ಭಾನುವಾರ, ಸೆಪ್ಟೆಂಬರ್ 17, 2023
ವಿಎಸ್‍ಕೆ ವಿವಿಯಲ್ಲಿ ‘ಚಂದ್ರಯಾನ-3 ಸಾಧನೆಯ ಕಥೆ’ ವಿಷಯದ ವಿಶೇಷ ಉಪನ್ಯಾಸ ಚಂದ್ರಯಾನ-3 ಭಾರತೀಯ ವಿಜ್ಞಾನದ ಯಶಸ್ಸು: ಡಾ.ಬಿ.ಹೆಚ್.ಎಂ.ದಾರುಕೇಶ್
ಬಳ್ಳಾರಿ,ಸೆ.17(ಕರ್ನಾಟಕ ವಾರ್ತೆ):
ಐತಿಹಾಸಿಕ ಚಂದ್ರಯಾನ-3 ಯೋಜನೆಯ ಯಶಸ್ಸು ಭಾರತೀಯ ವಿಜ್ಞಾನದ ಮತ್ತು ವಿಜ್ಞಾನಿಗಳ ಸಾಧನೆಗೆ ಹಿಡಿದ ಕನ್ನಡಿ ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಮತ್ತು ಸಹ ನಿರ್ದೇಶಕರಾದ ಡಾ.ಬಿ.ಹೆಚ್.ಎಂ.ದಾರುಕೇಶ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ನಡೆದ ‘ಚಂದ್ರಯಾನ-3 ಸಾಧನೆಯ ಕಥೆ’ ಎಂಬ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಬಾಹ್ಯಾಕಾಶ ವಿಜ್ಞಾನದಲ್ಲಿ ಹಲವು ವರ್ಷಗಳ ಹಿಂದೆ ಭಾರತದ ಪ್ರಯತ್ನಗಳಿಗೆ ಸಹಾಯ ಹಸ್ತ ನೀಡಲು ವಿವಿಧ ದೇಶಗಳು ಹಿಂದೇಟು ಹಾಕಿದ್ದವು. ಇದನ್ನೇ ಛಲವಾಗಿ ಪರಿಗಣಿಸಿದ ಭಾರತದ ವಿಜ್ಞಾನಿಗಳು ಸತತ ಪ್ರಯತ್ನಗಳ ಮೂಲಕ ಇಂದು ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಿದೆ ಎಂದರು.
ಭಾರಿ ಗಾತ್ರದ ಉಪಗ್ರಹಗಳನ್ನು ಉಡಾವಣೆ ಮಾಡುವುದು, ಕಕ್ಷೆಗೆ ಸೇರಿಸುವುದು ಮತ್ತು ಅವುಗಳಿಂದ ಮಾಹಿತಿ ಸಂಗ್ರಹ ಮಾಡುವುದು ಸಾಮಾನ್ಯ ಕೆಲಸವಲ್ಲ. ಇಂದು ಚಂದ್ರನ ದಕ್ಷಿಣ ಮೇಲ್ಮೈಯಲ್ಲಿ ನೆಲೆಯೂರಿರುವ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಲಭ್ಯವಿರುವ ಖನಿಜಾಂಶಗಳ ಕುರಿತು ಪತ್ತೆ ಮಾಡಿವೆ.
ದೇಶದಲ್ಲಿ ಚಿತ್ರತಾರೆಯರು, ಕ್ರೀಡಾ ತಾರೆಯರಿಗೆ ಇರುತ್ತಿದ್ದ ಅಭಿಮಾನಿ ವರ್ಗ ಇಂದು ವಿಜ್ಞಾನವನ್ನು, ವಿಜ್ಞಾನಿಗಳನ್ನು ಕೊಂಡಾಡುತ್ತಿದ್ದಾರೆ. ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ವಿಜ್ಞಾನದೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ದೇಶ ಬದಲಾವಣೆಗೆ ಹಾಗೂ ದೇಶದ ಅಭಿವೃದ್ಧಿಗೆ ಚಂದ್ರಯಾನ-3 ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು. ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿದ್ದ ಶಿಕ್ಷಣ ಸಂಸ್ಕøತಿ ಮರುಕಳಿಸುವ ದಿನಗಳು ದೂರವಿಲ್ಲ ಎಂದು ಅಭಿಪ್ರಾಯಪಟ್ಟರು.
ಚಂದ್ರನಲ್ಲಿ ಇಳಿದಿರುವ ರೋವರ್ ಮತ್ತು ಲ್ಯಾಂಡರ್ ಅಲ್ಫಾ ರೇ ಮತ್ತು ಲೇಸರ್ ಬ್ರೇಕ್ ಪ್ಲಾಸ್ಮಾಗಳಂತಹ ಅತ್ಯಾಧುನಿಕ ತಂತ್ರಾಂಶಗಳನ್ನು ಹೊಂದಿದ್ದು, ಚಂದ್ರನ ಅಂಗಳದಲ್ಲಿರುವ ವಸ್ತುಗಳ, ಪದರಗಳ ಚಿತ್ರಗಳ ಮಾಹಿತಿಯನ್ನು ರವಾನಿಸುತ್ತಿವೆ. ಸೋಲಾರ್ ಪ್ಯಾನೆಲ್ ಹೊಂದಿರುವ ಸದ್ಯ ಸ್ಲೀಪ್ ಮೋಡ್‍ನಲ್ಲಿರುವ ಯಂತ್ರಗಳು ಇದೇ 22ರಂದು ಸೂರ್ಯನ ಕಿರಣಗಳ ಸ್ಪರ್ಶದಿಂದ ಚಾರ್ಜ್ ಆದರೆ ಮತ್ತೆ 15 ದಿನಗಳ ಸಂಶೋಧನೆ ಮುಂದುವರೆಸಲು ಇಸ್ರೋ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು.
ಮೈಕ್ರೋ ಕಾರ್ಡರ್ ಕಮಾಂಡ್, ಮಿಕ್ಸರ್, ಡಿಜಿಟೈಸ್, ಉಪಗ್ರಹಗಳು, ಕಂಪ್ಯೂಟರ್, ಕಂಟ್ರೋಲಿಂಗ್ ಕುರಿತಂತೆ ಬಾಹ್ಯಾಕಾಶ ವಿಜ್ಞಾನದ ಇನ್ನಿತರ ಸಾಧನಗಳ ಕುರಿತು ತಿಳಿಸಿದರು.
ನಂತರ ಉಪನ್ಯಾಸಕರುಗಳು, ವಿದ್ಯಾರ್ಥಿಗಳೊಂದಿಗೆ ಜರುಗಿದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳ ಜೊತೆಗೆ ಅಲ್ಲೀಪುರದ ಸರ್ಕಾರಿ ಶಾಲೆ ಮತ್ತು ಬೆಸ್ಟ್ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಸಾಹೇಬ್ ಅಲಿ ನೀರಗುಡಿ ಮಾತನಾಡಿ, ವಿಶ್ವಸಾಧನೆ ಮಾಡಿದ ಇಸ್ರೋ ಸಂಸ್ಥೆ ಇರುವುದು ನಮ್ಮ ರಾಜ್ಯದಲ್ಲಿ. ಇಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ಬಹುತೇಕ ಕನ್ನಡಿಗರು. ದೇಶದ ಹೆಸರನ್ನು ಉತ್ತುಂಗಕ್ಕೇರಿಸಿದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ರುದ್ರೇಶ ಎಸ್.ಎನ್, ವಿತ್ತಾಧಿಕಾರಿ ಪ್ರೊ. ಸದ್ಯೋಜಾತಪ್ಪ ಎಸ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ತಿಪ್ಪೇರುದ್ದಪ್ಪ.ಜೆ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ