ಬುಧವಾರ, ಫೆಬ್ರವರಿ 5, 2025

ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ‘ಬುಡಕಟ್ಟು ಉತ್ಸವ’ ಆಯೋಜನೆ | ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಕೈಗೊಳ್ಳಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನಿರ್ದೇಶನ

ಬಳ್ಳಾರಿ,ಫೆ.05(ಕರ್ನಾಟಕ ವಾರ್ತೆ): ಬರುವ ಮಾರ್ಚ್ ಮೊದಲ ವಾರದಲ್ಲಿ ಬಳ್ಳಾರಿಯಲ್ಲಿ ರಾಜ್ಯಮಟ್ಟದ ‘ಬುಡಕಟ್ಟು ಉತ್ಸವ’ ಆಯೋಜಿಸಲಾಗುತ್ತಿದ್ದು, ಬುಡಕಟ್ಟು ಸಮುದಾಯದ ಭಾಷೆ, ಕಲೆ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಉಡುಗೆ-ತೊಡುಗೆ ಬಿಂಬಿಸಲು ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಸಕಲ-ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಹೇಳಿದರು. ರಾಜ್ಯಮಟ್ಟದ ಬುಡಕಟ್ಟು ಉತ್ಸವವನ್ನು ಬಳ್ಳಾರಿಯಲ್ಲಿ ಆಯೋಜಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2024-25 ನೇ ಸಾಲಿನ ಪರಿಷ್ಟ ಪಂಗಡ ಉಪಯೋಜನೆಯಡಿ ರಾಜ್ಯ ಮಟ್ಟದ ‘ಬುಡಕಟ್ಟು ಉತ್ಸವ’ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಆಯೋಜಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ರೂಪು-ರೇಷೆ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಬಳ್ಳಾರಿಯಲ್ಲಿ ಮೊಟ್ಟ-ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಒಂದು ದಿನದ ರಾಜ್ಯ ಮಟ್ಟದ ‘ಬುಡಕಟ್ಟು ಉತ್ಸವ’ ದ ಸ್ಥಳ ಮತ್ತು ದಿನ ನಿಗದಿಪಡಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಲಹೆ-ಸೂಚನೆ ಬುಡಕಟ್ಟು ಸಮುದಾಯದ ಮುಖಂಡರಿAದ ಪಡೆಯಬೇಕು ಎಂದು ತಿಳಿಸಿದರು. ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ರಾಜ್ಯದ ವಿವಿಧೆಡೆಯಿಂದ 600 ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅವರಿಗೆಲ್ಲಾ ತಂಗಲು ಉಟ-ವಸತಿ ವ್ಯವಸ್ಥೆ, ವಾಹನ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಅದರಂತೆ, ಜಿಲ್ಲೆಯ ವಿವಿಧ ಪರಿಶಿಷ್ಟ ವರ್ಗಗಳ ವಸತಿ ನಿಲಯ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಲು ಬುಡಕಟ್ಟು ಸಮುದಾಯದ ಕುರಿತಾಗಿ ಕವಿತೆಗಳು, ಕಾವ್ಯ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಬೇಕು ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ವಲಯ ಜಂಟಿ ನಿರ್ದೇಶಕ ಅಶೋಕ ಚೆಲವಾದಿ ಅವರು ಮಾತನಾಡಿ, ಬುಡಕಟ್ಟು ಉತ್ಸವವು ಪರಿಶಿಷ್ಟ ಪಂಗಡದ ವಿವಿಧ ಬುಡಕಟ್ಟು ಸಮುದಾಯದ ಕಲಾವಿದರಿಗೆ ಅವರ ಸಾಹಿತ್ಯ, ಕಲೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು. ಸಮುದಾಯದಲ್ಲಿ ಕವಿಗಳು, ಜಾನಪದ, ನೃತ್ಯ, ಸಂಗೀತ ಮತ್ತು ಚಿತ್ರ ಕಲಾವಿದರು, ಶಿಲ್ಪೆ ಕಲಾವಿದರು ಸಹ ಇದ್ದು, ಅವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದ ಮುಖಂಡರು ಮಾತನಾಡಿ, ಜಿಲ್ಲೆಯ ಐದು ತಾಲ್ಲೂಕುಗಳನ್ನೊಳಗೊಂಡ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಬುಡಕಟ್ಟು ನೆಲೆಗಳನ್ನು ಬಿಂಬಿಸುವAತಹ ಜನಮಾನಸ ಕಾರ್ಯಕ್ರಮವಾಗಬೇಕು. ಬುಡಕಟ್ಟು ಸಮುದಾಯದ ವೇಶ-ಭೂಷಣ ಪ್ರದರ್ಶಿಸಲು ವಸ್ತು-ಪ್ರದರ್ಶನ ಮಳಿಗೆ ಹಾಕಬೇಕು ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಲಯ ಜಂಟಿ ನಿರ್ದೇಶಕ ಬಸವರಾಜ ಹುಗಾರ, ಬಳ್ಳಾರಿಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬುಡಕಟ್ಟು ಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ