ಬುಧವಾರ, ನವೆಂಬರ್ 29, 2023

ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಗುರಿಯೊಂದಿಗೆ ಸಾಗಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಬಳ್ಳಾರಿ,ನ.29(ಕರ್ನಾಟಕ ವಾರ್ತೆ): ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನದ ಮೂಲಕ ದೇಶದ ಮೂಲೆ ಮೂಲೆಯ ಜನರನ್ನು ಜಾಗೃತಗೊಳಿಸುವ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಭುವನೇಶ್ ಕುಮಾರ್ ಅವರು ಹೇಳಿದರು. ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಗ್ರಾಮ ಪಂಚಾಯತಿ ಸಣಾಪುರ ಇವರ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ತಾಲ್ಲೂಕಿನ ಸಣಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭಾರತ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ಕೇಂದ್ರ ಸರ್ಕಾರದ ಜನಕಲ್ಯಾಣ ಯೋಜನೆಗಳ ಮಾಹಿತಿ ನೀಡುವುದರೊಂದಿಗೆ ಜನಸಾಮಾನ್ಯರಿಗೂ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಭಿವೃದ್ಧಿ ಹೊಂದಿದ ಭಾರತ ಸಂಕಲ್ಪ ಯಾತ್ರೆಯಡಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸಂಕಲ್ಪ ಕೈಗೊಳ್ಳಲಾಗಿದೆ ಎಂದರು. ಈ ಅಭಿಯಾನದ ಮೂಲಕ ಸಾಮಾನ್ಯ ಜನರಿಗೆ ನೈರ್ಮಲ್ಯ ಸೌಲಭ್ಯಗಳು, ಹಣಕಾಸು ಸೇವೆಗಳು, ವಿದ್ಯುತ್ ಸಂಪರ್ಕಗಳು, ವಸತಿ ಮತ್ತು ಇತರ ಅಗತ್ಯ ಸೇವೆಗಳನ್ನು ಒದಗಿಸುವುದು ಕೇಂದ್ರ ಸರ್ಕಾರದ ಪ್ರಯತ್ನವಾಗಿದೆ. ಸಮಾಜದ ಕಟ್ಟಕಡೆಯ ಜನರಿಗೆ ಆಹಾರ, ಭದ್ರತೆ, ಪೌಷ್ಠಿಕಾಂಶ, ಆರೋಗ್ಯ ರಕ್ಷಣೆ, ಶುದ್ಧ ಕುಡಿಯುವ ನೀರು ಮತ್ತು ಗುಣಮಟ್ಟದ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜದ ಕೊನೆಯ ತುದಿಯಲ್ಲಿ ವಾಸಿಸುವ ಜನರಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಗುರಿಯಾಗಿದೆ ಎಂದು ತಿಳಿಸಿದರು. ಎಲ್ಲಾ ಸರ್ಕಾರಿ ಪ್ರಯೋಜಿತ ಯೋಜನೆಗಳಾದ ಪಿಎಂಐಡಿವೈ, ಪಿಎಂಜೆಜೆಬಿವೈ, ಪಿಎಂಎಸ್‍ಬಿವೈ, ಎಪಿವೈಪಿಎಂ ಸ್ವಾನಿಧಿ, ಪಿಎಂ ವಿಶ್ವಕರ್ಮ ಮತ್ತು ಸ್ಟ್ಯಾಂಡ್ ಆಫ್ ಇಂಡಿಯಾ ಮುಂತಾದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಡಿ ಸಾಲ ಪಡೆದುಕೊಂಡ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಹೊಲೆ ಸಿಲಿಂಡರ್ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಆರ್.ಡಿಲ್ಲಿ ಬಾಬು, ಸಹಾಯಕ ಮಹಾ ಪ್ರಾದೇಶಿಕ ಕಚೇರಿ ಕೆನರಾ ಬ್ಯಾಂಕ್ ಪ್ರಬಂಧಕರು ಡಿ.ವಿ.ಪಿ.ಆರ್ ಮುರಳಿ ಕೃಷ್ಣ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕರಾದ ಎಚ್.ಕೆ.ಗಿರಡ್ಡಿ, ಕೆನರಾ ಬ್ಯಾಂಕ್ ಎಲ್‍ಡಿಸಿಎಂ ಸೋಮನಗೌಡ ಐನಾಪೂರ, ನಬಾರ್ಡ ಡಿಡಿಎಂ ಯುವರಾಜ ಕುಮಾರ, ಗ್ರಾಮ ಪಂಚಾಯತ ಅಧ್ಯಕ್ಷ ವೈ.ರಾಮಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮೂಕಯ್ಯ, ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ