ಶುಕ್ರವಾರ, ಸೆಪ್ಟೆಂಬರ್ 22, 2023

*ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ‘ಅಂತರ್ ವಿಭಾಗಿಯ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಡಿ.ಸಾಂಬಶಿವ ದಳವಾಯಿ ಚಾಲನೆ* *ರಂಗಕಲೆಗಳು ವಿಶಿಷ್ಟವಾಗಿವೆ: ಸಾಂಬಶಿವ ದಳವಾಯಿ*

ಬಳ್ಳಾರಿ,ಸೆ.22(ಕರ್ನಾಟಕ ವಾರ್ತೆ): ಕಲೆ ಒಂದು ಮುಹೂರ್ತ ಸ್ವರೂಪದ್ದಾಗಿದ್ದು, ಅದರಲ್ಲಿ ರಂಗಕಲೆಗಳು ಕೇವಲ ಸಂಭಾಷಣೆಯಾಗಿರದೇ ಭಿನ್ನವಾಗಿ, ವಿಶಿಷ್ಟವಾಗಿದೆ ಎಂದು ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರು ಹಾಗೂ ರಂಗ ನಿರ್ದೇಶಕ ಡಿ.ಸಾಂಬಶಿವ ದಳವಾಯಿ ಅವರು ಹೇಳಿದರು. ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ‘ಅಂತರ್ ವಿಭಾಗಿಯ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮ 2023’ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಪಂಚದಲ್ಲಿ ವಿಶಿಷ್ಟವಾದ ಸಾಂಸ್ಕøತಿಕ ನೆಲೆಗಟ್ಟುಗಳನ್ನು ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ. ಎಲ್ಲಿ ಸಾಂಸ್ಕøತಿಕ ವಾತಾವರಣ ಇರುತ್ತದೆಯೋ ಅಲ್ಲಿ ಶುದ್ಧವಾದ ಪರಿಸರ ನಿರ್ಮಾಣವಾಗಿರುತ್ತದೆ. ಸಾಹಿತ್ಯದಿಂದ ನಮ್ಮಲ್ಲಿ ವಿಶೇಷತೆ ಬೆಳೆಯುತ್ತದೆ. ವಿಶೇಷತೆ ಹೆಜ್ಜೆ ಹೆಜ್ಜೆಗೂ ನೆರವಾಗುತ್ತದೆ ಎಂದು ಅವರು ತಿಳಿಸಿದರು. ವ್ಯಕ್ತಿಯಲ್ಲಿ ಅಡಗಿರುವ ಕಲೆಯನ್ನು ಗುರುತಿಸಲು ಸಾಂಸ್ಕøತಿಕ ಚಟುವಟಿಕೆಗಳು ಸಹಕಾರಿಯಾಗಿವೆ. ವಿಶ್ವವಿದ್ಯಾಲಯದ ಸಾಂಸ್ಕøತಿಕ ವೇದಿಕೆಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಸೂಕ್ತವಾಗುತ್ತವೆ ಎಂದರು. ರಾಜ್ಯದಲ್ಲಿ ನಾಟಕ ವಿಭಾಗ ಹೊಂದಿರುವ ವಿಶ್ವವಿದ್ಯಾಲಯಗಳು ಅತ್ಯಂತ ವಿರಳವಾಗಿವೆ. ಅದರಲ್ಲೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗವನ್ನು ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿಶ್ವ ವಿದ್ಯಾಲಯದ ಕುಲಪತಿ ಡಾ.ಸಾಹೇಬ ಅಲಿ ಹೆಚ್.ನಿರಗುಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಕಲೆಗಳು ಹಳ್ಳಿಗಳಲ್ಲಿ ಮಾತ್ರ ಕಾಣಸಿಗುವುದು. ಇಂದು ಹಳ್ಳಿಗಳಲ್ಲಿ ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಪ್ರೀತಿ, ತಾಳ್ಮೆ, ಸಹೋದರತೆ ಕಾಣಬಹುದಾಗಿದೆ ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ.ಎಸ್.ಎನ್ ಅವರು ಮಾತನಾಡಿ, ಜನಪದ ಕಲೆಗಳಿಂದ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ. ನಮ್ಮ ಪೂರ್ವಜರು ಶ್ರಮವನ್ನು ಕಲೆಗಳಲ್ಲಿ ತಲ್ಲೀನರಾಗುವ ಮೂಲಕ ದಣಿವು ನಿವಾರಿಸಿಕೊಳ್ಳುತ್ತಿದ್ದರು. ಸಮಾಜದಲ್ಲಿ ಬದುಕಿಗೆ ಅರ್ಥವನ್ನು ಕಂಡುಕೊಳ್ಳಲು ಸಾಹಿತ್ಯವು ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ ಅವರು ಮಾತನಾಡಿ, ಸಾಂಸ್ಕøತಿಕ ಕಲೆಗಳು ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದಾಗಿದೆ. ಸಮಾಜದಲ್ಲಿ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತವೆ. ಅದರಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸಬೇಕು ಎಂದರು. ಯುವಜನೋತ್ಸವ ಕಾರ್ಯಕ್ರಮ ಸಾಂಸ್ಕøತಿಕ ಸಂಚಾಲಕ ಪ್ರೊ.ಎನ್.ಶಾಂತನಾಯ್ಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಯುವಜನೋತ್ಸವದ ಉದ್ದೇಶವಾಗಿದೆ. ಇರುವ 64 ಕಲೆಗಳಲ್ಲಿ ಯಾವುದಾರೊಂದು ಕಲೆಗೆ ಕರಗತವಾಗಿರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಗಾಗಿ 26 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಮುಖ್ಯ ಆವರಣ ಸೇರಿದಂತೆ ವಿವಿಧ ಸ್ನಾತಕೋತ್ತರ ಕೇಂದ್ರಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ನಾತಕೋತ್ತರ ಕೇಂದ್ರಗಳ ನಿರ್ದೇಶಕರು, ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.ಹೆಚ್.ಗುರುರಾಜ ನಿರೂಪಿಸಿದರು. ಇಂಗ್ಲೀಷ್ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಾತ್ಸಲ್ಯ ವಂದಿಸಿದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ