ಮಂಗಳವಾರ, ಸೆಪ್ಟೆಂಬರ್ 19, 2023
ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ತಪಾಸಣಾ ಶಿಬಿರ ಆಯುಷ್ಮಾನ್ ಭವ ಅಭಿಯಾನದಲ್ಲಿ ಆರಂಭವಾಗುವ ಶಿಬಿರಗಳಡಿ ನೀಡುವ ಆರೋಗ್ಯ ಸೇವೆಗಳನ್ನು ತಪ್ಪದೇ ಪಡೆಯಿರಿ: ಡಿಹೆಚ್‍ಒ ಡಾ.ವೈ ರಮೇಶಬಾಬು
ಬಳ್ಳಾರಿ,ಸೆ.19(ಕರ್ನಾಟಕ ವಾರ್ತೆ):
ರಾಷ್ಟ್ರಪತಿಗಳಿಂದ ಚಾಲನೆಗೊಂಡ ‘ಆಯುಷ್ಮಾನ್ ಭವ’ ಅಭಿಯಾನದಲ್ಲಿ ಒಂದೇ ಸೂರಿನಡಿ ಹಲವು ಆರೋಗ್ಯ ಸೇವೆಗಳನ್ನು ತಜ್ಞ ವೈದ್ಯರಿಂದ ನೀಡಲು ಕಾರ್ಯ ರೂಪಿಸಿದ್ದು, ಸಾರ್ವಜನಿಕರೆಲ್ಲರೂ ಇದರ ಸದುಪಯೋಗ ಪಡೆದಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶಬಾಬು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಆಯುಷ್ಮಾನ್ ಭವ ಅಭಿಯಾನದಡಿಯಲ್ಲಿ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ (ವಿಮ್ಸ್) ಸಹಯೋಗದೊಂದಿಗೆ ತಾಲೂಕಿನ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ್ಮಾನ್ ಕಾರ್ಡ್, ಎಬಿ-ಪಿಎಮ್ ಜೆಎವೈ-ಆರ್‍ಕೆ ಕಾರ್ಡ್‍ಗಳ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರ್ಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುವುದು ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಗ್ರಾಮ್-ಒನ್ ಹಾಗೂ ಸೇವಾ ಸೇವಾ ಕೇಂದ್ರಗಳ ಮೂಲಕ 4,85,395 ಜನರ ನೊಂದಣಿ ಮಾಡಿಸಲಾಗಿದೆ. ಅಲ್ಲದೇ ಆಭಾ ಕಾರ್ಡ್ ಡಿಜಿಟಲ್ ಆರೋಗ್ಯ ದಾಖಲೀಕರಣ ಅಕೌಂಟ್ ಮೂಲಕ ಒಮ್ಮೆ ತಮ್ಮ ಹೆಸರಿನ ನೊಂದಣಿ ಮಾಡಿಸಿದಲ್ಲಿ, ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ತಮ್ಮ ಆರೋಗ್ಯದ ಮಾಹಿತಿ ಲಭ್ಯವಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 7,32,102 ಜನರು ನೊಂದಣಿ ಮಾಡಿಕೊಂಡಿದ್ದಾರೆ. ಈ ಶಿಬಿರದಲ್ಲಿಯೂ ನೋಂದಣಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿಯೂ ತಪಾಸಣಾ ಶಿಬಿರಗಳನ್ನು ಕೈಗೊಳ್ಳಲಾಗುವುದು. ಪ್ರತಿ ಮಂಗಳವಾರ ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮತ್ತು ಬಾಯಿ, ಸ್ಥನ, ಗರ್ಭಕೋಶದ ಕ್ಯಾನ್ಸರ್‍ಗಳ ತಪಾಸಣೆಗೆ ಒತ್ತು ನೀಡಲಾಗುವುದು ಎಂದರು.
ಇಲ್ಲಿಯವರೆಗೆ 17,92,727 ಜನರ ನೋಂದಣಿ ಮಾಡಿಸಲಾಗಿದ್ದು, ಇವರಲ್ಲಿ 30 ವರ್ಷ ಮೇಲ್ಪಟ್ಟ 6,70,047 ಮಹಿಳೆಯರ ತಪಾಸಣೆ ಮಾಡಲಾಗಿದೆ. ಅಲ್ಲದೇ ಕ್ಷಯರೋಗಿಗಳಿಗೆ ಸಂಪೂರ್ಣ ಚಿಕಿತ್ಸೆ ಒದಗಿಸುವ ಖಾತ್ರಿಯನ್ನು ಶಿಬಿರದಲ್ಲಿ ಕೈಗೊಳ್ಳಲಾಗುವುದು. ಅಲ್ಲದೆ ಅಂಗಾಂಗ ದಾನ ನೋಂದಣಿ, ರಕ್ತದಾನ ಶಿಬಿರ, ಆಸ್ಪತ್ರೆಗಳ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮಾಂಜನೇಯಲು ರೂಪನಗುಡಿಯ ಗ್ರಾಮ ಪಂಚಾಯತಿಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಮ್ಸ್ ತಜ್ಞರಾದ ಡಾ.ಸುಮಾ ಗುಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವಿರೇಂದ್ರ ಕುಮಾರ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಎನ್‍ಸಿಡಿ ಕನ್‍ಸಲ್ಟೆಂಟ್ ಡಾ.ಜಬೀನ್ ತಾಜ್, ಡಾ.ನಾರಾಯಣ ಬಾಬು, ಡಾ.ಪ್ರಿಯಾಂಕ್, ಗ್ರಾಪಂ ಸದಸ್ಯರಾದ ಶಂಕರಪ್ಪ, ಖಲೀಲ್, ಖಾದರಭಾಷಾ, ಬಸವರಾಜ, ಚಿದಾನಂದಪ್ಪ, ಮಾರೇಶ, ಸೇರಿದಂತೆ ತಾಯಂದಿರು, ಗ್ರಾಮಸ್ಥರು, ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಿಹೆಚ್‍ಸಿಓ, ಹೆಚ್‍ಐಓ ಉಪಸ್ಥಿತರಿದ್ದರು.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)









ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ