಸ ನಡೆಸಿದರು.
ವಿಭಾಗದ ಡಾ.ಶಶಿಧರ ಕೆಲ್ಲೂರ, ಡಾ.ಸಂಪತ್ ಕುಮಾರ್, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶಿವರಾಮರಾಗಿ, ಪಾಪಯ್ಯ ಅವರು ಸೇರಿದಂತೆ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ವರ್ಗದವರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ