ಶನಿವಾರ, ಮಾರ್ಚ್ 23, 2024

ಲೋಕಸಭೆ ಸಾರ್ವತ್ರಿಕ ಚುನಾವಣೆ: ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯ ಚುನಾವಣಾಧಿಕಾರಿ ವಿಡಿಯೋ ಸಂವಾದ ಸಭೆ | ಚುನಾವಣೆ ಪ್ರಕ್ರಿಯೆಯಲ್ಲಿ ಕಾನೂನು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಾಗ್ರತೆ ವಹಿಸಿರಿ: ಸಿಇಒ ಮನೋಜ್ ಕುಮಾರ್ ಮೀನಾ

ಬಳ್ಳಾರಿ,ಮಾ.23(ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಎರಡು ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಕಾನೂನು ಹಾಗೂ ನೀತಿ ಸಂಹಿತೆ ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗಬಾರದು. ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಶನಿವಾರದಂದು, ಲೋಕಸಭೆ ಸಾರ್ವತ್ರಿಕ ಚುನಾವಣೆ - 2024ರ ಸಂಬಂಧ ತಮ್ಮ ಕಚೇರಿಯಿಂದ ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು. ಈಗಾಗಲೇ ಲೋಕಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗಿದ್ದು, ಚುನಾವಣೆಗೆ ತೊಂದರೆ ಉಂಟು ಮಾಡುವ ಅಥವಾ ಅಹಿತಕರ ಘಟನೆ ಸೃಷ್ಟಿಸುವಂತಹ ರೌಡಿ ಶೀಟರ್, ಸಮಾಜ ವಿದ್ರೋಹಿಗಳ ಮೇಲೆ ನಿಗಾ ವಹಿಸಬೇಕು ಎಂದು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು. ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ಗಡಿಭಾಗ ಹೊಂದಿರುವಂತಹ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣಿನಂತೆ ನಿಗಾವಹಿಸಬೇಕು. ಅಕ್ರಮ ಮದ್ಯ, ಅನಧಿಕೃತವಾಗಿ ಸಾಗಿಸುವ ಹಣ, ಬೆಲೆಬಾಳುವ
ಸ್ತುಗಳನ್ನು ಜಪ್ತಿ ಮಾಡಬೇಕು. ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು ಎಂದು ಆಯಾ ಜಿಲ್ಲೆಯ ಚುನಾವಣಾಧಿಕಾರಿಗಳಿಗೆ ಸೂಚಿಸಿದರು. ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಕೇಂದ್ರದಿಂದ ಭದ್ರತಾ ಪಡೆಗಳ ನಿಯೋಜನೆ ಮಾಡಲಾಗುತ್ತದೆ. ಅವರಿಗೆ ಎಲ್ಲಾ ತರಹದ ವ್ಯವಸ್ಥೆ ಕೈಗೊಳ್ಳಬೇಕು ಎಂದರು. ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಸಮರ್ಪಕ ವಿದ್ಯುತ್ ವ್ಯವಸ್ಥೆ ಹಾಗೂ ಮೂಲ ಸೌಲಭ್ಯ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಾಹನ ತಪಾಸಣೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಯಾಗದಂತೆ ನಿಗಾವಹಿಸಬೇಕು ಎಂದು ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಫ್ಲೈಯಿಂಗ್ ಸ್ಕ್ವಾಡ್‍ಗಳು, ವೀಡಿಯೋ ಸರ್ವೆಲನ್ಸ್, ವೀಡಿಯೋ ವ್ಯೂವಿಂಗ್ ತಂಡಗಳು, ಸ್ಟ್ಯಾಟಿಕ್ ಸರ್ವೆಲನ್ಸ್ ತಂಡಗಳ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿರುವ ವಾಹನಗಳನ್ನು ಬಳಸಬೇಕು. ಕಂಟ್ರೋಲ್ ರೂಂ ಗಳ ಕಡೆಗೂ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು. ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿರುವ ಪರವಾನಿಗೆದಾರರಿಂದ ಚುನಾವಣೆ ಮುಗಿಯುವವರೆಗೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವಂತೆ ಸೂಚಿಸಬೇಕು ಎಂದರು. ಮತದಾನ ನಡೆಯುವ ಮತಗಟ್ಟೆ ಕೇಂದ್ರಗಳ ಪರಿಶೀಲನೆ ನಡೆಸಬೇಕು. ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ವಹಿಸಬೇಕು. ಅತಿಹೆಚ್ಚು ಮತದಾರರನ್ನು ಹೊಂದಿರುವ ಭಾಗದಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಅವಶ್ಯಕತೆ ಇದ್ದಲ್ಲಿ ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಪ್ರಸ್ತಾವನೆ ಪಡೆದುಕೊಳ್ಳಬೇಕು ಎಂದು ಸಿಇಒ ಮನೋಜ್ ಕುಮಾರ್ ಮೀನಾ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಂಚೆ ಮತದಾನ ಸೇವೆ ಮತ್ತು ಅಗತ್ಯ ಸೇವೆಗಳಗಳಡಿ ಬರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು. ಸಂಬಂಧಿಸಿದ ನೋಡೆಲ್ ಅಧಿಕಾರಿಗಳು ನಿಗಾವಹಿಸಬೇಕು. 85 ವರ್ಷಕ್ಕೂ ಮೇಲ್ಪಟ್ಟ ವಯಸ್ಕರು ಹಾಗೂ ವಿಕಲಚೇತನರು ಮನೆಯಲ್ಲಿಯೇ ಮತದಾನ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ, ಈಗಾಗಲೇ ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು. ಮತಯಂತ್ರಗಳ ಮೊದಲ ಹಂತದ ರ್ಯಾಂಡಮೈಸೇಷನ್ ಕಾರ್ಯವನ್ನು ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದರು. *ಸಿ - ವಿಜಿಲ್ ಆ್ಯಪ್ ಬಳಸಲು ಜಾಗೃತಿ ಮೂಡಿಸಿ:* ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದನ್ನು ತಡೆಯಲು, ಚುನಾವಣಾ ಅಕ್ರಮ ಮತ್ತು ಮತದಾರನನ್ನು ಆಸೆ ಆಮಿಷಗಳಿಗೆ ಒಳಪಡಿಸುವುದನ್ನು ತಡೆಯಲು ನೇರವಾಗಿ ಸಾರ್ವಜನಿಕರು ಫೋಟೋ ಮತ್ತು ವಿಡಿಯೋ ಸೆರೆಹಿಡಿದು ಹಾಕಲು ಕ್ರಮ ಜರುಗಿಸಲು ಚುನಾವಣಾ ಆಯೋಗವು ರೂಪಿಸಿರುವ ಸಿ ವಿಜಿಲ್ ಅಪ್ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಅವರು ಸೂಚಿಸಿದರು. ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಮೂಲಕ ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿ ಮಾಡಬಹುದು. ಇದು ಗೌಪ್ಯವಾಗಿರಲಿದೆ. ಜನರು ನೀಡುವ ಪ್ರತಿ ದೂರಿಗೂ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳಬೇಕು ಎಂದರು. ಸಂವಾದದಲ್ಲಿ ಜಿಲ್ಲಾ ಮಟ್ಟದಿಂದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ