ಶುಕ್ರವಾರ, ನವೆಂಬರ್ 24, 2023
ಸಕ್ರಿಯ ಕ್ಷಯರೋಗ ಪತ್ತೆ ಚಿಕಿತ್ಸಾ ಆಂದೋಲನÀ ಯಶಸ್ವಿಗೆ ಸಹಕರಿಸಿ: ಡಿಹೆಚ್‍ಒ ಡಾ.ವೈ ರಮೇಶ್‍ಬಾಬು
ಬಳ್ಳಾರಿ,ನ.24(ಕರ್ನಾಟಕ ವಾರ್ತೆ):
ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್‍ಕ್ಯುಲೋಸಿಸ್ ಎಂಬ ರೋಗಾಣುನಿಂದ ಹರಡುವ ಕ್ಷಯರೋಗವನ್ನು ನಿರ್ಮೂಲನೆ ಮಾಡಲು, ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಸಂದರ್ಭದಲ್ಲಿ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿಗೆ ದಯವಿಟ್ಟು ಮಾಹಿತಿ ನೀಡಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಹೇಳಿದರು.
ಯಾರಿಗಾದರೂ ಎರಡು ವಾರಗಳಿಗಿಂತ ಹೆಚ್ಚು ದಿನದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಸಂಜೆ ವೇಳೆ ಜ್ವರ, ರಾತ್ರಿ ವೇಳೆ ಮೈ ಬೆವರುವುದು, ಕಫದಲ್ಲಿ ರಕ್ತ ಬೀಳುವುದು, ಎದೆ ನೋವು, ಹಸಿವಾಗದಿರುವುದು, ತೂಕ ಇಳಿಕೆ, ರೋಗದ ಪ್ರಮುಖ ಲಕ್ಷಣಗಳಿದ್ದಲ್ಲಿ ತಕ್ಷಣ ಕಫ ಪರೀಕ್ಷೆ ಕೈಗೊಂಡು ಸೂಕ್ತ ಚಿಕಿತ್ಸೆ ಪಡೆಯಲು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಸಮೀಕ್ಷೆಯ ಸಂದರ್ಭದಲ್ಲಿ ಜೀವಿತ್ ಎಂಟರ್‍ಪ್ರೈಸಸ್ ವತಿಯಿಂದ ಬಹು ಔಷಧಿ ರೋಗ ನಿರೋಧಕ (ಎಂಡಿಆರ್ ಟಿಬಿ ರೋಗಿ) ಔಷಧಿಯ ಚಿಕಿತ್ಸೆ ಪಡೆಯುತ್ತಿರುವ 60 ಜನ ಕ್ಷಯರೋಗಿಗಳಿಗೆ ಚಿಕಿತ್ಸಾ ಅವಧಿ ಮುಗಿಯುವವರೆಗೆ ಪೌಷ್ಟಿಕಾಂಶವುಳ್ಳ ಕಿಟ್ ವಿತರಣೆ ಮಾಡಿ, ಅವರು ಮಾತನಾಡಿದರು.
ಪ್ರಸ್ತುತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದಡಿ 3,10,963 ಜನರನ್ನು ತಪಾಸಣೆಯ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ 2,44,103 ಜನರ ತಪಾಸಣೆ ಮಾಡಲಾಗಿದೆ, ಇವರಲ್ಲಿ ರೋಗಲಕ್ಷಣವುಳ್ಳ 1926 ಜನರ ಕಫ ಪರೀಕ್ಷೆ ಮಾಡಿದ್ದು, 24 ಜನರಿಗೆ ಕ್ಷಯರೋಗವಿರುವುದು ದೃಢಪಟ್ಟಿದ್ದು, ಇವರಿಗೆ ಚಿಕಿತ್ಸೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಕಫದಲ್ಲಿ ಪರೀಕ್ಷೆ ಮೂಲಕ ಕ್ಷಯರೋಗ ಪತ್ತೆಯಾದಾಗ ಆರು ತಿಂಗಳ ಕಾಲ ಚಿಕಿತ್ಸೆ ನೀಡಲಾಗುವುದು. ಒಂದು ವೇಳೆ ಕ್ಷಯರೋಗಿಯು ಚಿಕಿತ್ಸೆ ನಿರ್ಲಕ್ಷಿಸಿದರೆ, ಮಧ್ಯದಲ್ಲಿ ಚಿಕಿತ್ಸೆ ಬಿಟ್ಟಲ್ಲಿ ಬಹು ಔಷಧಿ ರೋಗ ನಿರೋಧಕ ಕ್ಷರ ರೋಗದಲ್ಲಿ 18 ತಿಂಗಳಿನಿಂದ 24 ತಿಂಗಳ ಕಾಲ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ ಎಂದು ಡಾ.ರಮೇಶ್ ಬಾಬು ಅವರು ವಿವರಿಸಿದರು.
ವಿಶೇಷವಾಗಿ ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವರಿಗೆ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದರಿಂದ ಕುಟುಂಬದ ಮುಖ್ಯ ವ್ಯಕ್ತಿಯು ದುಡಿಮೆ ಇಲ್ಲದೆ ಕುಟುಂಬ ಆರ್ಥಿಕ ತೊಂದರೆ ಈಡಾಗುವ ಪರಿಸ್ಥಿತಿ ಬರುತ್ತದೆ. ಇಂಥ ಸಂದರ್ಭದಲ್ಲಿ ಪೂರಕ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು, ದಾನಿಗಳಾಗಿ ಮುಂದೆ ಬಂದು ಕ್ಷಯರೋಗಿಗಳನ್ನು ನಿರ್ದಿಷ್ಟ ಅವಧಿಯೊಳಗೆ ರೋಗವನ್ನು ಗುಣಪಡಿಸುವ ಕಾರ್ಯದಲ್ಲಿ ಕೈಜೋಡಿಸಿ, ಜಿಲ್ಲೆಯನ್ನು ಕ್ಷಯಮುಕ್ತ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಭಾಗಿಯಾಗಬೇಕಿದೆ ಎಂದು ವಿನಂತಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 55 ದಾನಿಗಳಿಂದ 611 ಜನರಿಗೆ 1878 ಪೌಷ್ಠಿಕ ಆಹಾರ ಕಿಟ್‍ಗಳನ್ನು ಒದಗಿಸಲಾಗಿದೆ. ವಿಶೇಷವಾಗಿ ಸಂಡೂರು ತಾಲೂಕಿನಲ್ಲಿ ಗಣಿಬಾಧಿತ ಹಾಗೂ ಕಾರ್ಖಾನೆಗಳು ಹೊಂದಿರುವ ಪ್ರದೇಶವಾಗಿರುವುದರಿಂದ ಸಂಡೂರು ತಾಲ್ಲೂಕಿನ ಎಲ್ಲ 162 ರೋಗಿಗಳನ್ನು ಬಿಕೆಜಿ, ಶ್ರೀ ಕುಮಾರಸ್ವಾಮಿ ಮೈನಿಂಗ್ ಮತ್ತು ಮಿನರಲ್ ಕಂಪನಿ ದತ್ತು ತೆಗೆದುಕೊಂಡಿರುತ್ತಾರೆ ಎಂದು ತಿಳಿಸಿದ ಅವರು, ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಸಹ ದತ್ತು ತೆಗೆದುಕೊಳ್ಳಲು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಡಬ್ಲ್ಯೂಹೆಚ್‍ಓ ಪ್ರತಿನಿಧಿಗಳಾದ ಡಾ.ಹಂಸವೇಣಿ, ಡಾ.ಸಂಗೀತಾ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ರಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ..ಬಸವರಾಜ್, ಜೀವಿತ್ ಎಂಟಪ್ರೈಸಸ್ ಅಧಿಕಾರಿಗಳಾದ ಹೊನ್ನೇಶ್ ಮತ್ತು ರಮೇಶ್, ಜಿಲ್ಲಾ ಪ್ರತಿನಿಧಿ ಚಂದ್ರಶೇಖರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ ಹಾಗೂ ವಿಭಾಗದ ಡಿಪಿಎಸ್ ಗೂಡದಯ್ಯ, ಟಿಬಿಎಚ್‍ವಿ ಪುಷ್ಪಾವತಿ, ರಾಮಾಂಜಿನೇಯ ಸೇರಿದಂತೆ ಇತರರು ಹಾಜರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ