ಭಾನುವಾರ, ಮಾರ್ಚ್ 17, 2024

ಮಾದರಿ ನೀತಿ ಸಂಹಿತೆ ಜಾರಿ; ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಡಿಸಿ ಸಭೆ | ಪ್ರಚಾರ, ಇತರೆ ಕಾರ್ಯಗಳಿಗೆ ಸುವಿಧಾ ತಂತ್ರಾಂಶದಲ್ಲಿ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ 2024 ರ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ (ಮಾ.16 ರಿಂದ) ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಮತ್ತು ಇನ್ನಿತರೆÀ ನಿಯಮಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಭಾನುವಾರದಂದು, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ 2024ರ ಏಪ್ರಿಲ್ 12 (ಶುಕ್ರವಾರ) ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 20ರ ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 2024ರ ಮೇ 07 ರ ಮಂಗಳವಾರ ಮತದಾನ ದಿನ, ಜೂನ್ 04ರ ಮಂಗಳವಾರ ಮತ ಎಣಿಕೆ ಹಾಗೂ 06-05-2024ರ ಗುರುವಾರದಂದು ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಾದ ದಿನಾಂಕವಾಗಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಚುನಾವಣಾ ಆಯೋಗವು ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸುವಂತೆ ಅವರು ಸೂಚನೆ ನೀಡಿದರು. ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ತಮ್ಮ ಪಕ್ಷದ ಚಿನ್ಹೆಯ ವಾಹನ, ಫ್ಲೆಕ್ಸ್ ಹಾಗೂ ಇನ್ನಿತರೆ ರಾಜಕೀಯ ಸಂಬಂಧ ಬ್ಯಾನರ್ ಗಳಿದ್ದಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ರಾಜಕೀಯ ಪಕ್ಷದವರು ಯಾವುದೇ ರ್ಯಾಲಿ ಮಾಡುವುದಕ್ಕೆ, ರಾಜಕೀಯ ಪಕ್ಷಗಳ ಸಭೆ ಸಮಾರಂಭ ಆಯೋಜಿಸುವುದಕ್ಕೆ ಅನುಮತಿ ಪಡೆಯಬೇಕು ಎಂದರು. ಪ್ರಚಾರ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಬಾರದು. ಮದುವೆ, ಸಭೆ - ಸಮಾರಂಭಗಳಲ್ಲಿ ಮತ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು. ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ನಿಷ್ಪಕ್ಷಪಾತ, ನ್ಯಾಯಸಮ್ಮತವಾಗಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯಚಟುವಟಿಕೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕರಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ