ಮಂಗಳವಾರ, ಜೂನ್ 4, 2024

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ | ಜಿಲ್ಲೆಯಾದ್ಯಂತ ಸುಸೂತ್ರ ಮತದಾನ, ಶೇ.67.78 ರಷ್ಟು ಮತದಾನ

ಬಳ್ಳಾರಿ,ಜೂ.03(ಕರ್ನಾಟಕ ವಾರ್ತೆ): ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾನ ದಿನವಾದ ಜೂ.03 ಸೋಮವಾರದಂದು ಬಳ್ಳಾರಿ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಿತು. ಅಂತಿಮ ವರದಿಯಂತೆ ಶೇ.67.78 ರಷ್ಟು ಮತದಾನವಾಗಿದೆ. ಕಂಪ್ಲಿ, ಸಿರುಗುಪ್ಪ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 10,555 ಪುರುಷರು, 5,837 ಮಹಿಳೆಯರು ಸೇರಿದಂತೆ 16,392 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಮಾಡುವುದು ಕಂಡುಬಂತು. ಬಳ್ಳಾರಿ ನಗರ ಕ್ಷೇತ್ರದ ಬಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ಮತದಾನ ಕೇಂದ್ರಗಳಿದ್ದು, ಪದವೀಧರ ಮತದಾರರು ಸಾಲುಗಟ್ಟಿ ಬಂದು ತಮ್ಮ ಮತದಾನ ಹಕ್ಕು ಚಲಾಯಿಸಿದರು. ಅದರಂತೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮೋಕಾ ಗ್ರಾಮ ಪಂಚಾಯತ್ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿ ಪದವೀಧರ ಯುವ ಮತದಾರರು, ಶಿಕ್ಷಕರು ತಮ್ಮ ಮತದಾನ ಹಕ್ಕು ಚಲಾಯಿಸಿ ಮತದಾನ ಶಾಹಿ ಬೆರಳು ತೋರಿಸಿ ಖುಷಿಪಟ್ಟರು. ಮತದಾನ ಕೇಂದ್ರಗಳಿಗೆ ಬರುವ ಮತದಾರರ ಹೆಸರು, ನೋಂದಣಿ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಹುಡುಕಿ ಕಳುಹಿಸುವ ಕಾರ್ಯ ಮತಗಟ್ಟೆ ಅಧಿಕಾರಿಗಳು ಮಾಡಿದರು. ಬಳ್ಳಾರಿ ಜಿಲ್ಲೆಯ ಒಟ್ಟು 24 ಮತಗಟ್ಟೆ ಕೇಂದ್ರಗಳಿಗೆ ಪೆÇಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. *ಮತ ಚಲಾಯಿಸಿದ ತಂದೆ, ಮಗಳು:* ಬಳ್ಳಾರಿ ನಗರ ನಿವಾಸಿಗಳಾದ ಕರಿಬಸಪ್ಪ ಮತ್ತು ಅವರ ಪುತ್ರಿ ಜಡಿಯಮ್ಮ ಅವರು ಒಂದೇ ಮತದಾನ ಕೇಂದ್ರವಾದ ಬಾಲ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾಯಿಸಿದರು. ಅಪ್ಪ, ಮಗಳು ಒಟ್ಟಾಗಿ ಮತದಾನ ಮಾಡಿದ್ದಕ್ಕಾಗಿ ಹರ್ಷದ ನಗೆ ಬೀರಿದರು. ವಿಧಾನ ಪರಿಷತ್ತಿನ ಸದಸ್ಯ ವೈ.ಎಂ.ಸತೀಶ್ ಅವರು, ಬಳ್ಳಾರಿಯ ಮುಖ್ಯ ಅಂಚೆ ಕಚೇರಿ ಹತ್ತಿರದ ಬಾಲಕೀಯರ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 75 ರಲ್ಲಿ ಮತಚಲಾವಣೆ ಮಾಡಿದರು. “ಇದಕ್ಕೂ ಮೊದಲು ಬಳ್ಳಾರಿಯಲ್ಲಿ ಮತದಾನ ಕೇಂದ್ರ ಇತ್ತು. ಜಿಲ್ಲೆಯಲ್ಲಿ ಈ ಬಾರಿ ಅತಿಹೆಚ್ಚು ಪದವೀಧರರು ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವುದರಿಂದ, ನಮ್ಮ ಹತ್ತಿರದ (ಮೋಕ) ಗ್ರಾಮದಲ್ಲಿಯೇ ಮತದಾನ ಕೇಂದ್ರ ತೆರೆದಿದ್ದು, ಮತದಾನ ಮಾಡಲು ನಮಗೆ ಅನುಕೂಲವಾಗಿದೆ. ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.” - ಚೈತನ್ಯ, ವಿಶೇಷ ಚೇತನರು, ಸಿರಿವಾರ ಗ್ರಾಮ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ