ಸೋಮವಾರ, ನವೆಂಬರ್ 13, 2023
ಬಳ್ಳಾರಿ ಮಹಾನಗರ ಪಾಲಿಕೆ: ಪರಿಸರ ಸ್ನೇಹಿ ಹಾಗೂ ಮಾಲಿನ್ಯ ರಹಿತ ದೀಪಾವಳಿ ಹಬ್ಬ ಆಚರಿಸಲು ಮನವಿ
ಬಳ್ಳಾರಿ,ನ.13(ಕರ್ನಾಟಕ ವಾರ್ತೆ):
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬವನ್ನು ಮಣ್ಣಿನ ಹಣತೆಗಳಲ್ಲಿ ದೀಪ ಹಚ್ಚುವ ಮೂಲಕ ಪರಿಸರ ಸ್ನೇಹಿ ಹಾಗೂ ಮಾಲಿನ್ಯ ರಹಿತ ದೀಪಾವಳಿ ಆಚರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್ ಅವರು ಮನವಿ ಮಾಡಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಷೇಧಿತ ಪಟಾಕಿಗಳನ್ನು ಸಿಡಿಸಬಾರದು, ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತದೆ. ಆದ್ದರಿಂದ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವುದು ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿ ಪರಿಸರ ಮಾಲಿನ್ಯ ಮತ್ತು ಪ್ರಾಣಹಾನಿಯನ್ನು ತಡೆಗಟ್ಟಲು ಮಹಾನಗರಪಾಲಿಕೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿಬೇಕು ಎಂದು ಅವರು ತಿಳಿಸಿದ್ದಾರೆ.
*ಮುಂಜಾಗ್ರತಾ ಕ್ರಮಗಳು:*
ಎಲ್ಲಾ ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇರುತ್ತದೆ. ಚಿಹ್ನೆ ಇಲ್ಲದ ಹಾಗೂ ಕ್ಯೂಆರ್ ಕೋಡ್‍ನಲ್ಲಿ ಪಟಾಕಿ ಮಾಹಿತಿ ಹಾಗೂ ತಯಾರಿಕಾ ಕಂಪನಿಯ ಹೆಸರು, ವಿಳಾಸ ಇಲ್ಲದೆ ಇರುವ ಯಾವುದೇ ಪಟಾಕಿಗಳನ್ನು ಸಿಡಿಸುವಂತಿಲ್ಲ, ಖರೀದಿಸುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ. ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗೂ ಅವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೈದ್ಯರಿಗೆ ತೊಂದರೆಯಾಗದಂತೆ ಬಳಸಬೇಕು ಎಂದು ಅವರು ತಿಳಿಸಿದ್ದಾರೆ.
ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗೂ ಇನ್ನಾವುದೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಬಳಸುವಂತಿಲ್ಲ, ಮಾರಾಟ ಮಾಡುವಂತಿಲ್ಲ. ರಾತ್ರಿ 08 ಗಂಟೆಯಿಂದ ರಾತ್ರಿ 10 ರವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ಇರುತ್ತದೆ. ಅಧಿಕೃತ ಪರವಾನಿಗೆ ಹೊಂದಿರುವವರಿಂದ ಮಾತ್ರ ಪಟಾಕಿಗಳನ್ನು ಖರೀದಿಸಬೇಕು.
ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ಮಾರಾಟ ಮಾಡಿದಲ್ಲಿ ಅಥವಾ ಅನಧಿಕೃತವಾಗಿ ಪಟಾಕಿಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಜಿ.ಖಲೀಲ್‍ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ