ಬುಧವಾರ, ಸೆಪ್ಟೆಂಬರ್ 27, 2023

ಬಳ್ಳಾರಿ: ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ

ಬಳ್ಳಾರಿ,ಸೆ.27(ಕರ್ನಾಟಕ ವಾರ್ತೆ): ನಗರದ ಕಂಟೋನ್‍ಮೆಂಟ್‍ನ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ ಕ್ವೆಸ್ಟ್ ಗ್ಲೋಬಲ್ ಕಂಪನಿಯ ವತಿಯಿಂದ 2022-23ನೇ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ವೆಸ್ಟ್ ಗ್ಲೋಬಲ್ ಕಂಪನಿಯ ಟ್ರಸ್ಟಿ ರೀತೇಶ್ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ ಯಶಸ್ಸು ಗಳಿಸುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಕೊಡುಗೆ ನೀಡಬೇಕೆಂದು ಹೇಳಿದರು. ಶಾಲೆಯ ಪ್ರಾಚಾರ್ಯ ಕೆ.ಜಿ.ನಾಗರಾಜ ಅವರು ಮಾತನಾಡಿ, ನಮ್ಮ ದೇಶವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಥಮ ಸ್ಥಾನವನ್ನು ಹೊಂದಿದೆ. ಚಂದ್ರಯಾನ-3 ಯಶಸ್ವಿಯಾಗಲು ಸುಮಾರು 50-60 ವಿಜ್ಞಾನಿಗಳು ಸುಮಾರು 4 ವರ್ಷಗಳವರೆಗೆ ಶ್ರಮಿಸಿದ್ದಾರೆ. ಅದರಂತೆ ನಮ್ಮ ತಾಂತ್ರಿಕ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಾದ ನೀವು ಮುಂದೆ ಉತ್ತಮ ತಾಂತ್ರಿಕ ಶಿಕ್ಷಣವನ್ನು ಪಡೆದು ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕೆಂದು ಹಾಗೂ ಇದನ್ನು ಸಾಧಿಸಲು ಏಕಾಗ್ರತೆಯಿಂದ ಅಭ್ಯಸಿಸಬೇಕೆಂದು ಹೇಳಿದರು. ನಂತರದಲ್ಲಿ ವಿದ್ಯಾರ್ಥಿಗಳಿಗೆ ಒಟ್ಟು ರೂ.1ಲಕ್ಷ ಬಹುಮಾನದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ.25 ಸಾವಿರ, ದ್ವಿತೀಯ ಬಹುಮಾನ ರೂ.15 ಸಾವಿರ ಮತ್ತು ತೃತೀಯ ಬಹುಮಾನ ರೂ.10 ಸಾವಿರ ಹಾಗೂ 9ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ತಲಾ ಪ್ರಥಮ ಬಹುಮಾನ ರೂ.12 ಸಾವಿರ, ದ್ವಿತೀಯ ಬಹುಮಾನ ರೂ.8 ಸಾವಿರ ಮತ್ತು ತೃತೀಯ ಬಹುಮಾನ ರೂ.5 ಸಾವಿರ ನಗದು ಬಹುಮಾನವಾಗಿ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಗೋಪಿ.ಜಿ, ಶಿವಯೋಗೆಪ್ಪ ಮತ್ತಿಕಟ್ಟಿ, ವಿಜಯಕುಮಾರ್, ಶಾಲೆಯ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ