ಸೋಮವಾರ, ಏಪ್ರಿಲ್ 29, 2024

ಅಗತ್ಯ ಸೇವೆಗಳ ಮತದಾರರು ಮೇ 01 ರಿಂದ ಮತ ಚಲಾವಣೆಗೆ ಅವಕಾಶ

ಬಳ್ಳಾರಿ,ಏ.29(ಕರ್ನಾಟಕ ವಾರ್ತೆ): ಬಳ್ಳಾರಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಕರ್ತವ್ಯ ನಿಮಿತ್ಯ ಮತದಾನ ದಿನದಂದು ಗೈರು ಹಾಜರಿ ಹಾಗೂ ಅಗತ್ಯ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮೇ 01 ರಿಂದ 03 ರವರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ನಗರದ ರೈಲ್ವೆ ನಿಲ್ದಾಣ ಎದುರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಚುನಾವಣೆ ನಿಮಿತ್ಯ ಮೇ 07 ರಂದು ಮತದಾನ ನಡೆಯಲಿದ್ದು, ಅಂದು ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ವಿವಿಧ ಕ್ಷೇತ್ರಗಳ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗವು ಮತದಾನ ಮಾಡಲು ವಿಶೇಷ ಕಲ್ಪಿಸಿದೆ. ಇದಕ್ಕಾಗಿ ಚುನಾವಣಾ ಆಯೋಗ ಅಗತ್ಯ ಸೇವೆಗಳಡಿ ಗುರುತಿಸಿರುವ ವಿವಿಧ ಕ್ಷೇತ್ರಗಳ ಸಂಬಂಧಪಟ್ಟ ಅಧಿಕಾರಿಗಳಿಂದ ಅಂತಹ ಮತದಾರರನ್ನು ಗುರುತಿಸಲಾಗಿದ್ದು, ಅಂತಹ ಮತದಾರರು ತಮ್ಮ ಮತವನ್ನು ಚಲಾಯಿಸಲು ಮೇ 01 ರಿಂದ 03 ರವರೆಗೆ ಅವಕಾಶ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಕೆಪಿಸಿಎಲ್ ಸಂಸ್ಥೆಯ 65 ನೌಕರರು, ಆರೋಗ್ಯ ಇಲಾಖೆ-40, ವಿಮ್ಸ್-08, ಜಿಲ್ಲಾ ಆಸ್ಪತ್ರೆ-41, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ-423, ಅಗ್ನಿಶಾಮಕ ದಳ-67, ಮಾಧ್ಯಮದವರು-07, ಟ್ರಾಫಿಕ್ ಪೊಲೀಸ್-74, ಆರೋಗ್ಯ ಇಲಾಖೆ ಗುರುತಿಸಿರುವ ಆಂಬುಲೆನ್ಸ್ ಸಿಬ್ಬಂದಿ-25, ಕಾರಾಗೃಹ ಇಲಾಖೆ-82, ಕಂಟ್ರೋಲ್ ರೂಂ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ-30 ಸೇರಿದಂತೆ ಒಟ್ಟು 862 ಮತದಾರರಿಗೆ ಈಗಾಗಲೆ 12-ಡಿ ನಮೂನೆ ವಿತರಿಸಿ, ಭರ್ತಿ ಮಾಡಿದ ನಮೂನೆಯನ್ನು ಈಗಾಗಲೆ ಸ್ವೀಕರಿಸಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಸಂಬಂಧ ಕರ್ತವ್ಯ ನಿರತ ಗೈರು ಹಾಜರಿ ಮತದಾರರು ನಗರದ ರೈಲ್ವೆ ನಿಲ್ದಾಣ ಎದುರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಸ್ಥಾಪಿಸಲಾಗಿರುವ ಅಂಚೆ ಮತದಾನ ಕೇಂದ್ರಕ್ಕೆ (ಪೋಸ್ಟಲ್ ವೋಟಿಂಗ್ ಸೆಂಟರ್) ಮೇ 01 ರಿಂದ 03 ರವರೆಗೆ ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗಿನ ಅವಧಿಯಲ್ಲಿ ಆಗಮಿಸಿ ತಮ್ಮ ಮತ ಚಲಾಯಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ