ಭಾನುವಾರ, ಮಾರ್ಚ್ 31, 2024

ಮತದಾನ ಪ್ರಮಾಣ ಹೆಚ್ಚಳಕ್ಕೆ ಬಿಎಲ್ಓಗಳ ಪಾತ್ರ ಪ್ರಮುಖವಾದುದು: ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡುವಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾದದ್ದು, ಮತದಾರರಿಗೆ ಮತದಾನದ ಮಹತ್ವದ ಬಗ್ಗೆ ಹಾಗೂ ಮತಗಟ್ಟೆಯಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು. ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ ಸಂಡೂರು ಇವರ ಸಂಯುಕ್ತಾಶ್ರಯದಲ್ಲಿ ಸಂಡೂರು ಪಟ್ಟಣದ ಎ.ಪಿ.ಎಂ.ಸಿ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ 95-ಸಂಡೂರು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ (BLO) ಗಳಿಗೆ ಹಾಗೂ ಮತದಾರ ಸಾಕ್ಷರತಾ ಕೇಂದ್ರದ ಸಂಚಾಲಕ ಶಿಕ್ಷಕರಿಗೆ ಹಮ್ಮಿಕೊಂಡಿದ್ದ “ತರಬೇತಿ ಕಾರ್ಯಾಗಾರ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡಲು ಯಾವುದೇ ಯೋಜನೆಗಳಿದ್ದಲ್ಲಿ ಅಥವಾ ಸಲಹೆಗಳಿದ್ದಲ್ಲಿ ರೂಪುರೇಷೆ ತಯಾರಿಸಿ, ಮತಗಟ್ಟೆಗಳಲ್ಲಿ ವಿಶೇಷ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಲು ಎಲ್ಲಾ ಬಿಎಲ್ಓ ಅಮೂಲ್ಯ ಕೊಡುಗೆ ನೀಡಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚುನಾವಣಾ ದಿನಾಂಕದವರೆಗೆ ವಿವಿಧ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಲ್ಲಿ ಅರಿವು ಮೂಡಿಸಲು ಯೋಜಿಸಲಾಗಿದೆ. ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲು ಪ್ರೇರೇಪಿಸಬೇಕು. ಶೇಕಡವಾರು ಮತದಾನ ನೂರಕ್ಕೆ ನೂರರಷ್ಟು ಸಾಧಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಅವರು ಮಾತನಾಡಿ, ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಕಾರ್ಯಸೂಚಿಗಳನ್ವಯ ವಿನೂತನ ಕಾರ್ಯ ಚಟುವಟಿಕೆಗಳೊಂದಿಗೆ ಜಿಲ್ಲೆಯ ಮತದಾನ ಪ್ರಮಾಣವನ್ನು ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು. ಸಂಡೂರು ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಷಡಕ್ಷರಯ್ಯ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ವಿಶೇಷ ಕಾರ್ಯ ಚಟುವಟಿಕೆಗಳೊಂದಿಗೆ ಮತದಾನ ಜಾಗೃತಿ ಮೂಡಿಸಿದಂತೆ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿಯೂ ಸಹ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಸರ್ವರು ವಿಶೇಷವಾಗಿ ಕಾಳಜಿ ವಹಿಸಬೇಕು ಎಂದು ಕೋರಿದರು. ತಹಶೀಲ್ದಾರ್ ಅನಿಲ್ ಕುಮಾರ್ ಅವರು ಮಾತನಾಡಿ, ಯಾವೊಬ್ಬ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಂತೆ ಬಿಎಲ್ಓ ಗಳು ಹಾಗೂ ಶಿಕ್ಷಕ- ವಿದ್ಯಾರ್ಥಿಗಳು ವಿಶೇಷ ಜವಾಬ್ದಾರಿಯೊಂದಿಗೆ ಕಾರ್ಯಪ್ರವೃತ್ತರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಐಆರ್ ಅಕ್ಕಿ, ತಾಲೂಕಿನ ಡಿಎಲ್ ಎಂ ಟಿ, ಟಿ ಎಲ್ ಎಂ ಟಿ, ಇಎಲ್ ಸಿಯ ಸದಸ್ಯರು ಮತ್ತು 253 ಮತಗಟ್ಟೆಗಳ ಬಿಎಲ್ಓ ಗಳು, ಸೂಪರ್ವೈಸರ್ ಗಳು ಉಪಸ್ಥಿತರಿದ್ದರು. --------

ಶನಿವಾರ, ಮಾರ್ಚ್ 30, 2024

ಬಳ್ಳಾರಿಯಲ್ಲಿ ಪ್ರಖರ ಬಿಸಿಲು: ಅನಾವಶ್ಯಕ ಹೊರಗಡೆ ತಿರುಗಾಡದಿರಿ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಪ್ರಸ್ತುತ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಮಧ್ಯಾಹ್ನ 01 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಪ್ರಖರವಾದ ಬಿಸಿಲು ಕಂಡುಬರುತ್ತಿರುವ ಹಿನ್ನಲೆಯಲ್ಲಿ ತಾಯಂದಿರು, ವಯೋವೃದ್ದರು ಮತ್ತು ಚಿಕ್ಕ ಮಕ್ಕಳು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ, ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ವಿನಂತಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅಥವಾ ಮನೆಯಿಂದ ಹೊರಗಡೆ ಬರಬೇಕಾದ ಅನಿರ್ವಾಯತೆ ಇದ್ದಾಗ ನೀರಿನ ಬಾಟೆಲ್ ಹಾಗೂ ಛತ್ರಿ ಮತ್ತು ಮಕ್ಕಳಿಗೆ ಆದಷ್ಟು ತಲೆಯ ಮೇಲೆ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಹಾಕುವುದಕ್ಕೆ ಆದ್ಯತೆ ನೀಡಬೇಕು. ಆದಷ್ಟು ನೆರಳಿನಲ್ಲಿ ಇರುವಂತೆ ಗಮನ ಹರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ಇವುಗಳನ್ನು ಅನುಸರಿಸಿ:* *ಹೆಚ್ಚು ನೀರು ಕುಡಿಯುವುದು:* ಬಾಯಾರಿಕೆ ಇಲ್ಲದಿದರೂ ಸಹ ಹೆಚ್ಚು ನೀರನ್ನು ಆಗಾಗ ಕುಡಿಯಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿದೆ. ಪ್ರಯಾಣ ಮಾಡುವ ಸಮಯದಲ್ಲಿ ಸಹ ಕುಡಿಯುವ ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ. ಓಆರ್‍ಎಸ್ ಜೀವಜಲವನ್ನು ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆ ಹಣ್ಣಿನÀ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‍ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮವಾಗಿದೆ. ಪ್ರಸ್ತುತ ಋತುಮಾನದ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಕಿತ್ತಳೆ, ದ್ರಾಕ್ಷಿ ಅನಾನಸ್ ಹಾಗೂ ಸೌತೆಕಾಯಿ, ಎಳೆನೀರು ಕಾಯಿ ಹೆಚ್ಚು ಸೇವಿಸಬೇಕು. ತಿಳಿ ಬಿಳಿ ಬಣ್ಣದ ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ನಡೆಯುವಾಗ ಪಾದರಕ್ಷೆ, ಚಪ್ಪಲಿ ತಪ್ಪದೆ ಧರಿಸಬೇಕು. *ಇವುಗಳನ್ನು ಮಾಡಬಾರದು:* ಬಿಸಿಲಿನಲ್ಲಿ ಆದಷ್ಟು ಹೊರಹೊಗುವುದನ್ನು ತಪ್ಪಿಸಿ. ಮಧ್ಯಾಹ್ನದ ಸಂದರ್ಭದಲ್ಲಿ ಶ್ರಮದಾಯಕ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಚಪ್ಪಲಿ ಧರಿಸದೆ ಹೊರಹೋಗಬಾರದು. ಮಧ್ಯಪಾನ, ಟೀ, ಕಾಫಿ, ಹೆಚ್ಚು ಸಕ್ಕರೆ ಅಂಶವುಳ್ಳ ಪದಾರ್ಥಗಳನ್ನು ಸೇವಿಸಬೇಡಿ ಇವುಗಳ ಅತಿಯಾದ ಸೇವನೆಯಿಂದ ದೇಹ ನಿರ್ಜಲೀಕರಣಗೊಳ್ಳಬಹುದು ಅಥವಾ ಹೊಟ್ಟೆ ನೋವು ಕಂಡುಬರಬಹುದು. ಗರ್ಭಿಣಿಯರು ಆರೋಗ್ಯ ಸಮಸ್ಯೆಯಿಂದ ಬಳಲುವವರು ಮತ್ತು ನಿಗಧಿತ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವವರು ವೈದ್ಯರ ಸಲಹೆ ಮೇರೆಗೆ ಮನೆಯ ಹೊರಗಡೆ ಕೆಲಸ ಮಾಡಲು ಆದ್ಯತೆ ನೀಡಿ. ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧೀಕರಿಸದೇ ಇರುವ ಅಥವಾ ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬೇಡಿ. ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮತ್ತು ಕತ್ತಿರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು. *ಸಾಮಾನ್ಯ ಅಪಾಯದ ಚಿಹ್ನೆಗಳು:* ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಚರ್ಮವು ಬಿಸಿ ಹಾಗೂ ಕೆಂಪಾದ ಒಣಚರ್ಮ, ಆತಂಕ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಆಲಸ್ಯ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಕಂಡುಬರುತ್ತವೆ. ರಾಷ್ಟ್ರೀಯ ಹವಮಾನ ಬದಲಾವಣೆ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಡಾ.ಅಬ್ದುಲ್ಲಾ ರವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೇ ಪ್ರತಿ ದಿನ ದಿನ ಪತ್ರಿಕೆಗಳು, ರೇಡಿಯೋ, ದೂರದರ್ಶನ, ಮತ್ತು ಜಿಲ್ಲಾ ವಿಪತ್ತು ಪ್ರಾಧಿಕಾರದ ಮೂಲಕ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಡಿಹೆಚ್‍ಓ ಕೋರಿದ್ದಾರೆ. ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೇಸಿಗೆಯಲ್ಲಿ ಬರಬಹುದಾದ ರೋಗಗಳ ಆರೈಕೆಗಾಗಿ, ಓಆರ್‍ಎಸ್, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳುವಂತೆ ಹಾಗೂ ಆರೋಗ್ಯಾಧಿಕಾರಿಗಳು ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಿಯಮಿತವಾಗಿ ಮಾಡುವಂತೆ ಸೂಚನೆ ನೀಡಲಾಗಿದೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ. -------

“ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತರಿ” ಅಭಿಯಾನ: ದಿನಕೂಲಿ ರೂ.316 ರಿಂದ ರೂ.349 ರ ವರೆಗೆ ಹೆಚ್ಚಳ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ತಾಲೂಕಿನಲ್ಲಿ 25 ಗ್ರಾಮ ಪಂಚಾಯತಿಗಳಲ್ಲಿ 10 ದಿನಗಳ ಕಾಲ “ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತರಿ” ಅಭಿಯಾನ ನಡೆಸಲಾಗಿದ್ದು, ಬೇಡಿಕೆಯನುಸಾರ ಕೂಲಿಕಾರರಿಗೆ 2024-25 ನೇ ಸಾಲಿಗೆ ದಿನಕ್ಕೆ ರೂ.316 ರಿಂದ ರೂ.349 ರ ವರೆಗೆ ದಿನಕೂಲಿ ಹೆಚ್ಚಿಸಲಾಗಿದೆ ಎಂದು ಬಳ್ಳಾರಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ತಾಲ್ಲೂಕಿನ ಸಹಾಯಕ ನಿರ್ದೇಶಕರು (ಗ್ರಾಉ), ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು ಮತ್ತು ತಾಲೂಕು ಎಂಐಎಸ್ ಸಂಯೋಜಕರು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮೇಟಿಗಳ ಸಭೆ ಮಾಡಿ ಮೇಟಿಗಳ ಕರ್ತವ್ಯಗಳು, ಜವಾಬ್ದಾರಿಗಳು ಕೂಲಿಕಾರರ ಬೇಡಿಕೆ ಮತ್ತು ಕೆಲಸದ ಸ್ಥಳಗಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ್ದಾರೆ. ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ತಾಲೂಕು ಐಇಸಿ ತಂಡ ಮತ್ತು ಗ್ರಾಮ ಪಂಚಾಯತಿಯ ತಂಡಗಳಿಂದ ಪ್ರತಿ ಕುಟುಂಬಗಳನ್ನು ಸಂಪರ್ಕಿಸಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ಮಾನವ ದಿನಗಳ ಸೃಜನೆಗೆ ಬೇಕಾಗುವಷ್ಟು ಕೂಲಿಕಾರರಿಂದ ಮತ್ತು ಮೇಟಿಗಳಿಂದ ನಿಗದಿತ ನಮೂನೆಯಲ್ಲಿ ಗ್ರಾಮ ಪಂಚಾಯತಿಗಳಿಂದ 12450 ಕೂಲಿಕಾರ್ಮಿಕರಿಂದ ಕೆಲಸಕ್ಕಾಗಿ ಬೇಡಿಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಕೂಲಿಕಾರರು ಸಲ್ಲಿಸಿದ ಬೇಡಿಕೆಗೆ ಅನುಸಾರ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿಗಳನ್ನು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಏಪ್ರೀಲ್ 1 ರಿಂದ ಮೇ ಅಂತ್ಯದವರೆಗೆ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಕನಿಷ್ಟ 500 ರಿಂದ 13200 ಕೂಲಿಕಾರರಿಗೆ ಕೆಲಸ ನೀಡಲು ಎನ್‍ಎಂಆರ್‍ಗಳನ್ನು ರೂಪಿಸಲಾಗಿದೆ. ಸಮುದಾಯಿತ ಕಾಮಗಾರಿಗಳಾದ ಕೆರೆ, ಕಾಲುವೆ, ನಾಲಾ ಮತ್ತು ಚೆಕ್‍ಡ್ಯಾಂ ಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತದೆ. ವೈಯಕ್ತಿಕ ಕಾಮಗಾರಿಗಳಾದ ಬದು, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳು, ದನದ ಕೊಟ್ಟಿಗೆ ಮತ್ತು ಕುರಿ ಕೊಟ್ಟಿಗೆಗಳನ್ನು ಮಾಡಿಕೊಳ್ಳಬಹುದಾಗಿದೆ. ವಿಶೇಷ ಚೇತರಿಗೂ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ನಿರಂತರವಾಗಿ ದುಡಿಯುವ ಕೈಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನೀಡುವಂತೆ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. -------

ಕಂಪ್ಲಿ ಕೋಟೆ ಚೆಕ್‍ಪೋಸ್ಟ್ ನಲ್ಲಿ 8.23 ಲಕ್ಷ ನಗದು ವಶ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಶುಕ್ರವಾರದಂದು ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂ.8,23,440 ನಗದು ಹಣವನ್ನು 91-ಕಂಪ್ಲಿ ಕ್ಷೇತ್ರ ವ್ಯಾಪ್ತಿಯ ಕೋಟೆ ಚೆಕ್‍ಪೋಸ್ಟ್ ಬಳಿ ಎಸ್‍ಎಸ್‍ಟಿ ತಂಡದ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಅಬಕಾರಿ ಪೆÇಲೀಸ್ ಅಧಿಕಾರಿಗಳಿಂದ 25.78 ಲೀಟರ್ (ರೂ.6331 ಮೌಲ್ಯ) ಮದ್ಯ ಮತ್ತು ಪೆÇಲೀಸ್ ಇಲಾಖೆ ಅಧಿಕಾರಿಗಳಿಂದ 12.15 ಲೀಟರ್ (ರೂ.6513 ಮೌಲ್ಯ) ಮದ್ಯ ಸೇರಿದಂತೆ ಒಟ್ಟು 37.96 ಲೀಟರ್ ಮದ್ಯ (ರೂ.12,844 ಮೌಲ್ಯ) ವಶಪಡಿಸಿಕೊಳ್ಳಲಾಗಿದೆ. ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನಧೀಕೃತ 405 ಮಿಕ್ಸರ್ ಗ್ರೈಂಡರ್ಸ್ (ಅಂದಾಜು ರೂ.5,25,690 ಮೌಲ್ಯ) ಮತ್ತು ಒಂದು ಲಾರಿ ವಾಹನ ಜಪ್ತಿ ಮಾಡಲಾಗಿದ್ದು, ಒಟ್ಟು 08 ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಾದ್ಯಂತ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈಗಾಗಲೇ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅವುಗಳು ಕಾರ್ಯಪ್ರವೃತ್ತವಾಗಿದೆ. 16 ಫ್ಲೈಯಿಂಗ್ ಸÁ್ಕ್ವ್ಯಡ್, 24 ಎಸ್‍ಎಸ್‍ಟಿತಂಡ ಮತ್ತು 7 ಅಬಕಾರಿ ತಂಡ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. -------

ಕಡಿಮೆ ಮತದಾನವಾದ ಸ್ಥಳಗಳಲ್ಲಿ ಮತದಾನ ಜಾಗೃತಿ ಮೂಡಿಸಿ: ಶಿವರಾಜ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಕಂಪ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಡಿಮೆ ಮತದಾನಗೊಂಡ ಸ್ಥಳಗಳನ್ನು ಗುರುತಿಸಿ, ಅಲ್ಲಿ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕಂಪ್ಲಿ ತಾಲ್ಲೂಕು ಸ್ವೀಪ್ ಅಧ್ಯಕ್ಷರು ಹಾಗೂ ತಹಶೀಲ್ದಾರ ಶಿವರಾಜ ಅವರು ಬಿಎಲ್‍ಓ, ಮತಗಟ್ಟೆ ಮೇಲ್ವಿಚಾರಕರು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಿದರು. 09-ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಶನಿವಾರ ಕಂಪ್ಲಿ ತಾಪಂ ಸಭಾಂಗಣದಲ್ಲಿ ಬಿಎಲ್‍ಓ, ಮತಗಟ್ಟೆ ಮೇಲ್ವಿಚಾರಕರು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಚಟುವಟಿಕೆಗಳನ್ನು ಬೂತ್ ಮಟ್ಟದಿಂದ ಚುರುಕುಗೊಳಿಸುವಂತೆ ತಿಳಿಸಿದರು. ತಾಲ್ಲೂಕಿನಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಮತದಾರರ ಜಾಗೃತಿ ಕುರಿತಂತೆ ತೀವ್ರತರವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಭವಿಷ್ಯದ ಮತದಾರರಿಗೆ ಹಾಗೂ ಹೊಸ ಮತದಾರರಿಗೆ ಅರಿವು ಮೂಡಿಸಲು ಸೂಚನೆ ನೀಡಿದರು. ಮತದಾನ ಪ್ರಕ್ರಿಯೆಯಲ್ಲಿ ವಿಶೇಷ ಚೇತನರು, 85 ವರ್ಷಕ್ಕೂ ಮೇಲ್ಪಟ್ಟ ವಯಸ್ಕರೂ ಸೇರಿದಂತೆ ಪ್ರತಿಯೊಬ್ಬರೂ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು. ಪಾರದರ್ಶಕ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಪ್ರಕ್ರಿಯೆ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಿಕೆ ಕುರಿತಂತೆ ಸ್ಥಳೀಯ ಗ್ರಾಮೀಣ ಹಾಗೂ ನಗರ ಸಂಸ್ಥೆಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಪ್ರತ್ಯೇಕವಾಗಿ ಕ್ರಿಯಾಯೋಜನೆಗಳನ್ನು ತಯಾರಿಸಿಕೊಂಡು ಮತದಾರರ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದರು. ತಾಲ್ಲೂಕು ಮಟ್ಟದ ಸ್ವೀಪ್ ಸಮಿತಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಮತದಾರರ ಪೂರ್ಣ ಪಟ್ಟಿಯನ್ನು ಹೊಂದಿರಬೇಕು. ಕಳೆದ ಚುನಾವಣೆಗಳಲ್ಲಿ ಮತದಾನ ಕಡಿಮೆಯಾಗಿರುವ ಬೂತ್‍ಗಳ ಮಾಹಿತಿಯನ್ನು ಹೊಂದಿರಬೇಕು. ವಿಶೇಷಚೇತನ ಮತದಾರರು, ಮಹಿಳಾ ಮತದಾರರು, ಲೈಂಗಿಕ ಅಲ್ಪಸಂಖ್ಯಾತ ಮತದಾರರು ಸೇರಿದಂತೆ 85 ವರ್ಷ ಮೇಲ್ಪಟ್ಟ ವೃದ್ಧ ಮತದಾರರ ವಿವರಗಳನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. ಈ ವೇಳೆ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ.ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಮಲ್ಲನಗೌಡ ಸೇರಿದಂತೆ ಬೂತ್ ಮಟ್ಟದ ಅಧಿಕಾರಿಗಳು, ಮತಗಟ್ಟೆ ಮೇಲ್ವಿಚಾರಕರು ಹಾಗೂ ಸೆಕ್ಟರ್ ಅಧಿಕಾರಿಗಳು, ಇನ್ನೀತರರು ಉಪಸ್ಥಿತರಿದ್ದರು. ---------

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ: ವಿಜ್ಞಾನ ವಿಷಯ ಪರೀಕ್ಷೆಗೆ 357 ವಿದ್ಯಾರ್ಥಿಗಳು ಗೈರು

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಮೂರನೇ ದಿನದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯು ಯಶಸ್ವಿಯಾಗಿ ನಡೆಯಿತು. ಶನಿವಾರದಂದು ನಡೆದ ವಿಜ್ಞಾನ ವಿಷಯ ಪರೀಕ್ಷೆಗೆ ಒಟ್ಟು 21,700 ವಿದ್ಯಾರ್ಥಿಗಳು ಹಾಜರಾಗಿದ್ದು, 357 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ವಿಜ್ಞಾನ ವಿಷಯ ಪರೀಕ್ಷೆಗೆ ಹೊಸದಾಗಿ 20,679 ವಿದ್ಯಾರ್ಥಿಗಳು, 1378 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22,446 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಬಳ್ಳಾರಿ ಪೂರ್ವ ವಲಯ 128, ಸಂಡೂರು 49, ಸಿರುಗುಪ್ಪ 67, ಬಳ್ಳಾರಿ ಪಶ್ಚಿಮ ವಲಯ 113 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 357 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಆಡಳಿತ) ಉಮಾದೇವಿ ಅವರು ತಿಳಿಸಿದ್ದಾರೆ. ---------

ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಬಸ್ ಏ.01 ರಿಂದ 11 ರ ವರೆಗೆ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟೆ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಯುಗಾದಿ ಹಬ್ಬದಂದು ಜರುಗಲಿರುವ ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಸ್ವಾಮಿಯ ವಿಶೇಷ ದರ್ಶನಕ್ಕಾಗಿ ತೆರಳುತ್ತಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಏ.01 ರಿಂದ 11 ರ ವರೆಗೆ ವಿಶೇಷ ಸಾರಿಗೆ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಳ್ಳಾರಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ-1ನೇ ಘಟಕ ವ್ಯವಸ್ಥಾಪಕರ ಮೊ.7760992163, ಬಳ್ಳಾರಿ-2ನೇ ಘಟಕ ವ್ಯವಸ್ಥಾಪಕರ ಮೊ.7760992164, ಸಿರುಗುಪ್ಪ ಘಟಕ ವ್ಯವಸ್ಥಾಪಕರ ಮೊ.7760992165, ಕುರುಗೋಡು ಘಟಕ ವ್ಯವಸ್ಥಾಪಕರ ಮೊ.9606483671, ಸಂಡೂರು ಘಟಕ ವ್ಯವಸ್ಥಾಪಕರ ಮೊ.7760992309ಗೆ ಸಂಪರ್ಕಿಸಬಹುದು. ಈ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಏ.2 ರಂದು ಪೊಲೀಸ್ ಧ್ವಜ ದಿನಾಚರಣೆ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಏ.2 ರಂದು ಬೆಳಗ್ಗೆ 8 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಶಸ್ತ್ರ ಸಹಾಯಕ ನಿವೃತ್ತ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹೆಚ್.ಎ.ಎಂ.ಚನ್ನಬಸಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜೀತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಪಿ.ರವಿಕುಮಾರ್, ಎಸ್.ನವೀನ್‍ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿರುವರು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. --------

ಅಕ್ರಮ ಮದ್ಯ ಜಪ್ತಿ: 03 ಪ್ರಕರಣ ದಾಖಲು

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಹೊಂದುವಿಕೆ ಮತ್ತು ಸಾಗಾಣಿಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 03 ಪ್ರತ್ಯೇಕ ಪ್ರಕರಣಗಳನ್ನು ಶುಕ್ರವಾರ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿದ್ದಾರೆ. ಬಳ್ಳಾರಿ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿನ ಟೋಲ್ ಗೇಟ್ ಹತ್ತಿರ ರಸ್ತೆಗಾವಲು ವೇಳೆ ಕಪ್ಪು ಬಣ್ಣದ ಹೊಂಡಾ ಆಕ್ಟಿವಾ ವಾಹನ ದ್ವಿ ಚಕ್ರ ವಾಹನದಲ್ಲಿ 03 ಲೀಟರ್ (ಅಂದಾಜು ಮೌಲ್ಯ ರೂ.30,650) ಶೇಂದಿಯನ್ನು ಮಾರಾಟದ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಸೇಂದಿ ಹಾಗೂ ವಾಹನವನ್ನು ಜಪ್ತುಮಾಡಿ ಪ್ರಕರಣ ದಾಖಲಿಸಲಾಗಿದೆ. ಕಂಪ್ಲಿ ಪಟ್ಟಣದ ಕಂಪ್ಲಿ-ಸಣಾಪುರ ರಸ್ತೆಯ ಜೋಡು ಕಾಲುವೆ ಬಳಿ ರಸ್ತೆಗಾವಲು ಮಾಡುತ್ತಿದ್ದ ಸಮಯದಲ್ಲಿ ಟಿವಿಎಸ್ ಎಕ್ಸ್‍ಎಲ್ ಸೂಪರ್ ಹೆವ್ಹಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ 6.480 ಲೀ. (ಅಂದಾಜು ಮೌಲ್ಯ ರೂ.12,881) ಮದ್ಯವನ್ನು ಸಾಗಾಣಿಕೆಯನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ, ಪ್ರಕರಣ ದಾಖಲಿಸಲಾಗಿದೆ. ಸ್ವಾಮಿಹಳ್ಳಿಯಿಂದ ತೊಣಸಿಗೇರೆಗೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಸಮಯದಲ್ಲಿ ಟಿವಿಎಸ್ ಕಂಪನಿಯ ಎಕ್ಸ್‍ಎಲ್ 100 ಹೆವಿಡ್ಯೂಟಿ ದ್ವಿ ಚಕ್ರ ವಾಹನದಲ್ಲಿ 6.300 ಲೀ. (ಅಂದಾಜು ಮೌಲ್ಯ ರೂ.32800) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಯುವಕ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟಿ.ಮೌನೇಶ ತಂದೆ ತುಪ್ಪದ ತಾಯಪ್ಪ ಎನ್ನುವ 19 ವರ್ಷದ ಯುವಕ ಸಿಂಧಿಗೇರಿ ಜಾತ್ರೆಗೆ ಹೋಗಿಬರುತ್ತೇನೆ ಎಂದು ಹೇಳಿಹೋದವನು ಮನೆಗೆ ಬಾರದೇ ಮಾ.06 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಬಾಲಕನ ಚಹರೆ ಗುರುತು: ಸುಮಾರು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಲಗಡೆ ಕಣ್ಣಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಗೆರೆಯುಳ್ಳ ತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆಯುಳ್ಳ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಎಸ್‍ಪಿ ಅವರ ದೂ.08392-258400, ತೋರಣಗಲ್ಲು ಉಪವಿಭಾಗ ಡಿಎಸ್‍ಪಿ ಮೊ.9480803010, ಕುರುಗೋಡು ಸಿಪಿಐ ಮೊ.9480803039 ಮತ್ತು ಪಿಎಸ್‍ಐ ಮೊ.9480803051 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಶುಕ್ರವಾರ, ಮಾರ್ಚ್ 29, 2024

ಚುನಾವಣೆ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮಾಧ್ಯಮಗಳ ಭಾಗವಹಿಸುವಿಕೆ ಬಹುಮುಖ್ಯ ಪಾತ್ರವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು. ಅವರು, ಇಂದು ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ (ಹಳೆಯ) ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಕಾರ್ಯ ವಿಧಾನಗಳು (ಎಂಸಿಎಂಸಿ) ಹಾಗೂ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಕುರಿತಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಈಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಮಾಧ್ಯಮಗಳು ಮತದಾರರಿಗೆ ಚುನಾವಣೆಯ ಕುರಿತು ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳು ವಸ್ತುನಿಷ್ಠ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಟಿವಿ, ಕೇಬಲ್, ಪತ್ರಿಕೆಗಳಲ್ಲಿ ಭಿತ್ತರಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿ (ಎಂಸಿಎಂಸಿ) ಯಿಂದ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳ ಮೇಲೂ ಎಂಸಿಎಂಸಿ ಸಮಿತಿಯು ನಿಗಾವಹಿಸಿದ್ದು, ಇವುಗಳಿಗೆ ಸಹ ಅನುಮತಿ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮವನ್ನು ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಚುನಾವಣೆಯನ್ನು ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಪರಿಮಿತಿಯಲ್ಲಿ ನಡೆಸುವಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ಸಹ ಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ನೀಡಬೇಕು ಅವರು ಕೋರಿದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಮಾತನಾಡಿ, ಚುನಾವಣೆ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಮುದ್ರಣ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಗೊಂಡಿದ್ದಲ್ಲಿ ಅದು ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಅನುಮತಿ ಇದೆಯೇ ಎಂಬುದನ್ನು ವಿಚಾರಣೆ ನಡೆಸಲಾಗುತ್ತದೆ. ಇಲ್ಲದಿದ್ದರೆ, ಆ ಮಾಧ್ಯಮದ ಮೇಲೆ ಐಪಿಸಿ ಸೆಕ್ಷನ್ 171ಹೆಚ್ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಬಿ.ವಿ ಅವರು ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಕಾರ್ಯ ವಿಧಾನಗಳು (ಎಂಸಿಎಂಸಿ) ಹಾಗೂ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಕುರಿತಾಗಿ ಕಾರ್ಯಗಾರದಲ್ಲಿ ವಿಶ್ಲೇಷಿಸಿ ಮಾತನಾಡಿ, ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿಯಲ್ಲಿ (ಎಂಸಿಎಂಸಿ) ಟಿವಿ, ಚಾನೆಲ್, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತನ್ನು ಪ್ರಮಾಣಿಸಿ ಪ್ರಸಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು. ಕಾಸಿಗಾಗಿ ಸುದ್ದಿ (Paid News) ಮೇಲೂ ಎಂಸಿಎಂಸಿ ಸಮಿತಿಯು ನಿಗಾವಹಿಸಿದ್ದು, ಇವು ವರದಿಯಾದರೆ ಜಿಲ್ಲಾ ಚುನಾವಣಾಧಿಕಾರಿಗಳು ಸಂಬಂಧಿಸಿದ ಅಭ್ಯರ್ಥಿಗಳಿಗೆ ನೋಟೀಸ್ ಜಾರಿ ಮಾಡುತ್ತಾರೆ ಎಂದು ತಿಳಿಸಿದರು. ಚುನಾವಣೆಗೆ ಮುದ್ರಣಗೊಳ್ಳುವ ಕರಪತ್ರ, ಕಾಸಿಗಾಗಿ ಸುದ್ದಿ, ಸುಳ್ಳುಸುದ್ದಿ, ಜಾತಿ ಕೋಮುವಾದ ಪ್ರಚೋದಿಸುವ ಇತ್ಯಾದಿ ಸುದ್ದಿಗಳ ಮೇಲೆ ಎಂಸಿಎಂಸಿ ಸಮಿತಿಯು ಹದ್ದಿನ ಕಣ್ಣಿಟ್ಟಿದೆ. ಇದನ್ನು ಹಬ್ಬಿಸುವುದು ಕೂಡ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು. --------

ಗುರುವಾರ, ಮಾರ್ಚ್ 28, 2024

ಮತದಾನ ಪ್ರಮಾಣ ಹೆಚ್ಚಿಸಲು ಮನೆ ಸಮೀಕ್ಷೆ ನಡೆಸಿ: ಸ್ವೀಪ್ ನೋಡೆಲ್ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಕಳೆದ ಬಾರಿ 91-ಕಂಪ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ, ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮನೆ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಸೂಚನೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತ ಕುರುಗೋಡು, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಇಂದು ಕುರುಗೋಡು ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಅಂಗವಾಗಿ ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವ ಕುರಿತು 91-ಕಂಪ್ಲಿ ವಿಧಾನಸಭೆ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ಜಾಗೃತಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಡಿಮೆ ಮತದಾನವಾಗಲು ಕಾರಣವಾಗಿರುವ ಅಂಶಗಳನ್ನು ಕಂಡುಕೊಂಡು ಪಟ್ಟಿ ಮಾಡಬೇಕು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಶೇಕಡವಾರು ಮತದಾನ ಹೆಚ್ಚಿಸಲು ಶ್ರಮವಹಿಸುವಂತೆ ತಿಳಿಸಿದರು. ಗ್ರಾಮ ಪಂಚಾಯತ್‍ವಾರು ಗುಳೆ ಹೋದವರ ಕುರಿತು ಮಾಹಿತಿ ಸಂಗ್ರಹಿಸಿ, ಅವರಿಗೆ ಕರೆಮಾಡಿ, ನರೇಗಾ ಯೋಜನೆಯಡಿ ನಿಮಗೆ ನಿಮ್ಮ ಊರಿನಲ್ಲೇ ಕೆಲಸ ಕೊಡಲಾಗುವುದು ಎಂದು ತಿಳಿಸಬೇಕು. ನರೇಗಾ ಯೋಜನೆಯ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದು ತಿಳಿಸಿದರು. ಕೆಲಸ ಮಾಡುವ ಸಮಯದಲ್ಲಿ 06 ತಿಂಗಳಿನಿಂದ 03 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭ ಮಾಡಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಲು ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ತಹಶೀಲ್ದಾರ ರೇಣುಕಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲಾ ಸೇರಿದಂತೆ ಕುರುಗೋಡು, ಕಂಪ್ಲಿ ಹಾಗೂ ವಿಧಾನಸಭಾ ವ್ಯಾಪ್ತಿಯ ಬಿಎಲ್‍ಓ, ಸೆಕ್ಟರ್ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ---------

ನೀರಿನ ಅಭಾವದಿಂದ ಸಿರುಗುಪ್ಪ ನಗರದಲ್ಲಿ 8 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಸಿರುಗುಪ್ಪ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು 8 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುವುದು ಎಂದು ಸಿರುಗುಪ್ಪ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸಮಪರ್ಕವಾಗಿ ಮಳೆಯಾಗದೆ ಬರಗಾಲ ಉದ್ಭವಿಸಿರುವುದರಿಂದ, ತುಂಗಭದ್ರಾ ನದಿಯಲ್ಲಿ ನೀರು ಬತ್ತಿ ಹೋಗಿರುತ್ತದೆ. ಸಿರುಗುಪ್ಪ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕುಡಿಯುವ ನೀರಿನ ಕೆರೆಯಲ್ಲಿಯೂ ನೀರಿನ ಸಂಗ್ರಹಣೆ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಸಿರುಗುಪ್ಪ ನಗರಕ್ಕೆ ಭೀಕರ ಕುಡಿಯುವ ನೀರಿನ ಅಭಾವ ಉಂಟಾಗುವ ಸಂಭವವಿರುತ್ತದೆ. ಹೀಗಾಗಿ ಇದಕ್ಕೂ ಮುನ್ನ ಸಿರುಗುಪ್ಪ ನಗರ ವ್ಯಾಪ್ತಿಯಲ್ಲಿ ಕೆರೆಯಲ್ಲಿರುವ ನೀರನ್ನು 5 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತಿತ್ತು. ಬರುವ ಏಪ್ರೀಲ್ 02 ರಿಂದ ಕೆರೆಯ ನೀರನ್ನು 5 ದಿನಗಳ ಬದಲಾಗಿ 8 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತದೆ. ಮುಂದೆ ಎದುರಾಗಬಹುದಾದ ಭೀಕರ ಕುಡಿಯುವ ನೀರಿನ ಅಭಾವವನ್ನು ನೀಗಿಸುವ ಹಿತದೃಷ್ಟಿಯಿಂದ ನಗರಸಭೆಯು ಈ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ 63ನೇ ಪದವಿ ಪ್ರದಾನ ಸಮಾರಂಭ ವೈದ್ಯಕೀಯ ಪದವೀಧರರು ಉತ್ತಮ ವೈದ್ಯಕೀಯ ಸೇವೆ ನೀಡಿ: ಡಾ.ಚಂದ್ರಮೋಹನ್

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ವೈದ್ಯಕೀಯ ಪದವಿ ಪೂರ್ಣಗೊಳಿಸಿದ ಪಧವೀದರರು ಸಮಾಜದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದು ತಮಿಳುನಾಡು ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಚಂದ್ರಮೋಹನ್.ಬಿ ಅವರು ಹೇಳಿದರು. ಇಲ್ಲಿಯ ವಿಮ್ಸ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 63ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿಯಲ್ಲಿ ತೊಡಗುವವರು ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತವಾಗದೇ, ಬಾಹ್ಯ ಪ್ರಪಂಚವನ್ನು ಉತ್ಸುಕದಿಂದ ಅನ್ವೇಷಿಸುವ ಕಾರ್ಯ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ವೈದ್ಯಕೀಯ ಪದವಿ ಪೂರ್ಣಗೊಳಿಸಿದವರು ನೀವು ಎಷ್ಟು ದೂರ ಬಂದಿದ್ದೀರಿ ಎಂಬುದರ ಬಗ್ಗೆ ಹೆಮ್ಮೆಪಡಬೇಕು ಮತ್ತು ಅದೇರೀತಿ ಎಷ್ಟು ಎತ್ತರ ಬೆಳೆಯಬಹುದು ಎಂಬುದರಲ್ಲಿ ನಂಬಿಕೆ ಇಟ್ಟು, ಜನಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ನೀಡುವುದರ ಮೂಲಕ ತಮ್ಮ ಕರ್ತವ್ಯವನ್ನು ಆನಂದಿಸಬೇಕು ಎಂದು ಕಿವಿಮಾತು ಹೇಳಿದರು. ವೈದ್ಯಕೀಯ ವಿದ್ಯಾರ್ಥಿಗಳು ಹೃದಯದಲ್ಲಿ ಧೈರ್ಯ, ಮನಸ್ಸಿನಲ್ಲಿ ನಮ್ರತೆ ಮತ್ತು ಬದಲಾವಣೆ ರೂಪಿಸುವ ಅಚಲ ಸಂಕಲ್ಪದೊಂದಿಗೆ ಮುಂದುವರಿಯಿರಿ ಎಂದು ಕರೆ ನೀಡಿದರು. ಜಿಲ್ಲಾಧಿಕಾರಿ ಹಾಗೂ ವಿಮ್ಸ್ ಆಡಳಿತ ಮಂಡಳಿಯ ಸದಸ್ಯರಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ವೈದ್ಯರು ರೋಗಿಗಳೊಡನೆ ಉತ್ತಮವಾಗಿ ಸ್ಪಂದಿಸಿ ತಾಳ್ಮೆಯಿಂದ ವರ್ತಿಸುವುದು ವೈದ್ಯರ ಆದ್ಯ ಕರ್ತವ್ಯವಾಗಿದ್ದು, ಸಹಕಾರ-ಸಹಾಯ ಮನೋಭಾವನೆ ಗುಣ ವೈದ್ಯರಲ್ಲಿ ಇರಬೇಕು. ಇದರಿಂದ ಜಿಲ್ಲೆಯ ಜನ ಸಾಮಾನ್ಯರು ತಮ್ಮ ಬಗ್ಗೆ ಹೆಮ್ಮೆಪಡಬೇಕು ಎಂದು ಹೇಳಿದರು. ವಿಮ್ಸ್‍ನ ನಿರ್ದೇಶಕ ಹಾಗೂ ಡೀನ್ ಆದ ಡಾ.ಟಿ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆ ಎನ್ನುವುದು ಜೀವನದುದ್ದಕ್ಕೂ ಇದ್ದು, ಇದಕ್ಕೆ ಕೊನೆಯಿಲ್ಲ, ವೈದ್ಯಕೀಯ ವಿದ್ಯಾರ್ಥಿಗಳು ಪ್ರಸ್ತುತವಿರುವ ಜ್ಞಾನಕ್ಕೆ ತಕ್ಕಂತೆ ನವೀಕರಣಗೊಂಡು ಅಭಿವೃದ್ಧಿ ಹೊಂದಬೇಕು ಎಂದು ಕಿವಿ ಮಾತು ಹೇಳಿದರು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆದ ಪದವೀಧರರು ವಿಶ್ವದಾದ್ಯಂತ ಮನ್ನಣೆಗಳಿಸಿದ್ದಾರೆ. ಅವರಂತೆ ತಾವೂ ಕೂಡ ಸಾಧನೆಯ ಮೈಲಿಗಲ್ಲು ತಲುಪಬೇಕು ಎಂದು ಪದವಿ ಪಡೆದ ವೈದ್ಯಕೀಯ ವಿದ್ಯಾರ್ಥಿಗಳನ್ನು ಆಶಿಸಿದರು. ಯು.ಎಸ್.ಎ ನ ವಾಸ್ಕ್ಯುಲರ್ ಶಸ್ತ್ರಚಿಕಿತ್ಸಕ ಡಾ.ಪಿ.ವಿ.ಪತಂಜಲಿ ಶರ್ಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣದ ಕನಸು ಈಗ ನನಸಾಗಿದ್ದು, ನನ್ನ ಎಲ್ಲಾ ಸಾಧನೆಗೆ ವಿಮ್ಸ್ ಸಂಸ್ಥೆಯು ಅಡಿಪಾಯವಾಗಿದೆ ಎಂದರು. ಕಳೆದ ಸಾಲಿನಿಂದ ಡಾ.ಪಿ.ವಿ.ಪತಂಜಲಿ ಶರ್ಮಾ ಅವರ ಪ್ರಾಯೋಜಕತ್ವದಲ್ಲಿ ಬಂಗಾರದ ಪದಕ ಮತ್ತು ಹತ್ತು ಸಾವಿರ ನಗದು ಹಣವನ್ನು ರ್ಯಾಂಕ್ ಪಡೆದ ಮೂರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಲಾಗುತ್ತಿದೆ. ಇದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ 95 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ 55 ಸ್ನಾತಕ ಪದವಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 150 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ವೈದ್ಯಕೀಯ ಮಂಡಳಿಯ ಸದಸ್ಯ ಡಾ.ವೈ.ಸಿ.ಯೋಗಾನಂದ ರೆಡ್ಡಿ, ವಿಮ್ಸ್‍ನ ಪ್ರಭಾರಿ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಆಸ್ಪತ್ರೆಯ ನಿರ್ದೇಶಕ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್ ಸೇರಿದಂತೆ ವಿಮ್ಸ್‍ನ ಹಳೆಯ ವಿದ್ಯಾರ್ಥಿಗಳು, ನಿವೃತ್ತ ಪ್ರಾಂಶುಪಾಲರು, ವೈದ್ಯಕೀಯ ವಿದ್ಯಾರ್ಥಿಗಳು, ಪೋಷಕರು ಮತ್ತು ಇನ್ನಿತರರು ಉಪಸ್ಥಿತರಿದ್ದರು. ---------

ಕುಡಿಯುವ ನೀರಿಗೆ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಮೇವಿನ ಕೊರತೆ ಉಂಟಾದಲ್ಲಿ ಹಾಗೂ ಬೆಳೆ ಹಾನಿ ಪರಿಹಾರದ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರಂಭಿಸಲಾಗಿರುವ ಸಹಾಯವಾಣಿ ಸಂಖ್ಯೆ 1077 ಅಥವಾ 08392-277100 ಗೆ ಕರೆ ಮಾಡಿ ತಿಳಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೋರಿದ್ದಾರೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಳ್ಳಾರಿ ಜಿಲ್ಲೆಯ 5 ತಾಲ್ಲೂಕುಗಳನ್ನು (ಬಳ್ಳಾರಿ, ಸಂಡೂರು, ಸಿರುಗುಪ್ಪ, ಕುರುಗೋಡು ಮತ್ತು ಕಂಪ್ಲಿ) ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಬರದ ತೀವ್ರತೆ ಹೆಚ್ಚಾಗುವ ಸಂಭವದಿರುವುದರಿಂದ ಈ ಸಮಸ್ಯೆಯನ್ನು ಎದುರಿಸಲು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಕೊಳ್ಳಲಾಗಿದ್ದು, ಕುಡಿಯುವ ನೀರು, ಮೇವಿನ ಕೊರತೆಯಾದಲ್ಲಿ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. --------

ಜೆಎಸ್‍ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಸುತ್ತೂರು ಶ್ರೀಕ್ಷೇತ್ರದ ಜೆಎಸ್‍ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದ 2024-25ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಮಾಧ್ಯಮಕ್ಕೆ 1 ರಿಂದ 8ನೇ ತರಗತಿವರೆಗೆ ಮತ್ತು ಇಂಗ್ಲೀಷ್ ಮಾಧ್ಯಮಕ್ಕೆ 1, 5 ಹಾಗೂ 8ನೇ ತರಗತಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಾಲಕ ಹಾಗೂ ಬಾಲಕಿಯರಿಗೆ ಪ್ರವೇಶ ನೀಡಲಾಗುವುದು. ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಖುದ್ದಾಗಿ ಪಡೆಯಬಹುದು ಅಥವಾ www.jssschoolsuttur.org ಹಾಗೂ www.jssonline.org ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ದೂರವಾಣಿಯಲ್ಲಿ ಸಂಪರ್ಕಿಸಿದರೆ ವಾಟ್ಸ್‍ಆಪ್ ಮೂಲಕವೂ ಅರ್ಜಿ ನಮೂನೆಯನ್ನು ಕಳುಹಿಸಿಕೊಡಲಾಗುವುದು. ಅಂಚೆ ಮುಖಾಂತರ ಅರ್ಜಿ ಪಡೆಯಲು ಇಚ್ಛಿಸುವವರು, ವಿದ್ಯಾರ್ಥಿಯು ಪ್ರವೇಶ ಬಯಸುವ ತರಗತಿಯ ವಿವರ ಹಾಗೂ ಸ್ವ-ವಿಳಾಸವುಳ್ಳ 5 ರೂ.ಗಳ ಪೋಸ್ಟಲ್ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದು. ಕ್ಯೂ.ಆರ್. ಕೋಡ್ ಮೂಲಕವು ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಮೇ 15ರ ಒಳಗಾಗಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಹಿಂದಿನ ತರಗತಿಯ ಅಂಕಪಟ್ಟಿ, ಭಾವಚಿತ್ರ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್‍ಕಾರ್ಡ್, ರೇಷನ್‍ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅಂಚೆ ಮುಖಾಂತರ ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.7411486938 ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ದೂ.08221-232054, ಪ್ರೌಢಶಾಲೆಯ ದೂ.08221-232653, ಬಸವೇಶ್ವರ ವಿದ್ಯಾರ್ಥಿನಿಲಯದ ದೂ.08221-232332, ಸಂಯೋಜನಾಧಿಕಾರಿಗಳ ಕಚೇರಿಯ ದೂ.08221-232217 ಗೆ ಸಂಪರ್ಕಿಸಬಹುದು ಎಂದು ಜೆಎಸ್‍ಎಸ್ ಶಾಲೆಯ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ತೋಟಗಾರಿಕೆ ಇಲಾಖೆ: ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತ ಫಲಾನುಭವಿಗಳಿಗೆ 2024-25ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ. *ಯೋಜನೆಗಳು:* ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ: ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಬಾಳೆ, ಅಂಜೂರ, ದಾಳಿಂಬೆ, ನುಗ್ಗೆ, ಪೇರಲ, ಪಪ್ಪಾಯ, ತೆಂಗು, ಡ್ರಾö್ಯಗನ್ ಫ್ರೂಟ್, ನೇರಳೆ, ಸಪೋಟ, ಮಾವು, ಸೀತಾಫಲ, ಹುಣಸೆ, ಕರಿಬೇವು ಮತ್ತು ಗುಲಾಬಿ ಹಾಗೂ ಇತರೆ ಬೆಳೆಗಳಿಗೆ ಮತ್ತು ಬದುಗಳಲ್ಲಿ ತೆಂಗು ಸಸಿ ನಾಟಿ, ಕೃಷಿ ಹೊಂಡ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕಗಳಿಗೆ ಸಹಾಯಧನ ನೀಡಲಾಗುವುದು. ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆ: ಹೊಸ ಪ್ರದೇಶ ವಿಸ್ತರಣೆ, ಕೃಷಿಹೊಂಡ, ಈರುಳ್ಳಿ ಶೇಖರಣ ಘಟಕ, ನೆರಳುಪರದೆ, ಪ್ಯಾಕ್ ಹೌಸ್ ಮತ್ತು ತಳ್ಳುವ ಗಾಡಿ ವಿವಿಧ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ವಿತರಿಸಲಾಗುತ್ತದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ-ಹನಿ ನೀರಾವರಿ ಕಾರ್ಯಕ್ರಮದಡಿ ಸಹಾಯಧನವನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ ಹೊಸದಾಗಿ ಅಳವಡಿಸುವ ಫಲಾನುಭವಿಗಳಿಗೆ ಮಾತ್ರ ಶೇ.75 ರಂತೆ ಹಾಗೂ ಪ.ಜಾತಿ ಮತ್ತು ಪ.ಪಂಗಡ ಫಲಾನುಭವಿಗಳಿಗೆ ಶೇ.90 ರಂತೆ ಸಹಾಯಧನ ವಿತರಿಸಲಾಗುವುದು. ಅಲ್ಪಸಂಖ್ಯಾತರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನ ಮೀಸಲಿರಸಲಾಗಿದೆ. ಆಸಕ್ತ ರೈತರು ಈ ಯೋಜನೆಗಳ ಸಹಾಯಧನ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಿ, ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಜಿಲ್ಲಾಡಳಿತದಿಂದ ಸರಳ ಅಗ್ನಿ ಬನ್ನಿರಾಯ ಜಯಂತಿ ಆಚರಣೆ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು. ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹೊಂಗಿರಣ ಸಭಾಂಗಣದಲ್ಲಿ ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ---------

ಸುಗಮ, ಸುಲಲಿತ ಚುನಾವಣೆಗೆ ಆಯೋಗದಿಂದ ಹಲವು ಆಪ್ | ನಾಮಪತ್ರ ಸಲ್ಲಿಕೆ, ರಾಜಕೀಯ ಪ್ರಚಾರ ಅನುಮತಿಗಾಗಿ ‘ಸುವಿಧಾ’ ಆಪ್ ಸಹಕಾರಿ

ಬಳ್ಳಾರಿ,ಮಾ.28(ಕರ್ನಾಟಕ ವಾರ್ತೆ): ಚುನಾವಣೆಗಳನ್ನು ಸುಗಮ ಮತ್ತು ಸುಲಲಿತವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಲವು ಆಪ್ ಗಳನ್ನು ಸಿದ್ಧಪಡಿಸಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ನಡೆಸಲು ಆಪ್‍ಗಳು ಚುನಾವಣಾ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಮೊಬೈಲ್ ತಂತ್ರಜ್ಞಾನದಿಂದ ಸಾರ್ವಜನಿಕರು ಕೂತಲ್ಲಿಯೇ ತಮ್ಮ ಅಂಗೈಯಲ್ಲಿ ಮತದಾರ ಗುರುತಿನ ಚೀಟಿ ಬಗ್ಗೆ ಇರುವ ಸಂದೇಹ, ಚುನಾವಣೆ ಪ್ರಕ್ರಿಯೆ, ತಮ್ಮ ವ್ಯಾಪ್ತಿಯ ಅಭ್ಯರ್ಥಿಗಳ ಮಾಹಿತಿ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಚುನಾವಣಾ ಆಯೋಗವು ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್‍ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ. ಅದರಲ್ಲಿ ಸುವಿಧಾ ಪೋರ್ಟಲ್ ಒಂದು.... *ಸುವಿಧಾ ಪೆÇೀರ್ಟಲ್:* ಸುವಿಧಾ ಪೆÇೀರ್ಟಲ್ ಮೂಲಕ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಿಗೆ ಆನ್‍ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಮತ್ತು ಅನುಮತಿಗಳನ್ನು ಪಡೆಯಲು ಅಭಿವೃದ್ಧಿ ಪಡಿಸಲಾಗಿದೆ. ನಾಮಪತ್ರಗಳನ್ನು ಭರ್ತಿ ಮಾಡಲು ಅನುಕೂಲವಾಗುವಂತೆ, ಚುನಾವಣಾ ಆಯೋಗವು ನಾಮಪತ್ರ ಮತ್ತು ಅಫಿಡೇವಿಟ್ ಅನ್ನು ಭರ್ತಿ ಮಾಡಲು ಸುವಿಧಾ ಆನ್‍ಲೈನ್ ಪೆÇೀರ್ಟಲ್‍ಅನ್ನು ಪರಿಚಯಿಸಿದೆ. ಅಭ್ಯರ್ಥಿಯು ತನ್ನ ಖಾತೆಯನ್ನು ರಚಿಸಲು https://suvidha.eci.gov.in/ ಗೆ ಭೇಟಿ ನೀಡಬಹುದು. ನಾಮನಿರ್ದೇಶನ ಫಾರ್ಮ್ ಅನ್ನು ಭರ್ತಿ ಮಾಡಿ, ಭದ್ರತಾ ಠೇವಣಿ ಮಾಡಬಹುದು. ಸಮಯದ ಸ್ಲಾಟ್ ಲಭ್ಯತೆಯನ್ನು ಪರಿಶೀಲಿಸಬಹುದು ಮತ್ತು ಚುನಾವಣಾಧಿಕಾರಿಗೆ ಅವರ ಭೇಟಿಯನ್ನು ಸೂಕ್ತವಾಗಿ ಯೋಜಿಸಬಹುದು. ಆನ್‍ಲೈನ್ ಪೋರ್ಟಲ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿದ ನಂತರ, ಅಭ್ಯರ್ಥಿಯು ನಕಲು ಪ್ರತಿ ತೆಗೆದುಕೊಂಡು ಅದನ್ನು ನೋಟರೈಸ್ ಮಾಡಿ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಯನ್ನು ವೈಯಕ್ತಿಕವಾಗಿ ಚುನಾವಣಾಧಿಕಾರಿಗೆ ಸಲ್ಲಿಸಬೇಕಾಗುತ್ತದೆ. ಆನ್‍ಲೈನ್ ನಾಮನಿರ್ದೇಶನ ಸೌಲಭ್ಯವು ಫೈಲಿಂಗ್ ಅನ್ನು ಸುಲಭಗೊಳಿಸಲು ಮತ್ತು ಸರಿಯಾದ ಫೈಲಿಂಗ್ ಅನ್ನು ಸುಲಭಗೊಳಿಸಲು ಐಚ್ಛಿಕ ಸೌಲಭ್ಯವಾಗಿದೆ. ಕಾನೂನಿನಡಿಯಲ್ಲಿ ಸೂಚಿಸಲಾದ ನಿಯಮಿತ ಆಫ್‍ಲೈನ್ ಸಲ್ಲಿಕೆಯೂ ಮುಂದುವರೆಯುತ್ತದೆ. *ಯಾವ್ಯಾವುಗಳಿಗೆ ಅನುಮತಿ ಪಡೆಯಬಹುದು?:* ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಯ ಯಾವುದೇ ಪ್ರತಿನಿಧಿಗಳು ಸುವಿಧಾ ಪೋರ್ಟಲ್ https://suvidha.eci.gov.in/ ಮೂಲಕ ಸಭೆಗಳು, ರ್ಯಾಲಿಗಳು, ಧ್ವನಿವರ್ಧಕಗಳಿಗೆ ಅನುಮತಿ, ತಾತ್ಕಾಲಿಕ ಕಚೇರಿಗಳು ಮತ್ತು ಇತರ ವಿಷಯಗಳ ಅನುಮತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ. *ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 15 ಅರ್ಜಿ ಸಲ್ಲಿಕೆ:* ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಭ್ಯರ್ಥಿಗಳು ಸಭೆ, ಸಮಾವೇಶ ಮತ್ತು ಮತ ಪ್ರಚಾರಕ್ಕೆ ಸಂಬಂಧಿಸಿದಂತೆ ಸುವಿಧಾ ಪೋರ್ಟಲ್ ಮೂಲಕ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 15 ಅರ್ಜಿಗಳು ಸ್ವೀಕೃತಗೊಂಡಿದ್ದು, 13 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ ಮತ್ತು 02 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. *ಧ್ವನಿವರ್ಧಕ ಜೊತೆಗೂಡಿ ಸಭೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:* 91 ಕಂಪ್ಲಿ-1, 92 ಸಿರುಗುಪ್ಪ-4, 94 ಬಳ್ಳಾರಿ ನಗರ-4, 95 ಸಂಡೂರು-1 ಸೇರಿದಂತೆ ಒಟ್ಟು 10. *ಧ್ವನಿವರ್ಧಕ ಹೊರತುಪಡಿಸಿ ಸಭೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:* 95 ಸಂಡೂರು-1. *ತಾತ್ಕಾಲಿಕ ರಾಜಕೀಯ ಪಕ್ಷದ ಸಭೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:* 95 ಸಂಡೂರು-1. *ಧ್ವನಿವರ್ಧಕ ಜೊತೆಗೂಡಿ ಪ್ರಚಾರ ವಾಹನ ಅನುಮತಿಗೆ ಸಲ್ಲಿಕೆಯಾದ ಅರ್ಜಿ:* 93 ಬಳ್ಳಾರಿ ಗ್ರಾಮೀಣ-2. *ಕರಪತ್ರ ಹಂಚುವಿಕೆಗೆ ಅನುಮತಿಗೆ ಸಲ್ಲಿಕೆಯಾದ ಅರ್ಜಿ:* 93 ಬಳ್ಳಾರಿ ಗ್ರಾಮೀಣ-1. ಸಾರ್ವಜನಿಕ ಸಭೆಗಳು, ಸಭೆಗಳಿಗೆ ಅನುಮತಿ ಪಡೆಯಲು ಸುವಿಧಾ ಆಪ್ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದೇರೀತಿಯಾಗಿ ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಥಿತಿಯನ್ನು ಅದೇ ಪೋರ್ಟಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. *ಇತರೆ ಆಪ್‍ಗಳು:* *ಸಿ-ವಿಜಿಲ್ ಆಪ್:* ಈ ಆಪ್ ಸಹಾಯದಿಂದ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಅಕ್ರಮ ನಡೆಯುತ್ತಿದ್ದರೆ ಅದನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಸುಲಭದಲ್ಲಿ ದೂರು ನೀಡಬಹುದು. ಅಭ್ಯರ್ಥಿ ಯಾರನ್ನಾದರೂ ಆಮಿಷ ಒಡ್ಡುತ್ತಿದ್ದರೆ ಅದನ್ನು ಸಹ ಬಹಿರಂಗಪಡಿಸಬಹುದು. ಫೆÇೀಟೋ, ವಿಡಿಯೋ, ಆಡಿಯೋ ಅಪ್‍ಲೋಡ್ ಮಾಡುವ ಮತ್ತು ತಕ್ಷಣ ದೂರು ದಾಖಲಿಸುವ ವ್ಯವಸ್ಥೆ ಇದರಲ್ಲಿದೆ. ಇದು ದೂರು ಸ್ವೀಕರಿಸಿದ 100 ನಿಮಿಷಗಳಲ್ಲಿ ಪ್ರತಿಕ್ರಿಯೆಯನ್ನು ನೀಡುತ್ತದೆ. *ನಿಮ್ಮ ಅಭ್ಯರ್ಥಿಯ ಬಗ್ಗೆ ತಿಳಿಯಲು ಕೆವೈಸಿ ಆಪ್:* ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಲು ಭಾರತೀಯ ಚುನಾವಣಾ ಆಯೋಗ ನಿಮ ಅಭ್ಯರ್ಥಿಯ ಬಗ್ಗೆ ತಿಳಿಯಿರಿ ಕೆವೈಸಿ ಆಪ್ ಜಾರಿಗೊಳಿಸಿದೆ.ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ವಸ್ತುಸ್ಥಿತಿ ಮಾಹಿತಿ ಪಡೆಯಲು ಸಹಕಾರಿಯಾಗಿದ್ದು, ಮತದಾರರನ್ನು ಈ ಆಪ್ ಜಾಗೃತಗೊಳಿಸುತ್ತದೆ. *ವೋಟರ್ ಟರ್ನೌಟ್ ಆಪ್:* ಪ್ರತಿಯೊಂದು ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅಳೆಯುವ ವೋಟರ್ ಟರ್ನೌಟ್ ಆಪ್ ಮೂಲಕ ಚುನಾವಣಾಧಿಕಾರಿ ಮತದಾನದ ಪ್ರಮಾಣವನ್ನು ದಾಖಲಿಸುತ್ತಿದ್ದಂತೆ ಈ ಪೆÇೀರ್ಟಲ್ ಮೂಲಕ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ. ಈ ಆಪ್ ಮೂಲಕ ಪ್ರತಿಯೊಂದು ಕೇತ್ರದಲ್ಲಿ ಮತದಾನ ಪ್ರಮಾಣದ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. *ಸಾಕ್ಷಂ ಆಪ್:* ವಿಶೇಷಚೇತನ ಮತದಾರರು ಈಗ ಸುಲಭವಾಗು ಮತ ಚಲಾಯಿಸಬಹುದು. ಇದಕ್ಕಾಗಿ ಈ ಆಪ್ ಅವರಿಗೆ ಸಹಾಯ ಮಾಡುತ್ತದೆ. ಇದರ ಮೂಲಕ, ವಿಶೇಷಚೇತನ ವ್ಯಕ್ತಿಗಳು ನೋಂದಾಯಿಸಿಕೊಳ್ಳಬಹುದು ಮತ್ತು ತಿದ್ದುಪಡಿಗಳನ್ನು ಮಾಡಬಹುದು. ಈ ಆಪ್ ಮೂಲಕ ವಿಶೇಷಚೇತನರು ತಮ್ಮ ಮನೆಯಲ್ಲಿಯೇ ಕುಳಿತು ಮತದಾನ ಮಾಡುವ ಸೌಲಭ್ಯವನ್ನು ಹೊಂದಬಹುದಾಗಿದೆ. *ವೋಟರ್ ಆಪ್:* ವೋಟರ್ ಆಪ್ ಮೂಲಕ ಮತದಾರರ ಪಟ್ಟಯಲ್ಲಿ ಹೆಸರು, ತಿದ್ದುಪಡಿ ಮಾಡಬಹುದು ಹಾಗೂ ಮತದಾನ ಕೇಂದ್ರಗಳ ವಿವರ ನೋಡಬಹುದು. ಇ-ಎಪಿಕ್ ಕಾರ್ಡ್ ಡೌನ್‍ಲೋಡ್ ಮಾಡಿಕೊಳ್ಳಬಹುದು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬ ಇದ್ದಂತೆ. ಚುನಾವಣೆಗಳನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಚುನಾವಣಾ ಆಯೋಗವು ಹಲವು ಮೊಬೈಲ್ ಆಪ್‍ಗಳನ್ನು ಜಾರಿ ತಂದಿದ್ದು, ಸಾರ್ವಜನಿಕರು ಇವುಗಳನ್ನು ಬಳಸಿಕೊಂಡು ಚುನಾವಣೆ ಪ್ರಕ್ರಿಯೆಯ ಮಾಹಿತಿ ಹೊಂದುವುದರ ಮೂಲಕ ಚುನಾವಣೆ ನಿಸ್ಪಕ್ಷಪಾತವಾಗಿ ನಡೆಸಿ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೋರಿದ್ದಾರೆ. ----------

ಬುಧವಾರ, ಮಾರ್ಚ್ 27, 2024

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ: ಸಮಾಜ ವಿಜ್ಞಾನ ವಿಷಯ ಪರೀಕ್ಷೆಗೆ 274 ವಿದ್ಯಾರ್ಥಿಗಳು ಗೈರು

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಎರಡನೇ ದಿನದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯು ಯಶಸ್ವಿಯಾಗಿ ನಡೆಯಿತು. ಬುಧವಾರದಂದು ನಡೆದ ಸಮಾಜ ವಿಜ್ಞಾನ ವಿಷಯ ಪರೀಕ್ಷೆಗೆ ಒಟ್ಟು 20,986 ವಿದ್ಯಾರ್ಥಿಗಳು ಹಾಜರಾಗಿದ್ದರು. ಜಿಲ್ಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಪರೀಕ್ಷೆಗೆ ಹೊಸದಾಗಿ 20,679 ವಿದ್ಯಾರ್ಥಿಗಳು, 581 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 21,260 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಬಳ್ಳಾರಿ ಪೂರ್ವ ವಲಯ 96, ಸಂಡೂರು 43, ಸಿರುಗುಪ್ಪ 49, ಬಳ್ಳಾರಿ ಪಶ್ಚಿಮ ವಲಯ 86 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 274 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಆಡಳಿತ) ಉಮಾದೇವಿ ಅವರು ತಿಳಿಸಿದ್ದಾರೆ. ---------

ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಏ.01 ರಿಂದ 30 ರವರೆಗೆ (30 ದಿನಗಳ ವರೆಗೆ) ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ನಡೆಯಲಿದ್ದು, ಅಭಿಯಾನದಲ್ಲಿ ರೈತರು ತಮ್ಮ ಜಾನುವಾರು ಮತ್ತು ಸಾಕು ಪ್ರಾಣಿಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ.ವಿನೋದ್ ಕುಮಾರ್ ಅವರು ತಿಳಿಸಿದ್ದಾರೆ. ಸಾಕು ಪ್ರಾಣಿಗಳಾದ ಹಸು, ಎತ್ತು, ಎಮ್ಮೆ, ಹೋರಿ ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾದ ಕಾಲುಬಾಯಿ ಜ್ವರ ರೋಗವು ಅತೀ ಪರಿಣಾಮಕಾರಿಯಾಗಿದ್ದು, ರೋಗದಿಂದ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ರೈತರು ಕಾಲು ಬಾಯಿ ರೋಗದ ಲಸಿಕೆಯನ್ನು ಮೂರು ತಿಂಗಳು ಮೇಲ್ಪಟ್ಟ ಹಾಗೂ ಸೀಳುಗೊರಸುಗಳುಳ್ಳ ಜಾನುವಾರುಗಳಿಗೆ ಹಾಕಿಸಬೇಕು ಎಂದು ತಿಳಿಸಿದ್ದಾರೆ. ರಾಸುಗಳು ಈ ರೋಗದಿಂದ ಮುಕ್ತವಾದರೂ ಸಹ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮಥ್ರ್ಯ ನಷ್ಟ ಮತ್ತು ಹಾಲಿನ ಇಳುವರಿ ಕಡಿಮೆ ಹಾಗೂ ಇತರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ರೋಗ ತಡೆಗಟ್ಟಲು ಜಿಲ್ಲೆಯ ಎಲ್ಲಾ ರೈತ ಬಾಂಧವರು ಕಾಲುಬಾಯಿ ಜ್ವರ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಎಲ್ಲಾ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ---------

ರಂಗಭೂಮಿಯು ಸೃಜನಶೀಲತೆಯ ತಾಣ: ಪ್ರೊ. ನಾಗೇಶ ವಿ ಬೆಟ್ಟಕೋಟೆ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಮನೋರಂಜನೆಗೆ ಹಲವಾರು ಮಾಧ್ಯಮಗಳಿದ್ದರೂ, ಸೃಜನಶೀಲತೆಯನ್ನು ಅರಳಿಸುವ ಪಾತ್ರವನ್ನು ರಂಗಭೂಮಿ ಮಾಡುತ್ತದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ನಾಗೇಶ ವಿ ಬೆಟ್ಟಕೋಟೆ ಅವರು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಪ್ರದರ್ಶನ ಕಲೆ ನಾಟಕ, ಕನ್ನಡ ಮತ್ತು ಇಂಗ್ಲೀಷ್ ಅಧ್ಯಯನ ವಿಭಾಗಗಳು ಜಂಟಿಯಾಗಿ ಬುಧವಾರ ಆಯೋಜಿಸಿದ್ದ ‘ರಂಗಭೂಮಿಯ ಕಾಲಾತೀತ ಅಸ್ತಿತ್ವ’ ಎಂಬ ವಿಷಯದ ಕುರಿತು ಒಂದು ದಿನದÀ ಅಂತರ್ ಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿಯು ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಗಳಿಗೆ ಎಡೆಮಾಡಿಕೊಟ್ಟಿದ್ದು, ರಂಗಭೂಮಿ ಇಂದಿಗೂ ಪ್ರಸ್ತುತವಾಗಿದೆ. ನಮ್ಮ ದೇಶದಲ್ಲಿ ರಂಗಭೂಮಿ ಅಗತ್ಯಕ್ಕೆ ಮಾತ್ರ ಸೀಮಿತವಾಗಿದೆÉ ಎಂದು ವಿಷಾದ ವ್ಯಕ್ತಪಡಿಸಿದರು. ರಂಗಭೂಮಿಯ ಶಿಕ್ಷಣ ಉತ್ತಮವಾಗಿದ್ದರೆ ಕಲಾವಿದರು ಸಮಾಜಕ್ಕೆ ನೈತಿಕ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ. ಉತ್ತಮ ಪ್ರದರ್ಶನವು ಬೇರೆ ಬೇರೆ ಭಾಷೆಗಳಿಗೆ ತಾನಾಗೆಯೇ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತದೆ. ಪ್ರದರ್ಶನ ಕಲೆಗಳೂ ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕು ಎಂದು ಹೇಳಿದರು. ಮಹಾರಾಷ್ಟ್ರದ ಎಸ್‍ಪಿಪಿ ಮಹಾವಿದ್ಯಾಲಯ, ಸಿರ್ಸಲ, ಪಾರ್ಲಿ ವೈಜನಾಥ್‍ದ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ಕನಸೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರಂಗಭೂಮಿಯೂ ಸಮಾಜದಲ್ಲಿ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲುವ ಕೆಲಸ ಮಾಡುತ್ತಾ ಬಂದಿದೆ ಎಂದು ತಿಳಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ.ಶಾಂತನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಟಕ ವಿಭಾಗವು 2018ರಲ್ಲಿ ಆರಂಭವಾಗಿ ಕಡಿಮೆ ಸಮಯದಲ್ಲಿ ತನ್ನದೆ ಆದ ಕಾರ್ಯಚಟುವಟಿಕೆಗಳ ಮುಖಾಂತರ ಗಮನ ಸೆಳೆದಿದೆ. ನಾಟಕ ವಿಭಾಗವು ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿನೆಮಾ, ಧಾರವಾಹಿ, ರಂಗಭೂಮಿಗಳಲ್ಲಿ ಅವಕಾಶಗಳನ್ನು ನೀಡಿದೆ ಎಂದು ಹೇಳಿದರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಎಂ.ಮೇತ್ರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಾದ್ಯಂತ ಆಚರಿಸಲ್ಪಡುವ ದಿನಾಚರಣೆಗಳು ನಮ್ಮ ದೇಶದಲ್ಲಿವೆ. ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಯ ಮಾಡಿಕೊಂಡು ರಂಗಭೂಮಿ ಜೊತೆಗೆ ಸಂಗೀತ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಹೇಳಿದರು. ಜನ ಸಂಘಟನೆಗಳ ಜೊತೆ ಸಂವಾದ ಕಾರ್ಯಕ್ರಮಗಳನ್ನು ನಡೆಸುವುದರಿಂದ ವಿಭಾಗದ ಬೆಳೆವಣಿಗೆಯಾಗುತ್ತದೆ. ವಿದ್ವತ್ ವಲಯದಲ್ಲಿ ಕಲೆಗಳನ್ನು ಪ್ರದರ್ಶನಕ್ಕೆ ಬಳಸುವ ಕಾರ್ಯಚಟುವಟಿಕೆಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್ ಸೇರಿದಂತೆ ನಾಟಕ ವಿಭಾಗದ ಅತಿಥಿ ಉಪನ್ಯಾಸಕರುಗಳಾದ ಸಹನಾ ಪಿಂಜಾರ, ಹೇಮೇಶ್ವರ ಕೆ ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಕುರಿತಾದ ಪ್ರಬಂಧವನ್ನು ಮಂಡಿಸಿದರು. ಅತಿಥಿಗಳನ್ನು ಪ್ರೊ. ಎನ್ ಶಾಂತನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅತಿಥಿ ಉಪನ್ಯಾಸಕರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ನಿರೂಪಿಸಿದರು. ಇಂಗ್ಲೀಷ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಾತ್ಸಲ್ಯ ವಂದಿಸಿದರು. ---------