ಮಂಗಳವಾರ, ಜೂನ್ 16, 2026

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ: 12 ದಿನಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶ

ಬಳ್ಳಾರಿ,ಜೂ.16(ಕರ್ನಾಟಕ ವಾರ್ತೆ): ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಯಲು ಮತ್ತು ಸುರಕ್ಷಿತ ವಾತಾವರಣ ನಿರ್ಮಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ. ಮಹಿಳೆಯರ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ, ನಿಷೇಧ ಮತ್ತು ಪರಿಹಾರ ಕಾಯ್ದೆ-2013ರ ಕಲಂ 4ರ ಅನ್ವಯ 10 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಪ್ರತಿಯೊಂದು ಸರ್ಕಾರಿ, ಅರೆ ಸರ್ಕಾರಿ ಕಚೇರಿ, ಇಲಾಖೆ, ಮಂಡಳಿ, ನಿಗಮ, ಸ್ಥಳೀಯ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಈ ಸಮಿತಿ ರಚನೆ ಕಡ್ಡಾಯವಾಗಿದೆ. ಆದಾಗ್ಯೂ ಜಿಲ್ಲೆಯ ಹಲವು ಕಚೇರಿಗಳು, ಶಾಲಾ-ಕಾಲೇಜುಗಳು, ಫ್ಯಾಕ್ಟರಿಗಳು, ವ್ಯಾಪಾರ ಮಳಿಗೆಗಳು, ಗಾರ್ಮೆಂಟ್ಸ್ ಹಾಗೂ ಬ್ಯಾಂಕುಗಳು ಇನ್ನು ಕಡ್ಡಾಯ ಸಮಿತಿ ರಚಿಸದಿರುವುದು ಅಥವಾ ವಿವರಗಳನ್ನು ‘She-Box' ಪೋರ್ಟಲ್‌ನಲ್ಲಿ ನೋಂದಾಯಿಸದಿರುವುದು ಗಮನಕ್ಕೆ ಬಂದಿದೆ. *12 ದಿನಗಳ ಗಡುವು:* 12 ದಿನಗಳ ಒಳಗಾಗಿ ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು. ಸಮಿತಿ ರಚನೆಯ ಆದೇಶದ ಪ್ರತಿ, ಸದಸ್ಯರ ವಿವರಗಳು ಹಾಗೂ 2025ರ ವಾರ್ಷಿಕ ವರದಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಗಡುವು ನೀಡಿದ್ದು, ಒಂದು ವೇಳೆ ನಿಗದಿತ ಅವಧಿಯೊಳಗೆ ಸಮಿತಿ ರಚಿಸಿ ವರದಿ ಸಲ್ಲಿಸದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ನಿಯಮ ಪಾಲಿಸದ ಕಚೇರಿ ಮುಖ್ಯಸ್ಥರಿಗೆ ತಕ್ಷಣವೇ ‘ಶೋಕಾಸ್ ನೋಟಿಸ್' ಜಾರಿ ಮಾಡಲಾಗುವುದು. ನಿಯಮ ಉಲ್ಲಂಘನೆಯ ಕುರಿತು ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು. ಕಾಯ್ದೆಯ ಕಲಂ 26ರ ಅಡಿಯಲ್ಲಿ ಸಂಬAಧಪಟ್ಟ ಸಂಸ್ಥೆ ಅಥವಾ ಮಾಲೀಕರ ವಿರುದ್ಧ ದಂಡಾತ್ಮಕ ಕಾನೂನು ಕ್ರಮ ಜರುಗಿಸಲಾಗುವುದು. ಮಹಿಳಾ ಸಿಬ್ಬಂದಿಗೆ ದೂರು ಸಲ್ಲಿಸಲು ಸೂಕ್ತ ವೇದಿಕೆ ಇಲ್ಲದ ಕಾರಣ ಏನಾದರೂ ಸಮಸ್ಯೆಯಾದರೆ, ಅದರಿಂದ ಉಂಟಾಗುವ ಆಡಳಿತಾತ್ಮಕ ಮತ್ತು ಕಾನೂನು ಹೊಣೆಗಾರಿಕೆಯನ್ನು ಆಯಾ ಕಚೇರಿ ಮುಖ್ಯಸ್ಥರೇ ವೈಯಕ್ತಿಕವಾಗಿ ಹೊರಬೇಕಾಗುತ್ತದೆ. ಈ ಆದೇಶವನ್ನು ಅತ್ಯಂತ ತುರ್ತು ಎಂದು ಪರಿಗಣಿಸಿ, ನಿಗದಿತ ಅವಧಿಯೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ