ಮಂಗಳವಾರ, ಏಪ್ರಿಲ್ 30, 2024

ಮೇ 02 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮತದಾನ ಜಾಗೃತಿ ಕುರಿತು ‘ಪ್ರತಿಜ್ಞಾವಿಧಿ ಭೋದನೆ’ ಕಾರ್ಯಕ್ರಮ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನ ಜಾಗೃತಿ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಏ.02 ರಂದು ಬೆಳಿಗ್ಗೆ 10 ಗಂಟೆಗೆ ನಗರದ ತಾಳೂರು ರಸ್ತೆಯಲ್ಲಿರುವ ಹೊಸ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆವರಣದಲ್ಲಿ ‘ಪ್ರತಿಜ್ಞಾವಿಧಿ ಭೋದನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಎಸ್.ಹೆಚ್.ಪುಷ್ಪಾಂಜಲಿ ದೇವಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಈ ವೇಳೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು ಭಾಗವಹಿಸುವರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ---------

ಹೊಸ ಮೋಕಾದಲ್ಲಿ ಮತದಾನ ಜಾಗೃತಿ ಅಂಗವಾಗಿ ಕ್ರಿಕೆಟ್ ಓಟರ್ಸ್ ಕಪ್ ಪಂದ್ಯಾವಳಿ | ಎಲ್ಲರೂ ತಪ್ಪದೇ ಮತದಾನ ಮಾಡಿ, ತಮ್ಮ ಸುತ್ತಮುತ್ತಲಿನ ನಾಗರಿಕರಿಗೂ ಮತದಾನ ಮಾಡಲು ತಿಳಿಸಿ: ಮಡಗಿನ ಚನ್ನಬಸಪ್ಪ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಮೇ 07 ರಂದು ಎಲ್ಲಾ ಕ್ರೀಡಾಪಟುಗಳು ತಪ್ಪದೇ ಮತದಾನ ಮಾಡಿ ಹಾಗೂ ತಮ್ಮ ಸುತ್ತಮುತ್ತಲಿನ ಅರ್ಹ ನಾಗರಿಕರಿಗೂ ಮತದಾನ ಮಾಡುವಂತೆ ತಿಳಿಸಿ ಎಂದು ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಮಡಗಿನ ಚನ್ನಬಸಪ್ಪ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬಳ್ಳಾರಿ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣಾ-2024ರ ಮತದಾನ ಜಾಗೃತಿ ಮೂಡಿಸುವ ನಿಮಿತ್ತ ಹೊಸ ಮೋಕ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಪುರುಷರ ಓಟರ್ಸ್ ಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ಆಟದಲ್ಲಿ ಉತ್ಸುಕರಾದಂತೆ ಮತ ಚಲಾವಣೆಯಲ್ಲಿ ಕೂಡ ಉತ್ಸುಕತೆಯಿಂದ ಮತದಾನ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಮಹಮ್ಮದ್ ಗೌಸ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. -------

ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿಗೆ ಮೇ. 01 ರಿಂದ ಮತ ಚಲಾವಣೆಗೆ ಅವಕಾಶ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿಮಿತ್ಯ ಮೇ. 07 ರ ಮತದಾನ ದಿನದಂದು ಚುನಾವಣೆ ಸಂಬಂಧಿತ ಅಥವಾ ಇಲಾಖೆಯ ಅನ್ಯ ಕರ್ತವ್ಯದಲ್ಲಿ ನಿರತರಾಗುವ ಅಧಿಕಾರಿ, ಸಿಬ್ಬಂದಿಗಳಿಗೆ ಮೇ. 01 ರಿಂದ 06 ರವರೆಗೆ ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ನಗರದ ರೈಲ್ವೆ ನಿಲ್ದಾಣ ಎದುರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಫೆಸಿಲಿಟೇಶನ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಚುನಾವಣೆ ನಿಮಿತ್ಯ ಮೇ. 07 ರಂದು ಮತದಾನ ನಡೆಯಲಿದ್ದು, ಅಂದು ಚುನಾವಣಾ ಕರ್ತವ್ಯ ನಿರತರಾಗುವ ಅಧಿಕಾರಿ, ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಮತದಾನ ಮಾಡಲು ವಿಶೇಷ ಅವಕಾಶ ಕಲ್ಪಿಸಿದೆ. ಮತದಾನ ದಿನದಂದು ಚುನಾವಣಾ ಕರ್ತವ್ಯದಲ್ಲಿ ನಿರತರಾಗುವ ಪೊಲೀಸ್, ಆರೋಗ್ಯ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವವರು, ಇಲಾಖಾ ವಾಹನ ಚಾಲಕರುಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಮ್ಮ ಮತವನ್ನು ಮೇ. 01 ರಿಂದ 06 ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅಂತಹ ಮತದಾರರನ್ನು ಈಗಾಗಲೆ ಗುರುತಿಸಲಾಗಿದೆ. ಬೇರೆ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮತವಿದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವಂತಹ ಅಧಿಕಾರಿ, ಸಿಬ್ಬಂದಿಗಳಿಗೆ ಈ ವ್ಯವಸ್ಥೆ ಅನುಕೂಲಕರವಾಗಿದೆ. ಮತದಾನ ದಿನದಂದು ಕರ್ತವ್ಯ ನಿರತರಾಗುವ ಅಧಿಕಾರಿ, ಸಿಬ್ಬಂದಿಗಳು ತಮ್ಮ ಮತವನ್ನು ತರಬೇತಿ ನಡೆಯುವ ಸ್ಥಳದಲ್ಲಿಯೇ ಮತ ಚಲಾಯಿಸಲು ಕೂಡ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಮತದಾನ ದಿನದಂದು ಚುನಾವಣಾ ಕರ್ತವ್ಯದಲ್ಲಿ ನಿರತರಾಗುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಮ್ಮ ಮತ ಚಲಾಯಿಸಲು ಚುನಾವಣಾ ಆಯೋಗದಿಂದ ಮಾಡಲಾಗಿರುವ ವಿಶೇಷ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು, ಎಲ್ಲರೂ ತಪ್ಪದೆ ತಮ್ಮ ಮತ ಚಲಾಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮನವಿ ಮಾಡಿದ್ದಾರೆ. -------

ಬಳ್ಳಾರಿ ರೈಲ್ವೆ ಪೊಲೀಸರ ಕಾರ್ಯಾಚರಣೆ 06 ಕೆ.ಜಿ. ಗಾಂಜಾ ವಶ, ಓರ್ವ ಆರೋಪಿಯ ಬಂಧನ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ) : ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅಕ್ರಮ ಚಟುವಟಿಕೆಗಳ ತಡೆಗೆ ತೀವ್ರ ನಿಗಾ ವಹಿಸಲಾಗುತ್ತಿದ್ದು, ಇದರ ಅಂಗವಾಗಿ ಬಳ್ಳಾರಿ ರೈಲ್ವೆ ಪೊಲೀಸರು ಕಳೆದ ಏ.28 ಭಾನುವಾರದಂದು ಮೈಸೂರು-ಹುಬ್ಬಳ್ಳಿ ಮಾರ್ಗದ ಹಂಪಿ ಎಕ್ಸ್‍ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ 06 ಕೆ.ಜಿ. ಗಾಂಜಾ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ, ಓರ್ವ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆ ಗುಂತಕಲ್‍ನ ತಿಲಕ್ ನಗರದ ವಾಸಿ 38 ವರ್ಷ ವಯಸ್ಸಿನ ರಘು ಶಂಕರ್ ಎಂದು ಗುರುತಿಸಲಾಗಿದ್ದು, ಆರೋಪಿಯು ಹಂಪಿ ಎಕ್ಸ್‍ಪ್ರೆಸ್ ರೈಲಿನಲ್ಲಿ ತಲಾ 01 ಕೆ.ಜಿ. ತೂಕದ 06 ಪಾಕೆಟ್ ಅಂದರೆ ಒಟ್ಟು 06 ಕೆ.ಜಿ. ಯಷ್ಟು ಗಾಂಜಾ ಸಾಗಿಸುತ್ತಿದ್ದುದನ್ನು ಬಳ್ಳಾರಿ ರೈಲ್ವೆ ಪೊಲೀಸರು ಪತ್ತೆಹಚ್ಚಿದ್ದಾರೆ. 06 ಕೆ.ಜಿ. ಗಾಂಜಾದ ಮೌಲ್ಯ 06 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬಂಧಿಸಿ, ನಿಯಮಾನುಸಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಕುರಿತು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಡಿವಿಜನಲ್ ಸೆಕ್ಯುರಿಟಿ ಕಮಿಷನರ್, ಅವರು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಚುನಾವಣಾ ಶಾಖೆಗೆ ವರದಿ ಸಲ್ಲಿಸಿದ್ದಾರೆ. ------

ಪ್ರತಿಯೊಬ್ಬರೂ ಮತ ಚಲಾಯಿಸಿ, ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸಿ: ಡಿಹೆಚ್‍ಒ ಡಾ.ರಮೇಶ್ ಬಾಬು

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಲೋಕಸಭಾ ಚುನಾವಣೆಗೆ ಎಲ್ಲಾ ನಾಗರಿಕರು ಮೇ 07 ರಂದು ತಪ್ಪದೇ ಮತ ಚಲಾಯಿಸುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ, ಬಂಡಿಹಟ್ಟಿಯ ನಗರ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ನಗರದ ಬಂಡಿಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಮಂಗಳವಾರ ಹಮ್ಮಿಕೊಂಡಿದ್ದ “ಮತದಾನ ಜಾಗೃತಿ” ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮತದಾನದಲ್ಲಿ ಭಾಗವಹಿಸುವುದು ಎಲ್ಲ ಮತದಾರರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಅರ್ಹ ಮತದಾರರು ಆಸೆ-ಆಮೀಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾವಣೆ ಮಾಡಿ ಸುಭದ್ರ ಸರ್ಕಾರ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿ ಎಂದು ತಿಳಿಸಿದರು. ಜಾಗೃತಿ ಜಾಥಾವು ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಸ್ಥಳಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಆಡಳಿತ ವೈದ್ಯಾಧಿಕಾರಿ ಡಾ.ಯಾಸ್ಮೀನ್, ಡಾ.ಕಾಶಿಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ಉಪ್ಪಾರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮುಸ್ತಾಕ್ ಅಹಮ್ಮದ್, ಔಷಧಿ ಅಧಿಕಾರಿ ಖರ್ಮನ್ನಿಸಾ ಬೇಗಂ, ಆರೋಗ್ಯ ನಿರೀಕ್ಷಣಾಧಿಕಾರಿ ಮಹಾಲಿಂಗ, ವಿಜಯಲಕ್ಷ್ಮಿ, ಎಲ್‍ಡಿಸಿ ಪಾರ್ವತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ದಾನಕುಮಾರಿ, ಶಾರದಾ, ರಾಧಿಕಾ, ಮಮತಾಜ್, ಸುನೀತಾ, ನಾಗರತ್ನ, ಯೋಗಾನಂದ, ಗವಿಸಿದ್ದಪ್ಪ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. -------

ಸಿಂಧಿಗೇರಿ: ಮನರೇಗಾ ಕೂಲಿಕಾರರಿಗೆ ಮತದಾನ ಜಾಗೃತಿ | ಮೇ 07 ರಂದು ಮತದಾನ ಹಬ್ಬ ಆಚರಿಸಿ: ಕೆ.ವಿ.ನಿರ್ಮಲಾ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಮೇ 07 ರಂದು ನಡೆಯುವ ಲೋಕಸಭೆ ಚುನಾವಣೆಗೆ ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ದಿನದ ಹಬ್ಬ ಆಚರಿಸುವಂತೆ ಕುರುಗೋಡು ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಓ ಕೆ.ವಿ.ನಿರ್ಮಲಾ ಅವರು ಹೇಳಿದರು. ಕುರುಗೋಡು ತಾಲ್ಲೂಕಿನ ಸಿಂಧಿಗೇರಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ’ ಎಂಬ ಆಶಯದೊಂದಿಗೆ ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯವಾಗಿದ್ದು, ಸಂವಿಧಾನ ಬದ್ಧವಾಗಿ ಲಭಿಸಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ತಪ್ಪದೇ ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮತದಾನದ ಮೂಲಕ ಅರ್ಹರನ್ನು ಆಯ್ಕೆ ಮಾಡಲು ಇರುವ ಒಂದು ಅಸ್ತ್ರವಾಗಿದೆ ಎಂದು ಅರಿವು ಮೂಡಿಸಿದರು. ಈ ವೇಳೆ ಮತದಾರರ ಪ್ರತಿಜ್ಞೆ ವಿಧಿ ಬೋಧಿಸುವುದರ ಮೂಲಕ ಕೂಲಿಕಾರರಿಗೆ ಮತದಾನದ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಾಧಿಕಾ, ಗ್ರಾಪಂ ಕಾರ್ಯದರ್ಶಿ ಸೋಮಲಿಂಗಪ್ಪ, ಟಿಎಂಐಎಸ್ ಮುಕ್ತಾಯಕ್ಕ, ಐಇಸಿ ಚಂದ್ರಶೇಖರ್, ಎನ್‍ಆರ್‍ಎಲ್‍ಎಂ ತಂಡ, ಬಿಎಫ್‍ಟಿ, ಗ್ರಾಮಕಾಯಕ ಮಿತ್ರರು, ಸ್ವ ಸಹಾಯ ಸಂಘದ ಸದಸ್ಯರು, ಗ್ರಾಪಂ ಸಿಬ್ಬಂದಿಯವರು ಸೇರಿದಂತೆ ಸಿಂಧಿಗೇರಿ ಗ್ರಾಮದ ಕೂಲಿಕಾರರು ಹಾಜರಿದ್ದರು. --------

ಮತ ಜಾಗೃತಿಗೆ “ಮಹಿಳಾ ಕ್ರಿಕೆಟ್ ಪಂದ್ಯಾವಳಿ”

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಕೋಟೆ ಪ್ರದೇಶದ ಸಂತಜಾನರ ಕಾಲೇಜು ಮೈದಾನದಲ್ಲಿ ಮಂಗಳವಾರ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಗೆ ಚಾಲನೆ ನೀಡಿದ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಓ ಮಡಗಿನ ಬಸಪ್ಪ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಇದ್ದಂತೆ. ಮತದಾರರು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಸುಭದ್ರಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತದಾನ ಆಗುತ್ತಿದ್ದು, ತಪ್ಪದೆ ಮತ ಚಲಾಯಿಸಬೇಕು. ಕ್ರಿಕೆಟ್ ಆಡುವ ಮೂಲಕ ವಿನೂತನವಾಗಿ ಮತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹಮ್ಮದ್ ಗೌಸ್.ಆರ್ ಅವರು ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ತಪ್ಪದೇ ಮತ ಚಲಾಯಿಸಬೇಕು ಹಾಗೂ ತಮ್ಮ ಸುತ್ತಮುತ್ತಲಿನ ಎಲ್ಲಾ ಮತದಾರರನ್ನು ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ಲೆಕ್ಕಾಧಿಕಾರಿ ಶರಣಪ್ಪ, ತಾಪಂ ವ್ಯವಸ್ಥಾಪಕ ಬಚ್ಚಲಪ್ಪ.ವಿ.ಕೆ. ಸೇರಿದಂತೆ ಬಳ್ಳಾರಿ ಮತ್ತು ಕುರುಗೋಡು ಪೂರ್ವ, ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಳ್ಳಾರಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿಧ ಗ್ರಾಮ ಪಂಚಾಯತಿಯ ಮಹಿಳಾ ಆಟಗಾರರು, ಸ್ಥಳೀಯ ಮಹಿಳೆಯರು ಭಾಗವಹಿಸಿದ್ದರು. ---------

ವಿವಿಧೆಡೆ ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ದಾಳಿ: 03 ಪ್ರಕರಣ ದಾಖಲು

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಸಂಬಂಧಿಸಿದಂತೆ ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ವಿವಿಧೆಡೆ ದಾಳಿ ನಡೆಸಿ 03 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ.ಎನ್ ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಜೋಳದರಾಶಿ ದೊಡ್ಡನಗೌಡರ ರಂಗಮಂದಿರದ ಗೇಟ್ ಮುಂದೆ ಮುಖ್ಯ ರಸ್ತೆಯಲ್ಲಿ ರಸ್ತೆಗಾವಲು ವೇಳೆ ದ್ವಿಚಕ್ರ ವಾಹನದಲ್ಲಿ 8.640 ಲೀ. (ಅಂದಾಜು ಮೌಲ್ಯ ರೂ.13840) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರ ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಲಾಗಿದೆ. ಸಿರುಗುಪ್ಪ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ರಸ್ತೆಗಾವಲು ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ 8.640 ಲೀಟರ್ ಮದ್ಯ ಮತ್ತು 15.600 ಲೀಟರ್ ಬಿಯರ್ (ಅಂದಾಜು ಮೌಲ್ಯ ರೂ.42501) ಅನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸವಾರನ್ನು, ಮದ್ಯ, ಬಿಯರ್ ಹಾಗೂ ವಾಹನವನ್ನು ಜಪ್ತುಪಡಿಸಿ ಪ್ರಕರಣ ದಾಖಲಿಸಲಾಗಿದೆ. ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿ ರಸ್ತೆಗಸ್ತು ವೇಳೆ ದ್ವಿಚಕ್ರ ವಾಹನದಲ್ಲಿ 4.320 ಲೀ. (ಅಂದಾಜು ಮೌಲ್ಯ ರೂ.46920) ಮದ್ಯವನ್ನು ಪತ್ತೆಹಚ್ಚಿ, ವಾಹನ ಸವಾರ, ಮದ್ಯ ಹಾಗೂ ವಾಹನವನ್ನು ಜಪ್ತುಪಡಿಸಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ: ಷಡಕ್ಷರಯ್ಯ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಪವಿತ್ರವಾದದ್ದು, ಅದನ್ನು ಪ್ರತಿಯೊಬ್ಬರು ಚಲಾಯಿಸುವ ಮೂಲಕ ಪ್ರಜಾತಂತ್ರದ ಆಶಯ ಉಳಿಸಿ ಎಂದು ಸಂಡೂರು ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಷಡಕ್ಷರಯ್ಯ.ಎಚ್ ಅವರು ಕರೆ ನೀಡಿದರು. ಲೋಕಸಭಾ ಚುನಾವಣೆ ಅಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಅಭಿಯಾನದಡಿ ಸಂಡೂರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆ ಅಂಗವಾಗಿ ದೇಶದ ಉತ್ತಮ ಭವಿಷ್ಯಕ್ಕಾಗಿ ಸಂವಿಧಾನ ನೀಡಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿ, ಗಟ್ಟಿಗೊಳಿಸಲು ಪ್ರಜೆಗಳು ಮತದಾನದ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳುವಿಕೆಯಿಂದ ನಿರಂತರವಾಗಿ ಇರಬೇಕು ಎಂದರು. ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಾಗೃತಿ ಜಾಥಾವು ಸಂಡೂರು ತಾಲ್ಲೂಕಿನ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಹಾಗೂ ಎಲ್ಲಾ ಅಧಿಕಾರಿಗಳು ಒಳಗೊಂಡು ಬಸ್ ನಿಲ್ದಾಣದಿಂದ ಆರಂಭವಾಗಿ ಜೆಸ್ಕಾಂ ಕಚೇರಿ, ವಾಲ್ಮೀಕಿ ಭವನ, ತಾಲ್ಲೂಕು ಪಂಚಾಯತ್, ತಹಶೀಲ್ದಾರ್ ಕಚೇರಿ ಆವರಣಕ್ಕೆ ಅಂತ್ಯಗೊಂಡಿತು. ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತದಾನದ ಜಾಗೃತಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಮುಬಾರಕ್, ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ರವಿ.ಬಿ, ಪುರಸಭೆ ಅಧಿಕಾರಿಗಳು, ಚುನಾವಣೆ ಸಿಬ್ಬಂದಿ ವರ್ಗ ಹಾಗೂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. --------

ಬಾಲಕ ನಾಪತ್ತೆ: ಪ್ರಕರಣ ದಾಖಲು

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ನಗರದ ಕಂಟೋನ್‍ಮೆಂಟ್‍ನ ಸರ್ಕಾರಿ ಬಾಲಕರ ಬಾಲ ಮಂದಿರದ ಆತ್ರೇಶ್ ಕುಲಕರ್ಣಿ ಎನ್ನುವ 16 ವರ್ಷದ ಅಪ್ರಾಪ್ತ ಬಾಲಕ ಏ.17 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಕೌಲ್‍ಬಜಾರ್ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ 154 ಸೆಂ.ಮೀ., ಸಾಧಾರಣ ಮೈಕಟ್ಟು, ಎಣ್ಣೆಗಂಪು ಮೈ ಬಣ್ಣ, ನೀಲಿ ಬಣ್ಣದ ಚೆಕ್ಸ್ ಅಂಗಿ ಮತ್ತು ಬ್ರೌನ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ.08392-240731, ಪಿಐ ಮೊ.9480803047, ಪಿಎಸ್‍ಐ ಮೊ.9480803084 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಅಸುಂಡಿ ಗ್ರಾಮದಲ್ಲಿ ಮತದಾನ ಜಾಗೃತಿ

ಬಳ್ಳಾರಿ,ಏ.30(ಕರ್ನಾಟಕ ವಾರ್ತೆ): ದೇಶದ ಪ್ರಗತಿಗಾಗಿ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಳ್ಳಾರಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಮಡಗಿನ ಬಸಪ್ಪ ಅವರು ಹೇಳಿದರು. ಇಂದು, ಬಳ್ಳಾರಿ ತಾಲ್ಲೂಕಿನ ಅಮರಾಪುರ ಗ್ರಾಮ ಪಂಚಾಯತಿಯ ಅಸುಂಡಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೇ 07 ರಂದು ತಪ್ಪದೇ ಮತದಾನ ಮಾಡಬೇಕು. ದೇಶದ ಉನ್ನತಿಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಆರ್.ಕೆ.ಬಸವರಾಜ, ಅಮರಾಪುರ ಗ್ರಾಮ ಪಂಚಾಯಿತಿ ಪಿಡಿಓ ಹುಸೇನ್ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಕೂಲಿಕಾರ್ಮಿಕರು ಮತ್ತು ಗ್ರಾಪಂ ಸಿಬ್ಬಂದಿಯವರು ಹಾಜರಿದ್ದರು. -------

ಸೋಮವಾರ, ಏಪ್ರಿಲ್ 29, 2024

ಮತದಾನ ಜಾಗೃತಿಗೆ ಬೈಕ್ ಏರಿದ ಜಿಲ್ಲಾಧಿಕಾರಿ, ಜಿಪಂ ಸಿಇಒ | ನೀವು ಮತ ಚಲಾಯಿಸಿ, ನಿಮ್ಮ ಪರಿವಾರದವರಿಗೂ ಮತದಾನ ಮಾಡುವಂತೆ ಪ್ರೇರೇಪಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ. 07 ರಂದು ಜರುಗುವ ಮತದಾನದಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಿ ಹಾಗೂ ನಿಮ್ಮ ಕುಟುಂಬದ ಎಲ್ಲಾ ಅರ್ಹ ಮತದಾರರು ಸಹ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಕಳೆದ ಚುನಾವಣೆಗಳಲ್ಲಿ ಬಳ್ಳಾರಿ ನಗರದಲ್ಲಿ ಕಡಿಮೆ ಮತದಾನವಾದ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯನ್ನು ಗುರಿಯಾಗಿಸಿ, ಮತದಾರರಲ್ಲಿ ಜಾಗೃತಿ ಮೂಡಿಸಲು ಸೋಮವಾರದಂದು ನಗರದ ಅನಂತಪುರ ರಸ್ತೆಯ ಹೊಸ ಜಿಲ್ಲಾಡಳಿತ ಭವನದ ಆವರಣದಿಂದ ಏರ್ಪಡಿಸಿದ್ದ “ಬೈಕ್ ಜಾಥಾ” ಗೆ ಚಾಲನೆ ನೀಡಿ ಅವರು ಮಾತನಾಡಿದರು. ಚುನಾವಣೆಯು ಹಬ್ಬವಿದ್ದಂತೆ, ಪ್ರತಿಯೊಬ್ಬ ನಾಗರಿಕರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಹೆಮ್ಮೆಯಿಂದ ಮತ ಚಲಾಯಿಸುವ ಮೂಲಕ ಸಂಭ್ರಮದಿಂದ ಆಚರಿಸಬೇಕು ಎಂದರು. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿ ಜಿಲ್ಲೆಯಲ್ಲಿ ಶೇ.100 ರಷ್ಟು ಮತದಾನ ಪ್ರಮಾಣ ಹೆಚ್ಚಲು ಶ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಭವ್ಯ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಮತ್ತು ಮುಂದುವರಿಸಲು ಚುನಾವಣೆಯಲ್ಲಿ ಮತದಾನ ಮಾಡುವ ಪ್ರಕ್ರಿಯೆ ಬಹುಮುಖ್ಯವಾಗಿದೆ. ಹಾಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಈ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಶೇಕಡವಾರು ಮತದಾನ ಪ್ರಮಾಣ ಹೆಚ್ಚಳವಾಗಲು ಎಲ್ಲಾ ಅಧಿಕಾರಿಗಳು ಸಹಕರಿಸಬೇಕು ಎಂದರು. ಸಹಾಯಕ ಆಯುಕ್ತ ಹೇಮಂತ್ ಅವರು ಮಾತನಾಡಿ, ಮೇ 07 ರಂದು ತಪ್ಪದೇ ಮೊದಲು ಮತದಾನ ಮಾಡಿ, ನಂತರ ತಮ್ಮ ದಿನಚಟುವಟಿಕೆ ಕೆಲಸ ಕಾರ್ಯಗಳನ್ನು ಮುಂದುವರಿಸಿ ಎಂದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ಹೆಲ್ಮೆಟ್ ಧರಿಸಿ, ಮತದಾನ ಜಾಗೃತಿಯ ಪ್ರದರ್ಶನ ಫಲಕದೊಂದಿಗೆ ಸ್ಕೂಟರ್ ಏರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಬೈಕ್ ಜಾಥಾದಲ್ಲಿ ಪಾಲ್ಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸ್ಕೂಟರ್ ಚಲಾಯಿಸಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ‘ನಾನು ಹೆಮ್ಮೆಯ ಮತದಾರ ಕಡ್ಡಾಯವಾಗಿ ಮತ ಚಲಾಯಿಸುವೆ’ ಎನ್ನುವ ಸೆಲ್ಪಿ ಬೂತ್ ತೆರೆಯಲಾಗಿತ್ತು. ಬೈಕ್ ಜಾಥಾವು ನಗರದ ಹೊಸ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭಗೊಂಡು ತೇರುಬೀದಿ, ಹೆಚ್.ಆರ್.ಗವಿಯಪ್ಪ ವೃತ್ತ (ಮೋತಿ ಸರ್ಕಲ್), ಕೌಲ್ ಬಜಾರ್, ಸುಧಾಕ್ರಾಸ್, ದುರುಗಮ್ಮ ದೇವಸ್ಥಾನ, ಮೋಕಾ ರಸ್ತೆ, ಎಸ್.ಎನ್.ಪೇಟೆ, ಸಂಗಂ ವೃತ್ತದಿಂದ ಮರಳಿ ಹೊಸ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಅಂತಿಮಗೊಂಡಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕಿ ಸಕೀನಾ, ತಹಶೀಲ್ದಾರ ಗುರುರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು. --------

ಅಗತ್ಯ ಸೇವೆಗಳ ಮತದಾರರು ಮೇ 01 ರಿಂದ ಮತ ಚಲಾವಣೆಗೆ ಅವಕಾಶ

ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿಮಿತ್ಯ ಮತದಾನ ದಿನದಂದು ಗೈರು ಹಾಜರಿ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮೇ 01 ರಿಂದ 03 ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ನಗರದ ರೈಲ್ವೆ ನಿಲ್ದಾಣ ಎದುರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಚುನಾವಣೆ ನಿಮಿತ್ಯ ಮೇ 07 ರಂದು ಮತದಾನ ನಡೆಯಲಿದ್ದು, ಅಂದು ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ವಿವಿಧ ಕ್ಷೇತ್ರಗಳ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಮತದಾನ ಮಾಡಲು ವಿಶೇಷ ಕಲ್ಪಿಸಿದೆ. ಇದಕ್ಕಾಗಿ ಚುನಾವಣಾ ಆಯೋಗ ಅಗತ್ಯ ಸೇವೆಗಳಡಿ ಗುರುತಿಸಿರುವ ವಿವಿಧ ಕ್ಷೇತ್ರಗಳ ಸಂಬಂಧಪಟ್ಟ ಅಧಿಕಾರಿಗಳಿಂದ ಅಂತಹ ಮತದಾರರನ್ನು ಗುರುತಿಸಲಾಗಿದ್ದು, ಅಂತಹ ಮತದಾರರು ತಮ್ಮ ಮತವನ್ನು ಚಲಾಯಿಸಲು ಮೇ 01 ರಿಂದ 03 ರವರೆಗೆ ಅವಕಾಶ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಕೆಪಿಸಿಎಲ್ ಸಂಸ್ಥೆಯ 65 ನೌಕರರು, ಆರೋಗ್ಯ ಇಲಾಖೆ-40, ವಿಮ್ಸ್-08, ಜಿಲ್ಲಾ ಆಸ್ಪತ್ರೆ-41, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ-423, ಅಗ್ನಿಶಾಮಕ ದಳ-67, ಮಾಧ್ಯಮದವರು-07, ಟ್ರಾಫಿಕ್ ಪೊಲೀಸ್-74, ಆರೋಗ್ಯ ಇಲಾಖೆ ಗುರುತಿಸಿರುವ ಆಂಬುಲೆನ್ಸ್ ಸಿಬ್ಬಂದಿ-25, ಕಾರಾಗೃಹ ಇಲಾಖೆ-82, ಕಂಟ್ರೋಲ್ ರೂಂ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ-30 ಸೇರಿದಂತೆ ಒಟ್ಟು 862 ಮತದಾರರಿಗೆ ಈಗಾಗಲೆ 12-ಡಿ ನಮೂನೆ ವಿತರಿಸಿ, ಭರ್ತಿ ಮಾಡಿದ ನಮೂನೆಯನ್ನು ಈಗಾಗಲೆ ಸ್ವೀಕರಿಸಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಸಂಬಂಧ ಕರ್ತವ್ಯ ನಿರತ ಗೈರು ಹಾಜರಿ ಮತದಾರರು ನಗರದ ರೈಲ್ವೆ ನಿಲ್ದಾಣ ಎದುರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರಕ್ಕೆ (ಪೋಸ್ಟಲ್ ವೋಟಿಂಗ್ ಸೆಂಟರ್) ಮೇ 01 ರಿಂದ 03 ರವರೆಗೆ ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗಿನ ಅವಧಿಯಲ್ಲಿ ಆಗಮಿಸಿ ತಮ್ಮ ಮತ ಚಲಾಯಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ---------

ಮೈಕ್ರೋ ಅಬ್ಸರ್ವರ್ಸ್‍ಗೆ ಚುನಾವಣಾ ತರಬೇತಿ ಕಾರ್ಯಾಗಾರ | ಸೂಕ್ಷ್ಮ ಮತಗಟ್ಟೆಗಳಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನ ಪ್ರಕ್ರಿಯೆಗೆ ನಿಗಾ ವಹಿಸಿ: ಚುನಾವಣಾ ಸಾಮಾನ್ಯ ವೀಕ್ಷಕ ಚಂದ್ರಶೇಖರ್

ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆ ಸಂಬಂಧ ಬರುವ ಮೇ 07 ರಂದು ಮತದಾನ ನಡೆಯಲಿದ್ದು, ಈಗಾಗಲೆ ಗುರುತಿಸಲಾಗಿರುವ ಸೂಕ್ಷ್ಮ ಮತಗಟ್ಟೆಗಳಲ್ಲಿ ಅಂದು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಮೈಕ್ರೋ ಅಬ್ಸರ್ವರ್‍ಗಳ ಪಾತ್ರ ಮಹತ್ವದ್ದಾಗಿದೆ ಎಂದು ಚುನಾವಣಾ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ ಅವರು ಹೇಳಿದರು. ನಗರದ ಜಿಲ್ಲಾ ಪಂಚಾಯತಿಯ ನಜೀರ್‍ಸಾಬ್ ಸಭಾಂಗಣದಲ್ಲಿ ಮೈಕ್ರೋ ಅಬ್ಸರ್ವರ್ಸ್‍ಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೆ ಜಿಲ್ಲೆಯಲ್ಲಿ 396 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬರು ಮೈಕ್ರೋ ಅಬ್ಸರ್ವರ್ಸ್ ಅನ್ನು ನೇಮಿಸಲಾಗಿದೆ. ಮೈಕ್ರೋ ಅಬ್ಸರ್ವರ್ಸ್ ಗಳು ಸಾಮಾನ್ಯವಾಗಿ ಬ್ಯಾಂಕ್ ಅಥವಾ ಕೇಂದ್ರ ಸೇವೆಯ ಅಧಿಕಾರಿ, ಸಿಬ್ಬಂದಿಯಾಗಿರುತ್ತಾರೆ. ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವುದು ಇದರ ಉದ್ದೇಶವಾಗಿರುತ್ತದೆ. ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಪ್ರತಿಯೊಬ್ಬ ಮೈಕ್ರೋ ಅಬ್ಸರ್ವರ್ ಕೂಡ ಪ್ರತಿ ಮತಗಟ್ಟೆಯಲ್ಲಿ ಮೇ 07 ರಂದು ಜರುಗಲಿರುವ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಿಂದ ಅಂದರೆ ಬೆಳಿಗ್ಗೆ ಆರು ಗಂಟೆಯ ಅಣುಕು ಮತದಾನದಿಂದ ಪ್ರಾರಂಭಿಸಿ ಮತದಾನ ಮುಕ್ತಾಯವಾಗುವ ತನಕ ಪ್ರತಿಯೊಂದು ಹಂತವನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲಾ ಹಂತದಲ್ಲಿ ಮತದಾನವು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಜರುಗಲು, ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಬೇಕಿದೆ ಎಂದರು. ಚುನಾವಣೆಯ ಪ್ರತಿ ಹಂತವನ್ನು ದಾಖಲಿಸಲು ತಾವು ಪ್ರಮುಖ ಪಾತ್ರ ವಹಿಸಬೇಕು. ಮತಗಟ್ಟೆಗಳಲ್ಲಿ ಮತದಾನ ದಿನದಂದು ನಿಯಮಾನುಸಾರ ಕೈಗೊಳ್ಳಬೇಕಾದ ಎಲ್ಲ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತಾಗಲು ಹಾಗೂ ಚುನಾವಣೆಯನ್ನು ಪಾರದರ್ಶಕವಾಗಿ ಯಶಸ್ವಿಯಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಚುನಾವಣಾ ಪ್ರಕ್ರಿಯೆಯ ದಿನದಂದು ಮೈಕ್ರೋ ಅಬ್ಸರ್ವರ್‍ಗಳ ಕರ್ತವ್ಯಗಳು ಸೇರಿದಂತೆ ಅವರು ಪ್ರತಿ ಹಂತದ ಚುನಾವಣಾ ಪ್ರಕ್ರಿಯೆ ದಾಖಲಿಸುವ ಚೆಕ್ ಲೀಸ್ಟ್‍ನಲ್ಲಿ ದಾಖಲಿಸುವ ಪ್ರಕ್ರಿಯೆಯನ್ನು ತರಬೇತಿ ಕಾರ್ಯಗಾರದಲ್ಲಿ ನೀಡಲಾಯಿತು. ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ವಿವಿಧ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು. ಚುನಾವಣಾ ತರಬೇತಿಗೆ ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ 396 ಮೈಕ್ರೋ ಅಬ್ಸರ್ವರ್ಸ್‍ಗಳು ಹಾಜರಾಗಿದ್ದರು. ---------

ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಕೈ ಜೋಡಿಸಿ: ಡಾ.ವೈ.ರಮೇಶ್ ಬಾಬು

ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಪ್ರಖರ ಬಿಸಿಲು ಕಂಡುಬರುವ ಹಿನ್ನಲೆಯಲ್ಲಿ ಮಧ್ಯಾಹ್ನದ 01 ಗಂಟೆಯಿಂದ ಸಂಜೆ 04 ಗಂಟೆಯ ಅವಧಿಯಲ್ಲಿ ವಯೋ ವೃದ್ಧರು, ಮಕ್ಕಳು ಗರ್ಭಿಣಿ ಮತ್ತು ದೀರ್ಘಕಾಲಿನ ಖಾಯಿಲೆಗಳಿಗೆ ಔಷಧಿ ಸೇವಿಸುವ ಪ್ರತಿಯೊಬ್ಬರು ಹೊರಗಡೆ ಹೋಗುವುದನ್ನು ತಪ್ಪಿಸಿ, ಬಿಸಿಲಿನ ಸೂರ್ಯಘಾತದ ಅನಾಹುತದಿಂದ ಪಾರಾಗಲು ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ ಬಾಬು ಅವರು ಕೋರಿದ್ದಾರೆ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಬೇಸಿಗೆಯು ಅತ್ಯಂತ ಪ್ರಖರವಾಗಿದ್ದು, ಈಗಾಗಲೇ ರಾಜ್ಯ ಹವಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ಒಣಹವೆಯೊಂದಿಗೆ ಬಿಸಿಗಾಳಿ ಬೀಸುವ ಕುರಿತು ಮುನ್ನಚ್ಚೆರಿಕೆ ನೀಡಿರುವ ಹಿನ್ನಲೆ ಬಳ್ಳಾರಿ ಜಿಲ್ಲೆಯಲ್ಲಿಯೂ ಸಹ ವಾತಾವರಣ ಕಂಡುಬರುತ್ತಿದ್ದು, ಪ್ರತಿಯೊಬ್ಬರು ಆದಷ್ಟು ನೆರಳಿನಲ್ಲಿ ಇರುವುದಕ್ಕೆ ಆದ್ಯತೆ ನೀಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದೇಹದಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಓ.ಆರ್.ಎಸ್ ಜೀವಜಲ ಪುಡಿಯನ್ನು ಅಗತ್ಯವುಳ್ಳವರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ಆರೈಕೆಗಾಗಿ, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳಲಾಗಿದೆ. ಓ.ಆರ್.ಎಸ್. ದ್ರಾವಣವನ್ನು 1 ಲೀಟರ್ ನೀರಿಗೆ 1 ಪೊಟ್ಟಣದ ಸಂಪೂರ್ಣ ಪುಡಿಯನ್ನು ಹಾಕಿ 24 ಗಂಟೆಯೊಳಗಡೆ ಕುಡಿಯಲು ಬಳಸುವ ಮೂಲಕ ಬಿಸಿಲಿನ ಪ್ರಖರತೆಯಿಂದ ಉಂಟಾಗುವ ನಿರ್ಜಲೀಕರಣವನ್ನು ತಡೆಯಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ನಿರ್ಜಲೀಕರಣ ತಡೆಗಟ್ಟಲು ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದ್ದು, ಜೊತೆಗೆ ಜಿಲ್ಲಾ ಕಾಲರಾ ತಂಡದಿಂದ ಕುಡಿಯುವ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷಿಸಿ ಕುಡಿಯಲು ಯೋಗ್ಯವೆಂದು ಖಚಿತಪಡಿಸಿದ ನಂತರವೇ ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನಲೆ ಜಿಲ್ಲೆಯ ಗಡಿಭಾಗದಲ್ಲಿ ಹಾಗೂ ಇತರೆಡೆ ತೆರೆದಿರುವ 24 ಚೆಕ್‍ಪೋಸ್ಟ್ ಸಿಬ್ಬಂದಿಯವರಿಗೆ ಓಆರ್‍ಎಸ್ ಪೊಟ್ಟಣಗಳನ್ನು ಹಾಗೂ ತುರ್ತು ಚಿಕಿತ್ಸಾ ಔಷಧಿಗಳನ್ನು ವಿತರಿಸಲಾಗಿದೆ. ಸಾರ್ವಜನಿಕರು ಮಧ್ಯಾಹ್ನದ ವೇಳೆ ಅಗತ್ಯವೆನಿಸುವ ಸಂದರ್ಭಗಳಲ್ಲಿ ಮನೆಯಿಂದ ಹೊರ ಬರುವಾಗ ಶುದ್ಧ ಕುಡಿಯುವ ನೀರು, ಛತ್ರಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಮಕ್ಕಳಿಗೆ ಆದಷ್ಟು ತಲೆಯ ಮೇಲೆ ನೀರಿನಿಂದ ಒದ್ದೆ ಬಟ್ಟೆಯನ್ನು ಹಾಕಬೇಕು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗದಂತೆ ಕಾಳಜಿವಹಿಸಬೇಕು ಎಂದು ಅವರು ತಿಳಿಸಿದ್ದಾರೆ. *ಸಾಮಾನ್ಯ ಅಪಾಯದ ಚಿಹ್ನೆಗಳು:* ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಚರ್ಮವು ಬಿಸಿ ಹಾಗೂ ಕೆಂಪಾದ ಒಣಚರ್ಮ, ಆತಂಕ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ, ಮಕ್ಕಳಲ್ಲಿ ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಆಲಸ್ಯ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಇವೆಲ್ಲವುಗಳೂ ಸಾಮಾನ್ಯ ಅಪಾಯದ ಚಿಹ್ನೆಗಳಾಗಿವೆ. ಬಿಸಿಲಿನ ಶಾಖಾಘಾತಕ್ಕೆ ಅಗತ್ಯ ತುರ್ತು ಚಿಕಿತ್ಸೆ: ಶಾಖಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿರುವೆಡೆಗೆ ಸ್ಥಳಾಂತರಿಸಿ. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಿ. ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು ಮತ್ತು ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು. ರಾಷ್ಟ್ರೀಯ ಹವಮಾನ ಬದಲಾವಣೆ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಡಾ.ಅಬ್ದುಲ್ಲಾ ರವರ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಅಲ್ಲದೇ ಪ್ರತಿ ದಿನ ಪತ್ರಿಕೆಗಳು, ರೇಡಿಯೋ, ದೂರದರ್ಶನ ಮತ್ತು ಜಿಲ್ಲಾ ವಿಪತ್ತು ಪ್ರಾಧಿಕಾರದ ಮೂಲಕ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------