ಶುಕ್ರವಾರ, ಸೆಪ್ಟೆಂಬರ್ 22, 2023

ಬಳಕೆಗೆ ನೀರು ತುಂಬುವ ಪರಿಕರಗಳಿಗೆ ಸರಿಯಾಗಿ ಮುಚ್ಚಳ ಮುಚ್ಚಿ, ಸೊಳ್ಳೆ ಉತ್ಪತ್ತಿಯಾಗದಂತೆ ಜಾಗ್ರತೆ ವಹಿಸಿ: ಡಿಹೆಚ್‍ಒ ಡಾ.ವೈ ರಮೇಶಬಾಬು

ಬಳ್ಳಾರಿ,ಸೆ.22(ಕರ್ನಾಟಕ ವಾರ್ತೆ): ಮನೆಗೆ ಬಳಸಲು ನೀರು ಅತ್ಯಗತ್ಯವಾಗಿದ್ದು, ನೀರು ತುಂಬುವ ಪರಿಕರಗಳಾದ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆಗಳಿಗೆ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆಗಳು ಮೊಟ್ಟಯಿಡಲು ನೀರು ಸಿಗದಂತೆ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶಬಾಬು ಅವರು ಹೇಳಿದರು. ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು, ಚಿಕುನ್ಯಗುನ್ಯಾ, ಮಲೇರಿಯಾ, ಮುಂತಾದ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗ, ಹಾಗೂ ಸರಕಾರಿ ಎನ್‍ಎನ್‍ಎಮ್ ತರಬೇತಿ ಕೇಂದ್ರ, ಮಹಿಮಾ ನರ್ಸಿಂಗ್ ಕಾಲೇಜು ಜಂಟಿಯಾಗಿ ಶುಕ್ರವಾರ ಬಳ್ಳಾರಿ ನಗರದಲ್ಲಿ ಸೊಳ್ಳೆ ಮರಿಗಳ ಪತ್ತೆ ಹಚ್ಚುವಿಕೆ ಸಮೀಕ್ಷಾ ಕಾರ್ಯದಲ್ಲಿ ಮನೆ ಭೇಟಿ ನೀಡಿ ಅವರು ಜಾಗೃತಿ ಮೂಡಿಸಿ ಮಾತನಾಡಿದರು. ಮುಂಜಾಗ್ರತಾ ಕ್ರಮವಾಗಿ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡುವುದು, ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚುವುದು, ನೀರು ನಿಲ್ಲುವ ಟೈರ್, ಟಿನ್, ಪ್ಲಾಸ್ಟಿಕ್ ಕಫ್‍ಗಳನ್ನು ಸೂಕ್ತ ವಿಲೇವಾರಿ ಮಾಡಿ, ನೀರು ತುಂಬುವ ಡ್ರಮ್, ಬ್ಯಾರೆಲ್, ತೊಟ್ಟಿ ಮುಂತಾದವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ತುಂಬಿ ಸೊಳ್ಳೆಗಳು ನೀರಿನ ಮೇಲೆ ಕೂಡದ ಹಾಗೆ ಮುಚ್ಚಳ ಮುಚ್ಚುವ ಇಲ್ಲವೆ ಬಟ್ಟೆಯನ್ನು ಕಟ್ಟುವ ಕ್ರಮವಹಿಸಬೇಕು ಎಂದರು. ಮಲಗುವಾಗ ಸೊಳ್ಳೆ ಪರದೆಗಳ ಬಳಕೆ, ಯಾರಿಗಾದರೂ ಚಳಿಜ್ವರ, ಅತಿಯಾದ ತಲೆನೋವು, ಕಣ್ಣಿನ ಹಿಂಭಾಗ ಜಗ್ಗಿದಂತಾಗುವುದು ಮುಂತಾದವುಗಳು ಕಂಡು ಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಬೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿ ರೋಗ ಖಚಿತ ಪಟ್ಟಲ್ಲಿ ಚಿಕಿತ್ಸೆ ಪಡೆಯಿರಿ ಎಂದು ತಿಳಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ಅಬ್ದುಲ್ಲಾ ಮಾತನಾಡಿ, ಇತ್ತೀಚಿಗೆ ಎಲ್ಲಡೆ ಡೆಂಗ್ಯು ಪ್ರಕರಣಗಳ ಕಂಡುಬರುತ್ತಿದ್ದು, ಪ್ರಸ್ತುತ ನಗರದ ಬಂಡಿಹಟ್ಟಿ, ಹರಿಶ್ಚಂದ್ರ ನಗರ, ರಾಮನಗರ, ಕೌಲಬಜಾರ್, ಸಿದ್ದಾರ್ಥ ನಗರ, ಗೌತಮ್ ನಗರ, ಬಾಪೂಜಿ ನಗರ, ಮಿಲ್ಲರಪೇಟೆ, ರಾಣಿತೋಟ, ಬಳ್ಳಾರೆಪ್ಪ ಕಾಲೋನಿ ಸೇರಿದಂತೆ ವಿವಿಧ ಸ್ಲಂಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜನರು ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡುವ ಜೊತೆಗೆ ಶಾಶ್ವತವಾಗಿ ನೀರು ನಿಲ್ಲುವ ತಾಣಗಳಲ್ಲಿ ಸೊಳ್ಳೆ ಮರಿಗಳನ್ನು ಆಹಾರವಾಗಿ ಉಪಯೋಗಿಸುವ ಲಾರ್ವಹಾರಿ ಮೀನುಗಳಾದ ಗಾಂಬೋಷಿಯ ಮತ್ತು ಗಪ್ಪಿ ಮೀನುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ಪಡೆದುಕೊಂಡು ಸೊಳ್ಳೆಗಳ ನಿಯಂತ್ರಣ ಮತ್ತು ರೋಗ ತಡೆಗೆ ಸಾರ್ವಜನಿಕರು ಸಹಕರಿಸಬೇಕು ತಿಳಿಸಿದರು. ಮನೆ ಭೇಟಿ ಕಾರ್ಯಕ್ರದಲ್ಲಿ ಏಕಕಾಲಕ್ಕೆ 300 ಜನ ಒಳಗೊಂಡ 150 ತಂಡಗಳ ಮೂಲಕ ಸ್ಲಂ ಪ್ರದೇಶಗಳ 15,000 ಮನೆಗಳನ್ನು ಗುರಿಯಾಗಿಟ್ಟುಕೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಾ ಕಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಮಹಿಮಾ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ