ಸೋಮವಾರ, ಮಾರ್ಚ್ 4, 2024

ಹೋಟಲ್ ಮ್ಯಾನೇಜ್‍ಮೆಂಟ್ ವಲಯದಲ್ಲಿ ತರಬೇತಿ ಅವಶ್ಯ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಮಾ.04(ಕರ್ನಾಟಕ ವಾರ್ತೆ): ಹೋಟೆಲ್ ಮ್ಯಾನೇಜ್‍ಮೆಂಟ್ ವಲಯದಲ್ಲಿ ತೊಡಗಿಸಿಕೊಳ್ಳುವವರಿಗೆ ತರಬೇತಿ ಅವಶ್ಯವಾಗಿದ್ದು, ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಯು ಅಭ್ಯರ್ಥಿಗಳಿಗೆ ಉಪಯೋಗವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೌಶಲ್ಯಾಬಿವೃದ್ಧಿ ಇಲಾಖೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಂಡಿರುವ 45 ದಿನಗಳ ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅತ್ಯಲ್ಪಾವಧಿಯಲ್ಲಿ ಅಚ್ಚುಕಟ್ಟಾಗಿ ತರಬೇತಿಗೆ ಅಗತ್ಯವಾದ ಕಿಚನ್, ರೆಸ್ಟೋರೆಂಟ್, ಬೆಡ್, ಹೌಸ್ ಕೀಪಿಂಗ್, ಕಂಪ್ಯೂಟರ್ ಬಿಲ್ಲಿಂಗ್ ವ್ಯವಸ್ಥೆ ತರಬೇತಿಗೆ ಸ್ಟಾರ್ ಹೋಟಲ್ ಮಾದರಿಯಲ್ಲಿ ಎಲ್ಲವನ್ನೂ ಕೌಶಲ್ಯ ಕೇಂದ್ರದಲ್ಲಿ ಕಲ್ಪಿಸಿರುವುದು ತರಬೇತುದಾರರಿಗೆ ಅನುಕೂಲವಾಗಲಿದೆ ಎಂದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಯುವಪೀಳಿಗೆಯು ಪದವಿಯ ನಂತರ, ಕೌಶಲ್ಯದ ಕೊರತೆಯ ಕಾರಣ ಸೂಕ್ತ ಉದ್ಯೋಗಗಳು, ಸೂಕ್ತವಾದ ವೇತನ ಸಿಗದೇ ಪರದಾಡುತ್ತಿದ್ದಾರೆ. ಅನೇಕ ಯುವಕರಿಗೆ ಹೋಟಲ್ ಮ್ಯಾನೇಜ್‍ಮೆಂಟ್ ತರಬೇತಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಳ್ಳಾರಿ ಚೇಂಬರ್ಸ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಸಿಗುವ ಹೋಟಲ್ ಮ್ಯಾನೇಜ್‍ಮೆಂಟ್ ತರಬೇತಿಯು ಗುಣಮಟ್ಟದಿಂದ ಕೂಡಿದೆ. ಇಲ್ಲಿ ತರಬೇತಿ ಪಡೆದವರಿಗೆ ತ್ವರಿತವಾಗಿ ಉದ್ಯೋಗ ಸಿಗಲಿದೆ ಎಂದು ಹೇಳಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡ ಅವರು, ಹೋಟಲ್ ಮ್ಯಾನೇಜ್‍ಮೆಂಟ್ ಕೌಶಲ್ಯಾಭಿವೃದ್ಧಿ ತರಬೇತಿ ಕುರಿತು ವೃತ್ತಿಯ ಅರ್ಹತೆಗಳು ಮತ್ತು ಅಗತ್ಯತೆಗಳು, ನೈಪುಣ್ಯತೆ, ಶಿಸ್ತು-ಸಂಯಮಗಳ ಕುರಿತು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಾಧ್ಯಕ್ಷ ಸಿ. ಶ್ರೀನಿವಾಸ್ ಅವರು ಮಾತನಾಡಿ, ಹೋಟಲ್ ಮ್ಯಾನೇಜ್‍ಮೆಂಟ್ ಕುರಿತಾದ 45 ದಿನಗಳ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ತರಬೇತಿಯ ನಂತರ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಆಸಕ್ತರು ಕೋರ್ಸ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿಗೆ ಆಯ್ಕೆಯಾಗಿರುವ 60 ಅಭ್ಯರ್ಥಿಗಳು, ಯಾವುದೇ ವೃತ್ತಿಯ ನೈಪುಣ್ಯತೆಯನ್ನು ಹೆಚ್ಚಿಸುವ ಕೌಶಲ್ಯಗಳ ತರಬೇತಿಗೆ ವಿಶೇಷ ತರಬೇತಿಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾಡಳಿತದ ನೆರವಿನಿಂದ ತರಬೇತಿ ನೀಡಲು ಮುಂದಾಗಿರುವುದು ನಮ್ಮಂಥವರ ಬಾಳಿನಲ್ಲಿ ಹೊಸಬೆಳಕು ಮೂಡಿಸಿದಂತೆ ಆಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಎ.ಮಂಜುನಾಥ್, ಎಸ್.ದೊಡ್ಡನಗೌಡ, ಸೊಂತಾ ಗಿರಿಧರ್, ಜಂಟಿ ಕಾರ್ಯದರ್ಶಿ ವಿ.ರಾಮಚಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರದ ಚೇರ್‍ಮನ್ ನಾಗಳ್ಳಿ ರಮೇಶ್, ಕಮಿಟಿ ಚೇರ್‍ಮನ್ ಟಿ.ಶ್ರೀನಿವಾಸರಾವ್ ಅವರು ವೇದಿಕೆಯಲ್ಲಿದ್ದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ ಅವರು ಸ್ವಾಗತ ಕೋರಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಕಮಟಿಗಳ ಚೇರ್‍ಮನ್‍ಗಳು, ಸಮನ್ವಯ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ