ಶುಕ್ರವಾರ, ಮಾರ್ಚ್ 22, 2024
ತಾಯಿ, ಮಗುವಿನ ಆರೈಕೆಯ ಕುರಿತು ಕಾಳಜಿ ವಹಿಸಲು ಪ್ರಯತ್ನಿಸೋಣ: ಡಾ.ಯು.ಟಿ.ವಿಜಯ್
ಬಳ್ಳಾರಿ,ಮಾ,22(ಕರ್ನಾಟಕ ವಾರ್ತೆ):
ಕುಟುಂಬದ ಕಣ್ಣುಗಳಾದ ತಾಯಿ ಮತ್ತು ಮಗುವಿನ ಆರೋಗ್ಯ ತಪಾಸಣೆ, ಸಕಾಲದಲ್ಲಿ ಪೌಷ್ಟಿಕ ಆಹಾರ ಒದಗಿಸುವಿಕೆ, ವಾಸಮಾಡುವ ಮನೆ ಹಾಗೂ ಸುತ್ತಲಿನ ಪರಿಸರ ಶುಚಿಯಾಗಿಡುವ ಮೂಲಕ ಸ್ವಾಸ್ಥ್ಯ ಸಮಾಜ ಕಾಪಾಡುವ ಹೊಣೆಗಾರಿಕೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ನಗರದ ಡಿಎನ್‍ಬಿ ಹಾಲ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕತೆಯ ಪ್ರಾಮುಖ್ಯತೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಗರ್ಭಿಣಿ ತಾಯಂದಿರು ಹಾಗೂ ನವಜಾತ ಶಿಶುಗಳಿಗೆ, ಯಾವುದೇ ತೊಂದರೆ ಕಂಡು ಬಂದರೆ ಕುಟುಂಬದ ಸದಸ್ಯರು ತಮ್ಮ ಜವಾಬ್ದಾರಿ ನಿಭಾಯಿಸಲು ಮುಂದೆ ಬರಬೇಕು ಎಂದು ತಿಳಿಸಿದರು.
ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ಮಾತನಾಡಿ, ಕ್ಷೇತ್ರಮಟ್ಟದಲ್ಲಿ ಮನೆ ಭೇಟಿ ಮೂಲಕ ತಾಯಿ ಮಗುವಿನ ಕಾಳಜಿ ಹಾಗೂ ಗರ್ಭಿಣಿಯೆಂದು ತಿಳಿದ ದಿನದಿಂದ ಸಕಾಲದಲ್ಲಿ ತಾಯಿ ಕಾರ್ಡ್ ಪಡೆಯಬೇಕು. ಟಿಡಿ ಚುಚ್ಚುಮದ್ದು, ಕನಿಷ್ಟ 180 ಕಬ್ಬಿಣಾಂಶ ಮಾತ್ರೆ ಸೇವನೆ, ಒಂದು ಬಾರಿ ತಪ್ಪದೆ ಸ್ಕ್ಯಾನಿಂಗ್, ಹೆರಿಗೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಲು ನಿರ್ಧಾರ, ಗಂಡಾಂತರ ಗರ್ಭಿಣಿಯಾಗಿದ್ದಲ್ಲಿ ವೈದ್ಯರು ನೀಡುವ ನಿರ್ದೇಶನವನ್ನು ತಪ್ಪದೆ ಪಾಲಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಮಗುವಿನ ಜನನದ ನಂತರ ಎಲ್ಲಾ ಚುಚ್ಚುಮದ್ದು ಹಾಕಿಸಬೇಕು. ಪ್ರಸ್ತುತ ಜಿಲ್ಲೆಯಲ್ಲಿ ವಾಟ್ಸಾಪ್ ಗ್ರುಪ್ ರಚಿಸಿ ತಾಯಿ ಮಗುವಿನ ಆರೈಕೆ ಮಾಡಲು ಕ್ರಮ ವಹಿಸಲಾಗಿದೆ. ಸ್ಥಳೀಯವಾಗಿ ದೊರಕುವ ತರಕಾರಿ ಋತುಮಾನ ಅನುಗುಣವಾಗಿ ದೊರಕುವ ಹಣ್ಣುಗಳನ್ನು ನೀಡಲು ಪಾಲಕರು ಮುತುವರ್ಜಿವಹಿಸಬೇಕು ಎಂದು ವಿನಂತಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡಲಾಗುತ್ತಿದ್ದು, ತೀವ್ರ ರೀತಿಯ ತೊಂದರೆಗಳ ಪೂರ್ವದಲ್ಲಿ ಗರ್ಭಿಣಿ ಅಥವಾ ಮಗುವನ್ನು ಆಸ್ಪತ್ರೆಗೆ ಕರೆತನ್ನಿ ಎಂದು ವಿನಂತಿಸಿದರು.
ವೇದಿಕೆ ಮೇಲೆ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಕೆಎಸ್‍ಸಿಎಸ್‍ಟಿಯ ಯೋಜನಾ ನಿರ್ದೇಶಕ ಡಾ.ಸೈಯದ್ ಸಮೀರ್, ಜಿಲ್ಲಾ ಪಂಚಾಯತ್‍ನ ಯೋಜನಾ ಅಧಿಕಾರಿ, ಜಿ.ಎಲ್.ಬದಿ, ರಾಮಚಂದ್ರ ರೆಡ್ಡಿ, ಡಾ.ವೆಂಕಟೇಶ, ಡಾ.ಸುರೇಖಾ, ಡಾ.ವಿಶಾಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಆಶಾ ಮೇಲ್ವಿಚಾರಣಾಧಿಕಾರಿ ರಾಘವೇಂದ್ರ, ಬಿಹೆಚ್‍ಇಓ ಶಾಂತಮ್ಮ ಉಪ್ಪಾರ, ನೇತ್ರಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ‘ಸಂತುಷ್ಟ ಬಾಯಿಯೇ ಸಂತುಷ್ಟ ದೇಹ’ ಎಂಬ ಘೋಷ ವಾಕ್ಯದೊಂದಿಗಿನ ಬಾಯಿ ಆರೋಗ್ಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ