ಭಾನುವಾರ, ಸೆಪ್ಟೆಂಬರ್ 17, 2023
ಬಳ್ಳಾರಿಯಲ್ಲಿ ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ ದಿನ ಆಚರಣೆ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶಗಳ ಅಭಿವೃದ್ದಿಗೆ ವಿಶೇಷ ಸ್ಥಾನಮಾನ ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಶ್ರಮಿಸಿದ ಮಹನೀಯರನ್ನು ಮರೆಯುವಂತಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ
ಬಳ್ಳಾರಿ,ಸೆ.17(ಕರ್ನಾಟಕ ವಾರ್ತೆ):
ಕಲ್ಯಾಣ-ಕರ್ನಾಟಕ ಭಾಗವನ್ನು ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಳಿಸಲು, ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಮರೆಯಬಾರದು. ಅವರ ತ್ಯಾಗ, ಬಲಿದಾನಗಳ ಸ್ಮರಣೆ ಮುಂದಿನ ಪೀಳಿಗೆಗೂ ಅಗತ್ಯ ಇದೆ ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತವು 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯಗೊಂಡರೂ ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಪ್ರದೇಶಗಳು ಸ್ವಾತಂತ್ರವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು. ಆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಕ್ಷೇತ್ರಗಳ ಪ್ರಗತಿ ಶೂನ್ಯದ ಕಡೆಗೆ ಹೆಜ್ಜೆ ಇಡುವಂತಾಗಿತ್ತು. ಈ ಭಾಗದ ಜನರಲ್ಲಿ ಹೋರಾಟಕ್ಕೆ ಧೈರ್ಯ ತುಂಬಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಚಳುವಳಿಯ ಸುಧಾರಕರು ಹಾಗೂ ಮತ್ತಿತರ ಸಂಘ ಸಂಸ್ಥೆಗಳು ಹಾಗೂ ಹೋರಾಟಕ್ಕೆ ಇಳಿದು ಶ್ರಮಿಸಿದ ಎಲ್ಲಾ ಮಹನೀಯರನ್ನು ನಾವು ಇಂದು ಸ್ಮರಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
*ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ:*
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಹಿತ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿ ಕಾಯ್ದೆಯಲ್ಲಿ 371(ಜೆ) ಜಾರಿಗೆ ತರಲಾಯಿತು. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸಾಧ್ಯವಾಗಿದೆ. ಅಂದಿನ ನಮ್ಮ ಸರ್ಕಾರ 2013ರಲ್ಲಿ ನ.06 ರಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಿದ್ದು, ಇದು ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ, ಎಲ್ಲಾ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ, ರಸ್ತೆ ಸಂಪರ್ಕ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಇನ್ನೀತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಹೇಳಿದರು.
*ಕೆಕೆಆರ್ ಡಿಬಿ ಯಿಂದ ಜಿಲ್ಲೆಗೆ ಅನುದಾನ ಹಂಚಿಕೆ:*
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ರೂ.342.87 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 914 ಕಾಮಗಾರಿಗಳನ್ನು ಕೈಗೆತ್ತಿಕೊಂಡು 446 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ರೂ.160.79 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ. ಬಾಕಿ ಉಳಿದ 468 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಎಂದು ತಿಳಿಸಿದರು.
*ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ 371 (ಜೆ) ವಿಶೇಷ ಸ್ಥಾನಮಾನ:*
ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 07 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ.80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ.8 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರ ಲಾಭವನ್ನು ಪಡೆಯಲು ಇಲ್ಲಿಯವರೆಗೆ ಬಳ್ಳಾರಿ ಉಪ ವಿಭಾಗದಲ್ಲಿ ಒಟ್ಟು 1,41,877 ಅಭ್ಯರ್ಥಿಗಳಿಗೆ 371(ಜೆ) ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದಾಗಿ ಶಿಕ್ಷಣದಲ್ಲಿ ಹಾಗೂ ವಿವಿಧ ಇಲಾಖೆಗಳಲ್ಲಿ ಉದ್ಯೊಗದ ಮೀಸಲಾತಿಯನ್ನು ಪಡೆಯಲು ಅನುಕೂಲವಾಗಿದೆ ಎಂದರು.
*ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡ, ಮಧ್ಯಮ ವರ್ಗದ ಜನರ ಜೀವನ ಮಟ್ಟ ಸುಧಾರಣೆ:*
ನಮ್ಮ ಸರ್ಕಾರದ ಮಹತ್ತರ ಯೋಜನೆಗಳ ಮೂಲಕ ರಾಜ್ಯದ ಬಡ ಮತ್ತು ಮಧ್ಯಮ ವರ್ಗದವರ ಬದುಕಿನಲ್ಲಿ ಆರ್ಥಿಕ ಚೈತನ್ಯ ತುಂಬಲು ರಾಜ್ಯ ಸರ್ಕಾರವು 05 ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳಿಂದ ಮಹಿಳಾ ಸಬಲೀಕರಣ ಜೊತೆಗೆ ಎಲ್ಲಾ ವರ್ಗಗಳಿಗೆ ಸೇರಿದ ಕಡು ಕಷ್ಟದಲ್ಲಿರುವ ಜನರ ಜೀವನ ಮಟ್ಟ ಸುಧಾರಣೆಯಾಗಲು ಈ ಯೋಜನೆಗಳು ಸಹಕಾರಿಯಾಗಿವೆ ಎಂದರು.
*ಗೃಹಲಕ್ಷ್ಮೀ ಯೋಜನೆ:*
ಮಹಿಳಾ ಸಬಲೀಕರಣಕ್ಕಾಗಿ ಅನುಷ್ಠಾನಗೊಳಿಸಿದ್ದು, ಈ ಯೋಜನೆಯಡಿ ಕುಟುಂಬದ ಯಜಮಾನಿಗೆ ಮಾಸಿಕ ರೂ.2000 ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಮಾಡಲಾಗುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,03,790 ಕುಟುಂಬ ಆಹಾರ ಪಡಿತರ ಚೀಟಿಗಳಲ್ಲಿ ಒಟ್ಟು 2,60,000 ಫಲಾನುಭವಿಗಳು ನೊಂದಣಿ ಮಾಡಿಕೊಂಡಿದ್ದು, ಒಟ್ಟು ಶೇ.86ರಷ್ಟು ಪ್ರಗತಿಯಾಗಿದೆ.
*ಶಕ್ತಿ ಯೋಜನೆ:*
ರಾಜ್ಯದ ಮಹಿಳೆಯರಿಗೆ ಕರ್ನಾಟಕ ರಾಜ್ಯದ್ಯಾಂತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಳ್ಳಾರಿ ಜಿಲ್ಲಾ ಘಟಕದಿಂದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಶಕ್ತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 5,71,000 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದರು.
*ಗೃಹಜ್ಯೋತಿ ಯೋಜನೆ:*
ರಾಜ್ಯದ ಜನತೆಗೆ ಮಾಸಿಕ 200 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 2,26,272 ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ.
*ಅನ್ನಭಾಗ್ಯ ಯೋಜನೆ:*
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲೆಯ ಒಟ್ಟು 05 ತಾಲ್ಲೂಕುಗಳಲ್ಲಿ 2,29,499 ಅರ್ಹ ಪಡಿತರ ಚೀಟಿಗಳ ಒಟ್ಟು 8,81,082 ಪಡಿತರ ಕುಟುಂಬದ ಸದಸ್ಯರುಗಳಿಗೆ ತಲಾ 05 ಕೆ.ಜಿ. ಅಕ್ಕಿಯ ಜೊತೆಗೆ ಫಲಾನುಭವಿಗೆ ರೂ.170 ರಂತೆ ಒಟ್ಟು 14,54,36020 ಮೊತ್ತವನ್ನು ಪಡಿತರ ಕುಟುಂಬಗಳಿಗೆ ನೇರ ಹಣ (ಡಿಬಿಟಿ) ಮೂಲಕ ಸಂದಾಯ ಮಾಡಲಾಗಿದೆ.
*ಯುವನಿಧಿ ಯೋಜನೆ:*
2022-23 ನೇ ಸಾಲಿನಲ್ಲಿ ತೇರ್ಗಡೆಯಾಗಿ 06 ತಿಂಗಳಾದರೂ ಉದ್ಯೊಗ ಲಭಿಸದೇ ಇರುವ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳಿಗೆ ರೂ.3000 ಹಾಗೂ ಡಿಪೆÇ್ಲೀಮ ಪಾಸಾದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ರೂ.1500 ಗಳ ಭತ್ಯೆಯನ್ನು ನೀಡುವ ಸಲುವಾಗಿ ಯುವನಿಧಿ ಯೋಜನೆ ಘೋಷಿಸಲಾಗಿದ್ದು, ಈ ಯೋಜನೆಯನ್ನು ಬರುವ ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದರು.
ಸರ್ಕಾರದ 05 ಮಹತ್ತರ ಯೋಜನೆಗಳಲ್ಲಿ ಸರ್ಕಾರವು 04 ಯೋಜನೆಗಳನ್ನು ಪೂರೈಸಿ ನುಡಿದಂತೆ ನಡೆದುಕೊಂಡಿದೆ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕಲ್ಯಾಣ ಕರ್ನಾಟಕ ಭಾಗವಾದ ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ನಮ್ಮ ಸರ್ಕಾರವು ಬದ್ಧವಾಗಿದೆ ಎಂದು ನುಡಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ 371(ಜೆ) ಅಡಿಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆದು ಯುವ ಸಮುದಾಯ ಮುನ್ನಡೆಯಬೇಕು ಎಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಚಳುವಳಿಯ ಸಮಗ್ರ ಚಿತ್ರಣ ಬಿಚ್ಚಿಟ್ಟರು.
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಅವರು ಕ.ಕ ಉತ್ಸವದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಸೇರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಮಾಡಲು ‘ಪ್ರತಿಬಿಂಬ’ ಯೋಜನೆ ಜಾರಿತರಲಾಗಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಪ್ರೌಢಶಾಲಾ ಮಕ್ಕಳಿಗೆ ಜಿಪಂನ ಸಿಆರ್‍ಎಸ್ ಅನುದಾನದಲ್ಲಿ 6 ವಿಷಯಗಳ ಅಭ್ಯಾಸ ಪುಸ್ತಕಗಳನ್ನೊಳಗೊಂಡ 14,101 ಪುಸ್ತಕ ಕಿಟ್‍ಗಳನ್ನು ವಿತರಿಸುವ ಉದ್ದೇಶ ಹೊಂದಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಿಗೆ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ವಿದ್ಯಾರ್ಥಿಗಳಿಗೆ ಪುಸ್ತಕ ಕಿಟ್ ವಿತರಿಸಿದರು.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ 371(ಜೆ) ಕುರಿತು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ, ಉಪಮೇಯರ್ ಬಿ.ಜಾನಕಿ, ಬಳ್ಳಾರಿ ವಲಯ ಪೆÇಲೀಸ್ ಮಹಾನಿರೀಕ್ಷಕರಾದ ಲೋಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೆÇಲೀಸ್ ಸಿಬ್ಬಂದಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ