ಗುರುವಾರ, ನವೆಂಬರ್ 23, 2023

ಕರಡು ಮತದಾರರ ಪಟ್ಟಿ ಪ್ರಕಟ; ಡಿ.09 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ: ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ

ಬಳ್ಳಾರಿ,ನ.23(ಕರ್ನಾಟಕ ವಾರ್ತೆ): ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024 ಸಂಬಂಧಿಸಿದಂತೆ, ನ.23ರಂದು ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.09 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಹೇಳಿದರು. ಗುರುವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ-2024 ಸಂಬಂಧಿಸಿದಂತೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಯಲ್ಲಿ 17,737 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 11,061 ಪುರುಷರು ಹಾಗೂ 6,658 ಮಹಿಳೆಯರು ಮತ್ತು ಇತರೆ 4 ಅರ್ಜಿಗಳು ಸ್ವೀಕೃತವಾಗಿವೆ. ಕರಡು ಮತದಾರರ ಪಟ್ಟಿ ಅನ್ವಯ 17,723 ಅರ್ಜಿಗಳು ಸರಿಯಾಗಿದ್ದು, 14 ಅರ್ಜಿಗಳು ತಿರಸ್ಕತಗೊಂಡಿವೆ ಎಂದು ತಿಳಿಸಿದರು. ಚುನಾವಣಾ ಆಯೋಗ ನಿಗಧಿಪಡಿಸಿದಂತೆ, 2020ರ ನ.01 ಕ್ಕಿಂತ ಮುಂಚಿತವಾಗಿ ಪದವೀಧರರು ಆಗಿರಬೇಕು, ಆದರೆ ಈ ತಿರಸ್ಕøತ ಪ್ರಕರಣಗಳಲ್ಲಿ 2020ರ ನ.01 ನಂತರ ಪದವಿ ಪೂರ್ಣಗೊಳಿಸಿದ ಕಾರಣ ಮತ್ತು ಆಯೋಗ ನಿಗದಿಪಡಿಸಿದ ವಿದ್ಯಾರ್ಹತೆ ಇಲ್ಲದೇ ಇರುವುದರಿಂದ ತಿರಸ್ಕರಿಸಲಾಗಿದೆ ಎಂದು ವಿವರಿಸಿದರು. ಅರ್ಜಿದಾರರು, ಈ ಕರಡು ಮತದಾರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಇದೇ ನ.23 ರಿಂದ ಡಿ.09 ರವರೆಗೆ ಅವಕಾಶ ಕಲ್ಪಿಸಲಾಗಿದೆ. ತಮ್ಮ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತದಾರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಡಿ.30 ರಂದು ಪ್ರಕಟಿಸಲಾಗುವುದು ಎಂದು ಹೇಳಿದರು. ಕಳೆದ ವರ್ಷದಲ್ಲಿ ಒಟ್ಟು 11,000 ಮತದಾರರು ಇದ್ದರು. ಈ ಬಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಸೂಕ್ತ ಕ್ರಮ, ಸ್ವೀಪ್ ಚಟುವಟಿಕೆ ಹಾಗೂ ಸಮೂಹ ಮಾಧ್ಯಮಗಳ ಮೂಲಕ ಜಾಗೃತಿಯಿಂದಾಗಿ ಮತದಾರರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನು ಅರ್ಜಿ ಸಲ್ಲಿಸದೇ ಇರುವವರು ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ 2024ರ ಜ.01ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ