ಶುಕ್ರವಾರ, ಸೆಪ್ಟೆಂಬರ್ 29, 2023

ಯಾವುದೇ ಪ್ರಾಣಿ ಕಡಿದ ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆಯಿರಿ: ಡಿಹೆಚ್‍ಒ ಡಾ.ವೈ.ರಮೇಶ ಬಾಬು

ಬಳ್ಳಾರಿ,ಸೆ.29(ಕರ್ನಾಟಕ ವಾರ್ತೆ): ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಡಿದ ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಆ್ಯಂಟಿ ರೇಬಿಸ್ ಲಸಿಕೆ ಪಡೆಯುವುದರಿಂದ ರೇಬಿಸ್ ಖಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್‍ಬಾಬು ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ಅವರು ಮಾತನಾಡಿದರು. ‘ಏಕೀಕೃತ ಆರೋಗ್ಯವನ್ನು ಅಳವಡಿಸಿಕೊಳ್ಳಿ ರೇಬಿಸ್ ತಡೆಗಟ್ಟಿ’ ಈ ವರ್ಷದ ಘೋಷವಾಕ್ಯವಾಗಿದ್ದು, ಸಾರ್ವಜನಿಕರಿಗೆ ರೇಬಿಸ್ ಖಾಯಿಲೆಯ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜನ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ‘2030ರ ವೇಳೆಗೆ ನಾಯಿ ಕಡಿತದ ಮೂಲಕ ಹರಡುವ ರೇಬಿಸ್ ಖಾಯಿಲೆಯಿಂದ ಸಂಭವಿಸುವ ಸಾವಿನ ಸಂಖ್ಯೆಯನ್ನು ಶೂನ್ಯ ಪ್ರಮಾಣಕ್ಕಿಳಿಸುವ’ ಗುರಿಯನ್ನು ಸಾಧಿಸಲು ವಿಶ್ವದಾದ್ಯಂತ ಈ ಜಾಥಕ್ಕೆ ಚಾಲನೆ ನೀಡಲಾಗಿದೆ, ನಮ್ಮ ರಾಜ್ಯ ಸೇರಿದಂತೆ ಭಾರತ ದೇಶವು ಇದೇ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿದೆ ಎಂದು ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ.ಮರಿಯಂಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೇಬಿಸ್ ಖಾಯಿಲೆಯು ಶೇ.100 ತಡೆಗಟ್ಟಬಹುದಾದ ಖಾಯಿಲೆಯಾಗಿದ್ದು, ನಾಯಿ ಕಚ್ಚಿದ ನಂತರ ಗಾಯವನ್ನು ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50-70 ರೇಬಿಸ್‍ಗೆ ತುತ್ತಾಗುವುದನ್ನು ತಡೆಯಬಹುದು. Post exposure prophylaxis ಅನ್ನು ಸಂಪೂರ್ಣವಾಗಿ (ಎಲ್ಲಾ 5 ಡೋಸ್‍ಗಳನ್ನು) ಮತ್ತು Rabies Immunoglobulin ಪಡೆಯುವುದರ ಮೂಲಕ ರೇಬಿಸ್ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ಮನುಷ್ಯರಿಗೆ ರೇಬಿಸ್ ರೋಗವು ಶೇ.99 ನಾಯಿ ಕಡಿತದಿಂದ ಬರುತ್ತದೆ, ಇನ್ನುಳಿದಂತೆ ಬೆಕ್ಕು, ತೋಳ, ನಾಯಿ ಸೇರಿದಂತೆ ಕಾಡು ಪ್ರಾಣಿಗಳ ಕಡಿತದಿಂದ ಶೇ.1 ಪ್ರಮಾಣದಷ್ಟು ಹರಡುತ್ತದೆ. ವಿಶ್ವಾದಾದ್ಯಂತ ಸಂಭವಿಸುವ ರೇಬಿಸ್ ಸಾವಿನ ಪ್ರಕರಣಗಳಲ್ಲಿ ಶೇ.36 ಭಾರತದಲ್ಲಿಯೇ ಸಂಭವಿಸುತ್ತಿವೆ, ಪ್ರಸ್ತುತ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣಕ್ಕೆ ಲಸಿಕೆ ಲಭ್ಯವಾಗುವ ನಿಟ್ಟಿನಲ್ಲಿ ಆ್ಯಂಟಿ ರೇಬಿಸ್ ಕ್ಲಿನಿಕ್‍ನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಭಾರತದಲ್ಲಿ ರೇಬಿಸ್ ರೋಗದಿಂದ 2012 ರಿಂದ 2020ರ ವರೆಗೆ ಸುಮಾರು 7000 ಜನರು ಪ್ರತಿ ವರ್ಷ ಸಾವನ್ನಪ್ಪಿದ್ದಾರೆ ಹಾಗೂ ಶೇ.40ರಷ್ಟು ನಾಯಿ ಕಡಿತಗಳು 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಂಭವಿಸಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಮಕ್ಕಳಲ್ಲಿ ನಾಯಿ ಕಚ್ಚಿದರೆ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರ ಅಥವಾ ಸಂಬಂಧಪಟ್ಟವರ ಗಮನಕ್ಕೆ ಬರುವುದಿಲ್ಲ ಇದು ಕೂಡ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. 2023ನೇ ಸಾಲಿನಲ್ಲಿ ಈವರೆಗೂ ಸರಾಸರಿ ಪ್ರತಿ ತಿಂಗಳಿಗೆ 1078 ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಸಂಪೂರ್ಣ ಲಸಿಕೆಯನ್ನು ಪಡೆಯುವ ಕುರಿತು ಜನ ಸಾಮಾನ್ಯರಲ್ಲಿ ಹೆಚ್ಚಿನ ಅರಿವು ಜಾಗೃತಿ ಮೂಡಿಸಲು ಇಂದಿನ ಜಾಥ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 2022ನೇ ಡಿ.05ರಂದು ‘The Karnataka Epidemic Disease Act, 2020’ ರಡಿಯಲ್ಲಿ ರೇಬಿಸ್ ರೋಗವನ್ನು ‘Notifiable Disease’ ಎಂದು ಘೋಷಿಸಲಾಗಿದ್ದು, ಬಳ್ಳಾರಿಯ ಜಿಲ್ಲಾ ಸರ್ವೇಕ್ಷಣಾ ಘಟಕವು ಎನ್.ಆರ್.ಸಿ.ಪಿ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಪ್ರಾಣಿ ಮತ್ತು ನಾಯಿ ಕಡಿತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪರಿವೀಕ್ಷಣೆಯಲ್ಲಿ ಇಟ್ಟಿದ್ದು, ರೋಗ ನಿಯಂತ್ರಣ ಚಟುವಟಿಕೆಗಳನ್ನು ಬಲಪಡಿಸಲು ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಹಾಗೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಂತರ್ ಇಲಾಖಾ ಸಹಕಾರ ಅತ್ಯವಶ್ಯಕವೆಂದು ತಿಳಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ರೇಬಿಸ್ ಖಾಯಿಲೆಗೆ ಒಮ್ಮೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆ ಇರುವುದಿಲ್ಲವಾದರೂ ರೇಬಿಸ್ ಖಾಯಿಲೆಯು ಸೂಕ್ತ ಪೂರ್ವ ರೋಗ ನಿರೋಧಕ ಲಸಿಕೆ ಪಡೆಯುವುದರಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಪ್ರಾಣಿ ಕಡಿತ ಸಂದರ್ಭದಲ್ಲಿ ಗಾಬರಿಪಡದೆ ನಾಯಿ ಅಥವಾ ಪ್ರಾಣಿ ಕಡಿತದ 24 ಗಂಟೆಯೊಳಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಎಸ್.ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ವಿರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಎಪಿಡಮಾಲಾಜಿಸ್ಟ್ ಡಾ.ಪ್ರಿಯಾಂಕ, ಜಿಲ್ಲಾ ಮೈಕ್ರೋಬಯಾಲಾಜಿಸ್ಟ್ ಶರತ್ ಬಾಬು, ಎನ್.ಸಿ.ಡಿ ಜಿಲ್ಲಾ ಕನ್ಸಲ್‍ಟೆಂಟ್ ಡಾ.ಜಬೀನ್‍ತಾಜ್, ಮಾರ್ಗರೇಟ್, ಟ್ಯೂಟರ್ ಉಪಸ್ಥಿತರಿದ್ದರು. ವಿಮ್ಸ್ ಶುಶ್ರೂಷಣಾ ಪ್ರಶಿಕ್ಷಣಾರ್ಥಿಗಳು, ಆಶಾ ಕಾರ್ಯಕರ್ತೆಯರು, ಸರ್ವೇಕ್ಷಣಾ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಒಳಗೊಂಡಂತೆ ಜಾಗೃತಿ ಜಾಥಾವು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಆರಂಭವಾಗಿ ಸಂಗಂ ವೃತ್ತ, ರಾಯಲ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಂಚರಿಸಿ ಜಾಗೃತಿ ಮೂಡಿಸಲಾಯಿತು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ