ಮಂಗಳವಾರ, ಏಪ್ರಿಲ್ 23, 2024

ಕಂಪ್ಲಿ: ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ

ಬಳ್ಳಾರಿ,ಏ.23(ಕರ್ನಾಟಕ ವಾರ್ತೆ): ಮತದಾನ ಮಾಡುವುದು ಎಲ್ಲರ ಕರ್ತವ್ಯವಾಗಿದ್ದು, ಮೇ 07 ರಂದು ನಡೆಯುವ ಲೋಕಸಭಾ ಚುನಾವಣೆಗೆ ತಪ್ಪದೇ ಮತದಾನ ಮಾಡಬೇಕು ಎಂದು ತಹಶೀಲ್ದಾರ ಶಿವರಾಜ ಅವರು ಹೇಳಿದರು. ಚುನಾವಣೆ ಪರ್ವ ದೇಶದ ಗರ್ವ ಎನ್ನುವ ಚುನಾವಣೆ ಆಯೋಗದ ಸಂದೇಶದೊಂದಿಗೆ ಕಂಪ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಪುರಸಭೆ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಅಂಗವಾಗಿ ಸೋಮವಾರದಂದು ಕಂಪ್ಲಿ ಪುರಸಭೆ ಕಚೇರಿಯಿಂದ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ತಾಪಂ ಇಒ ಶ್ರೀಕುಮಾರ್ ಅವರು ಮಾತನಾಡಿ, ಮತ ಎನ್ನುವುದು ಮಾರಾಟಕ್ಕಿಲ್ಲ, ಯಾವುದೇ ಆಮಿಷಗಳಿಗೆ ಬಲಿಯಾಗದೇ ನಿರ್ಭೀತರಾಗಿ ಮತ ಚಲಾಯಿಸಿ ಎಂದು ತಿಳಿಸಿದರು. ಚುನಾವಣೆ ಸಂದೇಶಗಳ ಜಾಗೃತಿ ಫಲಕಗಳ ಮೂಲಕ ಪಂಜಿನ ಮೆರವಣಿಗೆಯು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ನಡವಲ ಮಸೀದಿ, ತರಕಾರಿ ಮಾರುಕಟ್ಟೆ, ಸಣಾಪುರ ರಸ್ತೆ, ಶ್ರೀ ಸತ್ಯನಾರಾಯಣಪೇಟೆ, ಶಿಬಿರದಿನ್ನಿ, ನಂ.10 ಮುದ್ದಾಪುರ ಮಾರ್ಗವಾಗಿ ಹೊಸಪೇಟೆ ರಸ್ತೆಯಿಂದ ಮರಳಿ ಅಂಬೇಡ್ಕರ್ ವೃತ್ತಕ್ಕೆ ಬಂದು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಅಂತ್ಯಗೊಂಡಿತು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಗ್ರಾಮೀಣ ಉದ್ಯೋಗ ಖಾತರಿಯ ಸಹಾಯಕ ನಿರ್ದೇಶಕ ಮಲ್ಲನಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ