ಬುಧವಾರ, ನವೆಂಬರ್ 29, 2023

ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ: ಸಂಸದ ವೈ.ದೇವೆಂದ್ರಪ್ಪ

ಬಳ್ಳಾರಿ,ನ.29(ಕರ್ನಾಟಕ ವಾರ್ತೆ): ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ (ದಿಶಾ) ಅಧ್ಯಕ್ಷರೂ ಆಗಿರುವ ಸಂಸದ ವೈ.ದೇವೆಂದ್ರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿಯ ನಜೀರ್ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೀನ್ಸ್ ಕಚ್ಚಾ ಬಟ್ಟೆಯ ಸರಬರಾಜು ಆಗದೇ ಇರುವುದರಿಂದ ಮಹಿಳೆಯರು ನಗರದ ಬೇರೆ ಬೇರೆ ಭಾಗದಿಂದ ಜೀನ್ಸ್ ಕೇಂದ್ರಗಳಿಗೆ ಬರಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಅದಕ್ಕಾಗಿ ಜೀನ್ಸ್ ಯೂನಿಟ್‍ನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಕೌಶಲಾಭಿವೃದ್ಧಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಮಹಿಳೆಯರು ಜೀನ್ಸ್ ಕೇಂದ್ರಗಳಿಗೆ ಬರಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಬಿಡಲು ಬರುತ್ತದೆಯೇ ಎಂದು ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದರು. ಅವರಿಗೆ ಬೇಕಾದ ತರಬೇತಿ ನೀಡಬೇಕು. ಬ್ಯಾಂಕ್ ಮತ್ತು ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಪೆÇ್ರೀತ್ಸಾಹಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ಬಳ್ಳಾರಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ 6 ತಿಂಗಳ ಕಟ್ಟಡ ಬಾಡಿಗೆಯನ್ನು ಪಾವತಿಸಲಾಗಿದೆ. ಸರ್ಕಾರದಿಂದ 3 ತಿಂಗಳಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಕಟ್ಟಡ ಬಾಡಿಗೆ ಪಾವತಿಸಿರುವುದಿಲ್ಲ. ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಈಗಾಗಲೇ 68 ಸಾವಿರ ಹೆಕ್ಟೇರ್ ಪ್ರದೇಶ ಮುಂಗಾರು ಬೆಳೆ ನಷ್ಟವಾಗಿದ್ದು, ಸುಮಾರು 519 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ನಾನಾ ವಿಷಯಗಳ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜು, ಮಹಾನಗರ ಪಾಲಿಕೆಯ ಉಪಮಹಾಪೌರೆ ಬಿ.ಜಾನಕಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕುನೂರು ಅವರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ