ಗುರುವಾರ, ಜುಲೈ 27, 2023

ಕೃಷಿ ಇಲಾಖೆ: ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವಂತೆ ಸೂಚನೆ

ಬಳ್ಳಾರಿ,ಜು.27(ಕರ್ನಾಟಕ ವಾರ್ತೆ): ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ನೊಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ (ನೀರಾವರಿ), ಮುಸುಕಿನ ಜೋಳ (ಮಳೆಯಾಶ್ರಿತ) ಹಾಗೂ ಹೋಬಳಿ ಮಟ್ಟದ ನೀರಾವರಿ/ಮಳೆಯಾಶ್ರಿತ ಬೆಳೆಗಳಾದ ಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ, ಹತ್ತಿ, ನೆಲಗಡಲೆ ಮತ್ತು ಮಳೆಯಾಶ್ರಿತ ಬೆಳೆಗಳಾದ ರಾಗಿ, ನವಣೆ, ಉರುಳಿ, ಎಳ್ಳು ಹಾಗೂ ನೀರಾವರಿ ಬೆಳೆಗಳಾದ ಈರುಳ್ಳಿ, ಕೆಂಪು ಮೆಣಸಿನಕಾಯಿ ಬೆಳೆಗಳು ಜಿಲ್ಲೆಯ ಬೆಳೆಗಳಾಗಿದ್ದು, ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆ ಮಾಡಿಸಬೇಕು. *ಬೆಳೆ ವಿಮೆ ಮಾಡಿಸಲು ಕೊನೆ ದಿನ:* ನೀರಾವರಿ/ಮಳೆಯಾಶ್ರಿತ ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ, ಕೆಂಪು ಮೆಣಸಿನಕಾಯಿ, ಜೋಳ, ಹಾಗೂ ನೀರಾವರಿ ತೊಗರಿ, ಈರುಳ್ಳಿ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜು. 31 ಕೊನೆಯ ದಿನವಾಗಿರುತ್ತದೆ. ನೀರಾವರಿ ಭತ್ತ, ಮಳೆಯಾಶ್ರಿತ ರಾಗಿ ಹಾಗೂ ನೀರಾವರಿ/ಮಳೆಯಾಶ್ರಿತ ತೊಗರಿ, ನವಣೆ, ನೆಲಗಡಲೆ, ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ. ನಿಗದಿಪಡಿಸಿದ ಅವಧಿಯೊಳಗೆ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ತಿಳಿಸಿದ್ದು, ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು/ಸಾರ್ವಜನಿಕ ಸೇವಾ ಕೇಂದ್ರಗಳನ್ನು (Common Service Centers) ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೊಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮತ್ತು ದೂ.08392-276224 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ