ಬುಧವಾರ, ಸೆಪ್ಟೆಂಬರ್ 20, 2023

ಅಪೌಷ್ಟಿಕತೆ ನಿವಾರಣೆ ಕುರಿತು ತರಬೇತಿ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಕಾರ್ಯಾಗಾರ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಆರು ತಿಂಗಳವರೆಗೆ ಎದೆ ಹಾಲುಣಿಸುವಿಕೆಯ ಮಹತ್ವ ಸಾರಿ: ಡಿಹೆಚ್‍ಒ ಡಾ.ವೈ ರಮೇಶಬಾಬು

ಬಳ್ಳಾರಿ,ಸೆ.20(ಕರ್ನಾಟಕ ವಾರ್ತೆ): ಹೆರಿಗೆಯಾದ ನಂತರದಲ್ಲಿ ಅರ್ಧ ಗಂಟೆಯೊಳಗೆ ನವಜಾತ ಶಿಶುವಿಗೆ ತಾಯಂದಿರು ಎದೆ ಹಾಲುಣಿಸಬೇಕು ಹಾಗೂ ಆರು ತಿಂಗಳ ನಂತರ ಮಗುವಿಗೆ ಪೂರಕ ಪೌಷ್ಟಿಕ ಆಹಾರ ನೀಡುವ ಮೂಲಕ ಆರಂಭದಿಂದಲೇ ಅಪೌಷ್ಟಿಕತೆ ನಿವಾರಿಸಲು ಪಾಲಕರಿಗೆ ಜಾಗೃತಿ ಮೂಡಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್‍ಬಾಬು ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಯುನಿಸೆಫ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಸುಧಾರಿತ ಪೌಷ್ಟಿಕತೆಗಾಗಿ ಆರೋಗ್ಯ ಪ್ರಕ್ರಿಯೆ ‘ಚೈನ್' ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಕೊಳಚೆ ಪ್ರದೇಶ ವ್ಯಾಪ್ತಿಯಲ್ಲಿ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ವಯಸ್ಸಿಗೆ ಇರುವ ತೂಕದ ಪ್ರಮಾಣ, ಎತ್ತರಕ್ಕೆ ತಕ್ಕ ತೂಕ, ವಯಸ್ಸಿಗೆ ತಕ್ಕ ಎತ್ತರ, ಇವುಗಳನ್ನು ಪರಿಗಣಿಸಿ ಅಪೌಷ್ಟಿಕತೆ ನಿರ್ಧರಿಸಿ ಸ್ಥಳೀಯ ಹಂತದಲ್ಲಿ ಚಿಕಿತ್ಸೆ ನೀಡಲು ಕ್ರಮವಹಿಸಲಾಗುತ್ತದೆ ಎಂದರು. ಅಪೌಷ್ಟಿಕತೆ ಇರುವ ಮಕ್ಕಳನ್ನು ತಜ್ಞರಿಂದ ಚಿಕಿತ್ಸೆ ನೀಡುವಿಕೆ, ಕಬ್ಬಿಣಾಂಶ ಮಾತ್ರೆಗಳನ್ನು ನೀಡುವುದು, ಗರ್ಭಿಣಿಯರಿಗೆ ಸಕಾಲದಲ್ಲಿ ಕನಿಷ್ಟ 180 ಕಬ್ಬಿಣಾಂಶ ಮಾತ್ರೆ ನೀಡುವ, 10 ರಿಂದ 19 ವರ್ಷದೊಳಿಗಿನ ಮಕ್ಕಳಿಗೆ ವಾರಕ್ಕೊಮ್ಮೆ ನೀಲಿ ಕಬ್ಬಿಣಾಂಶ ಮಾತ್ರೆ ನೀಡುವ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ವಹಿಸಲು ತಿಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ., ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರಕುಮಾರ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಐಸಿಡಿಎಸ್ ಮೇಲ್ವಿಚಾರಕ ಸಾಯಿಪ್ರಭ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ.ಕೆ, ರಾಘವಶೆಟ್ಟಿ, ಖುರ್ಷಿದಾ ಬೇಗಂ, ಮಹಮ್ಮದ್ ಖಾಸಿಂ ತರಬೇತಿ ನೀಡಿದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ