ಮಂಗಳವಾರ, ಏಪ್ರಿಲ್ 23, 2024
ಮಿನೆರಾ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮತದಾನದಲ್ಲಿ ಪ್ರಜೆಗಳೇ ನಿರ್ಣಾಯಕರು, ತಪ್ಪದೇ ಮತದಾನ ಮಾಡಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಕರೆ
ಬಳ್ಳಾರಿ,ಏ.23(ಕರ್ನಾಟಕ ವಾರ್ತೆ):
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಅಂತಿಮ ನಿರ್ಣಾಯಕರಾಗಿದ್ದು, ಮೇ 07 ರಂದು ನಡೆಯುವ ಲೋಕಸಭಾ ಚುನಾವಣೆಗೆ ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಸಂಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕೈಗಾರಿಕಾ ವಲಯಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸುಲ್ತಾನಪುರ ಬಳಿಯ ಮಿನೆರಾ ಕಾರ್ಖಾನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನ ಸಂಭ್ರಮವಾದಾಗ ಮಾತ್ರ ದೇಶ ಬದಲಾಗುತ್ತದೆ. ಎಲ್ಲರೂ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡಿದರು.
ನಿಮ್ಮ ಮತ- ನಿಮ್ಮ ಹಕ್ಕಾಗಿದ್ದು, ನಿಮ್ಮ ಒಂದು ಮತದಿಂದ ದೇಶದ ಭವಿಷ್ಯ ಅಡಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರಜೆಗಳು ಮತದಾನ ಮಾಡುವ ಮೂಲಕ ದೇಶದ ಸುಭದ್ರವಾದ ಸರ್ಕಾರವನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.
ಕೈಗಾರಿಕೆಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿಯು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕೆಲಸದ ಒತ್ತಡದಿಂದ ಮತದಾನ ದಿನದಂದು ಯಾರೂ ಹೊರಗುಳಿಯುವಂತಿಲ್ಲ. ಚುನಾವಣಾ ಆಯೋಗವು ಮೇ 07 ವೇತನ ಸಹಿತ ರಜೆ ನೀಡಿದೆ ಎಂದರು.
ಇದೇ ವೇಳೆ ಮೇ 07 ರಂದು ಕಡ್ಡಾಯವಾಗಿ ಮತದಾನ ಮಾಡುತ್ತೇನೆ ಎಂದು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಸಂಡೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ, ತಾಪಂ ಇಒ ಷಡಕ್ಷರಯ್ಯ, ಮಿನೇರಾ ಸ್ಟೀಲ್ಸ್ ಮತ್ತು ಪವರ್ ಪ್ರೈ ಲಿಮಿಟೆಡ್‍ನ ನಿರ್ದೇಶಕ ಹನುಮಂತ ರೆಡ್ಡಿ, ಗಿರೀಶ್ ಕುಮಾರ್, ತೋರಣಗಲ್ಲು ಗ್ರಾಪಂ ಅಧಿಕಾರಿ ಎಂ.ಸಿದ್ದಲಿಂಗಸ್ವಾಮಿ, ತಾಲ್ಲೂಕು ಐಇಸಿ ಸಂಯೋಜಕ ಯಂಕಪ್ಪ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಹಾಗೂ 400 ಕಾರ್ಮಿಕರು ಹಾಜರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ