ಬುಧವಾರ, ಏಪ್ರಿಲ್ 17, 2024
ಸಮುದಾಯದಲ್ಲಿ ರೋಗಗಳ ತಡೆಗೆ ವ್ಯಾಪಕ ಜಾಗೃತಿ ಅಗತ್ಯ: ಡಾ.ಅಂಬಾರಾಯ್ ರುದ್ರವಾಡಿ
ಬಳ್ಳಾರಿ,ಏ.17(ಕರ್ನಾಟಕ ವಾರ್ತೆ):
ಜನ ಸಮುದಾಯಕ್ಕೆ ಬೇಕಾಗುವ ವೈದ್ಯಕೀಯ ಸೇವೆಗಳನ್ನು ನೀಡಿ, ಯಾವುದೇ ಹೊಸ ರೋಗ ಉಲ್ಬಣಿಸದಂತೆ ಪೂರಕ ವಾತಾವರಣ ಸೃಷ್ಟಿಸುವ ಕಾರ್ಯ ಮಾಡಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರ್ಗಿ ವಿಭಾಗೀಯ ಸಹ ನಿರ್ದೇಶಕ ಡಾ.ಅಂಬಾರಾಯ್.ಎಸ್ ರುದ್ರವಾಡಿ ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಎಮ್‍ಎ ಸಭಾಂಗಣದಲ್ಲಿ ‘ನನ್ನ ಆರೋಗ್ಯ-ನನ್ನ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವದಾದ್ಯಂತ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಏ.07 ರಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲು ನಿರ್ದೇಶನವಿದ್ದು, ಪ್ರತಿವರ್ಷ ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸಮುದಾಯದಲ್ಲಿ ಹೊಸ ರೋಗ ಕಂಡುಬಂದಾಗ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಿ ಚಿಕಿತ್ಸೆಯಿಂದ ರೋಗ ತಡೆಗಟ್ಟುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದರ ಮೂಲಕ ಜನರನ್ನು ರೋಗದಿಂದ ಬಾಧೀತರಾಗದಂತೆ ಮಾಡಬೇಕಿದೆ ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರ್ಗಿ ವಿಭಾಗೀಯ ಉಪನಿರ್ದೇಶಕ ಶರಣಬಸಪ್ಪ ಗಣಜಲಖೇಡ ಅವರು ಮಾತನಾಡಿ, ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಮಧುಮೇಹ ರಕ್ತದೊತ್ತಡ, ಹೃದಯಾಘಾತ, ಖಿನ್ನತೆ ಮುಂತಾದ ರೋಗಗಳು ಹೆಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಇಂದಿನ ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವಿಲ್ಲದಂತಾಗಿದೆ. ನಾವೆಲ್ಲರೂ ಆಹಾರ ಪದ್ಧತಿಯ ಬದಲಾವಣೆಯಿಂದ ಹೆಚ್ಚಿನ ರೋಗಗಳನ್ನು ಔಷಧಿ ಇಲ್ಲದೆ ನಿಯಂತ್ರಿಸಬಹುದು. ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಬಿರುಸು ನಡಿಗೆ, ವ್ಯಾಯಾಮ, ಈಜು, ಸೈಕ್ಲಿಂಗ್ ಮುಂತಾದವುಗಳನ್ನು ಅಳವಡಿಸಿಕೊಂಡಲ್ಲಿ ರಕ್ತದೊತ್ತಡ ಮತ್ತು ಹೃದಯಾಘಾತ ತಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶಬಾಬು ಅವರು ಮಾತನಾಡಿ, ಬೇಸಿಗೆಯ ಹಿನ್ನಲೆಯಲ್ಲಿ ಮಧ್ಯಾಹ್ನ 1 ರಿಂದ 4 ಗಂಟೆಯವರೆಗೆ ಗರ್ಭಿಣಿ, ವಯೋವೃದ್ದರು, ಚಿಕ್ಕ ಮಕ್ಕಳು, ದೀರ್ಘಾವಧಿ ಕಾಯಿಲೆಯುಳ್ಳವರು ಮನೆಯ ಹೊರಗೆ ಬರಬಾರದು ಎಂದರಲ್ಲದೇ ಬಿಸಿಲಿನ ಶಾಖಾಘಾತದಿಂದ ಯಾವುದೇ ಪ್ರಕರಣ ಉಂಟಾಗದಂತೆ ವ್ಯಾಪಕ ಜಾಗೃತಿ ನೀಡಲು ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಆರ್.ಅಬ್ದುಲ್ಲಾ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಮರಿಯಂಬಿ ವಿ.ಕೆ., ಡಾ.ಇಂದ್ರಾಣಿ.ವಿ, ಡಾ.ವೀರೇಂದ್ರಕುಮಾರ, ಡಾ.ಹನುಮಂತಪ್ಪ, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ, ಡಾ.ಅರುಣ್, ಡಾ.ಮಂಜುನಾಥ ಜವಳಿ, ಸಿಎಮ್‍ಓ ಡಾ.ಸತೀಶ್, ಡಾ.ಗುರುನಾಥ, ಹಿರಿಯ ವೈದ್ಯರಾದ ಡಾ.ನರಸಿಂಹಮೂರ್ತಿ, ಡಾ.ರೋಹನ್ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಆರೋಗ್ಯ ನಿರೀಕ್ಷಣಾಧಿಕಾರಿ ವಿ.ಆರ್.ಕುಂಬಾರ, ಡಿಎನ್‍ಓ ಗಿರೀಶ್, ಡಿಪಿಎಮ್ ವೇಂಕೋಬ ನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ