ಶುಕ್ರವಾರ, ಏಪ್ರಿಲ್ 19, 2024
ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ ಬಲಿಷ್ಠ ಪ್ರಜಾಪ್ರಭುತ್ವಕ್ಕೆ ತಪ್ಪದೇ ಎಲ್ಲರೂ ಮತದಾನ ಮಾಡಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ಏ.19(ಕರ್ನಾಟಕ ವಾರ್ತೆ):
ಮತದಾನ ಎಲ್ಲರಿಗೂ ದೊರೆತಿರುವ ಸಂವಿಧಾನಿಕ ಹಕ್ಕಾಗಿದ್ದು, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ತಪ್ಪದೇ ಮತದಾನ ಮಾಡುತ್ತೇನೆ ಎಂಬ ದೃಢಸಂಕಲ್ಪ ಹೊಂದಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಮತ್ತು ಬಳ್ಳಾರಿ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಮತದಾನ ಜಾಗೃತಿ ಅಂಗವಾಗಿ ನಗರದ ಬೆಳಗಲ್ ರಸ್ತೆಯಿಂದ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಹಬ್ಬವಾದ ಮತದಾನದಲ್ಲಿ ಎಲ್ಲರೂ ಭಾಗಿಯಾಗಬೇಕು. ಬಳ್ಳಾರಿ ನಗರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಯಾವುದೇ ಆಮಿಷಕ್ಕೆ ಒಳಗಾಗದೇ ಎಲ್ಲರೂ ಮತ ಚಲಾಯಿಸಬೇಕು. ಯಾರೂ ಮತದಾನದಿಂದ ತಪ್ಪಿಸಬಾರದು ಎಂದು ತಿಳಿಸಿದರು.
ಬಳಿಕ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯು ನಗರದ ಬೆಳಗಲ್ ರಸ್ತೆಯಿಂದ ಪ್ರಾರಂಭವಾಗಿ ಕೌಲ್‍ಜಾರ್ ಮೂಲಕ ಮೊದಲನೇ ರೈಲ್ವೇ ಗೇಟ್ ಬಳಿ ಮುಕ್ತಾಯಗೊಂಡಿತು.
ಪಂಜಿನ ಮೆರವಣಿಗೆಯಲ್ಲಿ ‘ಓಟ್ ಮಾಡಿದವನೇ ಹೀರೋ’, ‘ನಿಮ್ಮ ಮತ - ನಿಮ್ಮ ಭವಿಷ್ಯ’, ‘ಜನ ಸಾಮಾನ್ಯರ ಶಕ್ತಿ ಮತ ಚಲಾವಣೆ’, ‘ಮತದಾನ ಮಾಡಿದವನೇ ಶೂರ’, ‘ಪ್ರಜಾಪ್ರಭುತ್ವ ನಮ್ಮಿಂದ ಮತದಾನ ಹೆಮ್ಮೆಯಿಂದ’ ಎನ್ನುವ ಮತದಾನ ಜಾಗೃತಿ ಮೂಡಿಸುವ ಮಾಹಿತಿ ಫಲಕಗಳು ಸಾರ್ವಜನಿಕರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ತಾಪಂ ಇಒ ಮಡಗಿನ ಬಸಪ್ಪ, ಸಿಡಿಪಿಒ ನಾಗರಾಜ ಸೇರಿದಂತೆ ಬಳ್ಳಾರಿ ತಾಲ್ಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ