ಶುಕ್ರವಾರ, ಸೆಪ್ಟೆಂಬರ್ 29, 2023

ಮೆಣಸಿನಕಾಯಿ ಬೆಳೆಯಲ್ಲಿ ಸೊರಗು(ವಿಲ್ಟ್) ರೋಗ ಮತ್ತು ಕರಿಹೇನು ನಿರ್ವಹಣೆಗೆ ಈ ಕ್ರಮ ಕೈಗೊಳ್ಳಿ

ಬಳ್ಳಾರಿ,ಸೆ.29(ಕರ್ನಾಟಕ ವಾರ್ತೆ): ಬಳ್ಳಾರಿ ತಾಲೂಕಿನಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಗೆ ಸೊರಗು ರೋಗ ಮತ್ತು ಕರಿಹೇನಿನ ಹಾವಳಿ ಜಾಸ್ತಿಯಾಗುತ್ತಿರುವುದರಿಂದ ರೈತರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ರತ್ನಪ್ರಿಯಾ ಯರೆಂಗಲ್ ತಿಳಿಸಿದ್ದಾರೆ. *ಸೊರಗು ರೋಗದ (ವಿಲ್ಟ್) ನಿರ್ವಹಣೆ ಕ್ರಮಗಳು:* ಹೊಲಗಳಲ್ಲಿ ನೀರು ನಿಲ್ಲದಂತೆ ಬಸಿ ಕಾಲುವೆಗಳನ್ನು ತೆಗೆದು ಸಂಪೂರ್ಣ ನೀರು ಹೊರ ಹೋಗುವಂತೆ ಮಾಡಬೇಕು. ಸೋಡೋಮೋನಸ್ ಪ್ಲೋರೋಸೆಸ್ಸ್ ಪ್ಲೋರೆಸೆಸ್ಸ್ (ಜೈವಿಕ ಬ್ಯಾಕ್ಟಿರಿಯಾ) 5 ಮಿ.ಲೀ/ಗ್ರಾಂ ಪ್ರತಿ ಲೀಟರ್ ನೀರಿಗೆ ಸಿಂಪಡಣೆ ಮಾಡುವುದು ಮತ್ತು ಗಿಡಗಳ ಬುಡಕ್ಕೆ ಬಿಡುವುದು. ಟಾಟಾ ಮಾಸ್ಟರ್ (ಮೆಟಲ್ಯಾಕ್ಸಿಲ್ ಶೇ.8 ಜೊತೆಗೆ ಮ್ಯಾಂಕೋಜೆಬ್ ಶೇ.64) 2 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡುವುದು ಮತ್ತು ಗಿಡಗಳ ಬುಡಕ್ಕೆ ಬಿಡಬೇಕು. 19:19:19 (ಎನ್‍ಪಿಕೆ) 5 ಗ್ರಾಂ ಪ್ರತಿ ಲೀಟರ್ ನೀರಿಗೆ ಜೊತೆಗೆ ಲಿಬರಲ್ (ಲಘು ಪೋಷಕಾಂಶಗಳ ಮಿಶ್ರಿತ) 1 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. *ಕರಿಹೇನು ನಿರ್ವಹಣೆ(ಬ್ಲಾಕ್ ಥ್ರಿಪ್ಸ್) ನಿರ್ವಹಣೆ ಕ್ರಮಗಳು:* ಗಿಡದಿಂದ ಗಿಡಕ್ಕೆ ಸೂಕ್ತ ಅಂತರ ಕಾಪಾಡುವುದು ಅತ್ಯಗತ್ಯವಾಗಿದ್ದು, ಬೇವೆರಿಯ ಬೇಸಿಯಾನ ಜೈವಿಕ ಕೀಟನಾಶಕವನ್ನು 5ರಿಂದ 10ಗ್ರಾಂ ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸುವುದು. ಬದುಗಳ ಸುತ್ತ ಜೋಳ ಅಥವಾ ಸಜ್ಜೆಯಂತಹ ಬೆಳೆಗಳನ್ನು ಬೆಳೆಯುವುದರಿಂದ ಕೀಟ ಪಸರಿಸುವುದನ್ನು ತಡೆಗಟ್ಟಬಹುದು. ಮುವೆಂಟೊ ಓಡಿ 2ಮಿ.ಲೀ ಮತ್ತು ಅಲಂಟೋ 1.5 ಮಿ.ಲೀ ಮತ್ತು ಬೇವಿನ ಹೆಣ್ಣೆ 5ಮಿ.ಲೀ ಪ್ರತಿ ಲೀಟರ್‍ಗೆ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ನಾಲ್ಕು ದಿನದ ನಂತರ ಸ್ಪೈನೋಸಾಡ್ 0.3ಮಿ.ಲೀ ಮತ್ತು ಸಿವಾಂಟೋ 2ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ಒಂದು ವಾರದ ನಂತರ ಮುವೆಂಟೊ ಓಡಿ 2ಮಿ.ಲೀ ಮತ್ತು ಸಿವಾಂಟೋ 2ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ಅಥವಾ ಡೈನೋಟೆಫ್ಯೂರಾನ್ (ಟೋಕಾನ್) 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ಸ್ಪೈನೋಸಾಡ್ (ಟ್ರೇಸರ್) 0.3ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ಸ್ಪೈನೋಟೋರಾಮ್ (ಡಿಲಿಗೇಟ್) 0.5ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ರೈತರ ತಾಕುಗಳಲ್ಲಿ ಹೆಚ್ಚಿನ ಕರಿಹೇನು ಕೀಟ (ಬ್ಲಾಕ್ ಥ್ರೀಪ್ಸ್) ಬಾದೆ ಕಂಡುಬಂದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ