ಗುರುವಾರ, ಏಪ್ರಿಲ್ 4, 2024
ಕುರುಗೋಡು: ಮದುವೆ ಮನೆಯಲ್ಲಿ ಮತದಾನ ಜಾಗೃತಿ
ಬಳ್ಳಾರಿ,ಏ.04(ಕರ್ನಾಟಕ ವಾರ್ತೆ):
ಲೋಕಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನದ ಮಹತ್ವ ಸಾರಲು ವಿಭಿನ್ನವಾಗಿ ಕುರುಗೋಡು ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಏಳುಬೆಂಚಿ ಗ್ರಾಪಂ ಸಿಬ್ಬಂದಿಯವರ ವಿವಾಹ ಸಮಾರಂಭದಲ್ಲಿ ನೆರೆದಿದ್ದ ಜನ ಸಮೂಹದಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕುರಿತು ಜಾಗೃತಿ ಮೂಡಿಸಿದ ಕಾರ್ಯ ವಿಶೇಷವಾಗಿ ಕಂಡುಬಂತು.
ಬಾದನಹಟ್ಟಿ ಗ್ರಾಮದಲ್ಲಿ ಗುರುವಾರ ನಡೆದ ಮದುವೆ ಸಮಾರಂಭದಲ್ಲಿ ಕುರುಗೋಡು ತಾಲ್ಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ನಿರ್ಮಲಾ ಅವರ ನೇತೃತ್ವದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಮದುವೆ ಸಮಾರಂಭದಲ್ಲಿ ‘ಚುನಾವಣಾ ಪರ್ವ ದೇಶದ ಗರ್ವ’ ಚುನಾವಣಾ ಘೋಷಕ್ಯವುಳ್ಳ ಭಿತ್ತಿಪತ್ರಗಳನ್ನು ವಧು ವರರಿಗೆ ನೀಡಿ ಮತದಾನ ಅರಿವು ಮೂಡಿಸಲಾಯಿತು. ಅಲ್ಲದೇ ಸಮಾರಂಭದಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಬಳಿಕ ಮಾತನಾಡಿದ ತಾಲ್ಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ತಾಪಂ ಇಒ ನಿರ್ಮಲಾ ಅವರು, ಮತದಾನ ಪ್ರತಿ ಅರ್ಹ ವ್ಯಕ್ತಿಯ ಕರ್ತವ್ಯವಾಗಿದೆ. ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿಹಿಡಿಯಬೇಕು. ಮತದಾನ ಎಂಬುದು ಸಂವಿಧಾನ ನಮಗೆ ಕೊಟ್ಟ ಪರಮೋಚ್ಚ ಅಧಿಕಾರವಾಗಿದೆ. ಇದನ್ನು ಸರಿಯಾಗಿ ಬಳಸಿಕೊಂಡು ಅರ್ಹರನ್ನು ಚುನಾಯಿಸಬೇಕು ಎಂದು ಹೇಳಿದರು.
ಮತದಾರರು ಹಣ, ಉಡುಗೊರೆ ಆಮೀಷಗಳಿಗೆ ಬಲಿಯಾಗದೇ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತದಾನದ ದಿನ ರಜೆ ಮೇಲೆ ಯಾವುದೇ ಊರಿಗೆ ತೆರಳದೇ ಅಂದು ಮತದಾನ ಮಾಡಬೇಕು ಎಂದು ಮದುವೆಗೆ ಬಂದ ಅಥಿತಿಗಳಿಗೆ ಜಾಗೃತಿ ಸಂದೇಶ ನೀಡಿದರು.
ಈ ಬಾರಿಯ ಚುನಾವಣೆಯಲ್ಲಿ ಮತದಾನದ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿಶೇಷವಾಗಿ ಮದುವೆ ಮಂಟಪಗಳಲ್ಲಿ ನೂತನ ವಧು-ವರರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟಾರೆಯಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪಿ.ಶಿವರಾಮರೆಡ್ಡಿ, ತಾಲ್ಲೂಕು ಯೋಜನಾಧಿಕಾರಿ ರಾಧಿಕಾ, ಟಿಸಿ ಮಲ್ಲಿಕಾರ್ಜುನ, ಟಿಐಎಂಎಸ್ ಮುಕ್ತಾಯಕ್ಕ, ಐಇಸಿ ಚಂದ್ರಶೇಖರ್, ಬಿಎಫ್‍ಟಿಗಳಾದ ರಾಘವೇಂದ್ರ, ಮಾರೇಶ್, ಹೊನ್ನುರಸ್ವಾಮಿ, ಹಾಗಲೂರಪ್ಪ, ಹನುಮಂತ ಸೇರಿದಂತೆ ವಿವಿಧ ಗ್ರಾಪಂ ಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಸಿಬ್ಬಂದಿಯವರು ಹಾಗೂ ಇತರರು ಹಾಜರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ