ಸೋಮವಾರ, ಮೇ 18, 2026
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಆಯೋಗದ ಭರವಸೆ: ಡಾ.ಮೂರ್ತಿ. ಎಲ್
ಬಳ್ಳಾರಿ,ಮೇ 18(ಕರ್ನಾಟಕ ವಾರ್ತೆ):
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ರಚನೆಯಾಗಿರುವ ಆಯೋಗವು ಈ ವರ್ಗದ ಜನರ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅವುಗಳ ಶೀಘ್ರ ಇತ್ಯರ್ಥಕ್ಕೆ ಬದ್ಧವಾಗಿದೆ ಎಂದು ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ. ಎಲ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಕುಂದುಕೊರತೆಗಳ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಯೋಗವು ಈಗಾಗಲೇ ರಾಜ್ಯದ ಸುಮಾರು 15 ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಇದರೊಂದಿಗೆ, ಪ್ರತಿ ಗುರುವಾರ ಮತ್ತು ಶುಕ್ರವಾರದಂದು ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅಹವಾಲುಗಳನ್ನು ಆಲಿಸಿ, ಕೋರ್ಟ್ ಮತ್ತು ಕಚೇರಿ ಪ್ರಕ್ರಿಯೆಗಳ ಮೂಲಕ ಸುಮಾರು 800 ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಆಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೇರಿದ ಜನರ ನೂರಾರು ಸಮಸ್ಯೆಗಳಿಗೆ ಸಂಬAಧಿಸಿದAತೆ ಒಟ್ಟು 4,250 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಾನೂನು ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ. ಇದರ ಜೊತೆಗೆ ದಿನನಿತ್ಯ ಹೊಸ ದೂರುಗಳು ಕೂಡ ಆಯೋಗಕ್ಕೆ ಬರುತ್ತಿವೆ ಎಂದು ತಿಳಿಸಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತಿ ಜಿಲ್ಲೆಯಲ್ಲೂ ಆಯೋಗವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಸ್ಥಳದಲ್ಲೇ ಅಧಿಕಾರಿಗಳಿಂದ ವಿವರಣೆ ಕೇಳಿ, ಸೂಕ್ತ ಕ್ರಮ ಜರುಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರು ತಮ್ಮ ಗಂಭೀರವಾದ ಸಮಸ್ಯೆಗಳನ್ನು ಮಾತ್ರ ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಆಯೋಗದ ಗಮನಕ್ಕೆ ತರಬೇಕು. ಅರ್ಜಿದಾರರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಅಹವಾಲುಗಳನ್ನು ಸಲ್ಲಿಸಿದಲ್ಲಿ, ಪ್ರತಿಯೊಬ್ಬರ ಸಮಸ್ಯೆಗೂ ಸೂಕ್ತ ಸ್ಪಂದನೆ ಸಿಗಲಿದೆ ಎಂದು ಭರವಸೆ ನೀಡಿದರು.
ಇಂದಿನ ಸಭೆಗಳಲ್ಲಿ ಸ್ವೀಕರಿಸಲಾದ ದೂರು, ನ್ಯೂನತೆಗಳನ್ನು ಗಂಭಿರವಾಗಿ ಪರಿಗಣಿಸಿ ಇವುಗಳಿಗೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ಒದಗಿಸಲಾಗುವುದು ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಆಲಿಸಿದ ಹಾಗೂ ಸ್ವೀಕರಿಸಲಾದ ಅಹವಾಲುಗಳ ಕುರಿತ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲಿಯೇ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮುಖಂಡರು ಶಿಕ್ಷಣ, ಸುಸಜ್ಜಿತ ವಸತಿ ನಿಲಯ, ಅತ್ಯಾಧುನಿಕ ಗ್ರಂಥಾಲಯ ನಿರ್ಮಾಣ ಬೇಡಿಕೆ, ಆರೋಗ್ಯ ಸೇವೆ, ಸಮುದಾಯದ ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳ ಬೇಡಿಕೆ, ಭೂಮಿ ಮಂಜೂರು ಸೇರಿದಂತೆ ವಿವಿಧ ಅಹವಾಲುಗಳನ್ನು ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದರು.
ಇದಕ್ಕೂ ಮುನ್ನ ಗಣ್ಯರು ಡಾ.ಬಿ.ಆರ್. ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್, ಮಹರ್ಷಿ ವಾಲ್ಮೀಕಿ ಮಹನೀಯರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಂವಿಧಾನ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ದಿವಾಕರ.ಎನ್., ಗೀತಾ ಥಾವಂಶಿ, ಕಾರ್ಯದರ್ಶಿ ಡಾ.ಶಿವರಾಮು ಹೆಚ್.ಎಸ್. ಸಂಶೋಧನಾ ಅಧಿಕಾರಿ ಸಿಂಘು ರಘು ಹೆಚ್.ಎಸ್., ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆ ಆಯುಕ್ತ ಪಿ.ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ