ಶನಿವಾರ, ಏಪ್ರಿಲ್ 20, 2024
ವಿಎಸ್‍ಕೆವಿವಿ: ‘ವಿದ್ಯಾರ್ಥಿ ಮತ್ತು ರೈತರ ದುಂಡುಮೇಜಿನ ಪರಿಷತ್ತು’ ಕಾರ್ಯಕ್ರಮದಲ್ಲಿ ಪ್ರೊ.ವಿಜಯಕುಮಾರ್ ಮಲಶೆಟ್ಟಿ ಅಭಿಪ್ರಾಯ | ರೈತರನ್ನು ಕಡೆಗಣಿಸಬೇಡಿ
ಬಳ್ಳಾರಿ,ಏ.20(ಕರ್ನಾಟಕ ವಾರ್ತೆ):
ರೈತ ನಮ್ಮ ಸಮಾಜದ ಬೆನ್ನೆಲುಬು. ಅವರ ವೇಷಭೂಷಣಗಳಿಂದ ಕಡೆಗಣಿಸಬಾರದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ವಿಜಯಕುಮಾರ್ ಬಿ.ಮಲಶೆಟ್ಟಿ ಅವರು ಅಭಿಪ್ರಾಯ ಪಟ್ಟರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಪ್ರದರ್ಶನ ಕಲೆ ನಾಟಕ, ಕನ್ನಡ ಮತ್ತು ಇಂಗ್ಲೀಷ್ ಅಧ್ಯಯನ ವಿಭಾಗಗಳು ಜಂಟಿಯಾಗಿ ಶನಿವಾರ ಆಯೋಜಿಸಿದ್ದ ವಿಶ್ವವಿದ್ಯಾಲಯದಿಂದ ವ್ಯವಸಾಯದೆಡೆಗೆ ಎನ್ನುವ ಘೋಷಣೆಯೊಂದಿಗೆ ‘ವಿದ್ಯಾರ್ಥಿ ಮತ್ತು ರೈತರ ದುಂಡುಮೇಜಿನ ಪರಿಷತ್ತು’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಉತ್ಪಾದನೆಯಲ್ಲಿ ಕೃಷಿ ಸಬಲೀಕರಣಗೊಳಿಸಲು ಡಾ.ಬಾಬು ಜಗಜೀವನ ರಾಮ್ ಅವರ ಹಸಿರು ಕ್ರಾಂತಿ ಮಹತ್ತರವಾಗಿದೆ. ನಗರೀಕರಣದಿಂದಾಗಿ ಕೃಷಿಯೋಗ್ಯ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದೆ. ಮೂಲಸೌಕರ್ಯಗಳ ಕೊರತೆಯಿಂದಾಗಿ ಇಂದು ರೈತರಿಗೆ ದೊಡ್ಡ ಸಮಸ್ಯೆಗಳಾಗಿ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತರ ಕುರಿತಾಗಿ ವಿಶ್ವವಿದ್ಯಾಲಯದಿಂದ ಆಯೋಜಿಸಿದ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕೃಷಿ ಸಂಬಂಧಿತ ಕೋರ್ಸ್‍ಗಳನ್ನು ಆರಂಭಿಸುವ ವಿಚಾರವನ್ನು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ವ್ಯವಸಾಯದಲ್ಲಿರುವಷ್ಟು ಸ್ವಾಭಿಮಾನ, ಸ್ವಾತಂತ್ರ್ಯ ಯಾವ ಕೆಲಸದಲ್ಲೂ ಇರುವುದಿಲ್ಲ. ವ್ಯವಸಾಯವನ್ನು ಕೀಳಾಗಿ ಕಾಣದೆ, ಉದ್ಯಮೆಯನ್ನಾಗಿ ಅಳವಡಿಸಿಕೊಂಡರೆ ರೈತರು ಅಭಿವೃದ್ದಿಯಾಗುತ್ತಾರೆ ಎಂದು ತಿಳಿಸಿದರು.
ರೈತ ಮುಖಂಡ ಮಾಧವರೆಡ್ಡಿ ಮಾತನಾಡಿ, ಕೃಷಿ ಭೂಮಿಯಿರುವ ರೈತರು ಸಾಕಷ್ಟಿದ್ದಾರೆ, ಉಳುಮೆ ಮಾಡುವವರು ಸಂಖ್ಯೆ ಕಡಿಮೆಯಿದೆ. ಉದ್ಯೋಗದ ಸಮಸ್ಯೆಗೆ ವೃತ್ತಿಯ ಜೊತೆಗೆ ಕೃಷಿಯನ್ನು ಅಳವಡಿಸಿಕೊಳ್ಳಿ ಸಲಹೆ ನೀಡಿದರು.
ಮತ್ತೊಬ್ಬ ರೈತ ಮುಖಂಡ ಶಿವಶಂಕರ ವಿ.ಎಸ್ ಮಾತನಾಡಿ, ಭಾರತವು ಆಹಾರ ಭದ್ರತೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೃಷಿ ಉತ್ಪನ್ನಗಳ ಖರೀದಿಗೆ ಬಹರಾಷ್ಟ್ರೀಯ ಕಂಪನಿಗಳು ಏಕಸ್ವಾಮ್ಯದಿಂದಾಗಿ ರೈತ ವಂಚಿತನಾಗುತ್ತಿದ್ದಾನೆ. ವಿಶ್ವವಿದ್ಯಾಲಯಗಳು ರೈತರಿಗೆ ಬೆಂಬಲವಾಗಿರಬೇಕು ಎಂದು ಅಭಿಪ್ರಾಯ ಪಟ್ಟರು.
ರೈತ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ವ್ಯವಸಾಯ ನಮ್ಮ ಜೀವನದ ಭಾಗವಾಗಿದೆ. ರೈತರ ಸಬಲೀಕರಣ ಮತ್ತು ರಕ್ಷಣೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳು ಸರಿಯಾಗಿ ಸಿಗುತ್ತಿಲ್ಲ. ಕೃಷಿ ಉತ್ಪನ್ನ ಸಂಗ್ರಹ ವ್ಯವಸ್ಥೆಯಿಂದಾಗಿ ಕನಿಷ್ಠ ಬೆಂಬಲ ಸಿಗದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕರಾದ ಪ್ರೊ.ಎನ್.ಶಾಂತನಾಯ್ಕ, ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಪ್ರೊ.ರಾಬರ್ಟ್ ಜೋಸ್, ಜಂಗ್ಲಿಸಾಬ್, ದರೂರ ಪುರುಷೋತ್ತಮ ರೆಡ್ಡಿ, ವೆಂಕಟೇಶ್, ಇಂಗ್ಲೀಷ್ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಾತ್ಸಲ್ಯ, ನಾಟಕ ವಿಭಾಗದ ಅತಿಥಿ ಉಪನ್ಯಾಸಕರುಗಳಾದ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ಸಹನಾ ಪಿಂಜಾರ, ಹೇಮೇಶ್ವರ.ಕೆ ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ರೈತರು ಉಪಸ್ಥಿತರಿದ್ದರು.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ