ಭಾನುವಾರ, ಮಾರ್ಚ್ 3, 2024

ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಲು ಮೇಯರ್ ಬಿ.ಶ್ವೇತ ಕರೆ

ಬಳ್ಳಾರಿ,ಮಾ.03(ಕರ್ನಾಟಕ ವಾರ್ತೆ): ಮಕ್ಕಳ ಅಂಗವೈಖಲ್ಯತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಮಹಾನಗರ ಪಾಲಿಕೆಯ ಮಹಾ ಪೌರರಾದ ಬಿ.ಶ್ವೇತ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟಿನಿಂದ 5 ವರ್ಷದ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಬಹುಮುಖ್ಯವಾಗಿದ್ದು, ಕಡ್ಡಾಯವಾಗಿ ಪೋಷಕರು ಮಾ.03 ರಿಂದ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸಬೇಕೆಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ (ತಾಯಿ ಅರೋಗ್ಯ) ಉಪ ನಿರ್ದೇಶಕ ಹಾಗೂ ಜಿಲ್ಲಾ ನೋಡಲ್ ಆಧಿಕಾರಿ ಡಾ.ರಾಜಕುಮಾರ ಅವರು ಮಾತನಾಡಿ, ಪೋಲಿಯೋ ಖಾಯಿಲೆ ನಿರ್ಮೂಲನೆ ಮಾಡಲು ಎರಡು ಹನಿ ಪೋಲಿಯೋ ಲಸಿಕೆ ಅತ್ಯಗತ್ಯವಾಗಿದ್ದು, ಜನ ಸಮುದಾಯದವರು 5 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ವಿನಂತಿ ಮಾಡಿದರು. ಪೋಲಿಯೋ ಲಸಿಕೆ ಕುರಿತು ಜಾಗೃತಿ ನೀಡಿ, ಇದರಲ್ಲಿ ಮಕ್ಕಳ ರಕ್ಷಣೆಗೆ ಪೋಷಕರೂ ಪಾತ್ರವಹಿಸಬೇಕು. ಪೋಲಿಯೋ ಖಾಯಿಲೆ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 197103 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಒಟ್ಟು 968 ಬೂತ್‍ಗಳನ್ನು ತೆರೆಯಲಾಗಿದೆ. 887 ಮನೆ ಬೇಟಿ ತಂಡಗಳು ಹಾಗೂ ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣ, ಮತ್ತು ಇತರೆ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಲಸಿಕೆ ಹಾಕಲು 51 ತಂಡಗಳು ಮತ್ತು ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ, ಕುರಿಹಟ್ಟಿ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 17 ಸಂಚಾರಿ ತಂಡಗಳು ಕಾರ್ಯನಿರ್ವಹಿಸುತ್ತವೆ. ತಂಡಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನರ್ಸಿಂಗ್ ಕಾಲೇಜ್ ಹಾಗೂ ಸ್ವಯಂ ಸೇವಕರು ಪೋಲಿಯೋ ವ್ಯಾಕ್ಸಿನೇಟರ್ ಆಗಿ ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. ಇದೇ ಸಂಧರ್ಭದಲ್ಲಿ ಶಿಶು ಮಕ್ಕಳಿಗೆ ಮೇಯರ್ ಬಿ.ಶ್ವೇತ ಸೇರಿದಂತೆ ವೈದ್ಯಾಧಿಕಾರಿಗಳು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ, ಜಿಲ್ಲಾ ಮಟ್ಟದ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್., ಜಿಲ್ಲಾ ರೋಗವಾಹಕ ನಿಯಂತ್ರಣಧಿಕಾರಿ ಡಾ.ಅಬ್ದುಲ್ಲಾ, ಸ್ಥಾನಿಕ ವೈದ್ಯಾಧಿಕಾರಿ ಡಾ.ವೀರೇಂದ್ರ ಕುಮಾರ್, ಉಪ ಮುಖ್ಯ ವೈದ್ಯಾಧಿಕಾರಿ ಡಾ.ಗುರುನಾಥ.ಬಿ.ಚೌವ್ಹಾಣ, ಶುಶ್ರುಷಕ ಅಧೀಕ್ಷಕರಾದ ವಿಮಲಾಕ್ಷಿ, ಆಡಳಿತ ಅಧಿಕಾರಿ ಗುಮಸ್ತಾ ದೇಸಾಯಿ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್.ದಾಸಪ್ಪನವರ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು, ಶುಶ್ರುಕರು, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ