ಶನಿವಾರ, ಜೂನ್ 3, 2023

ಕಾನೂನು ಪದವೀಧರರ ತರಬೇತಿ ಭತ್ಯೆಗಾಗಿ ಅರ್ಜಿ ಆಹ್ವಾನ ಬಳ್ಳಾರಿ,ಜೂ.03(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿನ ಕಾನೂನು ತರಬೇತಿ ಭತ್ಯೆಗಾಗಿ ಅರ್ಹ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಭ್ಯರ್ಥಿಗಳು ಅರ್ಜಿಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಜೂ.30 ರೊಳಗಾಗಿ ಸಲ್ಲಿಸಬೇಕು. *ನಿಬಂಧನೆಗಳು:* ಅಭ್ಯರ್ಥಿಯು ಬಳ್ಳಾರಿ ಜಿಲ್ಲೆಯವರಾಗಿರಬೇಕು. ಪ್ರವರ್ಗ-1, ಪ್ರವರ್ಗ-2(ಎ), ಪ್ರವರ್ಗ-3(ಎ) ಮತ್ತು ಪ್ರವರ್ಗ-3(ಬಿ)ಗೆ ಸೇರಿದವರಾಗಿರಬೇಕು. ಶೇಕಡವಾರು ಪ್ರವರ್ಗ-1 ರಲ್ಲಿ 2 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಉಳಿದ ವರ್ಗಗಳಲ್ಲಿ ನಿಯಮಾನುಸಾರ 8 ಅಭ್ಯರ್ಥಿಗಳು ಸೇರಿ ಒಟ್ಟು 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಯು ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೊಂದಾಯಿಸಿರಬೇಕು. ತರಬೇತಿಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಕ್ಕೆ ಹಿಂದೆ 2 ವರ್ಷಗಳೊಳಗಾಗಿ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕಾನೂನು ತರಬೇತಿಯು 4 ವರ್ಷಗಳ ಅವಧಿಯಾಗಿದ್ದು, ಮಾಸಿಕ 4 ಸಾವಿರ ರೂ.ಗಳ ತರಬೇತಿ ಭತ್ಯೆ ನೀಡಲಾಗುವುದು. ಕಾನೂನು ತರಬೇತಿಗೆ ಬಳ್ಳಾರಿ ಜಿಲ್ಲೆಯಿಂದ 10 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಪ್ರವರ್ಗ-1 ರಲ್ಲಿ ಶೇ.15 ರಷ್ಟು 2 ಅಭ್ಯರ್ಥಿಗಳು, ಪ್ರವರ್ಗ-2(ಎ) ಶೇ.53 ರಷ್ಟು 5 ಅಭ್ಯರ್ಥಿಗಳು, ಪ್ರವರ್ಗ-3(ಎ) ಶೇ.15ರಷ್ಟು 1 ಅಭ್ಯರ್ಥಿ, ಪ್ರವರ್ಗ-3(ಬಿ) ಶೇ.17 ರಷ್ಟು 2 ಅಭ್ಯರ್ಥಿಗಳು ಸೇರಿ ಒಟ್ಟು 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ (ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕಕ್ಕೆ) ಇರುತ್ತದೆ. ತರಬೇತಿಯ ಅವಧಿಯ ಮಧ್ಯಭಾಗದಲ್ಲಿ ಅಭ್ಯರ್ಥಿಯು ತರಬೇತಿಗೆ ಗೈರು ಹಾಜರಾದಲ್ಲಿ ಪಡೆಯಲಾಗಿರುವ ತರಬೇತಿ ಭತ್ಯೆಯ ಹಣವನ್ನು ಬಡ್ಡಿಯೊಂದಿಗೆ ಪಾವತಿಸಬೇಕಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಸಮಿತಿಯು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್/ಸರ್ಕಾರಿ ವಕೀಲರು ಅಥವಾ ಕನಿಷ್ಟ 15 ವರ್ಷಗಳ ವೃತ್ತಿಯಲ್ಲಿ ಅನುಭವ ಹೊಂದಿರುವ ವಕೀಲರ ಅಧೀನದಲ್ಲಿ ತರಬೇತಿ ಪಡೆಯುವುದು. ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. *ಸಲ್ಲಿಸಬೇಕಾದ ದಾಖಲೆಗಳು:* ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣ ಪತ್ರ ಮತ್ತು ಪದವಿ ಹಾಗೂ ಕಾನೂನು ಪದವಿಗಳಲ್ಲಿ ಪಡೆದ ಅಂಕಪಟ್ಟಿ ಪ್ರಮಾಣ ಪತ್ರದ ದೃಢೀಕರಣ ಪ್ರತಿಗಳನ್ನು ಲಗತ್ತಿಸುವುದು. ಹೆಚ್ಚಿನ ವಿವರಗಳಿಗಾಗಿ www.ballari.nic.in ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಡಿ.ದೇವರಾಜ ಅರಸು ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಅಥವಾ ದೂ.08392-275751 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ